
ಬೆಂಗಳೂರು(ನ.27): ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಹಗರಣದ ತನಿಖೆ ಮುಂದುವರೆಸಿರುವ ಅಪರಾಧ ತನಿಖಾ ಇಲಾಖೆ (ಸಿಐಡಿ), ಆ ನಿಗಮದಿಂದ ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಗೆ ಸೇರಿದ್ದು ಎನ್ನಲಾದ ಕಂಪನಿ ಸೇರಿ ಒಟ್ಟು ಐದು ಖಾಸಗಿ ಕಂಪನಿಗಳಿಗೆ ಅಕ್ರಮವಾಗಿ ₹34 ಕೋಟಿ ವರ್ಗಾವಣೆಯಾಗಿರುವುದನ್ನು ಪತ್ತೆ ಹಚ್ಚಿದೆ.
ಇನ್ನು ಬೆಂಗಳೂರು ನಗರದಲ್ಲೇ ಕಾರ್ಯಚಟುವಟಿಕೆ ಹೊಂದಿವೆ ಎಂದು ಬಿಂಬಿಸಿಕೊಂಡಿದ್ದ ಈ ಕಂಪನಿಗಳ ಬೆನ್ನತ್ತಿ ಹೋಗಿದ್ದ ಅಧಿಕಾರಿಗಳು, ಕೆಲ ಕಂಪನಿಗಳ ಕಚೇರಿಗಳು ದನದ ಕೊಟ್ಟಿಗೆಯಲ್ಲಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಇದೇ ಹಗರಣ ಸಂಬಂಧ ಸಿಐಡಿ ತನಿಖೆ ಎದುರಿಸಿದ್ದ ಉದ್ಯಮಿ ಜೀವಾ ಅವರು, ಐದು ದಿನಗಳ ಹಿಂದೆ ಬೆಂಗಳೂರಿನ ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಭೋವಿ ಅಕ್ರಮ ಹಣ ವರ್ಗಾವಣೆ ಶೋಧಿಸಿರುವ ಸಿಐಡಿ ಐದು ಕಂಪನಿಗಳಿಗೆ 34.18 ಕೋಟಿ ಅಕ್ರಮವಾಗಿ ವರ್ಗಾವಣೆಯಾಗಿದೆ. ಇದರಲ್ಲಿ ಜೀವಾ ಅವರಿಗೆ ಸೇರಿದ್ದು ಎನ್ನಲಾದ ಅನ್ನಿಕಾ ಎಂಟರ್ ಪ್ರೈಸ್ (ಕ7.16 ಕೋಟಿ) ಹಾಗೂ ಅವರ ಸೋದರಿ ಹೆಸರಿ ನಲ್ಲಿರುವ ಹರ್ನಿತಾ ಕ್ರಿಯೇಷನ್ (ಕ3.79 ಕೋಟಿ) ಸೇರಿ ಒಟ್ಟು 10.9 ಕೋಟಿ ಸಂದಾಯವಾಗಿದೆ.
ಭೋವಿ ನಿಗಮದ ತನಿಖೆ ಎದುರಿಸಿದ್ದಾಕೆ ಆತ್ಮ*ತ್ಯೆ; ಸಿಐಡಿ ವಿಚಾರಣೆಗೆ ನೊಂದು ಜೀವ ಬಿಟ್ಟ ಜೀವಾ!
ಇನ್ನುಳಿದ ಮೂರು ಕಂಪನಿಗಳಲ್ಲಿ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪ ಅವರ ಆಪ್ತರ ಪಾಲುದಾರಿಕೆ ಇದೆ. ಅಲ್ಲದೆ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕಿ ಲೀಲಾವತಿ ಅವರ ಸೋದರಿ ಮಂಗಳಾ ರಾಮು ಅವರಿಗೆ ಹಂತ ಹಂತವಾಗಿ ಕಳ್ಳ ಹಾದಿಯಲ್ಲಿ 11.48 ಕೋಟಿ ವರ್ಗಾವಣೆಯಾಗಿದೆ ಎಂದು ಮೂಲಗಳು ಹೇಳಿವೆ.
ಭೋವಿ ನಿಗಮದ ಹಗರಣ: ಸಿಐಡಿ ದಾಳಿ, ನನ್ನ ಮನೆಯಲ್ಲಿ ಬದನೇಕಾಯಿಯೂ ಸಿಗಲ್ಲ, ಸುನೀಲ್ ವಲ್ಯಾಪುರೆ
ಅಕ್ರಮವು ₹90 ಕೋಟಿಗೂ ಮಿಗಿಲು:
ರಾಜ್ಯ ಸರ್ಕಾರವು ಭೋವಿ ಸಮುದಾಯದ ಅಭ್ಯುದಯಕ್ಕೆ ರೂಪಿಸಿದ್ದ ಆರ್ಥಿಕ ಯೋಜನೆಗಳಲ್ಲಿ ನಿಗಮದ ಕೆಲ ಅಧಿಕಾರಿಗಳು ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ. 2018-2023ರವರೆಗೆ 5 ವರ್ಷಗಳಲ್ಲಿ ಸುಮಾರು 290 ಕೋಟಿಗೂ ಅಧಿಕ ಮೊತ್ತದ ಅಕ್ರಮ ನಡೆದಿರುವುದು ಗೊತ್ತಾಗಿದೆ. ಭೋವಿ ಜನಾಂಗದವರ ಉದ್ಯಮಕ್ಕೆ ಉತ್ತೇಜಿಸುವ ಸಲುವಾಗಿ ಜಾರಿಗೊಳಿಸಿದ್ದ ಸಾಲ ನೀಡಿಕೆ ಯೋಜನೆಯಲ್ಲಿ ಈ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಆದರೆ 2022-23ನೇ ಸಾಲಿನ ಅವ್ಯವಹಾರದ ಬಗ್ಗೆ ಮಾತ್ರ ಸಿಐಡಿ ತನಿಖೆಗೆ ಆದೇಶವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸಾಲ ಮಂಜೂರಾತಿ ಹೆಸರಿನಲ್ಲಿ ಹಣ ಲಪಟಾಯಿಸಲು ಖೋಟಿ ಫಲಾನುಭವಿಗಳನ್ನು ಏಜೆಂಟ್‌ಗಳ ನೆರವಿನಲ್ಲಿ ಅಧಿಕಾರಿಗಳು ಸೃಷ್ಟಿಸಿದ್ದರು. ಸಾಲಮಂಜೂರಾತಿಮುನ್ನವೇಆಫಲಾನುಭವಿಗಳಿಂದ ಖಾಲಿಜೆಕ್‌ಗಳಿಗೆ ಅಧಿಕಾರಿಗಳುಸಹಿಪಡೆಯುತ್ತಿದ್ದರು. ನೈಜವಾಗಿ ಆತನಿಗೆ ಸಿಕ್ಕಿರುವುದು ಕೇವಲ 50 ಸಾವಿರ ಮಾತ್ರ. ಆದರೆ ಆತನ ಹೆಸರಿನಲ್ಲಿ ಅಧಿಕಾರಿಗಳು 25 ಲಕ್ಷ ಸಾಲ ಮಂಜೂರು ಮಾಡಿ ಹಣ ಲಪಟಾಯಿಸಿದ್ದಾರೆ ಎಂದು ಮೂಲಗಳು ವಿವರಿಸಿವೆ.
ಯಾರಾರು ಪಾಲುದಾರರು
ಮಾಜಿ ಜಿಎಂ ಬಿ.ಕೆ.ನಾಗರಾಜಪ್ಪ ಅವರ ಆಪ್ತ ಸಹಾಯಕಿ (ಹೊರಗುತ್ತಿಗೆ ಆಧಾರ) ಯಶಸ್ವಿನಿ ಹೆಸರಿನಲ್ಲಿ ನ್ಯೂ ಡೀಮ್, ಆಕೆಯ ಸೋದರ ಕಾರ್ತಿಕ್ ಗೌಡ ಹೆಸರಿನಲ್ಲಿ ಆದಿತ್ಯಾ, ತಮ್ಮ ಮನೆ ಬಾಡಿಗೆದಾರರಾದ ಜೀವಾ ಹೆಸರಿನಲ್ಲಿ ಅನ್ನಿಕಾ ಎಂಟರ್‌ಪ್ರೈಸಸ್, ಆಕೆಯ ಸೋದರಿ ಸಂಗೀತಾ ಹೆಸರಿನಲ್ಲಿ ಹರ್ನಿತಾ ಕ್ರಿಯೇಷನ್ ಹಾಗೂ ಆಪ್ತ ಸಿ.ಸಂತೋಷ್ ಹೆಸರಿನಲ್ಲಿ ಸೋಮೇಶ್ವರ ಎಂಟರ್‌ಪ್ರೈಸಸ್ ಎಂಬ ಕಂಪನಿ ಗಳನ್ನು ಸ್ಥಾಪಿಸಿ ಮಾಜಿ ಜಿಎಂ ನಾಗರಾಜಪ್ಪ ಹಣ ಲಪಟಾಯಿಸಿದ್ದಾರೆ ಎಂದು ಮೂಲಗಳು ವಿವರಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ