ಬತ್ತಿ ಹೋದ ಹೇಮಾವತಿ; ನೀರಿನ ಮೂಲಗಳೆಲ್ಲ ಖಾಲಿ ಖಾಲಿ, ಆತಂಕದಲ್ಲಿ ಕಾಫಿ ಬೆಳೆಗಾರರು

Published : Apr 04, 2024, 10:29 PM ISTUpdated : Apr 04, 2024, 10:31 PM IST
ಬತ್ತಿ ಹೋದ ಹೇಮಾವತಿ; ನೀರಿನ ಮೂಲಗಳೆಲ್ಲ ಖಾಲಿ ಖಾಲಿ, ಆತಂಕದಲ್ಲಿ ಕಾಫಿ ಬೆಳೆಗಾರರು

ಸಾರಾಂಶ

ಕಾಫಿನಾಡು ಚಿಕ್ಕಮಗಳೂರು ಕೈಕೊಟ್ಟ ಮಳೆಯಿಂದ ಶೋಚನಿಯ ಸ್ಥಿತಿಗೆ ತಲುಪಿದೆ. ಒಂದೇ ವರ್ಷದ ಮಳೆ ಕೊರತೆಗೆ ಮಲೆನಾಡ ಪರಿಸ್ಥಿತಿ ಬಯಲುಸೀಮೆಯಂತಾಗಿದ್ದು, ಬೇಸಿಗೆ ಆರಂಭದ ದಿನಗಳಲ್ಲೇ ನದಿ-ಹಳ್ಳ-ತೊರೆಗಳು ಬತ್ತಿ ಮೌನಕ್ಕೆ ಶರಣಾಗಿವೆ.

ಚಿಕ್ಕಮಗಳೂರು (ಏ.4) : ಕಾಫಿನಾಡಲ್ಲಿ ಮಳೆ ಅಂದ್ರೆ ರಾಜ್ಯದ ಬಹುತೇಕ ಜಿಲ್ಲೆಯ ಜನರ ಮೊಗದಲ್ಲಿ ಮಂದಹಾಸ ಮೂಡುತ್ತೆ. ಯಾಕಂದ್ರೆ, ಕಾಫಿನಾಡಲ್ಲಿ ಸುರಿವ ಮಳೆ ಪಂಚ ನದಿಗಳಾಗಿ ಅರ್ಧ ರಾಜ್ಯಕ್ಕೆ ಹರಿದು ಹರಿದು ರೈತರು, ಜನ-ಜಾನುವಾರಗಳ ದಾಹ ನೀಗಿಸ್ತಿತ್ತು. ಕಾಫಿನಾಡ ಮಳೆ ಮೇಲೆ ಅರ್ಧ ರಾಜ್ಯವೇ ಅವಲಂಬಿತವಾಗಿತ್ತು. ಆದ್ರೀಗ, ದೀಪದ ಕೆಳಗೆ ಕತ್ತಲು ಎಂಬಂತೆ ಕಾಫಿನಾಡ ಸ್ಥಿತಿಯೇ ಶೋಚನಿಯ ಘಟ್ಟ ತಲುಪಿದೆ. ಒಂದೇ ವರ್ಷದ ಮಳೆ ಕೊರತೆಗೆ ಮಲೆನಾಡ ಪರಿಸ್ಥಿತಿ ಬಯಲುಸೀಮೆಯಂತಾಗಿದ್ದು, ಬೇಸಿಗೆ ಆರಂಭದ ದಿನಗಳಲ್ಲೇ ನದಿ-ಹಳ್ಳ-ತೊರೆಗಳು ಬತ್ತಿ ಮೌನಕ್ಕೆ ಶರಣಾಗಿವೆ.

ಬತ್ತಿ ಹೋಗುತ್ತಿರುವ ನದಿಗಳು: 

ತುಂಗಾ-ಭದ್ರ, ಹೇಮಾವತಿ, ವೇದಾವತಿ, ಯಗಚಿ ನದಿಗಳಿಗೆ ಜನ್ಮ ನೀಡಿ ಪಂಚನದಿಗಳ ನಾಡೆಂದು ಕರೆಸಿಕೊಳ್ಳೋ ಮಳೆನಾಡು ಕಾಫಿನಾಡ ನದಿಗಳಲ್ಲೀಗ ಸ್ಮಶಾನ ಮೌನ. ಒಂದೇ ವರ್ಷ ಮಳೆ ಇಲ್ಲದ ಕಾರಣ ತೀವ್ರ ಬರದಿಂದ ಕಾಫಿನಾಡ ಪಂಚನದಿಗಳೀಗ ಮೌನಕ್ಕೆ ಶರಣಾಗಿವೆ. ಸದಾ ಝುಳು-ಝುಳು ನಿನಾದದೊಂದಿಗೆ ಕಾಡಿನ ಮಧ್ಯದಲ್ಲೇ ಹುಟ್ಟಿ, ಕಾಡಿನ ಮಧ್ಯದಲ್ಲಿ ಹರಿದು ರಾಜ್ಯದ ಮೂಲೆ-ಮೂಲೆ ತಲುಪ್ತಿದ್ದ ಕಾಫಿ ಕಣಿವೆಯ ನೀರು ಬೇಸಿಗೆ ಆರಂಭದ ದಿನಗಳಲ್ಲಿ ಹರಿವಿನ ಪಾತ್ರ ಕಳೆದುಕೊಂಡಿವೆ. ಮೂಡಿಗೆರೆಯ ಜಾವಳಿಯಲ್ಲಿ ಹುಟ್ಟೋ ಹೇಮಾವತಿ ಹಾಸನದ ಜೀವನಾಡಿಯಾದ್ರೆ, ತುಂಗಾ-ಭದ್ರಾ ನದಿ ನೀರನ್ನ ಅವಲಂಬಿಸಿರೋರು ಲಕ್ಷಾಂತರ ಜನ. ದಿನೇ-ದಿನೇ ರಣಬೀಸಿಲು ಮಿತಿ ಮೀರ್ತಿದ್ದು, ಇರೋ-ಬರೋ ಅಲ್ಪ-ಸ್ವಲ್ಪ ನೀರೂ ಕೂಡ ಬತ್ತುತ್ತಿದೆ. ಶೀಘ್ರದಲ್ಲೇ ಮಳೆಯಾಗದೆ ಈ ಸ್ಥಿತಿ ಹೀಗೆ ಮುಂದುವರೆದ್ರೆ ಕಾಫಿನಾಡ ಜೊತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೀರಿನ ಹಾಹಾಕಾರ ಮತ್ತಷ್ಟು ಹೆಚ್ಚಾಗೋದ್ರಲ್ಲಿ ಅನುಮಾನವಿಲ್ಲ. 

ಚಿಕ್ಕಮಗಳೂರು: ಬಿಸಿಲು ಝಳ, ಚುನಾವಣಾ ಕಾವು ಜನರು ಸುಸ್ತೋ ಸುಸ್ತು!

ಅಂತರ್ಜಲಕ್ಕೂ ಕತ್ತು : 

ಅರ್ಧ ರಾಜ್ಯಕ್ಕೆ ನೀರಿನ ಮೂಲವೇ ಕಾಫಿನಾಡ ಪಂಚನದಿಗಳು. ಆದ್ರೆ, ಈ ನೀರು ಮಲೆನಾಡಿಗರಿಗೆ ಸಿಗೋದು ತೀರಾ ಕಡಿಮೆ. ಬೆಟ್ಟಗುಡ್ಡಗಳಲ್ಲಿ ಸುರಿಯೋ ನೀರು ಬೆಟ್ಟಗುಡ್ಡಗಳಲ್ಲೇ ಹರಿದು ನದಿಗಳ ಮೂಲಕ ಜಲಾಶಯ ಸೇರ್ತಿದೆ. ಕಾಫಿನಾಡ ಗಡಿಯಲ್ಲಿ ಯಗಚಿ ಹಾಗೂ ಭದ್ರಾ ಜಲಾಶಯಗಳಿದ್ರು ಒಂದು ಶಿವಮೊಗ್ಗ ಮತ್ತೊಂದು ಹಾಸನದ್ದು. ಆದ್ರೆ, ಈ ಬಾರಿ ಬೇಸಿಗೆಗೂ ಮುನ್ನವೇ ಕಾಫಿನಾಡ ನದಿಗಳು ಬತ್ತುತ್ತಿರೋದು ಕಾಫಿನಾಡಿಗರನ್ನ ಚಿಂತೆಗೆ ದೂಡಿದೆ. ನದಿ-ಹಳ್ಳ-ತೊರೆಗಳಲ್ಲಿ ನೀರು ಬತ್ತುತ್ತಿರೋದ್ರಿಂದ ಬೋರ್ಗಳು ಕೂಡ ತನ್ನ ಸಾಮಥ್ರ್ಯ ಕಳೆದುಕೊಳ್ತಿದೆ. ನೀರು ಬತ್ತುತ್ತಿರೋದ್ರಿಂದ ಅಂತರ್ಜಲವೂ ಬತ್ತುತ್ತಿದೆ. ಈ ಬಾರಿಯೂ ವರುಣ ಮುನಿಸಿಕೊಂಡ್ರೆ ಮಲೆನಾಡಿಗರಿಗೆ ಪಂಚನದಿಗಳ ಒಡಲಿನ ಆಳದ ಅರಿವಾಗೋದ್ರಲ್ಲಿ ಅನುಮಾನವಿಲ್ಲ. 

ಹೆದ್ದಾರಿ ಪ್ರಾಧಿಕಾರ ಎಡವಟ್ಟು: ಕಡೂರಿನಿಂದ ಬೆಂಗಳೂರಿಗೆ 992 ಕಿ.ಮೀ! ಬೋರ್ಡ್ ನೋಡಿ ವಾಹನ ಸವಾರರು ಗಾಬರಿ!

ಕಾಫಿನಾಡಲ್ಲೇ ಈಗ್ಲೇ ವಾರಕ್ಕೊಮ್ಮೆ ನೀರು ಬಿಡ್ತಿದ್ದಾರೆ. ಹೀಗೆ ಮುಂದುವರೆದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸೋದ್ರಲ್ಲಿ ಯಾವ್ದೇ ಅನುಮಾನವಿಲ್ಲ. ಕಾಫಿನಾಡ ಸ್ಥಿತಿಯೇ ಹೀಗಾದ್ರೆ, ಅಕ್ಕಪಕ್ಕದ ಜಿಲ್ಲೆಗಳ ಸ್ಥಿತಿಯಂತು ಅಯೋಮಯ. ಒಟ್ಟಾರೆ, ರಾಜ್ಯದ ಬಹುತೇಕ ಜಿಲ್ಲೆಗಳಿಗೆ ನೀರಿನ ಸೌಲಭ್ಯ ಕಲ್ಪಸ್ತಿದ್ದ ಕಾಫಿನಾಡಿನ ಪಂಚ ನದಿಗಳ ಒಡಲು ದಿನದಿಂದ ದಿನಕ್ಕೆ ಬರಿದಾಗ್ತಿದೆ. ಒಂದೆಡೆ ನದಿ-ಹಳ್ಳ-ಕೊಳ್ಳಗಳು ಬರಿದಾಗ್ತಿದ್ರೆ, ಮತ್ತೊಂದೆಡೆ ಬಿಸಿಲಿನ ಝಳಕ್ಕೆ ಕಾಡು ಕೂಡ ಬೆಂಕಿಗಾಹುತಿಯಾಗ್ತಿದೆ.

PREV
Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!