ಉತ್ತರಕನ್ನಡ: ಪಶುಗಳಿಗಿಲ್ಲ ಆ್ಯಂಬುಲೆನ್ಸ್, ವೈದ್ಯರ ಸೇವೆ..!

Published : Nov 17, 2022, 10:14 PM IST
ಉತ್ತರಕನ್ನಡ: ಪಶುಗಳಿಗಿಲ್ಲ ಆ್ಯಂಬುಲೆನ್ಸ್, ವೈದ್ಯರ ಸೇವೆ..!

ಸಾರಾಂಶ

ಉತ್ತರಕನ್ನಡ ಜಿಲ್ಲೆಗೆ 13 ಆ್ಯಂಬುಲೆನ್ಸ್ ಸೌಲಭ್ಯವನ್ನು ಸರಕಾರ ನೀಡಿತ್ತು. ಜಿಲ್ಲೆಯಲ್ಲಿ ಈ ಸೇವೆ ಉದ್ಘಾಟನೆ ಬಳಿಕ ತನ್ನ ಕಾರ್ಯವನ್ನೇ ಸ್ಥಗಿತ ಮಾಡಿದೆ. 

ಭರತ್‌ ರಾಜ್‌ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರಕನ್ನಡ(ನ.17): ರಾಜ್ಯ ಸರ್ಕಾರ ಪಶುಗಳಿಗೆ ಚಿಕಿತ್ಸೆ ನೀಡಲು ಸಹಾಯವಾಗಲಿ ಎಂಬ ಉದ್ದೇಶದಿಂದ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿತ್ತು. 44 ಕೋಟಿ ರೂ. ವೆಚ್ಚದಲ್ಲಿ ಒಂದು ಲಕ್ಷ ಪಶುಗಳಿರುವ ಸ್ಥಳಗಳಿಗೆ ಒಂದು ಆ್ಯಂಬುಲೆನ್ಸ್ ನಂತೆ ಉತ್ತರಕನ್ನಡ ಜಿಲ್ಲೆಗೆ 13 ಆ್ಯಂಬುಲೆನ್ಸ್ ನೀಡಲಾಗಿತ್ತು. ಆದರೆ, ಇದೀಗ ಸಿಬ್ಬಂದಿ ಹಾಗೂ ಚಾಲಕರಿಲ್ಲದೇ ಈ ಸೇವೆಯೇ ಸ್ಥಗಿತಗೊಂಡಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ ನೋಡಿ..

ಹೌದು, ಉತ್ತರಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಪಶು ಸಂಜೀವಿನಿ ಆ್ಯಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಲಾಗಿತ್ತು. ಪಶುಗಳಿಗೆ ಚಿಕಿತ್ಸೆ ನೀಡಲು ಸಹಾಯವಾಗಲಿ ಎಂಬ ಉದ್ದೇಶದಿಂದ 44 ಕೋಟಿ ರೂ. ವೆಚ್ಚದಲ್ಲಿ ಒಂದು ಲಕ್ಷ ಪಶುಗಳಿರುವ ಸ್ಥಳಗಳಿಗೆ ಒಂದು ಅಂಬುಲೆನ್ಸ್ ನಂತೆ ಉತ್ತರಕನ್ನಡ ಜಿಲ್ಲೆಗೆ 13 ಆ್ಯಂಬುಲೆನ್ಸ್ ಸೌಲಭ್ಯವನ್ನು ಸರಕಾರ ನೀಡಿತ್ತು. ಜಿಲ್ಲೆಯಲ್ಲಿ ಈ ಸೇವೆ ಉದ್ಘಾಟನೆ ಬಳಿಕ ತನ್ನ ಕಾರ್ಯವನ್ನೇ ಸ್ಥಗಿತ ಮಾಡಿದೆ. 

UTTARA KANNADA: ನಾಲ್ಕು ತಿಂಗಳಿನಿಂದ ಪಿಎಚ್‌ಸಿ ಸಿಬ್ಬಂದಿಗೆ ಸಿಕ್ಕಿಲ್ಲ ವೇತನ

ಸಿಬ್ಬಂದಿ ಹಾಗೂ ಚಾಲಕರ ಕೊರತೆ ಜತೆಗೆ ವೈದ್ಯರ ಕೊರತೆಯಿಂದ ಜಿಲ್ಲೆಯಲ್ಲಿ ಪಶು ಸಂಚಾರಿ ಆ್ಯಂಬುಲೆನ್ಸ್ ಆಸ್ಪತ್ರೆಯ ಆವರಣದಲ್ಲೇ ತುಕ್ಕು ಹಿಡಿಯುತ್ತಿದೆ. ಪಶು ಇಲಾಖೆ ನೀಡಿದ ತುರ್ತು ಸೇವಾ ನಂಬರ್ ಗೆ ಕರೆ ಮಾಡಿದರಂತೂ ಆ್ಯಂಬುಲೆನ್ಸ್ ಸೇವೆ ತಾತ್ಕಾಲಿಕವಾಗಿ ಲಭ್ಯವಿಲ್ಲ ಎಂಬ ಉತ್ತರ ದೊರೆಯುತ್ತದೆ. ಇದರಿಂದ ಜಿಲ್ಲೆಯ ಹೆದ್ದಾರಿಯಲ್ಲಿ ಪಶುಗಳು ಅಪಘಾತಕ್ಕೀಡಾದರೆ ತುರ್ತು ಸೇವೆ ಸಿಗುತ್ತಿಲ್ಲ. ಪಶುಗಳಿಗೆ ರೋಗ ರುಜಿನಗಳು ಬಂದರೂ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ. ಅಲ್ಲದೇ, ಪಶುಗಳಿಗೆ ಅಗತ್ಯವಿರುವ ಔಷಧಿಗಳ ಕೊರತೆ ಕೂಡಾ ಸಾಕಷ್ಟಿದೆ.‌ ಸರ್ಕಾರ ಕೋಟಿಗಟ್ಟಲೇ ವೆಚ್ಚ ಮಾಡಿ ಸಂಚಾರಿ ಪಶು ಸಂಜೀವಿನಿ ಆ್ಯಂಬುಲೆನ್ಸ್ ಸೇವೆ ಪ್ರಾರಂಭಿಸಿದರೂ ಎಲ್ಲವೂ ವ್ಯರ್ಥವಾಗಿ ಹೋಗಿರುವುದರಿಂದ ಇದೀಗ ಗೋಪಾಲಕರು ಸರ್ಕಾರದ ಕಾರ್ಯವೈಖರಿಯನ್ನು ಖಂಡಿಸುತ್ತಿದ್ದಾರೆ.

ಪಶುಸಂಗೋಪನಾ ಇಲಾಖೆ ಕೇಂದ್ರ ಸರ್ಕಾರದ ಶೇ. 60 ಹಾಗೂ ರಾಜ್ಯ ಸರ್ಕಾರದಿಂದ ಶೇ. 40 ಅನುದಾನದಲ್ಲಿ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಇದಕ್ಕೆ ಬೇಕಾದ ಸೂಕ್ತ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡದೇ ನಿರ್ಲಕ್ಷ ತೋರಿದೆ. ಇನ್ನು ಅಂಬುಲೆನ್ಸ್ ಗೆ ಜಿಲ್ಲೆಯಲ್ಲಿ 39 ಸಿಬ್ಬಂದಿಯ ಅಗತ್ಯವಿದ್ದು ,ಗುತ್ತಿಗೆ ಆಧಾರದಲ್ಲಿ ಈವರೆಗೂ ನೇಮಕ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲದೇ, ಬಿಡ್ ಸಲ್ಲಿಸಲು ಕೂಡಾ ಯಾವ ಸಂಸ್ಥೆಯೂ ಆಸಕ್ತಿ ತೋರುತ್ತಿಲ್ಲ. ಜಿಲ್ಲೆಯಲ್ಲಿ ಶೇ.‌69 ರಷ್ಟು ವೈದ್ಯರು ಹಾಗೂ ಸಿಬ್ಬಂದಿಯ  ಕೊರತೆ ಇದೆ. ಕುಮಟಾ, ಹೊನ್ನಾವರ, ಶಿರಸಿ, ಯಲ್ಲಾಪುರ, ಮುಂಡಗೋಡು, ಹಳಿಯಾಳ, ಜೋಯಿಡಾ ಭಾಗದಲ್ಲಿ ಹೆಚ್ಚು ಗೋಸಾಕಾಣಿಕೆ ಮಾಡಲಾಗುತ್ತಿದ್ದು, ವೈದ್ಯರು, ಸಿಬ್ಬಂದಿಗಳಿಲ್ಲದೇ ಖಾಸಗಿ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಕೊಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ ಇನ್ನೊಂದು ತಿಂಗಳಲ್ಲಿ ಈ ಸಮಸ್ಯೆ ನೀಗಿಸುವ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಸರ್ಕಾರ ಪಶುಗಳ ಪಾಲನೆಗೆ ಹಲವು ಯೋಜನೆಗಳನ್ನೇನೋ ಜಾರಿಗೆ ತಂದಿದೆಯಾದ್ರೂ, ಪೂರಕ ವ್ಯವಸ್ಥೆಯನ್ನು ಕಲ್ಪಿಸದೆ ನಿರ್ಲಕ್ಷ್ಯ ಮಾಡಿದೆ. ಇದರಿಂದ ಜನರ ಕೋಟಿಗಟ್ಟಲೇ ತೆರಿಗೆ ಹಣ ಸದುಪಯೋಗವಾಗದೇ ವ್ಯರ್ಥವಾಗಿ ಹೋಗುತ್ತಿದ್ದು, ಇದನ್ನು ಯಾರೂ ಹೇಳುವವರು ಕೇಳುವವರು ಇಲ್ಲದಂತಾಗಿ ಹೋಗಿದೆ.
 

PREV
Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ