ಕೋವಿಡ್‌ ಸರಪಳಿ ಕತ್ತರಿಸಿದ ಸಂಪೂರ್ಣ ಲಾಕ್‌ಡೌನ್‌..!

Kannadaprabha News   | Asianet News
Published : Jun 07, 2021, 09:43 AM ISTUpdated : Jun 07, 2021, 09:45 AM IST
ಕೋವಿಡ್‌ ಸರಪಳಿ ಕತ್ತರಿಸಿದ ಸಂಪೂರ್ಣ ಲಾಕ್‌ಡೌನ್‌..!

ಸಾರಾಂಶ

* ಮೇ ಮಧ್ಯ ಭಾಗದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಸೋಂಕು * ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪ್ರಸ್ತುತ ಪಾಸಿಟಿವ್‌ ಪ್ರಕರಣ, ಸಾವಿನ ಸಂಖ್ಯೆಯಲ್ಲೂ ಇಳಿಕೆ * ಶೇ. 91ರಷ್ಟಿದೆ ಜಿಲ್ಲೆಯ ಗುಣಮುಖರಾದವರ ಸಂಖ್ಯೆ  

ಬಸವರಾಜ ಹಿರೇಮಠ

ಧಾರವಾಡ(ಜೂ.07): ಕೋವಿಡ್‌ ಸೋಂಕಿನ ಸರಪಳಿ ಕತ್ತರಿಸಲು ಕೊನೆಗೂ ಸಂಪೂರ್ಣ ಲಾಕ್‌ಡೌನ್‌ ಎಂಬ ಅಸ್ತ್ರವೇ ಬೇಕಾಯಿತು. ಜಿಲ್ಲೆಯಲ್ಲಿ ಆರಂಭದಲ್ಲಿ ಹೇರಲಾಗಿದ್ದ ಕರ್ಫ್ಯೂ, ಸೆಮಿ ಲಾಕ್‌ಡೌನ್‌ ಅಸ್ತ್ರಗಳು ಕೋವಿಡ್‌ ನಿಯಂತ್ರಣ ಮಾಡಲು ವಿಫಲವಾದವು. ಆಗ ಅನಿವಾರ್ಯವಾಗಿ ಜಾರಿ ಮಾಡಿದ ಸಂಪೂರ್ಣ ಲಾಕ್‌ಡೌನ್‌ ಇದೀಗ ಫಲಪ್ರದವಾಗಿದೆ.

ಕಳೆದ ಮೇ 24ರಿಂದ ಜೂನ್‌ 7ರ ವರೆಗೆ 14 ದಿನಗಳ ಸಂಪೂರ್ಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇದೀಗ ಹೊಸ ಕೋವಿಡ್‌ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜತೆಗೆ ಪಾಸಿಟಿವಿಟಿ ದರವೂ ಕುಸಿತಗೊಂಡಿದೆ. ನಿತ್ಯ ಒಂದು ಸಾವಿರ ಗಡಿ ದಾಟುತ್ತಿದ್ದ ಪ್ರಕರಣಗಳು ಇದೀಗ 200 ಆಸುಪಾಸಿನಲ್ಲಿವೆ.

ಮೇ ಮಧ್ಯಭಾಗದಲ್ಲಿ ಕೋವಿಡ್‌ ಪಾಸಿಟಿವಿಟಿ ಹಾಗೂ ಮರಣ ಹೊಂದಿದವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುವ ಮೂಲಕ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಆಗ ಲಾಕ್‌ಡೌನ್‌ ಅನ್ನು ಅನಿವಾರ್ಯವಾಗಿ ಮುಂದುವರಿಸುವ ಅವಶ್ಯಕತೆ ಉಂಟಾಗಿತ್ತು. ಇದ​ರಿಂದ ಮೇ 3ನೇ ವಾರದಲ್ಲಿ ಶೇ. 15-19ರ ಆಸುಪಾಸಿನಲ್ಲಿದ್ದ ಕೋವಿಡ್‌ ಸೋಂಕಿತರ ಸಂಖ್ಯೆ ಜೂ. 1ರಿಂದ ಕಡಿಮೆಯಾಗಿ ಒಂದಂಕಿಗೆ ಬಂದಿದೆ. ಕೋವಿಡ್‌ 2ನೇ ಅಲೆ ಧಾರವಾಡ ಜಿಲ್ಲೆಯಲ್ಲಿ ತೀವ್ರ ಅಪಾಯ ಉಂಟು ಮಾಡಿದ್ದು, ಜೂ. 5ರ ವರೆಗೆ ಕಳೆದ ಮೂರು ವಾರಗಳಲ್ಲಿ 200 ಜನರನ್ನು ಬಲಿ ಪಡೆದಿರುವುದು ಖೇದಕರ ಸಂಗತಿ.

ಕೊರೋನಾ ಪ್ರಕರಣ ಇಳಿಕೆ: ಲಾಕ್‌ಡೌನ್‌ಗೆ ವಿನಾಯ್ತಿ

ಶೇ. 91ರಷ್ಟು ಗುಣಮುಖ:

ಸಮಾಧಾನದ ಸಂಗತಿ ಎಂದರೆ ಸಂಪೂರ್ಣ ಲಾಕ್‌ಡೌನ್‌ ನಂತರದಲ್ಲಿ ಹೊಸ ಪ್ರಕರಣಗಳು ಕಡಿಮೆಯಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಜೂ. 5ರಂದು ಪರಿಗಣಿಸಿದರೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 56,935 ಇದ್ದರೆ, ಗುಣಮುಖರಾದವರ ಸಂಖ್ಯೆ 52,364 ಅಂದರೆ ಶೇ. 91ರಷ್ಟುಸೋಂಕಿತರು ಗುಣಮುಖರಾಗಿದ್ದಾರೆ. ಇನ್ನು, ಮೇ 3ನೇ ವಾರದಲ್ಲಿ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ. 39.2 ಇರುವುದರಿಂದ ಜಿಲ್ಲಾಡಳಿತ 14 ದಿನಗಳ ಸಂಪೂರ್ಣ ಲಾಕ್‌ಡೌನ್‌ ಘೋಷಿಸಬೇಕಾಯಿತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಪಾಸಿಟಿವಿಟಿ ದರ ಶೇ. 10ಕ್ಕೆ ಇಳಿದಿದೆ.

ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದರಿಂದ ಆಸ್ಪತ್ರೆಯಲ್ಲಿರುವ ಸೋಂಕಿತರ ಸಂಖ್ಯೆಯೂ ಕಡಿಮೆಯಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ 600 ಸೋಂಕಿತರು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 800 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಆಕ್ಸಿಜನ್‌ ಬೇಡಿಕೆಯೂ ಕಡಿಮೆಯಾಗಿದೆ ಎಂದು ಕೋವಿಡ್‌ ನಿರ್ವಹಣೆಯ ಅಧಿಕಾರಿಯೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 21 ಲಕ್ಷ ಜನಸಂಖ್ಯೆ ಇದೆ. ಈ ಪೈಕಿ ಈಗಾಗಲೇ 8.84 ಲಕ್ಷ ಜನ ಪರೀಕ್ಷೆಗೆ ಒಳಪಟ್ಟಿದ್ದಾರೆ. 3.35 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ಲಸಿಕಾಕರಣವೂ ಮುಂದುವರಿದಿದೆ. ಜಿಲ್ಲೆಯಲ್ಲಿ ಗ್ರಾಮೀಣ ಭಾಗಗಳು ಸೇರಿದಂತೆ ಒಟ್ಟು 34 ಕೋವಿಡ್‌ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕನ್ನು ನಿಯಂತ್ರಿಸಲು ಈ ಕೇಂದ್ರಗಳು ಸಹಕಾರಿಯಾಗಿದ್ದು, ಪ್ರಸ್ತುತ ಕೋವಿಡ್‌ ತಹಬದಿಗೆ ಬಂದಿದೆ ಎಂಬುದೇ ನಿಟ್ಟಿಸಿರು ಬಿಡುವ ಸಂಗತಿ.

ಲಾಕ್‌ಡೌನ್‌ ಅನ್ನು ಇನ್ನಷ್ಟು ದಿನಗಳ ವರೆಗೆ ಮುಂದುವರಿಸುವುದರಿಂದ ಪಾಸಿಟಿವಿಟಿ ದರದಲ್ಲಿ ಇಳಿಕೆಯಾಗುತ್ತದೆ. ಆದರೆ, ಲಾಕ್‌ಡೌನ್‌​ನಿಂದ ಆರ್ಥಿಕ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಲಾಕ್‌ಡೌನ್‌ ಒಂದೇ ಅಂತಿಮ ಪರಿಹಾರವಲ್ಲ. ಲಸಿಕಾಕರಣ ಹೆಚ್ಚಳ ಮತ್ತು ಜನರು ಕಟ್ಟುನಿಟ್ಟಾಗಿ ಕೋವಿಡ್‌ ನಿಯಮಾವಳಿಗಳನ್ನು ಪಾಲಿಸುವುದೇ ಈ ಸಮಸ್ಯೆಗೆ ಅಂತಿಮ ಪರಿಹಾರ ಎಂದು ಹಿರಿಯ ವೈದ್ಯ ಡಾ. ಎಸ್‌.ಆರ್‌. ರಾಮನಗೌಡರ ತಿಳಿಸಿದ್ದಾರೆ.  
 

PREV
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ