ಅತಿವೃಷ್ಟಿಯಿಂದ ಆಲೂ ಬಿತ್ತನೆ ಇನ್ನೂ ವಿಳಂಬ : ಕೊಳೆಯುತ್ತಿರುವ ಬಿತ್ತನೆ ಬೀಜ

By Kannadaprabha News  |  First Published Oct 27, 2021, 1:20 PM IST
  • ಜಿಲ್ಲೆಯಲ್ಲಿ ಸತತ ಒಂದುವರೆ ತಿಂಗಳಿನಿಂದ ಸತತವಾಗಿ ಸುರಿಯುತ್ತಿರುವ ಮಳೆ
  • ರೈತರ ವಾಣಿಜ್ಯ ಬೆಳೆ ಆಲೂಗಡ್ಡೆ ಬೆಳೆಯನ್ನೇ ನಂಬಿಕೊಂಡಿರುವ ರೈತರು ಮತ್ತು ಬಿತ್ತನೆ ಬೀಜ ಮಾರಾಟಗಾರರ ಪರಿಸ್ಥಿತಿ ಹೀನಾಯ

ವರದಿ :  ಸತ್ಯರಾಜ್‌ ಜೆ.

 ಕೋಲಾರ (ಅ.27):  ಜಿಲ್ಲೆಯಲ್ಲಿ ಸತತ ಒಂದುವರೆ ತಿಂಗಳಿನಿಂದ ಸತತವಾಗಿ ಮಳೆ (Rain) ಸುರಿಯುತ್ತಿರುವುದರಿಂದ ರೈತರ (Farmers) ವಾಣಿಜ್ಯ ಬೆಳೆ ಆಲೂಗಡ್ಡೆ (Potato) ಬೆಳೆಯನ್ನೇ ನಂಬಿಕೊಂಡಿರುವ ರೈತರು ಮತ್ತು ಬಿತ್ತನೆ ಬೀಜ (Seeds) ಮಾರಾಟಗಾರರ ಪರಿಸ್ಥಿತಿ ದಿಕ್ಕುತೋಚದಂತಾಗಿದೆ.

Latest Videos

undefined

ಸೆಪ್ಟೆಂಬರ್‌ ಎರಡನೇ ವಾರದಿಂದಲೂ ಸತತವಾಗಿ ಒಂದೇ ಸಮನೆ ಮಳೆ ಸುರಿಯುತ್ತಿರುವುದರಿಂದ ತೋಟಗಳನ್ನು ಹದ ಮಾಡಿಕೊಳ್ಳಲು ಹಾಗೂ ಆಲೂಗಡ್ಡೆ  ಬಿತ್ತನೆ ಮಾಡಲು ರೈತರಿಗೆ (Farmers) ಅವಕಾಶ ಸಿಗುತ್ತಿಲ್ಲ.

6 ಸಾವಿರ ಹೆಕ್ಟೇರ್‌ ಬಿತ್ತನೆ ಪ್ರದೇಶ

ಜಿಲ್ಲೆಯಲ್ಲಿ ಸುಮಾರು 6 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗುವುದು, ಜಿಲ್ಲೆಯಲ್ಲಿ ಹಿಂದೆ ಹೆಚ್ಚಿನ ಮಂದಿ ಆಲೂಗಡ್ಡೆ ಬೆಳೆಯನ್ನು ಬೆಳೆಯುತ್ತಿದ್ದರು. ಆದರೆ ಇತ್ತೀಚೆಗೆ ಆಲೂಗಡ್ಡೆಯಲ್ಲಿ ಹೆಚ್ಚಿನ ಲಾಭಾಂಶ (profit) ಸಿಗುವುದಿಲ್ಲ ಎಂದು ಆಲೂ ಬೆಳೆಯುವವರ ಸಂಖ್ಯೆಯೂ ತೀರಾ ಕಡಿಮೆಯಾಗಿದೆ. ಕಳೆದ ವರ್ಷ ಡಿಸೆಂಬರ್‌ ಹೊತ್ತಿಗೆ ಬೆಳೆ ತೆಗೆದುಕೊಂಡು ಲಕ್ಷಾಂತರ ರೂಪಾಯಿ ಲಾಭ ಮಾಡಿಕೊಂಡಿರುವ ರೈತರು ಇದ್ದಾರೆ. ಆದರೆ ಈ ಬಾರಿ ಬೆಳೆ ಮಾಡಲು ಅವಕಾಶವೇ ಸಿಕ್ಕಿರುವುದಿಲ್ಲ.

ಬಿತ್ತನೆ ಬೀಜ ಮಾರಾಟಗಾರರ ಸಂಕಟ

ಜಿಲ್ಲೆಯ ಬಂಗಾರಪೇಟೆ (Bangarapete) ಮತ್ತು ಕೋಲಾರದಲ್ಲಿ (kolar) ಹೆಚ್ಚು ಆಲೂಗಡ್ಡೆ ಬಿತ್ತನೆ ಬೀಜ ಮಾರಾಟಗಾರರಿದ್ದಾರೆ. ಬಿತ್ತನೆ ಬೀಜ 50 ಕೆಜಿಗೆ 1500 ರು.ಗಳಿಂದ 2000 ರೂಗಳವರೆಗೆ ಬೆಲೆ ಇತ್ತು. ಸೆಪ್ಟೆಂಬರ್‌ ಮೊದಲವಾರ ಇದೇ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಮಳೆಯಿಂದ ಬಿತ್ತನೆ ಮಾಡುವವರಿಲ್ಲದೆ ಬಿತ್ತನೆ ಬೀಜ ಗೋದಾಮಿಮಿನಲ್ಲೇ ಕೊಳೆಯುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ರೈತರು ಬಿತ್ತನೆ ಬೀಜ ಖರೀದಿ ಮಾಡುತ್ತಿಲ್ಲ. ಇದರಿಂದಾಗಿ ವ್ಯಾಪಾರಸ್ಥರು ನಷ್ಟಅನುಭವಿಸುತ್ತಿದ್ದಾರೆ. ಬಿತ್ತನೆ ಬೀಜವನ್ನು ಕೇಳುವವರಿಲ್ಲದಂತಾಗಿದ್ದು ಒಂದು ಮೂಟೆ ಆಲೂಗಡ್ಡೆ ಮೇಲೆ 500 ರಿಂದ 700ರು.ಗಳ ನಷ್ಟವನ್ನು ಅನುಭವಿಸುವಂತಾಗಿದೆ ಎಂದು ಆಲೂ ಬಿತ್ತನೆ ಬೀಜ ವ್ಯಾಪಾರಿ ಸುರೇಶ್‌ (Suresh) ತಿಳಿಸಿದರು.

ಕಳೆದ ವರ್ಷ ಹಾಸನ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದಲ್ಲಿ ಮೊದಲ ಹಂತದಲ್ಲಿ ಬೆಳೆ ತೆಗೆದವರಿಗೆ ಉತ್ತಮ ಬೆಲೆ ಸಿಕ್ಕಿತ್ತು. ಜನವರಿಯಲ್ಲಿ ಬಿತ್ತನೆ ಮಾಡಿದವರು ಕೈ ಸುಟ್ಟು ಕೊಂಡಿದ್ದರು. ಆದರೆ ಈ ವರ್ಷ ಬಿತ್ತನೆ ಬೀಜ ಮಾರಾಟವಾಗದೆ ಮಾರಾಟಗಾರರೂ ತುಂಬಾ ನಷ್ಟವನ್ನು ಅನುಭವಿಸುವಂತಾಗಿದೆ ಎಂದು ತಿಳಿಸಿದರು.

ಆಲೂಗಡ್ಡೆ ಬೆಳೆ ನಮ್ಮ ನೆಚ್ಚಿನ ಬೆಳೆ, ಇದು ನಮ್ಮ ಜಿಲ್ಲೆಯ ವಾಣಿಜ್ಯ ಬೆಳೆ ಟೊಮೆಟೋ (Tomato) ಮತ್ತು ಆಲೂಗಡ್ಡೆ (Potato) ಬೆಳೆಗಳಲ್ಲಿ ಅಷ್ಟೋ ಇಷ್ಟೋ ಕಾಸು ಸಿಗುತ್ತಿತ್ತು, ಆದರೆ ಈ ವರ್ಷ ಆಲೂಗಡ್ಡೆ ಬಿತ್ತನೆ ಮಾಡಲು ಅವಕಾಶವೇ ಇಲ್ಲದಂತಾಗಿದೆ ಎಂದು ಮಡೇರಹಳ್ಳಿ ಗ್ರಾಮದ ನಾಗೇಶ್‌ ತಿಳಿಸಿದರು.

ಅಂಗಮಾರಿ ರೋಗ:  ಜಿಲ್ಲೆಯಲ್ಲಿ ಮಳೆ ಆರಂಭಕ್ಕೆ ಮೊದಲೇ ಕೆಲ ರೈತರು ಆಲುಗಡ್ಡೆ ಬಿತ್ತನೆ ಮಾಡಿದ್ದರು. ಆದರೆ ನಿರಂತರ ಮಳೆಯಿಂದ ಈ ಬೆಳೆಗಳಿಗೆ ಅಂಗಮಾರಿ ರೋಗ ತಗುಲಿದ್ದು ಬೆಳೆ ನಾಶವಾಗಿದೆ. ಆಲೂಗಡ್ಡೆ ಬೆಳೆಯಲು ಒಂದು ಹೆಕ್ಟೇರ್‌ಗೆ 1 ರಿಂದ 1.5 ಲಕ್ಷ ರೂಗಳು ಖರ್ಚಾಗುತ್ತದೆ. ಮಳೆಯಿಂದ ಬೆಳೆ ಹಾಳಾಗಿದೆ. ಅಸಲು ಹಣವೂ ಬರುವುದು ಗ್ಯಾರಂಟಿ ಇಲ್ಲ ಎಂದ ಚೌಡದೇನಹಳ್ಳಿ ರೈತ ವೆಂಕಟೇಶಪ್ಪ ತಿಳಿಸಿದರು.

ಜಿಲ್ಲೆಯಲ್ಲಿ ಕಳೆದ ಒಂದುವರೆ ತಿಂಗಳಿನಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರೈತರಿಗೆ ಆಲುಗಡ್ಡೆ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಬಿತ್ತನೆ ಬೀಜ ವ್ಯಾಪಾರಸ್ಥರಿಗೂ ತೊಂದರೆ ಆಗಿದೆ. ವ್ಯಾಪಾರಸ್ಥರ ಸರಕು ಕೊಳೆತು ಹಾಳಾಗಿದೆ. ರೈತರ ಜಮೀನುಗಳಲ್ಲಿ ನೀರು ನಿಂತಿರುವುದರಿಂದ ಉಳುಮೆ ಮಾಡುವುದು ಕಷ್ಟವಾಗಿದೆ.

- ಮಂಜುನಾಥ್‌, ಹಿರಿಯ ತೋಟಗಾರಿಕೆ ಇಲಾಖೆ ನಿರ್ದೇಶಕರು.

click me!