ರಾಗಿ ಕುರಿತು ಹೆಚ್ಚಿನ ಸಂಶೋಧನೆ: ಪ್ರಿಯಾ ಕಾಂಬಳೆ

By Kannadaprabha NewsFirst Published Mar 2, 2023, 6:12 AM IST
Highlights

ರಾಗಿ ಬೆಳೆಯಲ್ಲಿರುವ ವಿಶೇಷತೆಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಸುವ ಅಗತ್ಯವಿದೆ. ಇದೊಂದು ಅಪರೂಪದ ಬೆಳೆ. ಇದರ ಮಹತ್ವವನ್ನು ವಿಶ್ವವ್ಯಾಪಿಗೊಳಿಸುವ ಅವಶ್ಯಕತೆ ಇದೆ ಎಂದು ರಾಗಿ ಕುರಿತಾಗಿ ಸಂಶೋಧನೆ ನಡೆಸುತ್ತಿರುವ ಮಂಡ್ಯ ವಿ.ಸಿ.ಫಾರಂನ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಪ್ರಿಯಾ ಕಾಂಬಳೆ ಹೇಳಿದರು.

ಮಂಡ್ಯ ಮಂಜುನಾಥ

 ಮಂಡ್ಯ :  ರಾಗಿ ಬೆಳೆಯಲ್ಲಿರುವ ವಿಶೇಷತೆಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಸುವ ಅಗತ್ಯವಿದೆ. ಇದೊಂದು ಅಪರೂಪದ ಬೆಳೆ. ಇದರ ಮಹತ್ವವನ್ನು ವಿಶ್ವವ್ಯಾಪಿಗೊಳಿಸುವ ಅವಶ್ಯಕತೆ ಇದೆ ಎಂದು ರಾಗಿ ಕುರಿತಾಗಿ ಸಂಶೋಧನೆ ನಡೆಸುತ್ತಿರುವ ಮಂಡ್ಯ ವಿ.ಸಿ.ಫಾರಂನ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಪ್ರಿಯಾ ಕಾಂಬಳೆ ಹೇಳಿದರು.

Latest Videos

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ರಾಗಿ ಕುರಿತಾದ ಸಂಶೋಧನಾ ಪ್ರಬಂಧ ಮಂಡಿಸಿ ವಾಪಸಾಗಿರುವ ಅವರು ತಮ್ಮ ಅನುಭವಗಾಥೆಯನ್ನು ‘ಕನ್ನಡಪ್ರಭ’ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ದೊರಕಿದ್ದು ನನ್ನ ಸೌಭಾಗ್ಯ. ಇದರಿಂದ ರಾಗಿ ಬೆಳೆ ಹಾಗೂ ಅದರಲ್ಲಿರುವ ವಿಶೇಷತೆಗಳ ಮೇಲೆ ಇನ್ನಷ್ಟುಹೆಚ್ಚಿನ ಸಂಶೋಧನೆ ಮಾಡುವ ಆಸಕ್ತಿ ಮೂಡಿಸಿದೆ ಎಂದರು.

85 ತಳಿಗಳಲ್ಲಿ ಏನು ವಿಶೇಷತೆ ಪತ್ತೆ?

ನಾವು ರಾಗಿ ಬೆಳೆಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಮನುಷ್ಯನ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಅಂಶ ಯಾವ ಯಾವ ತಳಿಗಳಲ್ಲಿ ಎಷ್ಟುಪ್ರಮಾಣದಲ್ಲಿದೆ ಎಂಬ ಅಂಶವನ್ನು ಪತ್ತೆ ಹಚ್ಚಲಾಗಿದೆ. ಇದಕ್ಕಾಗಿ 85 ರಾಗಿ ತಳಿಗಳನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳಲಾಯಿತು. ಇದರಲ್ಲಿ ಸುಮಾರು 25ರಿಂದ 30 ತಳಿಗಳಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುವುದು ಕಂಡುಬಂದಿತು. ಕೆಲವೊಂದು ಹಳೇ ತಳಿಗಳನ್ನು ಬಿಟ್ಟರೆ ಹೊಸ ತಳಿಗಳಲ್ಲಿ ಹೆಚ್ಚು ಕ್ಯಾಲ್ಸಿಯಂ ಇರುವುದನ್ನು ಮನಗಾಣಲಾಗಿದೆ.

ಈ ತಳಿಗಳ 100 ಗ್ರಾಂ ರಾಗಿಯಲ್ಲಿ ಕ್ಯಾಲ್ಸಿಯಂ ಅಂಶ 300 ಮಿಲಿ ಗ್ರಾಂನಿಂದ 400 ಮಿಲಿಗ್ರಾಂವರೆಗೆ ಇರುವುದು ಸಂಶೋಧನೆ ವೇಳೆ ಕಂಡುಬಂದಿದೆ. ಹಳೆಯ ತಳಿಗಳಲ್ಲಿ ಉದುರುಮಲ್ಲಿಗೆ ಎಂಬ ರಾಗಿ ತಳಿಯಲ್ಲಿ 100 ಗ್ರಾಂಗೆ 387 ಮಿಲಿ ಗ್ರಾಂ ಕ್ಯಾಲ್ಸಿಯಂ ಅಂಶವಿರುವುದನ್ನು ಕಂಡುಕೊಳ್ಳಲಾಗಿದೆ. ಅದೇ ರೀತಿ ಇಂಡಾಫ್‌-7 ತಳಿಯ ರಾಗಿಯಯಲ್ಲಿ 267 ಮಿಲಿಗ್ರಾಂ ಕ್ಯಾಲ್ಸಿಯಂ ಇದೆ. ಇನ್ನುಳಿದ ಕೆಲವು ರಾಗಿ ತಳಿಗಳಲ್ಲಿ 225, 200, 150 ಮಿಲಿ ಗ್ರಾಂ ಮತ್ತು ಅದಕ್ಕಿಂತಲೂ ಪ್ರಮಾಣದ ಕ್ಯಾಲ್ಸಿಯಂ ಇರುವುದನ್ನು ಪ್ರಿಯಾ ಕಾಂಬಳೆ ಕಂಡುಕೊಂಡರು.

ರಾಗಿ ಬೆಳೆಗಳಲ್ಲಿ ಫೈಟಿಕ್‌ ಆ್ಯಸಿಡ್‌ ಎಂಬ ಮತ್ತೊಂದು ಅಂಶವಿದೆ. ಅದು ಮನುಷ್ಯನ ದೇಹಕ್ಕೆ ಕಡಿಮೆ ಪ್ರಮಾಣದಲ್ಲಿ ಅಗತ್ಯವಿದೆ. ಜಿಇಸಿ-331 ಎಂಬ ರಾಗಿ ತಳಿಯಲ್ಲಿ ಫೈಟಿಕ್‌ ಆ್ಯಸಿಡ್‌ ಪ್ರಮಾಣ 100 ಗ್ರಾಂ ರಾಗಿಯಲ್ಲಿ 361 ಮಿಲಿ ಗ್ರಾಂ ಇರುವುದು ಕಂಡುಬಂದಿದೆ. ಇದನ್ನು ಕಡಿಮೆ ಮಾಡಿ ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚು ಮಾಡುವ ರೀತಿಯಲ್ಲಿ ಅಧ್ಯಯನ ನಡೆಸಲು ಚಿಂತನೆ ನಡೆಸಿದ್ದೇನೆ ಎಂದರು.

ಎರಡು ಬಾರಿ ಬೆಳೆದರು:

85 ತಳಿಗಳನ್ನು ಸಂಶೋಧನೆಗೆ ಒಳಪಡಿಸಿದ ಪ್ರಿಯಾ ಕಾಂಬಳೆ ಆ ತಳಿಗಳನ್ನು ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಎರಡು ಬಾರಿ ಬೆಳೆದರು. ಯಾವ ಕಾಲದಲ್ಲಿ ಯಾವ ಯಾವ ತಳಿಗಳು ಎಷ್ಟುಇಳುವರಿ ನೀಡುತ್ತವೆ. ಆ ಸಮಯದಲ್ಲಿ ಕ್ಯಾಲ್ಸಿಯಂ ಪ್ರಮಾಣ ಎಷ್ಟಿರುತ್ತದೆ ಎನ್ನುವುದನ್ನು ಕಂಡುಕೊಳ್ಳುವುದು ಅವರ ಪ್ರಮುಖ ಉದ್ದೇಶವಾಗಿತ್ತು.

3 ಫೆಬ್ರವರಿ 2021ರಲ್ಲಿ ಆರಂಭವಾದ ಸಂಶೋಧನೆಯನ್ನು ಆರಂಭಿಸಿ 2022ರ ಅಕ್ಟೋಬರ್‌ ತಿಂಗಳವರೆಗೆ ಸುಮಾರು ಒಂದೂವರೆ ವರ್ಷಗಳ ಕಾಲ ವಿವಿಧ ರಾಗಿ ತಳಿಗಳ ಮೇಲೆ ಸಂಶೋಧನೆ ನಡೆಸಿದೆ. ನಾನು ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಗಿಂತ ಮಣ್ಣು ವಿಜ್ಞಾನ ಪ್ರಯೋಗಾಲಯದಲ್ಲಿ ಹೆಚ್ಚು ಕಾಲ ಸಂಶೋಧನೆಯಲ್ಲಿ ನಿರತಳಾದೆ. ಅಲ್ಲಿ ಪ್ರಯೋಗಕ್ಕೆ ಬೇಕಾದ ಎಲ್ಲ ರೀತಿಯ ಸಲಕರಣೆಗಳಿದ್ದವು. ಡಾ.ಸುಮಾ ನನ್ನ ಸಂಶೋಧನೆಗೆ ಹೆಚ್ಚಿನ ಸಲಹೆ, ಸಹಕಾರ ನೀಡಿದ್ದಾಗಿ ಸ್ಮರಿಸಿದರು.

ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆ

ಕೃಷಿ ವಿಶ್ವವಿದ್ಯಾನಿಲಯದಲ್ಲಿ ರಾಗಿ ಕುರಿತಾಗಿ ನಾನೊಬ್ಬಳು ಮಾತ್ರ ಸಂಶೋಧನೆ ನಡೆಸಿದೆ. ರಾಗಿ ಬೆಳೆಯಲ್ಲಿ ಕ್ಯಾಲ್ಸಿಯಂ ಹಾಗೂ ಫೈಟಿಕ್‌ ಆ್ಯಸಿಡ್‌ ಜೀನ್‌ಗಳಿರುವುದನ್ನು ಕಂಡುಕೊಂಡೆ. ಇಂತಹ ಮಹತ್ವದ ಅಂಶವನ್ನು ಕೇವಲ ಪ್ರಬಂಧ ಬರೆದಿಟ್ಟರೆ ಪ್ರಯೋಜನವಿಲ್ಲ. ಅದನ್ನು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಿ ರಾಗಿಯ ಮಹತ್ವವನ್ನು ಜಗತ್ತಿಗೆ ತಿಳಿಸಬೇಕೆಂದು ನಿರ್ಧರಿಸಿದೆ. ಡಾ.ಎಚ್‌.ಬಿ.ಮಹೇಶ್‌ ಕೂಡ ಇದೇ ಸಲಹೆಯನ್ನು ಕೊಟ್ಟು ನನಗೆ ಬೆಂಬಲವಾಗಿ ನಿಂತರು.

ಅಮೆರಿಕಾದ ಕ್ಯಾಲಿಫೋನಿರ್ಯಾದಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ನಾನು ನಡೆಸಿದ ಸಂಶೋಧನಾ ಪ್ರಬಂಧವನ್ನು ಕಳುಹಿಸಿದೆ. ಅದೃಷ್ಟವಶಾತ್‌ ಆಯ್ಕೆಯಾಯಿತು ಎಂದು ಸಂತಸದಿಂದ ಹೇಳಿದರು.

ನೆರವಿಗೆ ಬಂದ ‘ಕನ್ನಡಪ್ರಭ’ ವರದಿ

ನನ್ನ ಸಂಶೋಧನಾ ಪ್ರಬಂಧ ಅಮೆರಿಕಾದ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಯಾದ ವೇಳೆ ಅಲ್ಲಿಗೆ ತೆರಳಲು 4 ಲಕ್ಷ ರು. ಅಗತ್ಯವಿತ್ತು. ಹಣಕಾಸಿಗೆ ತೊಂದರೆ ಎದುರಾಗಿದ್ದ ಸಮಯದಲ್ಲಿ ‘ಕನ್ನಡಪ್ರಭ’ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿ ನನ್ನ ನೆರವಿಗೆ ಬಂದಿತು. ಜೊತೆಗೆ ರಾಗಿ ಲಕ್ಷ್ಮಣಯ್ಯ ಸಮಿತಿ ಅಧ್ಯಕ್ಷ ಕೆ.ಬೋರಯ್ಯ ಬೆಂಬಲಕ್ಕೆ ಬಂದರು. ಪತ್ರಿಕಾ ವರದಿ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾಗಿ ಸರ್ಕಾರದ ಕಣ್ತೆರೆಸಿತು. ಆಗ ಸರ್ಕಾರ ನನಗೆ ಎದುರಾಗಿದ್ದ ಹಣಕಾಸಿನ ನೆರವನ್ನು ತುಂಬಿಕೊಟ್ಟು ಸಮ್ಮೇಳನಕ್ಕೆ ಕಳುಹಿಸಿದ್ದಾಗಿ ಪ್ರಿಯಾ ಕಾಂಬಳೆ ನೆನೆದರು.

ರಾಗಿ ಬಗ್ಗೆ ಅಮೆರಿಕಾ ವಿಜ್ಞಾನಿಯೂ ಸಂಶೋಧನೆ

ನಾನು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಲು ತೆರಳಿದ್ದ ವೇಳೆ ಅಮೆರಿಕಾ ವಿಜ್ಞಾನಿಯೊಬ್ಬರು ರಾಗಿ ಬೆಳೆ ಬಗ್ಗೆ ಸಂಶೋಧನೆ ನಡೆಸುತ್ತಿರುವುದು ಗೊತ್ತಾಯಿತು. ಅಲ್ಲಿ ಪ್ರಕಟಿಸಲಾಗಿದ್ದ ನನ್ನ ಥೀಸಿಸ್‌ ನೋಡಿದ ಅಮೆರಿಕಾ ವಿಜ್ಞಾನಿ ಡಾ.ರೀಟಾಮಮ್‌ ಕೂಡ ಅಚ್ಚರಿ ವ್ಯಕ್ತಪಡಿಸಿ ನನ್ನ ಬೆನ್ನು ತಟ್ಟಿದರು. ಆದರೆ, ಅವರು ಸಂಶೋಧನೆಗೆ ಆಯ್ಕೆ ಮಾಡಿದ್ದು ಕರ್ನಾಟಕದ ರಾಗಿಯನ್ನಲ್ಲ. ಆಫ್ರಿಕಾ ದೇಶದ ರಾಗಿ ಬೆಳೆ. ಆ ದೇಶದ ಅನಾಥ ಬೆಳೆಗಳ ಮೇಲೆ ಅವರು ಸಂಶೋಧನೆ ನಡೆಸುತ್ತಿದ್ದಾರೆ ಎಂದು ನುಡಿದರು.

ಕೋಟ್‌...

ರಾಗಿ ಲಕ್ಷ್ಮಣಯ್ಯನವರು ಕೊಡುಗೆಯಾಗಿ ನೀಡಿದ ರಾಗಿ ಬೆಳೆಯ ಬಗ್ಗೆ ಪ್ರಿಯಾ ಕಾಂಬಳೆ ಸಂಶೋಧನೆ ನಡೆಸಿರುವುದು ಹೆಮ್ಮೆಯ ವಿಚಾರ. ರಾಗಿಯ ಮಹತ್ವ ದೇಶಕ್ಕೆ ಮಾತ್ರವಲ್ಲದೆ ವಿಶ್ವವಾಪಿಯಾಗಬೇಕು. ಈಕೆ ನಡೆಸಿದ ಸಂಶೋಧನೆ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಇನ್ನೂ ಹೆಚ್ಚಿನ ಸಂಶೋಧನೆ ನಡೆಸಲು ಪ್ರೇರಣೆಯಾಗಲಿ.

- ಕೆ.ಬೋರಯ್ಯ, ಅಧ್ಯಕ್ಷರು, ರಾಗಿ ಲಕ್ಷ್ಮಣಯ್ಯ ಸಮಿತಿ 

click me!