75 ದಿನಗಳ ನಂತರ ಆರಂಭವಾದರೂ ಗ್ರಾಹಕರಿಲ್ಲದೇ ತೊಂದರೆಗೆ ಸಿಲುಕಿದ ಉದ್ಯಮ| ಲಾಕ್‌ಡೌನ್ ಪೂರ್ವದಲ್ಲಿ ಎಲ್ಲ ಹೋಟೆಲ್‌ಗಳಲ್ಲಿಯೂ ಸರಾಸರಿ 10 ರಿಂದ 15 ಸಾವಿರದಷ್ಟು ವಹಿವಾಟು| ಕೊರೋನಾ ಲಾಕ್‌ಡೌನ್ ನಂತರ ನಿತ್ಯ 2 ಸಾವಿರದ ವಹಿವಾಟು ನಡೆಯುತ್ತಿಲ್ಲ|
ಗದಗ(ಜೂ.14): ಕೊರೋನಾ ಸಂಕಟ ದಿನೇ ದಿನೇ ಬಿಚ್ಚಿಕೊಳ್ಳುತ್ತಿದ್ದು, ಲಾಕ್‌ಡೌನ್ ನಂತರವೂ ಇಲ್ಲಿನ ಹೋಟೆಲ್‌ಗಳು ಭಣಗುಡುತ್ತಿವೆ. ಜೂ. 8ರಿಂದ ಸರ್ಕಾರ ಹೋಟೆಲ್ ಪ್ರಾರಂಭಕ್ಕೆ ಅನುಮತಿ ನೀಡಿತು. ಇದೇ ಖುಷಿಯಲ್ಲಿ ಸತತ 75 ದಿನಗಳಿಂದ ಲಾಕ್‌ಡೌನ್ ಆಗಿದ್ದ ಹೋಟೆಲ್ ಮಾಲೀಕರು, ಕಾರ್ಮಿಕರ ಸಮಸ್ಯೆ, ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಂಡು ಉತ್ಸಾಹದಲ್ಲಿ ಹೋಟೆಲ್ ಪ್ರಾರಂಭಿಸಿದ್ದಾರೆ. ಆದರೆ, ಗ್ರಾಹಕರು ಮಾತ್ರ ಹೋಟೆಲ್‌ಗಳಿಗೆ ಸುಳಿಯುತ್ತಿಲ್ಲ. ಇದರಿಂದ ಹೋಟೆಲ್ ಉದ್ಯಮ ನಂಬಿದವರು ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ.
ತಿಂಗಳಿಗೆ 4.5 ಕೋಟಿ ವಹಿವಾಟು:
undefined
ಜಿಲ್ಲೆಯಲ್ಲಿ ಹೋಟೆಲ್ ಒಡೆಯರ ಸಂಘದಲ್ಲಿ ಸದಸ್ಯತ್ವ ಹೊಂದಿದ 160 ಹೋಟೆಲ್‌ಗಳಿವೆ. ಇವುಗಳನ್ನು ಹೊರತುಪಡಿಸಿ ಸಣ್ಣ ಸಣ್ಣ ಅಂಗಡಿಗಳು, ಗೂಡಂಗಡಿಗಳು, ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುವವರು ಸೇರಿದಂತೆ ಜಿಲ್ಲೆಯಲ್ಲಿ 3 ಸಾವಿರಕ್ಕೂ ಅಧಿಕ ಹೋಟೆಲ್‌ಗಳಿದ್ದು, ಇವುಗಳೆಲ್ಲ ಸೇರಿ ಪ್ರತಿದಿನ (ಕೊರೋನಾ ಲಾಕ್‌ಡೌನ್ ಪೂರ್ವದಲ್ಲಿ) . 14 ಲಕ್ಷದಷ್ಟುವಹಿವಾಟು ನಡೆಯುತ್ತಿದ್ದು, ಅಂದರೆ, ಪ್ರತಿ ತಿಂಗಳು 4.5 ಕೋಟಿ ವಹಿವಾಟಿನ ಉದ್ಯಮ ಈಗ ಸಂಪೂರ್ಣ ನೆಲ ಕಚ್ಚಿದೆ.
ಗದಗ: ಭೀಕರ ಪ್ರವಾಹ ಬಂದು 10 ತಿಂಗಳು ಕಳೆದ್ರೂ ಸಿಗದ ಪರಿಹಾರ, ಸಂಕಷ್ಟದಲ್ಲಿ ಜನತೆ
ಭಯ ಹೆಚ್ಚುತ್ತಿದೆ:
ದೇಶಾದ್ಯಂತ ಕೊರೋನಾ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರ ಭಯ ಸಾರ್ವಜನಿಕರ ಮೇಲೆ ತೀವ್ರವಾಗಿ ಬೀರಿದ್ದು, ಜನರು ಮನೆಯಿಂದ ಆಚೆ ಬಂದರೂ ಹೋಟೆಲ್ ಗಳಲ್ಲಿ ತಿಂಡಿ ತಿನಿಸು ತಿನ್ನಲು ಭಯ ಬೀಳುತ್ತಿದ್ದು, ಯಾಕೆ ಬೇಕು ಮನೆಯಲ್ಲಿಯೇ ನಾವೇ ಸಿದ್ಧ ಪಡಿಸಿಕೊಳ್ಳೋಣ. ಲಾಕ್‌ಡೌನ್ ಸಡಿಲಿಕೆಯಾಗಿದೆ. ಸಾವಿರಾರು ಜನ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ, ಹೊರ ರಾಜ್ಯಗಳಿಂದ ನೂರಾರು ಸಂಖ್ಯೆಯಲ್ಲಿ ಜನರು ಬಂದಿದ್ದಾರೆ, ಯಾರಾರಯರು ಹೋಟೆಲ್‌ಗೆ ಬಂದು ಹೋಗಿರುತ್ತಾರೆಯೋ ಯಾರಿಗೆ ಗೊತ್ತು? ಹೋಟೆಲ್ ಹೋಗಿ ಸಮಸ್ಯೆಯನ್ನು ಮನೆಗೆ ತೆಗೆದುಕೊಂಡು ಹೋಗುವ ಬದಲು ಮನೆ ಆಹಾರ ತಿನ್ನುವುದೇ ಉತ್ತಮ ಎನ್ನುವ ನಿರ್ಧಾರಕ್ಕೆ ಬಂದಿರುವುದು ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡುತ್ತಿದೆ.
ನಿರಾಸೆ-ನಷ್ಟ:
ಲಾಕ್‌ಡೌನ್ ನಂತರ ಕಾರ್ಮಿಕರೆಲ್ಲ ತಮ್ಮ ತಮ್ಮ ಊರುಗಳನ್ನು ಸೇರಿಕೊಂಡು ಮರಳಿ ನಗರಕ್ಕೆ ಬರಲು ಹೆದರುತ್ತಿದ್ದಾರೆ. ಅಡುಗೆ ತಯಾರಕರ ಕೊರತೆ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮಧ್ಯೆ ಮೂರು ತಿಂಗಳಿಂದ ಹೋಟೆಲ್ ಬಾಡಿಗೆ, ವಿದ್ಯುತ್ ಬಿಲ್ ಕಟ್ಟಲಾಗದೇ ಪರದಾಡುತ್ತಿದ್ದ ಉದ್ಯಮಿಗಳು ಹೋಟೆಲ್ ಪ್ರಾರಂಭದಿಂದ ಅವುಗಳನ್ನಾದರೂ ಸರಿದೂಗಿಸಿಕೊಳ್ಳಬಹುದು ಎನ್ನುವ ಆಸೆಯಲ್ಲಿ ಪ್ರಾರಂಭಿಸಿ, ಈಗ ನಿರಾಸೆಯೊಂದಿಗೆ ನಷ್ಟವನ್ನು ಅನುಭವಿಸುವಂತಾಗಿದೆ.
ಗಂಭೀರ ಸಮಸ್ಯೆ ಎದುರಿಸುತ್ತಿರುವ ಹೋಟೆಲ್ ಉದ್ಯಮ
ಗದಗ ನಗರಕ್ಕೆ ನಿತ್ಯವೂ ಆರೋಗ್ಯ ಸಮಸ್ಯೆಗಳು, ಗರ್ಭಿಣಿಯರು, ಮಕ್ಕಳ ಚಿಕಿತ್ಸೆಗಳಿಗಾಗಿ ಬರುವವರೇ ಸಾವಿರ ಸಾವಿರ ಸಂಖ್ಯೆಯಲ್ಲಿರುತ್ತಾರೆ. ಆದರೆ, ಕೊರೋನಾ ಭಯದಿಂದಾಗಿ ಸಣ್ಣ ಪುಟ್ಟಕಾಯಿಲೆಗಳಿಗೆ ಜನರು ಆಸ್ಪತ್ರೆಗಳಿಗೆ ಬರುತ್ತಿಲ್ಲ. ಇನ್ನು ಅನಿವಾರ್ಯತೆ ಇರುವವರೆಲ್ಲ ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬಂದು ಯಾವುದಾರೊಂದು ಸ್ಥಳದಲ್ಲಿ ಕುಳಿತು ಊಟ ಮಾಡುತ್ತಾರೆ. ಇನ್ನು ಬ್ಯಾಂಕ್, ಪೋಸ್ಟ್ ಆಫೀಸ್, ಕೋರ್ಟ್ ಕಲಾಪಗಳು ಹೀಗೆ ಬರುವವರೆಲ್ಲ ಸಹ ಮನೆ ಊಟಕ್ಕೆ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಹೋಟೆಲ್ ಉದ್ಯಮ ಗಂಭೀರ ಸಮಸ್ಯೆ ಎದುರಿಸುತ್ತಿದೆ.
ಲಾಕ್‌ಡೌನ್ ಪೂರ್ವದಲ್ಲಿ ಎಲ್ಲ ಹೋಟೆಲ್‌ಗಳಲ್ಲಿಯೂ ಸರಾಸರಿ 10 ರಿಂದ 15 ಸಾವಿರದಷ್ಟು ವಹಿವಾಟು ನಡೆಯುತ್ತಿತ್ತು. ಆದರೆ ಕೊರೋನಾ ಲಾಕ್‌ಡೌನ್ ನಂತರ ನಿತ್ಯ 2 ಸಾವಿರದ ವಹಿವಾಟು ನಡೆಯುತ್ತಿಲ್ಲ. ನಮ್ಮ ಹೋಟೆಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವೇತನ ಕೊಡಲು ಸಾಲದಷ್ಟುವ್ಯಾಪಾರ ನಡೆಯುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಅನಿವಾರ್ಯವಾಗಿ ನಾವೇ (ಹೋಟೆಲ್ ಮಾಲೀಕರೇ) ಹೋಟೆಲ್ ಬಂದ್ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೋಟೆಲ್ ಉದ್ಯಮದ ಪುನಶ್ಚೇತನಕ್ಕೆ ವಿಶೇಷ ಅನುದಾನ ನೀಡಬೇಕು ಎಂದು ಜಿಲ್ಲಾ ಹೋಟೆಲ್ ಒಡೆಯರ ಸಂಘದ ಕಾರ್ಯದರ್ಶಿ ಕಾ.ವೆಂ. ಶ್ರೀನಿವಾಸ ಅವರು ಹೇಳಿದ್ದಾರೆ.