ಸರ್ಕಾರಿ ಶಾಲೆ ಇಂಗ್ಲಿಷ್ ಮೀಡಿಯಂ ಆಗಲ್ಲ, ಶಿಕ್ಷಣ ಸಚಿವರು ಕೊಟ್ರು ಹೊಸ ಐಡಿಯಾ

By Kannadaprabha NewsFirst Published Jan 14, 2020, 3:21 PM IST
Highlights

ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗಳಾಗಿ ಪರಿವರ್ತಿಸುವ ಬಗ್ಗೆ ಈ ಹಿಂದೆ ಮಾತು ಕೇಳಿ ಬಂದಿತ್ತು. ಕನ್ನಡ ಸರ್ಕಾರಿ ಶಾಲೆಗಳನ್ನು ಪರಿವರ್ತಿಸದೆಯೇ ಇಂಗ್ಲಿಷ್ ಕಲಿಸುವ ಹೊಸ ಐಡಿಯಾವನ್ನು ಶಿಕ್ಷಣ ಸಚಿವರು ಮುಂದಿಟ್ಟಿದ್ದಾರೆ. ಏನಿದು ಐಡಿಯಾ...? ಇಲ್ಲಿ ಓದಿ.

ಉಡುಪಿ(ಜ.14): ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ಸಾಲಿನಿಂದ ದ್ವಿಭಾಷಾ ಪಠ್ಯಪುಸ್ತಕಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಿರುವ ಶಾಲೆಗಳನ್ನು ಇಂಗ್ಲಿಷ್‌ ಮಾಧ್ಯಮವನ್ನಾಗಿ ಪರಿವರ್ತಿಸುವುದಕ್ಕಿಂತ, ಅದೇ ಶಾಲೆಗಳ 1ರಿಂದ 5ನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಇಂಗ್ಲಿಷ್‌ ಮತ್ತು ಕನ್ನಡ ಭಾಷೆಗಳೆರಡರಲ್ಲೂ ಕಲಿಯಲು ಅನುಕೂಲವಾಗುವಂತೆ ರಚಿಸಲಾಗುವುದು. ಈ ಪಠ್ಯಪುಸ್ತಕಗಳಲ್ಲಿ ಚಿತ್ರಗಳ ಮೂಲಕ ಶಿಕ್ಷಣ ನೀಡಲಾಗುತ್ತದೆ. ಈ ಚಿತ್ರಗಳ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳೆರಡರಲ್ಲೂ ವಿವರಣೆ ಇರುತ್ತದೆ. ಚಿತ್ರಗಳಿಂದ ಮಗುವಿನ ಕಲಿಕೆ ಹೆಚ್ಚು ಆಕರ್ಷಣೀಯವಾಗುತ್ತದೆ. ಜತೆಗೆ ಸಹಜವಾಗಿಯೇ ಏಕಕಾಲದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳೆರಡನ್ನೂ ಕಲಿತಂತಾಗುತ್ತದೆ ಎಂದು ವಿವರಿಸಿದರು.

ಪೂರ್ವಪ್ರಾಥಮಿಕ ತರಗತಿ ಬೇಕು:

ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ತರಗತಿಗಳನ್ನು ತೆರೆಯಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಇದರಿಂದ ಅಂಗನವಾಡಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಂಗನವಾಡಿಗಳ ಕಾರ್ಯವೇ ಬೇರೆ, ಪೂರ್ವಪ್ರಾಥಮಿಕ ತರಗತಿಗಳ ಕಾರ್ಯವೇ ಬೇರೆ ಎಂದು ಸುರೇಶ್‌ ಕುಮಾರ್‌ ಸಮರ್ಥನೆ ನೀಡಿದ್ದಾರೆ.

ರೈಲು ನಿಲ್ದಾಣಕ್ಕೆ ಪೇಜಾವರಶ್ರೀ ಹೆಸರು: ಕೇಂದ್ರ ಸಚಿವರಿಗೆ ಕೋಟ ಶಿಫಾರಸು

ಆದರೆ ಅಂಗನವಾಡಿ ಮತ್ತು ಪೂರ್ವಪ್ರಾಥಮಿಕ ತರಗತಿಗಳನ್ನು ಹೇಗೆ ವಿಂಗಡಿಸಬೇಕು? ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ವಿಶೇಷ ತರಬೇತಾದ ಶಿಕ್ಷಕಿಯರನ್ನು ಒದಗಿಸುವುದು ಸಾಧ್ಯವಿದೆಯೇ ಎನ್ನುವ ಬಗ್ಗೆ ಉಭಯ ಇಲಾಖೆಗಳ ನಡುವೆ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ.

1000 ಇಂಗ್ಲಿಷ್‌ ಶಾಲೆ ಸ್ಥಾಪನೆಗೆ ಬ್ರೇಕ್‌: ಸಚಿವ

ಈಗಾಗಲೇ 1 ಸಾವಿರ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಲಾಗಿದೆ. ಆದರೆ ಕೆಲವು ಚಿಂತಕರು ಮುಖ್ಯಮಂತ್ರಿ ಬಳಿ ಹೋಗಿ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ಶಾಸಕರು ತಮ್ಮ ಕ್ಷೇತ್ರಗಳಲ್ಲಿರುವ ಇನ್ನಷ್ಟುಸರ್ಕಾರಿ ಶಾಲೆಗಳನ್ನು ಇಂಗ್ಲಿಷ್‌ ಮಾಧ್ಯಮ ಮಾಡುವಂತೆ ಒತ್ತಾಯಿಸುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಏನು ಮಾಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಯೋಜನೆಯಂತೆ ಈ ಬಾರಿಯೂ 1 ಸಾವಿರ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್‌ ಮಾಧ್ಯಮಗಳನ್ನಾಗಿ ಮಾಡಬೇಕಾಗಿತ್ತು. ಇದಕ್ಕೆ ವಿರೋಧ ಇರುವುದರಿಂದ ಯಾವುದೇ ತೀರ್ಮಾನವನ್ನು ಇನ್ನೂ ತೆಗೆದುಕೊಂಡಿಲ್ಲ ಎಂದು ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.

click me!