ಮೀನುಗಾರರಿಗೆ ಉಪಯೋಗವಾಗಲೆಂದು ಸಬ್ಸಿಡಿ ದರದಲ್ಲಿ ಬೋಟ್ ಗಳ ಖರೀದಿಗೆ ಸರ್ಕಾರ ಆದ್ಯತೆ ನೀಡಿದೆ. ಆದರೆ, ಈ ಯೋಜನೆಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಮೀನುಗಾರರೇ ವಿರೋಧ ಮಾಡಲು ಮುಂದಾಗಿದ್ದಾರೆ.
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ(ಫೆ.02): ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರುವ ಮತ್ಸ್ಯೋದ್ಯಮವನ್ನು ಮತ್ತಷ್ಟು ಆಧುನೀಕರಣಗೊಳಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತಿದೆ. ಇತರ ರಾಜ್ಯಗಳಲ್ಲಿ ಇರುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮತ್ಸ್ಯಸಂಪದ ಯೋಜನೆಯಡಿ ಲಾಂಗ್ ಲೈನರ್ ಬೋಟ್ ಗಳನ್ನು ಮೀನುಗಾರರಿಗೆ ನೀಡಲು ಮುಂದಾಗಿದೆ. ಆದರೆ, ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನೀಡಲು ಹೊರಟಿರುವ ಬೋಟ್ ಗಳು ರಾಜ್ಯದ ಕರಾವಳಿಯಲ್ಲಿ ಮೀನುಗಾರರಿಗೆ ಮಾತ್ರ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಷ್ಟಕ್ಕೂ ಇದಕ್ಕೆ ಕಾರಣವೇನು ಅಂತೀರಾ..? ಈ ಸ್ಟೋರಿ ನೋಡಿ...
undefined
ಹೌದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮತ್ಸ್ಯಸಂಪದ ಯೋಜನೆಯಡಿ ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸಲೆಂದು ಮೀನುಗಾರರಿಗೆ ಲಾಂಗ್ ಲೈನರ್ ಬೋಟ್ ಗಳನ್ನು ಖರೀದಿಸಲು ಸೌಲಭ್ಯಗಳನ್ನು ನೀಡಲಾಗಿದೆ. ಬೋಟ್ ಬೃಹತ್ ಗಾತ್ರ ಇರೋ ಹಿನ್ನೆಲೆಯಲ್ಲಿ ನೂರಾರು ಮೈಲು ದೂರ ತೆರಳಿ ಆಳಸಮುದ್ರ ಮೀನುಗಾರಿಕೆ ನಡೆಸುವ ಮೂಲಕ ಬೃಹತ್ ಗಾತ್ರದ ಮೀನುಗಳನ್ನು ಹಿಡಿಯಲು ಸಾಧ್ಯವಿದ್ದು, ಇದರಿಂದ ಮೀನುಗಾರರು ಹೆಚ್ಚಿನ ಲಾಭ ಗಳಿಸಬಹುದು ಅನ್ನೋ ಉದ್ದೇಶದಿಂದ ಸುಮಾರು 120 ಕೋಟಿ ರೂ. ವೆಚ್ಚದಲ್ಲಿ ಬೋಟ್ ಖರೀದಿಗೆ ಸರ್ಕಾರ ಹಣವನ್ನು ನೀಡಲು ಮುಂದಾಗಿದೆ. ಮೀನುಗಾರರಿಗೆ ಉಪಯೋಗವಾಗಲೆಂದು ಸಬ್ಸಿಡಿ ದರದಲ್ಲಿ ಬೋಟ್ ಗಳ ಖರೀದಿಗೆ ಸರ್ಕಾರ ಆದ್ಯತೆ ನೀಡಿದೆ. ಆದರೆ, ಈ ಯೋಜನೆಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಮೀನುಗಾರರೇ ವಿರೋಧ ಮಾಡಲು ಮುಂದಾಗಿದ್ದಾರೆ. ಮೀನುಗಾರ ಮುಖಂಡರು ಹೇಳುವ ಪ್ರಕಾರ, ಲಾಂಗ್ ಲೈನರ್ ಬೋಟ್ ಗಳ ಗಾತ್ರ ದೊಡ್ಡದಿದ್ದು, ಅದು ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಮಾತ್ರ ಮೀನುಗಾರಿಕೆ ಮಾಡಲು ಯೋಗ್ಯ. ಆದರೆ, ಜಿಲ್ಲೆಯ ವ್ಯಾಪ್ತಿಯಲ್ಲಿ ಪರ್ಸಿಯನ್ ಅಥವಾ ಟ್ರಾಲ್ ಬೋಟ್ ನಲ್ಲಿ ಮಾತ್ರ ಮೀನುಗಾರಿಕೆ ಮಾಡಲು ಸಾಧ್ಯ. ರಾಜ್ಯದ ಕರಾವಳಿ ತೀರಗಳಿಗೆ ಉಪಯೋಗವಿಲ್ಲದ ಮೀನುಗಾರಿಕಾ ಯೋಜನೆಯನ್ನು ತಂದು ಏನು ಪ್ರಯೋಜನ? ಅದರ ಬದಲು ಪ್ರಸ್ತುತ ಬಳಕೆಯಲ್ಲಿರುವ ಬೋಟ್‌ಗಳ ಖರೀದಿಸಲು ಸಹಾಯ ಮಾಡಿದರೆ ಉತ್ತಮ ಅಂತಾರೆ ಮೀನುಗಾರ ಮುಖಂಡರು.
ಉತ್ತರಕನ್ನಡದ ಏಕೈಕ ಸರಕಾರಿ ಮೆಡಿಕಲ್ ಕಾಲೇಜ್ ವಿರುದ್ಧ ವಿದ್ಯಾರ್ಥಿಗಳು ಗರಂ!
ರಾಜು ತಾಂಡೇಲ, ಅಧ್ಯಕ್ಷರು, ಜಿಲ್ಲಾ ಮೀನು ಮಾರಾಟ ಫೆಡರೇಶನ್
ರಾಜ್ಯದ ಕರಾವಳಿಯ ಮೀನುಗಾರರಿಗೆ ಉಪಯೋಗಕ್ಕೆ ಬಾರದ ಯೋಜನೆಯನ್ನು ಹೇರಿದರೆ ಯೋಜನೆ ಹಳ್ಳ ಹಿಡಿಯುತ್ತದೆ. 120 ಬೋಟ್ ಗಳನ್ನು ಖರೀದಿಗೆ ಸರ್ಕಾರ ಹಣ ಮಂಜೂರು ಮಾಡಿದ್ದರೂ, ಕೇವಲ ಮೂರ್ನಾಲ್ಕು ಜನರು ಮಾತ್ರ ಬೋಟ್ ಖರೀದಿಗೆ ಅರ್ಜಿ ಹಾಕಿದ್ದಾರೆ. ಸಾಲಕ್ಕಾಗಿ ಮನೆಗಳನ್ನು ಅಡವು ಇಡಬೇಕಾಗಿದ್ದು, ಇಷ್ಟೊಂದು ದೊಡ್ಡ ಮೊತ್ತ ಹಾಕಿ ಬೋಟ್ ಖರೀದಿಸಿದ ಬಳಿಕ ಮೀನುಗಳೇ ಸಿಗದಿದ್ದರೆ ಮೀನುಗಾರರು ಸಂಕಷ್ಟಕ್ಕೆ ಸಿಲುಕಬೇಕಾದೀತು. ಈ ಹಿನ್ನೆಲೆಯಲ್ಲಿ ಲಾಂಗ್ ಲೈನರ್ ಬದಲು ಬೇರೆ ಬೋಟ್ ಗಳನ್ನು ನೀಡಬೇಕು ಎನ್ನುವುದು ಮೀನುಗಾರರ ಆಗ್ರಹ. ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಕೇಳಿದರೆ, ಮೀನುಗಾರರಿಗೆ ಪೂರಕವಾಗುವಂತೆ ಬೋಟ್ ವಿನ್ಯಾಸ ಬದಲಿಸಲು ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ.
ಒಟ್ಟಿನಲ್ಲಿ ಪ್ರಸ್ತುತ ಕರಾವಳಿಯಲ್ಲಿ ಬಳಕೆಯಲ್ಲಿರುವ ಟ್ರಾಲ್ ಬೋಟ್, ಪರ್ಸಿಯನ್ ಬೋಟ್ ಖರೀದಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ ಎಂದು ಕಾಯುತ್ತಿದ್ದ ಮೀನುಗಾರರಿಗೆ, ಸರ್ಕಾರ ಲಾಂಗ್ ಲೈನರ್ ಬೋಟ್ ಖರೀದಿ ಯೋಜನೆಗೆ ಆದ್ಯತೆ ನೀಡಿರುವುದು ಸಾಕಷ್ಟು ನಿರಾಸೆ ಮೂಡಿಸಿದೆ. ಕಡಲ ಮಕ್ಕಳ ಅಭಿವೃದ್ದಿಗಾಗಿ ಸರ್ಕಾರ ಮತ್ತೊಮ್ಮೆ ಗಮನಹರಿಸಿ ಲಾಂಗ್ ಲೈನರ್ ಬೋಟ್ ಗಳ ಬದಲು ಅವರಿಗೆ ಅಗತ್ಯವಿರುವ ಬೋಟ್ ಖರೀದಿಗೆ ಅನುದಾನಗಳನ್ನು ಬಿಡುಗಡೆ ಮಾಡುವ ಮೂಲಕ ಅವರ ಬದಲು ಹಸನುಗೊಳಿಸಬೇಕಾಗಿದೆ.