ಭೂ ಒತ್ತುವರಿ ವಿಚಾರ : ಸಾರಾ ಮಹೇಶ್‌ಗೆ ಕ್ಲೀನ್‌ ಚಿಟ್

By Kannadaprabha NewsFirst Published Jun 15, 2021, 10:31 AM IST
Highlights
  • ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸಾರಾ ಚೌಲ್ಟ್ರಿ
  •  ರಾಜಕಾಲುವೆ ಮೇಲೆ ನಿರ್ಮಾಣವಾಗಿಲ್ಲ ಎಂದು  ವರದಿ
  • ಜಿಲ್ಲಾಧಿಕಾರಿಗಳ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿರುವ ವರದಿ

 ಮೈಸೂರು (ಜೂ.15):  ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸಾರಾ ಚೌಲ್ಟ್ರಿಯು ರಾಜಕಾಲುವೆ ಮೇಲೆ ನಿರ್ಮಾಣವಾಗಿಲ್ಲ ಎಂದು ಈ ಸಂಬಂಧ ವಿಚಾರಣೆಗೆ ರಚಿಸಿದ್ದ ತಂಡವು ಜಿಲ್ಲಾಧಿಕಾರಿಗಳ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

ಸಾರಾ ಚೌಲ್ಟ್ರಿ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆರೋಪಿಸಿದ್ದರು. ಇದನ್ನು ಖಂಡಿಸಿ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿದ್ದ ಶಾಸಕ ಸಾ.ರಾ. ಮಹೇಶ್‌, ಇದು ನಿಜವಾದಲ್ಲಿ ರಾಜ್ಯಪಾಲರ ಮೂಲಕ ಸರ್ಕಾರಕ್ಕೆ ಒಪ್ಪಿಸಿ, ರಾಜಕೀಯವಾಗಿ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿ, ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್‌ ಅವರು ಹೆಚ್ಚುವರಿ ಜಿಲ್ಲಾಧಿಕಾರಿ, ತಹಸೀಲ್ದಾರ್‌, ಭೂಮಾಪನ ಇಲಾಖೆಯ ಜಂಟಿ ನಿದೇಶಕರನ್ನು ಒಳಗೊಂಡ ತಂಡ ರಚಿಸಿ, ಪರಿಶೀಲಿಸಿ, ವರದಿ ನೀಡುವಂತೆ ಸೂಚಿಸಿದ್ದರು.

ಕೋವಿಡ್‌ ಮೃತರ ಕುಟುಂಬಕ್ಕೆ ತಲಾ 25000 ನೆರವು : ಶಾಸಕರ ಮಹತ್ವದ ಕಾರ್ಯ

ಅದರಂತೆ ತಂಡವು ಪರಿಶೀಲಿಸಿ, 13 ಪುಟಗಳ ವರದಿ ಸಲ್ಲಿಸಿದೆ. ಈ ವರದಿಯ ಪ್ರತಿಯನ್ನು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಲಾಗಿದೆ. ಸಾ.ರಾ. ಮಹೇಶ್‌ ಅವರಿಗೂ ಒಂದು ಪ್ರತಿ ನೀಡಲಾಗಿದೆ. ಪ್ರತಿ ಕೈಸೇರುತ್ತಿದ್ದಂತೆಯೇ ತುರ್ತು ಸುದ್ದಿಗೋಷ್ಠಿ ನಡೆಸಿದ ಸಾ.ರಾ. ಮಹೇಶ್‌, ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದರು.

ದಟ್ಟಗಳ್ಳಿಯಲ್ಲಿನ ಸಾರಾ ಕನ್ವೆಂಷನ್‌ ಹಾಲ್‌ ಯಾವುದೇ ಸರ್ಕಾರಿ ಜಮೀನು ಒತ್ತುವರಿ ಮಾಡಿ ನಿರ್ಮಿಸಿಲ್ಲ. ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್‌ ಸ್ವಾಮಿ ನೇತೃತ್ವದ ಸಮಿತಿಯು ಪ್ರಾದೇಶಿಕ ಆಯುಕ್ತ ಪ್ರಕಾಶ್‌ ಅವರಿಗೆ ವರದಿ ಸಲ್ಲಿಸಿದೆ ಎಂದು ತಿಳಿಸಿದರು.

ನನ್ನ ವಿರುದ್ಧ ತನಿಖೆಗೆ ಮುಂದಾಗಿ ರೋಹಿಣಿ ಸಿಂಧೂರಿ ಅವರು ಹಳ್ಳಕ್ಕೆ ಬಿದಿದ್ದಾರೆ. 30 ವರ್ಷಗಳ ಹಿಂದೆ ಖರೀದಿಸಿದ ಜಾಗ ನನ್ನ ಪತ್ನಿ ಹೆಸರಿನಲ್ಲಿ ಇದೆ. 2 ಎಕರೆಯಲ್ಲ 4 ಎಕರೆ ಜಾಗ. ಅವರು ವರ್ಗಾವಣೆ ಆಗುವ ಹಿಂದಿನ ದಿನ ಎಂಡಿಎ ಆಯುಕ್ತರಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ. ಇವರು ಏನು ಓದಿದ್ದಾರೋ ಗೊತ್ತಿಲ್ಲ, ನನಗೆ ಅಸಹ್ಯ ಆಗುತ್ತದೆ ಎಂದು ಹರಿಹಾಯ್ದರು.

2018 ರಲ್ಲಿ ಆಗಿರುವ ತಿದ್ದುಪಡಿ ಗೊತ್ತಿಲ್ಲ. 2016ಅನ್ನು ಕೋಟ್‌ ಮಾಡಿದ್ದಾರೆ. ಕೆರೆಯ 30 ಮೀಟರ್‌ ಸುತ್ತಳತೆಯಲ್ಲಿ ಯಾವುದೇ ಚಟುವಟಿಕೆ ಮಾಡುವಂತಿಲ್ಲ. ಈ ಹಿಂದೆ 72 ಮೀಟರ್‌ ಇತ್ತು. ಬೆಂಗಳೂರಿನ ಅಲಸೂರು ಕೆರೆ ಪ್ರಕರಣ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆದು ಅಲಸೂರು ಕೆರೆ 60 ಮೀಟರ್‌ ಉಳಿದ ರಾಜ್ಯದ ಎಲ್ಲಾ ಕೆರೆಗಳ ಸುತ್ತ 30 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆ ನಡೆಸುವಂತಿಲ್ಲ ಎಂದಿದೆ. ಇವರು ಐಎಎಸ್‌ ಓದಿಲ್ವಾ? ಕಾಯ್ದೆ ನೋಡಿಲ್ವಾ? ಇದೆಲ್ಲ ಗೊತ್ತಿದ್ದು ನನಗೆ ತೊಂದರೆ ಕೊಡಲು ಈ ರೀತಿ ಮಾಡಿದ್ದಾರಾ? ಪ್ಲಾನ್‌ ರದ್ದು ಮಾಡಲು ನಿರ್ದೇಶನ ನೀಡುತ್ತಾರೆ. ಹಾಗಾದರೆ ಕಾಯ್ದೆಗೆ ಏನು ಬೆಲೆ? ಸುಪ್ರೀಂಕೋರ್ಟ್‌ ಆದೇಶಕ್ಕೇನು ಬೆಲೆ? ಎಂದು ಖಾರವಾಗಿ ಪ್ರಶ್ನಿಸಿದರು.

ರೋಲ್ ಮಾಡೆಲ್ ಬೇಕು - ಮಾಡೆಲ್ ಅಲ್ಲ : ರೋಹಿಣಿ ವಿರುದ್ಧ ಮತ್ತೆ ಸಾ ರಾ ಗರಂ'

ಮೈಸೂರಿನಲ್ಲಿ ರಾಜಕಾಲುವೆಯೇ ಇಲ್ಲ. ಪೂರ್ಣಯ್ಯ ನಾಲೆ ಮಾತ್ರ ಇದೆ. ನೀರು ಹರಿಯುವ ಜಾಗದಲ್ಲಿ ಕಟ್ಟಿದೆ ಎನ್ನುತ್ತಾರೆ. ತಡೆಮಾಡಿದರೆ ಬೇರೆ ಕಡೆ ನೀರು ಹರಿಯುವುದಿಲ್ಲವೇ? ಬೇರೆಯವರು ಕೇಳುವುದಿಲ್ಲವೇ? ರೋಹಿಣಿ ಅವರಿಗೆ ನನ್ನ ಸರ್ವೇ ನಂಬರೇ ಗೊತ್ತಿಲ್ಲ. ಬೇರೆ ಸರ್ವೇ ನಂಬರ್‌ ತೋರಿಸಿ ಒತ್ತುವರಿ ಎಂದರು. ಇಂಥ ನೀಚ ಕೆಲಸಕ್ಕೆ ನೀವು ಇಳಿಯುತ್ತೀರಲ್ಲಾ, ಸರ್ವೇ ನಂಬರ್‌ ನೋಡಿದರೆ ಗೊತ್ತಾಗುವುದಿಲ್ಲವೇ ಗೋಮಾಳ ಯಾವುದು? ಗ್ರ್ಯಾಂಟ್‌ ಯಾವುದು? ಎಂಬುದು. ಅವರು ತನಿಖೆಗೆ ಆದೇಶಿಸಿದರು. ರೋಹಿಣಿ ಸಿಂಧೂರಿ ಅವರು ಸರ್ಕಾರಕ್ಕೇ ವಂಚನೆ ಮಾಡಿದ್ದಾರೆ. ಆಸ್ತಿ ವಿವರ ನೀಡುವಾಗ ಗಂಡನ ಆಸ್ತಿಯ ದಾಖಲೆ ಎಲ್ಲಿ? ಗಂಡನ ಆಸ್ತಿ ವಿವರ ನೀಡಬೇಕೆಂಬ ಸಾಮಾನ್ಯ ಜ್ಞಾನ ಇಲ್ಲವೇ ಎಂದರು.

ವಸತಿ ಉದ್ದೇಶಕ್ಕೆ ಪರಿವರ್ತಿಸಲ್ಪಟ್ಟಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಎಂದು ಬದಲಾಯಿಸಿಕೊಂಡಿದ್ದೇನೆ. ನಕ್ಷೆ ಅನುಮೋದನೆ ಆಗಿದೆ. ಖಾತೆ ಕಂದಾಯ ಆಗಿದೆ. ಎಷ್ಟೋ ಕನ್ವೆನ್ಷನ್‌ ಸೆಂಟರ್‌ಗೆ ಪೂರ್ಣಗೊಂಡ ಪ್ರಮಾಣಪತ್ರವೇ ಇಲ್ಲ. ಆದರೆ ನನ್ನ ಸಾ.ರಾ. ಕನ್ವೆನ್ಷನ್‌ ಹಾಲ್‌ಗೆ ಇದೆ. ನನ್ನ ಕನ್ವೆನ್ಷನ್‌ ಹಾಲ್‌ ಇರುವುದು ಸರ್ವೇ ನಂ. 98ರಲ್ಲಿ ಅಲ್ಲ, 130ರಲ್ಲಿ. ನನ್ನದೇ ಜಾಗ ರಿಂಗ್‌ ರೋಡ್‌ಗೆ ಹೋಗಿದೆ. ಮೈಸೂರಿಗೆ ಬಂದಾಗ ಮನೆ ಕೊಟ್ಟು ಓದಿಸಿದ್ದಾರೆ ಆ ಕಾರಣಕ್ಕೆ 6 ಸಾವಿರ ಅಡಿ ಜಾಗವನ್ನು ರಿಂಗ್‌ ರೋಡ್‌ಗೆ ಉಚಿತವಾಗಿ ಬಿಟ್ಟುಕೊಟ್ಟೆ. ಇದಕ್ಕೂ ನಾನು ಪರಿಹಾರ ಪಡೆದಿಲ್ಲ ಎಂದು ಅವರು ವಿವರಿಸಿದರು.

ಸಂವೇದನಾ ಶೀಲತೆ ಇಲ್ಲದ ವ್ಯಕ್ತಿ ಕರ್ತವ್ಯ ಲೋಪ ಎಸಗಿದ್ದಾರೆ. ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿ ಎಂದು ಕೇಳಲ್ಲ. ನಿಮ್ಮಲ್ಲಿ ತಾಯಿ ಹೃದಯ ಇದ್ದರೆ ನಿಮ್ಮ ಮನಸಾಕ್ಷಿ ಕೇಳಿಕೊಳ್ಳಿ. ಇಂಥ ಅಹಂಕಾರಿಯನ್ನು ನನ್ನಜೀವನದಲ್ಲೇ ನೋಡಿಲ್ಲ. ಸರ್ವೇ ನಂ. 98ರಲ್ಲಿ ನಿಶಾಂತ್‌ ಎಂದು ನಕ್ಷೆಯಲ್ಲಿದೆ. ಆದರೆ ಅವರು ಕಿಶಾಂತ್‌ ಎಂದು ಮಾಡಿದ್ದಾರೆ. ಆ ದಾಖಲೆಯನ್ನು ನೋಡಿ ರೋಹಿಣಿ ಅವರು ಹಳ್ಳಕ್ಕೆ ಬಿದ್ದಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುವವರೊಬ್ಬರನ್ನು ಮನೆಗೆ ಕರೆಯಿಸಿಕೊಂಡ ನಿರ್ಗಮಿತ ಜಿಲ್ಲಾಧಿಕಾರಿಯು, ಆ ವ್ಯಕ್ತಿಯಿಂದ ಮಾಹಿತಿ ಪಡೆದು ಪ್ರಾದೇಶಿಕ ಆಯುಕ್ತರಿಗೆ ಜೂ. 5 ರಂದು ಎಂದು ಹಳೆಯ ದಿನಾಂಕ ನಮೂದಿಸಿ ಪತ್ರ ಬರೆಯುತ್ತಾರೆ. ಜೂ. 6 ರಂದು ವರ್ಗಾವಣೆ ಆಗುತ್ತಾರೆ. ಇದಕ್ಕೆ ಮುನ್ನ ಟಪಾಲಿಗೆ ನಮೂದಿಸಿರಬೇಕಲ್ಲವೇ? ಲಿಂಗಾಂಬುದಿಕೆರೆ ಸಮೀಪದ ಬಫರ್‌ ಝೋನ್‌ ವ್ಯಾಪ್ತಿ ಸಂಬಂಧ ಪತ್ರ ಬರೆದಿದ್ದಾರೆ. 2018ರ ಸರ್ಕಾರದ ತಿದ್ದುಪಡಿ ಕಾಯ್ದೆ ಪ್ರಕಾರ 30 ಮೀಟರ್‌ ಇದೆ. ಆದ್ದರಿಂದ ನಮ್ಮ ಜಾಗ ಬಫರ್‌ ಝೋನ್‌ನಲ್ಲಿ ಇಲ್ಲ. ಅದಕ್ಕೆ ಜಾಗ ಬಿಡಲಾಗಿದೆ ಎಂದರು.

ಆಂಧ್ರದ ಲಾಬಿಯಿಂದ ದಲಿತ ಐಎಎಸ್‌ ಅಧಿಕಾರಿಯನ್ನು 28 ದಿನಗಳಲ್ಲೇ ವರ್ಗಾವಣೆ ಮಾಡಿಸಿದರು. ನಾನು ಇದಕ್ಕೆ ಕಾರಣರಾದ ರೋಹಿಣಿ ಸಿಂಧೂರಿ ಅವರನ್ನು ವಿರೋಧ ಮಾಡಿದ್ದೆ. ಮೈಸೂರು ನಗರದಲ್ಲಿ 238 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ ಎಂದು ವರದಿ ನೀಡಿದರು. ಆದರೆ ಮೃತಪಟ್ಟಿದ್ದು 969 ಮಂದಿ. ಸರ್ಕಾರ ಈಗಾಗಲೇ ಕೊರೋನಾದಿಂದ ಸತ್ತ ಬಿಪಿಎಲ್‌ ಕುಟುಂಬದ ವ್ಯಕ್ತಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಈಗ ಲೆಕ್ಕಕ್ಕೆ ಸಿಗದೆ ಸತ್ತವರ ಕುಟುಂಬಕ್ಕೆ ಪರಿಹಾರ ಕೊಡುವವರು ಯಾರು? ಪರಿಹಾರದ ವಿಚಾರದಲ್ಲಿ ಸರ್ಕಾರ ತನಿಖೆ ಮಾಡಲಿ ಎಂದು ಸಾ.ರಾ. ಮಹೇಶ್‌ ಒತ್ತಾಯಿಸಿದರು.

 ವರದಿಯಲ್ಲಿ ಏನಿದೆ?

ಕಲ್ಯಾಣ ಮಂಟಪದ ಭೂಮಿಯು ಸಾ.ರಾ. ಮಹೇಶ್‌ ಅವರ ಪತ್ನಿ ಅನಿತಾ ಅವರ ಹೆಸರಿಗೆ ಖಾತೆಯಾಗಿದೆ. 2004ರ ಸೆಪ್ಟೆಂಬರ್‌ 25ರಲ್ಲಿ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾಗಿದೆ. ಬಳಿಕ 2010ರ ಜುಲೈ 31 ರಂದು ವಾಣಿಜ್ಯ ವಲಯಕ್ಕೆ ಭೂ ಉಪಯೋಗ ಬದಲಾವಣೆ ಮಾಡಲಾಗಿದ್ದು, ಅದರಂತೆ ದಟ್ಟಗಳ್ಳಿ ಗ್ರಾಮದ ಸ.ನಂ. 130/3ರಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿದೆ. ಸರ್ವೇ ಅಧಿಕಾರಿಗಳ ವರದಿ ಅನ್ವಯ ಕಲ್ಯಾಣ ಮಂಟವು ಗ್ರಾಮ ನಕಾಶೆಯಲ್ಲಿ ಕಂಡಂತಹ ಹಳ್ಳದ ಮೇಲೆ ನಿರ್ಮಿತವಾಗಿಲ್ಲ ಹಾಗೂ ಹಳ್ಳದ ಯಾವುದೇ ಪ್ರದೇಶವನ್ನು ಒತ್ತುವರಿ ಮಾಡಿ ನಿರ್ಮಿಸಿರುವುದು ಕಂಡುಬಂದಿಲ್ಲ. ಹಳ್ಳ ಪ್ರದೇಶದಿಂದ ಕಲ್ಯಾಣ ಮಂಟವು ಕೆಲವು ಕಡೆ 74, 72, 73 ಮೀಟರ್‌ಗಳ ಅಂತರದಲ್ಲಿ ನಿರ್ಮಾಣವಾಗಿರುವುದು ಅಳತೆ ವೇಳೆ ಕಂಡುಬಂದಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಈ ಎಲ್ಲಾ ಅಂಶಗಳ ಆಧಾರದ ಮೇಲೆ ರಾಜಕಾಲುವೆ ಒತ್ತುವರಿಯಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾತ್ರ ವರದಿ ನೀಡಿದ್ದು, ಇತರೆ ವಿಷಯಗಳ ಕುರಿತು ಅಗತ್ಯವಿದ್ದಲ್ಲಿ ಸ.ನಂ. 130/3ರ ಭೂ ಮಾಲೀಕರು ಮತ್ತು ಬಾಜು ಸ.ನಂ.ಗಳ ಭೂ ಮಾಲೀಕರಿಗೆ ನೊಟಿಸ್‌ ನೀಡಿ ಹೆಚ್ಚುವರಿ ದಾಖಲೆ ಪರಿಶೀಲಿಸಿ ಅಳತೆ ಕಾರ್ಯ ಕೈಗೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಈ ವರದಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ ಅವರು ಜಿಲ್ಲಾಧಿಕಾರಿಗಳ ಮೂಲಕ ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ.

ಕೆಲವರು ಸಾಮಾಜಿಕ ಜಾಲ ತಾಣದಲ್ಲಿ ಮೈಸೂರಿಗೆ ಹಿಂದಿರುಗಲಿ ಎಂದು ಒತ್ತಾಯಿಸಿದ್ದಾರೆ. ಬರಲಿ ನನ್ನದೇನು ಅಭ್ಯಂತರವಿಲ್ಲ. ನನ್ನ ದಾಖಲಾತಿ ಸರಿಯಾಗಿದೆ.

- ಸಾ.ರಾ. ಮಹೇಶ್‌, ಶಾಸಕರು.

click me!