ಭರ್ಜರಿ ಮುಂಗಾರು: ಇನ್ನೆರಡು ದಿನದಲ್ಲಿ ಕೆಆರ್‌ಎಸ್‌ ಭರ್ತಿ

By Kannadaprabha News  |  First Published Jul 20, 2024, 12:33 PM IST

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯದ ಒಳಹರಿವಿನಲ್ಲೂ ಏರಿಕೆಯಾಗಿದೆ. 5 ಟಿಎಂಸಿಯಷ್ಟು ನೀರು ಜಲಾಶಯಕ್ಕೆ ಹರಿದುಬರುತ್ತಿರುವುದರಿಂದ ಇನ್ನೆರಡು ದಿನದಲ್ಲಿ ಅಣೆಕಟ್ಟು ಭರ್ತಿಯಾಗುವ ಸಾಧ್ಯತೆ


  ಮಂಡ್ಯ :  ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯದ ಒಳಹರಿವಿನಲ್ಲೂ ಏರಿಕೆಯಾಗಿದೆ. 5 ಟಿಎಂಸಿಯಷ್ಟು ನೀರು ಜಲಾಶಯಕ್ಕೆ ಹರಿದುಬರುತ್ತಿರುವುದರಿಂದ ಇನ್ನೆರಡು ದಿನದಲ್ಲಿ ಅಣೆಕಟ್ಟು ಭರ್ತಿಯಾಗುವ ಸಾಧ್ಯತೆಗಳಿವೆ. ಆ ಹಿನ್ನೆಲೆಯಲ್ಲಿ ಯಾವುದೇ ಸಮಯದಲ್ಲೂ ನದಿಗೆ ಹೆಚ್ಚುವರಿ ನೀರನ್ನು ಹರಿಯಬಿಡುವ ಸಾಧ್ಯತೆಗಳಿವೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾ ಪಂಚಾಯ್ತಿಯ ಕಾವೇರಿ ಸಭಾಂಗಣದಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಿಸುವ ಕುರಿತಂತೆ ಅಧಿಕಾರಿಗಳೊಂದಿಗೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರಸ್ತುತ ಕೆಆರ್‌ಎಸ್‌ ಅಣೆಕಟ್ಟೆಗೆ 46 ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದ್ದರೆ, ಅತ್ತ ಹೇಮಾವತಿ ಜಲಾಶಯಕ್ಕೂ 41 ಸಾವಿರ ಕ್ಯುಸೆಕ್‌ ಒಳಹರಿವಿದೆ. ಹೇಮಾವತಿ ಅಣೆಕಟ್ಟೆಯಿಂದ ಶುಕ್ರವಾರ ರಾತ್ರಿ 20 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡುವ ಮುನ್ಸೂಚನೆ ಇದೆ. ಇದರಿಂದ ಕೆಆರ್‌ಎಸ್‌ಗೆ ಸುಮಾರು 70 ಸಾವಿರ ಕ್ಯುಸೆಕ್‌ವರೆಗೆ ನೀರು ಹರಿದುಬರುವುದರಿಂದ ಕೆಆರ್‌ಎಸ್‌ನಿಂದ ಸುಮಾರು 20 ಸಾವಿರ ಕ್ಯುಸೆಕ್‌ನಿಂದ ಆರಂಭಿಸಿ 50 ಸಾವಿರ ಕ್ಯುಸೆಕ್‌ವರೆಗೆ ನೀರನ್ನು ಹೊರಬಿಡಲಾಗುವುದು ಎಂದರು.

Latest Videos

undefined

ಕೆಆರ್‌ಎಸ್ ಡ್ಯಾಂನ ಭರ್ತಿಗೆ ಕೇವಲ 9 ಅಡಿ ಅಷ್ಟೇ ಬಾಕಿ..!

ಕೆಆರ್‌ಎಸ್‌ ಜಲಾಶಯಕ್ಕೆ ಎರಡು ದಿನಗಳಿಂದ ನಿತ್ಯ 2 ರಿಂದ 3 ಟಿಎಂಸಿಯಷ್ಟು ನೀರು ಹರಿದುಬರುತ್ತಿದೆ. ಈಗ ಜಲಾಶಯದತ್ತ ಸುಮಾರು 5 ಟಿಎಂಸಿಯಷ್ಟು ನೀರು ಹರಿದುಬರುತ್ತಿದೆ. ಹಾಲಿ ಜಲಾಶಯದಲ್ಲಿ 17 ಅಡಿ ನೀರು ಸಂಗ್ರಹವಾಗಿದೆ ಎಂದರು.

ಪ್ರವಾಹ ಪರಿಸ್ಥಿತಿ ಸೃಷ್ಟಿ:

ಕಾವೇರಿ ಉಗಮ ಸ್ಥಾನ ಕೊಡಗು ಹಾಗೂ ಹೇಮಾವತಿ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ. ಮುಂದಿನ ಐದು ದಿನಗಳವರೆಗೆ ಈ ಭಾಗಕ್ಕೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಜಲಾಶಯಗಳು ಭರ್ತಿಯ ಹಂತ ತಲುಪಿರುವುದರಿಂದ ಕೆಆರ್‌ಎಸ್‌ ಅಣೆಕಟ್ಟು 120 ಅಡಿ ತಲುಪಿದ ಕೂಡಲೇ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ನೀರನ್ನು ಗಹೊರಬಿಡಲಾಗುವುದು. ಇದರಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುವುದರಿಂದ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಣೆಕಟ್ಟೆಯಿಂದ 1 ಲಕ್ಷ ಕ್ಯುಸೆಕ್‌ನಿಂದ 2 ಲಕ್ಷ ಕ್ಯುಸೆಕ್‌ವರೆಗೆ ನೀರನ್ನು ಹರಿಯಬಿಟ್ಟರೆ ಯಾವ ತಾಲೂಕುಗಳಿಗೆ ಹೆಚ್ಚು ಹಾನಿಯಾಗುತ್ತದೆ. ಅದರಲ್ಲಿ ಜನವಸತಿ ಇರುವ ಗ್ರಾಮಗಳೆಷ್ಟು, ಕೃಷಿ ಭೂಮಿ ಎಷ್ಟು ಎಂಬುದನ್ನು ಗುರುತಿಸಿಕೊಳ್ಳಬೇಕು. ಈ ಪ್ರಮಾಣದಲ್ಲಿ ನೀರು ಹರಿಸಿದರೆ ಶ್ರೀರಂಗಪಟ್ಟಣ ತಾಲೂಕಿನ 53 ಗ್ರಾಮ, ಮಳವಳ್ಳಿ ತಾಲೂಕಿನ 21 ಗ್ರಾಮ, ಪಾಂಡವಪುರ ತಾಲೂಕಿನ 15 ಗ್ರಾಮಗಳಿಗೆ ಹೆಚ್ಚು ಹಾನಿಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಹೇಳಿದರು.

ಹೆಚ್ಚು ನೀರು ಬಿಡುವ ಮುನ್ಸೂಚನೆ ಕೊಡಿ:

ಜಲಾಶಯಗಳಿಂದ ಏಕಾಏಕಿ ಒಮ್ಮೆಲೆ ಹೆಚ್ಚು ನೀರನ್ನು ಹರಿಯಬಿಡದೆ ಹಂತ ಹಂತವಾಗಿ ಬಿಡುಗಡೆ ಪ್ರಮಾಣವನ್ನು ಹೆಚ್ಚಿಸಬೇಕು. ಎಷ್ಟು ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರತಿ ಬಾರಿಯೂ ಜನರಿಗೆ ಮಾಹಿತಿ ನೀಡಬೇಕು. ಟಾಸ್ಕ್‌ಫೋರ್ಸ್‌ಗಳನ್ನು ರಚಿಸಿಕೊಂಡು, ಕಂಟ್ರೋಲ್‌ರೂಮ್‌ ಸ್ಥಾಪಿಸಿಕೊಳ್ಳುವುದರೊಂದಿಗೆ ಪ್ರವಾಹದ ಸಮಯದಲ್ಲಿ ಅಪಾಯದಲ್ಲಿ ಸಿಲುಕಿದವರನ್ನು ರಕ್ಷಿಸುವುದಕ್ಕೆ ಬೇಕಾದ ಬೋಟ್‌ಗಳು, ತೆಪ್ಪ, ಹಗ್ಗ, ಜಾಕೆಟ್‌ ಸೇರಿದಂತೆ ಇನ್ನಿತರ ಸುರಕ್ಷಾ ಸಾಮಗ್ರಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೃಷ್ಣರಾಜಸಾಗರ ಜಲಾಶಯದ ಅಧೀಕ್ಷಕ ಅಭಿಯಂತರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಜನರಿಗೆ ಸರಿಯಾದ ಮಾಹಿತಿಯನ್ನು ರವಾನಿಸುತ್ತಾ ಪ್ರಾಣಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಬೆಳೆಯ ಬಗ್ಗೆ ಪಟ್ಟಿ ಮಾಡಿಕೊಳ್ಳಿ:

ನದಿ ಪಾತ್ರದಲ್ಲಿರುವ ರೈತರು ಯಾವ ಯಾವ ಬೆಳೆ ಬೆಳೆದಿದ್ದಾರೆ ಎನ್ನುವುದನ್ನು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಈಗಲೇ ಪಟ್ಟಿ ಮಾಡಿಕೊಳ್ಳಬೇಕು. ಆಗ ಅವರಿಗೆ ಪರಿಹಾರ ನೀಡುವುದಕ್ಕೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಜಮೀನುಗಳು ಪ್ರವಾಹದಲ್ಲಿ ಕೊಚ್ಚಿಹೋಗುವಂತಹ ಸಂಭವಗಳಿದ್ದರೆ ಅದನ್ನೂ ದಾಖಲು ಮಾಡಿಕೊಳ್ಳುವ ಅಗತ್ಯವಿದೆ. ಆದರಿಂದ ಕಾನೂನು ಬದ್ಧ ಪರಿಹಾರ ದೊರಕಿಸಲು ಸಾಧ್ಯ ಎಂದರು.

ಶ್ರೀರಂಗಪಟ್ಟಣದ ಸಮೀಪ ಖಾಸಗಿ ಪವರ್‌ ಸ್ಟೇಷನ್‌ ಇದ್ದು ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ಹರಿಸುವ ವೇಳೆ ಸ್ವಯಂಚಾಲಿತ ಗೇಟ್‌ಗಳ ವ್ಯವಸ್ಥೆಯನ್ನು ಮಾಡಿಕೊಳ್ಳದಿರುವುದರಿಂದ ನೀರು ಮುಂದೆ ಸಾಗದೆ ಹಿನ್ನೀರಿನಲ್ಲಿರುವ ಜಮೀನುಗಳಿಗೆ ನುಗ್ಗುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದಾಗ, ಆ ಕಂಪನಿಯ ಅಧಿಕಾರಿಗಳನ್ನು ಕರೆದು ಮಾತುಕತೆ ನಡೆಸಿ ಸಮಸ್ಯೆ ಪರಿಹಾರಿಸುವಂತೆ ಉಪವಿಭಾಗಾಧಿಕಾರಿ, ತಹಸೀಲ್ದಾರ್‌ಗೆ ಸೂಚಿಸಿದರು.

ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸೀಫ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕ ಮಲ್ಲಿಕಾರ್ಜುನ್‌, ಕೆಆರ್‌ಎಸ್‌ ಅಧೀಕ್ಷಕ ಅಭಿಯಂತರ ರಘುರಾಮ್‌ ಇದ್ದರು.

ದಾಖಲಾತಿ ಮಾಡಿಕೊಳ್ಳಿ

ಅಣೆಕಟ್ಟೆಯಿಂದ ಹೆಚ್ಚು ನೀರು ಬಿಡುಗಡೆ ಮಾಡಿದಾಗಲೆಲ್ಲಾ ನೀರಿನಲ್ಲಿ ಶ್ರೀರಂಗಪಟ್ಟಣದ ಗೌತಮ ಕ್ಷೇತ್ರ ದ್ವೀಪ ಜಲಾವೃತಗೊಳ್ಳುತ್ತದೆ. ಅಲ್ಲಿರುವ ಸ್ವಾಮೀಜಿಗೆ ಎಷ್ಟೇ ಹೇಳಿದರೂ ಕ್ಷೇತ್ರದಿಂದ ಹೊರಬರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದಾಗ, ಇಂತಹ ಸೂಕ್ಷ್ಮಪ್ರದೇಶಗಳನ್ನು ಗುರುತಿಸಿಕೊಂಡು ಅಲ್ಲಿಗೆ ತೆರಳಿ ಅವರ ಮನವೊಲಿಸಲು ಪ್ರಯತ್ನಿಸಿ. ಅವರು ಒಪ್ಪದಿದ್ದರೆ ಆಶ್ರಮಕ್ಕೆ ನೀವು ಭೇಟಿ ನೀಡಿರುವುದು, ನೋಟಿಸ್‌ ಅಂಟಿಸಿರುವುದು ಎಲ್ಲರ ವೀಡಿಯೋ ಚಿತ್ರೀಕರಣ ಮಾಡಿಕೊಂಡು ದಾಖಲು ಮಾಡಿಕೊಳ್ಳುವಂತೆ ಸೂಚಿಸಿದರು.

63 ವರ್ಷದಲ್ಲಿ ಮೂರು ಬಾರಿ ದಾಖಲೆಯ ನೀರು ಬಿಡುಗಡೆ

ಕಳೆದ 63 ವರ್ಷಗಳಲ್ಲಿ ಕೃಷ್ಣರಾಜಸಾಗರ ಜಲಾಶಯದಿಂದ ಮೂರು ಬಾರಿ ದಾಖಲೆ ಪ್ರಮಾಣದ ನೀರನ್ನು ಅಣೆಕಟ್ಟೆಯಿಂದ ಬಿಡುಗಡೆ ಮಾಡಲಾಗಿದೆ. 1961ರಲ್ಲಿ 2.50 ಲಕ್ಷ ಕ್ಯುಸೆಕ್‌, 1992ರಲ್ಲಿ 1.90 ಲಕ್ಷ ಕ್ಯುಸೆಕ್‌ ಹಾಗೂ 2019ರಲ್ಲಿ 1.58 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ಹೊರಬಿಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ರೀತಿ ಪ್ರವಾಹ ಸನ್ನಿವೇಶ ಸೃಷ್ಟಿಯಾದಾಗಲೆಲ್ಲಾ ಜನವಸತಿ ಪ್ರದೇಶಗಳಗಿಂತ ಹೆಚ್ಚಾಗಿ ಕೃಷಿ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಹಾಳಾಗಿರುವುದೇ ಹೆಚ್ಚಿರುತ್ತದೆ. ಪ್ರವಾಹದಿಂದ ಗ್ರಾಮದ ಜನರನ್ನು ಸ್ಥಳಾಂತರ ಮಾಡಿರುವ ಉದಾಹರಣೆಗಳಿಲ್ಲ ಎಂದು ವಿವರಿಸಿದರು.

ಪ್ರವಾಸಿ ತಾಣಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚನೆ

ಜಿಲ್ಲೆಯ ಗಗನಚುಕ್ಕಿ, ಮುತ್ತತ್ತಿ, ಎಡಮುರಿ, ಬಲಮುರಿ, ಸಂಗಮ ಸೇರಿದಂತೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ಭದ್ರತೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಹೆಚ್ಚು ನೀರು ಹರಿದುಬರುವ ಸ್ಥಳಗಳಲ್ಲಿ ಸೆಲ್ಫೀ ತೆಗೆದುಕೊಳ್ಳುವುದು, ಅಪಾಯದ ಅರಿವಿಲ್ಲದೆ ನೀರಿನಲ್ಲಿ ಈಜಾಡುವುದು, ಕುಟುಂಬ ಸಹಿತ ನದಿ ನೀರಿಗೆ ಇಳಿಯವುದನ್ನು ನಿರ್ಬಂಧಿಸಬೇಕು. ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸುವುದು. ಬ್ಯಾರಿಕೇಡ್‌ಗಳನ್ನು ಅಳವಡಿಸಿ ಆ ಪ್ರದೇಶಗಳಿಗೆ ತೆರಳದಂತೆ ತಡೆಯುವಂತೆ ಸೂಚಿಸಿದರು.

ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ಹರಿಯುವ ನೀರಿನ ಸೊಬಗನ್ನು ನೋಡಲು ಪ್ರವಾಸಿಗರು ಮುಗಿಬೀಳುತ್ತಾರೆ. ಸೇತುವೆ ತುದಿಗೆ ಬಂದು ಸೆಲ್ಫಿಗೆ ಮುಂದಾಗುತ್ತಾರೆ. ಅದನ್ನು ತಡೆಯಲು ಆ ಮಾರ್ಗವನ್ನು ಬಂದ್‌ ಮಾಡುವಂತೆ ಹಾಗೂ ಹೆಚ್ಚು ನೀರು ಹರಿಯಬಿಟ್ಟ ಸಮಯದಲ್ಲಿ ಶ್ರೀ ನಿಮಿಷಾಂಬ ದೇಗುಲ ದರ್ಶನವನ್ನು ಜನರಿಗೆ ನಿರ್ಬಂಧಿಸುವಂತೆ ಅಧಿಕಾರಿಗಳು ಸಲಹೆ ನೀಡಿದರು.

ಜಿಲ್ಲೆಯ ಹಲವೆಡೆ ಸುರಕ್ಷತೆಗಳನ್ನು ಕೈಗೊಳ್ಳುವುದಕ್ಕೆ ಹೋಂಗಾರ್ಡ್‌ಗಳ ಕೊರತೆ ಇದ್ದು, ಅವರನ್ನು ನಿಯೋಜಿಸಿಕೊಡುವಂತೆ ಅಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಮನವಿ ಮಾಡಿದಾಗ ಅದಕ್ಕೆ ಒಪ್ಪಿಗೆ ಸೂಚಿಸಿದರು.

click me!