ಬೆಳಗಾವಿ: ಮತ್ತೆರೆಡು ನೀರಾವರಿ ಯೋಜನೆಗೆ ಹಸಿರು ನಿಶಾನೆ

By Kannadaprabha News  |  First Published Oct 20, 2022, 8:00 PM IST

ಸಾಕಾರವಾದ ಶಂಕರಲಿಂಗ, ಅಡವಿಸಿದ್ದೇಶ್ವರ ಏತ ನೀರಾವರಿ ಯೋಜನೆ, 133 ಕೋಟಿಗಳ ಟೆಂಡರ್‌ ಹಂತದಲ್ಲಿ ಪ್ರಕ್ರಿಯೆ


ರವಿ ಕಾಂಬಳೆ

ಹುಕ್ಕೇರಿ(ಅ.20):  ಈ ಭಾಗದ ರೈತರ, ಜನಸಾಮಾನ್ಯರ ಬಹುದಿನದ ಬೇಡಿಕೆಯಾಗಿದ್ದ ಶ್ರೀ ಅಡವಿಸಿದ್ದೇಶ್ವರ ಏತ ನೀರಾವರಿ ಮತ್ತು ಶ್ರೀಶಂಕರಲಿಂಗ ಏತ ನೀರಾವರಿ ಯೋಜನೆಗಳು ಸಾಕಾರಗೊಳ್ಳುವ ದಿನಗಳು ಬಂದೊದಗಿದೆ. ತನ್ಮೂಲಕ ಹುಕ್ಕೇರಿ ತಾಲೂಕಿನ ನೀರಾವರಿ ಪ್ರದೇಶ ವಿಸ್ತರಣೆಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ.

Latest Videos

undefined

ಈ ಎರಡು ಯೋಜನೆಗಳಿಗೆ ಹಿರಣ್ಯಕೇಶಿ ನದಿಯಿಂದ ತಲಾ 0.11 ಟಿಎಂಸಿ ನೀರನ್ನು ಬಳಸಿಕೊಂಡು ಸುಮಾರು 2400 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿದೆ. ಸರ್ಕಾರಿದಂದ .133 ಕೋಟಿಗೂ ಅಧಿಕ ಅನುದಾನ ಪಡೆದಿರುವ ಈ ಎರಡು ಯೋಜನೆಗಳಿಂದ ನೂರಾರು ಎಕರೆ ಒಣ ಮತ್ತು ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಇದರಿಂದ ಈ ಭಾಗದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣಗೆ ಆಗುವುದಲ್ಲದೇ ಹಲವು ಗ್ರಾಮಗಳು ಅಭಿವೃದ್ಧಿಯಾಗಲಿವೆ.

ಚರ್ಮಗಂಟು: ಕಸಾಯಿಖಾನೆ ಸೇರುತ್ತಿರುವ ಜಾನುವಾರುಗಳು

ರೈತರ ಬಹುನಿರೀಕ್ಷಿತ ಬೇಡಿಕೆಯಾಗಿದ್ದ ಅಡವಿಸಿದ್ದೇಶ್ವರ ಹಾಗೂ ಶಂಕರಲಿಂಗ ಏತ ನೀರಾವರಿ ಯೋಜನೆಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು ಕ್ಷೇತ್ರದ ರೈತಬಾಂಧವರ ಸಂತಸ ಇಮ್ಮಡಿಗೊಳಿಸಿದೆ. ಕ್ಷೇತ್ರದ ಸಮಗ್ರ ನೀರಾವರಿಗೆ ಪಣ ತೊಟ್ಟಿದ್ದ ಸಚಿವ ದಿವಂಗತ ಉಮೇಶ ಕತ್ತಿ ಅವರ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಅಷ್ಟೇ ಅಲ್ಲದೇ ರೈತರ ಮೊಗದಲ್ಲಿ ಸಂತಸದ ನಗೆಯರಳುವಂತೆ ಮಾಡಿದೆ.

1200 ಹೆಕ್ಟೇರ್‌ ಪ್ರದೇಶ ನೀರಾವರಿ:

ಕರ್ನಾಟಕ ನೀರಾವರಿ ನಿಗಮವು ಈ ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿದೆ. ಅಡವಿಸಿದ್ದೇಶ್ವರ ಯೋಜನೆಗೆ ಅಂದಾಜು .66.13 ಕೋಟಿ ವೆಚ್ಚವಾಗಲಿದ್ದು ಹುಕ್ಕೇರಿ, ಗಜಬರವಾಡಿ, ಶಿರಗಾಂವ, ಮದಮಕ್ಕನಾಳ, ಬೆಣಿವಾಡ ಮತ್ತು ಮದಿಹಳ್ಳಿಯ ಸುಮಾರು 1200 ಹೆಕ್ಟೇರ್‌ ಪ್ರದೇಶ ನೀರಾವರಿಯಾಗಲಿದ್ದು ಯರನಾಳ ಬ್ರಿಡ್ಜ್‌ನಿಂದ ನೀರು ಬಳಸಿಕೊಳ್ಳಲಾಗುವುದು. ಇನ್ನು ಶಂಕರಲಿಂಗ ಯೋಜನೆಗೆ .67.40 ಕೋಟಿ ವೆಚ್ಚ ಅಂದಾಜಿಸಲಾಗಿದ್ದು ಹುಕ್ಕೇರಿ, ಜಾಬಾಪುರ, ಮಸರಗುಪ್ಪಿ, ಅರ್ಜುನವಾಡ, ಎಲಿಮುನ್ನೋಳಿ, ಗೌಡವಾಡದ ಸುಮಾರು 1200 ಹೆಕ್ಟೇರ್‌ ಪ್ರದೇಶ ನೀರಾವರಿಗೆ ಒಳಪಡಲಿದೆ. ಇದಕ್ಕೆ ಕೋಚರಿ ಬ್ರೀಜ್‌ನಿಂದ ನೀರು ಬಳಸಿಕೊಳ್ಳುವ ಯೋಜನೆ ರೂಪಿಸಲಾಗಿದೆ.

ಈಗಾಗಲೇ ತಾಲೂಕಿನಲ್ಲಿ ಇರುವ ಏತ ನೀರಾವರಿ, ಬ್ರೀಜ್‌ ಕಂ ಬಾಂದಾರ ಮತ್ತು ಬ್ಯಾರೇಜ್‌ನಿಂದ ಸಾವಿರಾರು ಹೆಕ್ಟೇರ್‌ ಪ್ರದೇಶಗಳಿಗೆ ನೀರುದೊಗಿಸುತ್ತಿವೆ. ಇದೀಗ ಈ ಎರಡು ಏತ ನೀರಾವರಿಯಿಂದ ನೀರಾವರಿ ಪ್ರದೇಶ ಮತ್ತಷ್ಟು ವಿಸ್ತಾರಗೊಂಡಂತಾಗುತ್ತದೆ. ಇದು ಕೃಷಿ ಚಟುವಟಿಕೆ, ಕುಡಿಯುವ ನೀರು, ಅಂತರ್ಜಲ ಮಟ್ಟಹೆಚ್ಚಳಕ್ಕೆ ಪ್ರಮುಖ ಪಾತ್ರ ವಹಿಸಲಿದೆ. ಅತಿಯಾದ ಮಳೆ ಹಾಗೂ ಪ್ರವಾಹದಂತಹ ಸನ್ನಿವೇಶದಲ್ಲಿ ಹಿರಣ್ಯಕೇಶಿ ನದಿಯಿಂದ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿತ್ತು. ಅಲ್ಲಿನ ನೀರು ತಡೆಹಿಡಿದು ನದಿ ತಟದಲ್ಲಿರುವ ರೈತರ ಜಮೀನುಗಳಿಗೆ ನೀರುಣಿಸುವುದು, ಅಂತರ್ಜಲ ಮಟ್ಟವೃದ್ಧಿಸುವ ಯೋಜನೆ ಇದಾಗಿದೆ. ಈ ಸಾಕಾರಕ್ಕೆ ಶ್ರಮಿಸಿದ ದಿವಂಗತ ಉಮೇಶ ಕತ್ತಿ, ಮಾಜಿ ಸಂಸದ ರಮೇಶ ಕತ್ತಿ ಸಹೋದರರಲ್ಲಿ ಈ ಭಾಗದ ರೈತರು ಆಧುನಿಕ ಭಗೀರಥರರನ್ನು ಕಾಣುತ್ತಿದ್ದಾರೆ.

Belagavi: ಅನೇಕರಿಗೆ ಅನ್ನದ ದಾರಿ ಮಾಡಿಕೊಟ್ಟವರು ಕಲ್ಯಾಣರಾವ ಮುಚಳಂಬಿ: ಡಾ.ಸಿದ್ಧರಾಮ ಮಹಾಸ್ವಾಮಿಗಳು

ಈ ಎರಡೂ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು ಸುಮಾರು .133 ಕೋಟಿಗಳ ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದ್ದು ಶೀಘ್ರದಲ್ಲಿ ಕಾಮಗಾರಿಗೆ ವಿದ್ಯುಕ್ತವಾಗಿ ಚಾಲನೆ ನೀಡಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಹಿಡಕಲ್‌ ಡ್ಯಾಮ್‌ ಜಿಆರ್‌ಬಿಸಿಸಿ ಉಪ ವಿಭಾಗ-13ರ ಎಇಇ ಅರವಿಂದ ಜಮಖಂಡಿ ತಿಳಿಸಿದ್ದಾರೆ.

ರೈತರಿಗೆ ಹಸಿರುಣಿಸುವ ನಿಟ್ಟಿನಲ್ಲಿ ಅಡವಿಸಿದ್ದೇಶ್ವರ ಮತ್ತು ಶಂಕರಲಿಂಗ ಏತ ನೀರಾವರಿ ಯೋಜನೆ ರೂಪಿಸಿದ್ದು ಈ ಭಾಗದಲ್ಲಿ ಹಸಿರು ಕ್ರಾಂತಿಯಾಗಲಿದೆ. ಈ ಯೋಜನೆಯೂ ಸೇರಿದಂತೆ ಸುಮಾರು .640 ಕೋಟಿಗಳ ವಿವಿಧ ಯೋಜನೆಗಳ ಅಡಿಗಲ್ಲು, ಶಿಲಾನ್ಯಾಸ ಮತ್ತು ಉದ್ಘಾಟನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗುವುದು ಅಂತ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಹಾಗೂ ಮಾಜಿ ಸಂಸದ ರಮೇಶ ಕತ್ತಿ ತಿಳಿಸಿದ್ದಾರೆ. 
 

click me!