ಹಲವು ವಿಶೇಷತೆಗಳಿಗೆ ವೇದಿಕೆಯಾಗಿರುವ ಸುತ್ತೂರು ಜಾತ್ರಾ ಮಹೋತ್ಸವವು ದೇಶದ ‘ಸಿರಿಧಾನ್ಯಗಳ’ ಮಹತ್ವ ಸಾರುವಲ್ಲೂ ಯಶಸ್ವಿಯಾಯಿತು.
ಬಿ. ಶೇಖರ್ ಗೋಪಿನಾಥಂ
ಮೈಸೂರು : ಹಲವು ವಿಶೇಷತೆಗಳಿಗೆ ವೇದಿಕೆಯಾಗಿರುವ ಸುತ್ತೂರು ಜಾತ್ರಾ ಮಹೋತ್ಸವವು ದೇಶದ ‘ಸಿರಿಧಾನ್ಯಗಳ’ ಮಹತ್ವ ಸಾರುವಲ್ಲೂ ಯಶಸ್ವಿಯಾಯಿತು.
undefined
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ನಡೆದ ಸಿರಿಧಾನ್ಯಗಳ ಮಹತ್ವ ಕುರಿತ ಕೃಷಿ ವಿಚಾರಸಂಕಿರಣವು ಸಿರಿಧಾನ್ಯಗಳ ಪರಂಪರೆ, ಮಹತ್ವ, , ಬೇಡಿಕೆಯನ್ನು ರೈತರು ಹಾಗೂ ಸಾರ್ವಜನಿಕರಿಗೆ ಮನದಟ್ಟು ಮಾಡಿಸಿತು. ವಿಚಾರಸಂಕಿರಣದಲ್ಲಿ ಪಾಲ್ಗೊಂಡಿದ್ದ ವಿಷಯ ತಜ್ಞರು ಸಿರಿಧಾನ್ಯಗಳ ಉಳಿಸಿ, ಬಳಸಿ, ಬೆಳೆಸುವ ನಿಟ್ಟಿನಲ್ಲಿ ವಿಷಯ ಮಂಡಿಸಿದರು.
ರೈತರು ಉದ್ಯಮಿಗಳಾಗಬೇಕು
ಕೃಷಿಯಲ್ಲಿ ಸಿರಿಧಾನ್ಯ ಕುರಿತು ಪ್ರಗತಿಪರ ರೈತ ಹೊನ್ನೂರು ಪ್ರಕಾಶ್ ಮಾತನಾಡಿ, 2023ನೇ ಸಾಲನ್ನು ವಿಶ್ವಸಂಸ್ಥೆಯು ಸಿರಿಧಾನ್ಯಗಳ ವರ್ಷವೆಂದು ಕರೆದಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಕಡಿಮೆ ಮಳೆ, ಗೊಬ್ಬರ ಇಲ್ಲದಿದ್ದರೂ ಬೆಳೆಯುವ ಸಿರಿಧಾನ್ಯಗಳನ್ನು ಪ್ರಸ್ತುತ ಹಲವಾರು ದೃಷ್ಠಿಯಲ್ಲಿ ನೋಡಬೇಕಿದೆ ಎಂದರು.
ರೈತರು ಎಲ್ಲವನ್ನೂ ಬೆಳೆಯುತ್ತಾರೆ. ಆದರೆ, ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ, ಮಾರುಕಟ್ಟೆಮಾಡುವುದರಲ್ಲಿ ಸೋಲುತ್ತಿದ್ದಾರೆ. ರೈತರು ಕ್ವಿಂಟಾಲ್ ರಾಗಿಯನ್ನು 3 ಸಾವಿರಕ್ಕೆ ಮಾರುತ್ತಾರೆ. ಆದರೆ, ರಾಗಿಯನ್ನು ಹಿಟ್ಟು ಮಾಡಿ ಮಾರಿದರೇ ಕ್ವಿಂಟಾಲ್‌ಗೆ 30 ಸಾವಿರ ಸಿಗುತ್ತದೆ. ರಾಗಿ, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಾಗಿ ಮಾರಿದರೇ ಬೇರೆಯವರು ದರ ನಿಗದಿ ಮಾಡುತ್ತಾರೆ. ಆದರೆ, ಮೌಲ್ಯವರ್ಧನೆ ಮಾಡಿ ಮಾರಿದರೇ ರೈತರೇ ತಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಿಕೊಳ್ಳಬಹುದು. ಆ ಮೂಲಕ ಎಲ್ಲಾ ರೈತರು ಉದ್ಯಮಿಗಳಾಗಬೇಕು ಎಂದು ಅವರು ಆಶಿಸಿದರು.
ರೈತರ ಮಕ್ಕಳಿಗೆ ಈಗ ಹೆಣ್ಣು ಕೊಡುತ್ತಿಲ್ಲ. ತಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಮಾರಿದರೇ ಆವಾಗ ಎಲ್ಲರೂ ಹುಡುಕಿಕೊಂಡು ಬಂದು ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಾರೆ. ಕಬ್ಬು ಬೆಳೆಯಲ್ಲಿ ರೈತರಿಗೆ ಲಾಭವಿಲ್ಲ. ಅದರ ಬದಲು ಸಿರಿಧಾನ್ಯ ಬೆಳೆದರೇ ಹೆಚ್ಚು ಲಾಭ ಗಳಿಸಬಹುದು. ರೈತರು ಸಾವಯವ ಕೃಷಿ ಮಾಡುವ ಮೂಲಕ ಮಾರುಕಟ್ಟೆಕ್ರಾಂತಿ ಮಾಡಬೇಕು ಎಂದು ಅವರು ಕರೆ ನೀಡಿದರು.
ವೈಜ್ಞಾನಿಕವಾಗಿ ಸಿರಿಧಾನ್ಯ ಬಳಸಿ:
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ವಿಸ್ತರಣಾ ನಿರ್ದೇಶಕ ಡಾ.ವಿ. ಹೇಮಲಾ ನಾಯಕ್ ಮಾತನಾಡಿ, ಹಸಿರು ಕ್ರಾಂತಿ, ಆಹಾರ ಭದ್ರತೆಗಾಗಿ ದೇಶದಲ್ಲಿ ರಾಸಾಯಿನಕ ಗೊಬ್ಬರ, ವಿದೇಶಿ ತಳಿಗಳನ್ನು ತಂದು ಹೆಚ್ಚಿನ ಇಳುವರಿ ಪಡೆಯಲಾಯಿತು. ಆದರೆ, ಇದು ಜನರ ಆರೋಗ್ಯದ ಪರಿಣಾಮ ಬೀರುತ್ತಿದೆ. ಹೀಗಾಗಿ, ಈಗ ಪರಿಸರಸ್ನೇಹಿ ಸಿರಿಧಾನ್ಯಗಳತ್ತ ಮುಖ ಮಾಡಿದ್ದೇವೆ ಎಂದರು.
ಸಿರಿಧಾನ್ಯ ಬೆಳೆಯುವುದರಲ್ಲಿ ಭಾರತವು ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಹೆಚ್ಚಿನ ಪೌಷ್ಟಿಕಾಂಶಗಳಿಂದ ಕೂಡಿರುವ ಸಿರಿಧಾನ್ಯಗಳನ್ನು ವೈಜ್ಞಾನಿಕವಾಗಿ ಬಳಸಿಕೊಂಡು, ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಅವರು ಹೇಳಿದರು.
ಸಿರಿಧಾನ್ಯಗಳ ಪುನರುಜ್ಜೀವನ ಹಾಗೂ ಸಂಸ್ಕರಣೆ ಕುರಿತು ಅತ್‌ರ್ 360 ಇಕೋ ವೆಂಚರ್ಸ್ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ದಿನೇಶಕುಮಾರ್ ಮಾತನಾಡಿ, ಸಿರಿಧಾನ್ಯಗಳನ್ನು ಸರಿಯಾಗಿ ಸಂಸ್ಕರಿಸಲು ತಂತ್ರಜ್ಞಾನ, ಯಂತ್ರಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ತಂತ್ರಜ್ಞಾನದೊಂದಿಗೆ ಯಂತ್ರಗಳ ಅಭಿವೃದ್ಧಿಯಲ್ಲಿ ತೊಡಗಿದೆ. ಸಿರಿಧಾನ್ಯಗಳ ಕ್ರಾಂತಿ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ಭಾರತ ನವಶೀಲಾಯುಗದಲ್ಲಿ ಸಿರಿಧಾನ್ಯ ಕೃಷಿ ಕ್ರಾಂತಿ ಕುರಿತು ಪುರಾತತ್ವ ಶಾಸ್ತ್ರಜ್ಞ ಪ್ರೊ. ರವಿ ಕೋರಿಶೆಟ್ಟರ್ ವಿಷಯ ಮಂಡಿಸಿದರು.
ಭೂಮಿ ಬಹಳಷ್ಟುಸತ್ವ ಕಳೆದುಕೊಂಡಿದೆ. ಭೂಮಿಯಲ್ಲಿನ ಸಾವಯವ ಇಂಗಾಲದ ಅಂಶ ಕಡಿಮೆ ಆಗಿದೆ. ಇದರಿಂದ ಭೂಮಿಯು ಪ್ರಸ್ತುತ ಐಸಿಯುನಲ್ಲಿದೆ. ಹೀಗಾಗಿ, ರೈತರು ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಸಿರಿಧಾನ್ಯಗಳನ್ನು ಹೆಚ್ಚು ಬೆಳೆಯಬೇಕು.
- ಹೊನ್ನೂರು ಪ್ರಕಾಶ್, ಪ್ರಗತಿಪರ ರೈತ
ಸಿರಿಧಾನ್ಯವು ಆಹಾರ ಔಷಧ- ಸಿ.ಆರ್. ಮುಕುಂದ್
ಸಿರಿಧಾನ್ಯಗಳು ಆಹಾರ ಮಾತ್ರವಲ್ಲದೇ ಔಷಧ ರೂಪದಲ್ಲೂ ಕೆಲಸ ಮಾಡುತ್ತದೆ. ಹೆಚ್ಚಿನ ಪೌಷ್ಟಿಕಾಂಶ ಹೊಂದಿರುವ ಸಿರಿಧಾನ್ಯಗಳು ಅಪೌಷ್ಟಿಕತೆಯನ್ನು ನಿವಾರಿಸುತ್ತವೆ ಎಂದು ಆರೆಸ್ಸೆಸ್ ಸಹ ಸರಕಾರ್ಯವಾಹಕ ಸಿ.ಆರ್. ಮುಕುಂದ್ ತಿಳಿಸಿದರು.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಶನಿವಾರ ನಡೆದ ಸಿರಿಧಾನ್ಯಗಳ ಮಹತ್ವ ಕುರಿತ ಕೃಷಿ ವಿಚಾರಸಂಕಿರಣದಲ್ಲಿ ಸಿರಿಧಾನ್ಯ ಐಸಿರಿ ಕೃತಿ ಹಾಗೂ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಸ್ತುತ ಎಲ್ಲರಿಗೂ ಆಹಾರ ಭದ್ರತೆ ಸಿಕ್ಕಿದೆ. ಆದರೆ, ಪ್ರಸ್ತುತ ಸಮಾಜದ ಆರೋಗ್ಯದ ಕಡೆಗೆ ಗಮನಹರಿಸಬೇಕಿದೆ. 140 ಕೋಟಿ ಜನರ ಆರೋಗ್ಯ, ಸದೃಢತೆ ಕಾಪಾಡಬೇಕಿದೆ ಎಂದರು.
ಹಿಂದೆ ಸಿರಿಧಾನ್ಯ ಬಳಸುವ ಪರಂಪರೆ ಇತ್ತು. ಈಗ ಅದು ಮಾಯವಾಗಿದ್ದು, ಮತ್ತೆ ಆ ಪರಂಪರೆ ತರುವ ಕೆಲಸ ಆಗಬೇಕಿದೆ. ಸಮಾಜದಲ್ಲಿ ಸಿರಿಧಾನ್ಯ ಪರಂಪರೆ ಉಳಿಸಿ ಬೆಳೆಸಬೇಕಿದೆ. ಆ ನಿಟ್ಟಿನಲ್ಲಿ ರೈತರು, ವೈದ್ಯರು, ವಿಜ್ಞಾನಿಗಳು ಮಾಡಬೇಕಿದೆ ಎಂದು ಅವರು ಹೇಳಿದರು.