Karnataka High Court: ಹೈಕೋರ್ಟ್‌ ನ್ಯಾಯಪೀಠಗಳ ಕಲಾಪ ಯೂಟ್ಯೂಬ್‌ನಲ್ಲಿ ನೇರಪ್ರಸಾರ

By Kannadaprabha NewsFirst Published Jan 18, 2022, 2:30 AM IST
Highlights

ಕಲಾಪ ನೇರ ಪ್ರಸಾರ ನಿಯಮಗಳು ರಚನೆಯಾದ ಬಳಿಕ ಹೈಕೋರ್ಟ್‌ ನ್ಯಾಯಪೀಠಗಳ ಕಲಾಪವನ್ನು ಮೊದಲ ಬಾರಿಗೆ ‘ಯೂಟ್ಯೂಬ್‌’ನಲ್ಲಿ ಸೋಮವಾರ ನೇರಪ್ರಸಾರ ಮಾಡಲಾಯಿತು. ಸೋಮವಾರ ಬೆಂಗಳೂರು ಹೈಕೋರ್ಟ್‌ ಪ್ರಧಾನ ನ್ಯಾಯಪೀಠದ ಕೋರ್ಟ್‌ ಹಾಲ್‌ ಒಂದು ಮತ್ತು ಮೂರರ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. 

ಬೆಂಗಳೂರು (ಜ.18): ಕಲಾಪ ನೇರ ಪ್ರಸಾರ ನಿಯಮಗಳು ರಚನೆಯಾದ ಬಳಿಕ ಹೈಕೋರ್ಟ್‌ (High Court) ನ್ಯಾಯಪೀಠಗಳ ಕಲಾಪವನ್ನು ಮೊದಲ ಬಾರಿಗೆ ‘ಯೂಟ್ಯೂಬ್‌’ನಲ್ಲಿ (Youtube) ಸೋಮವಾರ ನೇರಪ್ರಸಾರ ಮಾಡಲಾಯಿತು. ಸೋಮವಾರ ಬೆಂಗಳೂರು ಹೈಕೋರ್ಟ್‌ ಪ್ರಧಾನ ನ್ಯಾಯಪೀಠದ ಕೋರ್ಟ್‌ ಹಾಲ್‌ ಒಂದು ಮತ್ತು ಮೂರರ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. 

‘ಹೈಕೋರ್ಟ್‌ ಆಫ್‌ ಕರ್ನಾಟಕ ಅಫಿಶಿಯಲ್‌’ (High Court of Karnataka Official) ಎಂಬ ಚಾನಲ್‌ನಲ್ಲಿ ಈ ಕಲಾಪ ಪ್ರಸಾರವಾಯಿತು. ಈ ಚಾನಲ್‌ಗೆ 16 ಸಾವಿರ ಮಂದಿ ವೀಕ್ಷಕರಿದ್ದಾರೆ. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಒಂದೂವರೆ ಗಂಟೆಯ ಕಲಾಪವನ್ನು ನೇರ ಪ್ರಸಾರ ಮಾಡಲಾಗಿದ್ದು ಸುಮಾರು 2,400 ಜನ ವೀಕ್ಷಣೆ ಮಾಡಿದ್ದಾರೆ. ಅದೇ ರೀತಿ ನ್ಯಾಯಮೂರ್ತಿ ಎಸ್‌.ಸುಜಾತ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಒಂದೂಕಾಲು ಗಂಟೆಗೂ ಅಧಿಕ ಸಮಯದ ಕಲಾಪವನ್ನು ಒಂದೂವರೆ ಸಾವಿರ ಜನ ವೀಕ್ಷಿಸಿದ್ದಾರೆ.

ಕೋರ್ಟ್‌ ಹಾಲ್‌ ಎರಡು ಮತ್ತು ನಾಲ್ಕರ ಕಲಾಪವನ್ನು ನೇರ ಪ್ರಸಾರ ಮಾಡಲು ಸಿದ್ಧತೆ ನಡೆಸಲಾಗಿತ್ತಾದರೂ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಲಿಲ್ಲ. ಹೈಕೋರ್ಟ್‌ನ ಕಲಬುರಗಿ ಹಾಗೂ ಧಾರವಾಡ ಪೀಠದ ಕಲಾಪವನ್ನು ನೇರ ಪ್ರಸಾರ ಮಾಡಿಲ್ಲ ಎಂದು ಹೈಕೋರ್ಟ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Karnataka High Court: ನಿರ್ಲಕ್ಷ್ಯ ಆರೋಪದಿಂದ ವೈದ್ಯರು ಮತ್ತು ರೋಗಿ ಸಂಬಂಧ ಹಳಸುತ್ತಿದೆ

ಒಂದು ಲಕ್ಷ ಜನರಿಂದ ವೀಕ್ಷಣೆ: ಕಾರವಾರ ವಾಣಿಜ್ಯ ಬಂದರು ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಅಭಿವೃದ್ಧಿ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಆಕ್ಷೇಪಿಸಿ ಬೈತಕೊಲ್‌ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ ಹಾಗೂ ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘ ಸಲ್ಲಿಸಿದ್ದ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಪ್ರಾಯೋಗಿಕವಾಗಿ ಹೈಕೋರ್ಟ್‌ 2021ರ ಮೇ 5ರಂದು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಿತ್ತು. ಒಂದು ಲಕ್ಷಕ್ಕೂ ಹೆಚ್ಚು ಜನ ಆ ಕಲಾಪದ ವೀಕ್ಷಣೆ ಮಾಡಿದ್ದರು. 

ಅದಾದ ಬಳಿಕ ಹೈಕೋರ್ಟ್‌ ಕಲಾಪ ನೇರ ಪ್ರಸಾರಕ್ಕೆ ನಿಯಮ ರೂಪಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ನಿಯಮಗಳು ರಚನೆಯಾದ ಬಳಿಕ ಕಲಾಪ ನೇರ ಪ್ರಸಾರವಾಗಿರುವುದು ಇದೇ ಮೊದಲು. ಈಗಾಗಲೇ ಹೈಕೋರ್ಟ್‌ ಕಲಾಪವನ್ನು ನೇರ ಪ್ರಸಾರ ಮಾಡಲಾಗಿದೆ. ಅದರಂತೆಯೇ ಹಂತ ಹಂತವಾಗಿ ಅಧೀನ ನ್ಯಾಯಾಲಯಗಳ ಕಲಾಪದ ನೇರ ಪ್ರಸಾರ ಮಾಡಲಾಗುವುದು ಎಂದು ತಿಳಿಸಿದ್ದ ಹೈಕೋರ್ಟ್‌, ಈ ಸಂಬಂಧ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು 2022ರ ಜ.10ರಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಶೇ.55ರಷ್ಟು ಕೇಸ್ ಪೆಂಡಿಂಗ್: ಕಳೆದ ಮೂರು ಹಾಗೂ ಅದಕ್ಕಿಂತ ಸ್ವಲ್ಪ ಹೆಚ್ಚಿನ ವರ್ಷದಲ್ಲಿ ದೇಶದ 25 ಹೈಕೋರ್ಟ್ ಮೆಟ್ಟಿಲೇರಿದ 56.38 ಲಕ್ಷ ಕೇಸ್ ಗಳ ಪೈಕಿ ಶೇಕಡಾ 55 ರಷ್ಟು ಕೇಸ್ ಗಳೂ ಇನ್ನೂ ಇತ್ಯರ್ಥವಾಗದೇ ಉಳಿದಿವೆ ಎಂದು ಸರ್ಕಾರದ ಮಾಹಿತಿ ತಿಳಿಸಿದೆ. ಕಳೆದ ಮೂರು ವರ್ಷಗಳಿಂದ ಶೇಕಡಾ 30.61ರಷ್ಟು ಪ್ರಕರಣಗಳು ಇತ್ಯರ್ಥವಾಗದೇ ಉಳಿದಿದೆ. ಇದರಲ್ಲಿ 40%ನಷ್ಟು ಸಿವಿಲ್ ಪ್ರಕರಣಗಳಾಗಿವೆ ಎಂದು ನ್ಯಾಷನಲ್ ಜ್ಯುಡೀಷಲ್ ಗ್ರಿಡ್ ಡೇಟಾ (National Judicial Data Grid ) (ಎನ್‌ಜೆಡಿಜಿ) ತಿಳಿಸಿದೆ. ಎನ್‌ಜೆಡಿಜಿ ನ್ಯಾಯಾಂಗದ ಡೇಟಾವನ್ನು ಮೇಲ್ವಿಚಾರಣೆ ಮಾಡುವ ಸರ್ಕಾರದ ಸಂಸ್ಥೆಯಾಗಿದೆ.

Karnataka High Court: ರೇಪ್‌ ಸಂತ್ರಸ್ತೆ ವಯಸ್ಸು ಸಾಬೀತು ಹೊಣೆ ಪ್ರಾಸಿಕ್ಯೂಷನ್‌ದು

ಒಟ್ಟು 56.38 ಲಕ್ಷ ಪ್ರಕರಣಗಳಲ್ಲಿ, ಸುಮಾರು 77 ಪ್ರತಿಶತ  ಅಂದರೆ 43.40 ಲಕ್ಷ ಪ್ರಕರಣಗಳು  ಕಳೆದ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಾಕಿ ಉಳಿದಿವೆ ಮತ್ತು ಶೇಕಡಾ 20 ಕ್ಕಿಂತ ಹೆಚ್ಚು 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬಾಕಿ ಉಳಿದ ಪ್ರಕರಣಗಳಾಗಿವೆ.  ಇನ್ನು ಕಾನೂನು ಮತ್ತು ನ್ಯಾಯ ಸಚಿವಾಲಯದ ಮಾಹಿತಿ ಅಧರಿಸಿ ಹೇಳುವುದಾದರೆ, ಅಲಹಾಬಾದ್ ಹೈಕೋರ್ಟ್ ನಲ್ಲಿ ಮಂಜೂರಾಗಿರುವ 160 ಹುದ್ದೆಗಳ ಪೈಕಿ ಶೇ.40ರಷ್ಟು ಹುದ್ದೆ ಇನ್ನೂ ಖಾಲಿಯಾಗಿಯೇ ಉಳಿದುಕೊಂಡಿದ್ದರಿಂದ ಇಲ್ಲಿನ ಕೋರ್ಟ್ ಈಗಲೂ ಶೇ.60ರ ಕಾರ್ಯಕ್ಷಮತೆಯಲ್ಲಿ ಕೆಲಸ ನಡೆಸುತ್ತಿದೆ.

click me!