ಇನ್ನೆರಡು ದಿನಗಳಲ್ಲಿ ಲಾಕ್‌ಡೌನ್‌ಗೆ ಸಿದ್ಧಗೊಳಿಸುತ್ತಿದೆ ಜಿಲ್ಲಾಡಳಿತ| ತಜ್ಞರ, ಪ್ರತಿನಿಧಿಗಳಿಂದಲೂ ಅಭಿಪ್ರಾಯ ಸಂಗ್ರಹ| ಒಂದು ವಾರ ಅಥವಾ 10 ದಿನದ ಲಾಕ್‌ಡೌನ್ ಮಾಡುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತ|
ಶಿವಕುಮಾರ ಕುಷ್ಟಗಿ
ಗದಗ(ಜು.16): ಬೆಂಬಿಡದ ಬೇತಾಳನಂತೆ ಕಾಡುತ್ತಿರುವ ಮಹಾಮಾರಿ ಕೊರೋನಾ ಸೋಂಕಿನ ಸಂಖ್ಯೆ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ ಸಾಗುತ್ತಿದ್ದು, ಪರಿಣಾಮಕಾರಿ ನಿಯಂತ್ರಣ ಮಾಡುವಲ್ಲಿ ಹರಸಾಹಸ ಪಡುತ್ತಿರುವ ಜಿಲ್ಲಾಡಳಿತ ಮತ್ತೊಮ್ಮೆ ಲಾಕ್‌ಡೌನ್‌ಗೆ ಮೊರೆ ಹೋಗುವ ಸಾಧ್ಯತೆ ನಿಚ್ಚಳವಾಗಿದೆ.
undefined
ಸೋಂಕನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಎಷ್ಟೇ ಕ್ರಮ ಕೈಗೊಂಡರೂ ನಿಯಂತ್ರಣ ಮಾತ್ರ ಸಾಧ್ಯವಾಗುತ್ತಿಲ್ಲ, ನಿಯಂತ್ರಣದ ಬದಲಾಗಿ ದಿನೇ ದಿನೇ ಸೋಂಕು ಹೆಚ್ಚಾಗುತ್ತಿದ್ದು, ಸೋಂಕು ಈಗಾಗಲೇ ಸಮುದಾಯಕ್ಕೆ ಹರಡಿದೆ ಎನ್ನುವ ಆತಂಕದ ಮಧ್ಯೆಯೇ ಜೀವನ ನಡೆಸುತ್ತಿದ್ದು, ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿ ತನ್ನ ವೇಗವನ್ನು ಹೆಚ್ಚಿಸಿದೆ. ಕೆಲವರಿಗೆ ಸೋಂಕು ಹೇಗೆ ಬಂತೆಂಬುದು ಸಹ ತಿಳಿಯದಂತಾಗಿದೆ.
ಗದಗ ಜಿಲ್ಲೆಯಲ್ಲಿ ಲಾಕ್‌ಡೌನ್: ಸಚಿವ ಸಿ.ಸಿ. ಪಾಟೀಲ್ ಹೇಳಿದ್ದೇನು..?
ಸಹಕಾರ ಸಿಗುತ್ತಿಲ್ಲ?:
ಸೋಂಕಿನ ಗಂಭೀರತೆ ಅರಿಯದ ಕೆಲವು ಅಪ್ರಜ್ಞಾವಂತರು ಸರ್ಕಾರ ಸೂಚಿಸಿರುವ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೇ ಇರುವುದು ಭೀತಿ ಇನ್ನೂ ಅಧಿಕವಾಗುವಂತೆ ಮಾಡಿದೆ. ಎಲ್ಲೆಂದರಲ್ಲಿ ಗುಂಪು ಸೇರುವ ದೃಶ್ಯಗಳು ಕಾಣಸಿಗುತ್ತಿವೆ. ನಗರದ ಪ್ರಮುಖ ಮೈದಾನಗಳಲ್ಲಿ ಸಂಜೆಯಾದರೆ ಸಾಕು ಗುಂಪು ಕಟ್ಟಿಕೊಂಡು ಕುಳಿತುಕೊಳ್ಳುತ್ತಾರೆ. ಬೆಳಗ್ಗೆಯೂ ವಾಯು ವಿಹಾರದ ನೆಪದಲ್ಲಿ ಸಾಮಾಜಿಕ ಅಂತರ ಮರೆಯುತ್ತಿದ್ದಾರೆ. ಇನ್ನು ಅಂಗಡಿ ಮುಗ್ಗಟ್ಟುಗಳಲ್ಲಿ, ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರದ ಅರ್ಥವೇ ತಿಳಿದಂತೆ ಜನರು ವರ್ತಿಸುತ್ತಿದ್ದಾರೆ. ಪರಿಣಾಮ ಸೋಂಕು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಆದರೆ, ಜಿಲ್ಲೆಯಲ್ಲಿ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೆಲ ಸಾರ್ವಜನಿಕರು ಸಹಕಾರ ನೀಡದೇ ಇರುವುದೇ ಮತ್ತೊಂದು ಲಾಕ್‌ಡೌನ್ ಅವಶ್ಯಕತೆಗೆ ಬಂದು ನಿಲ್ಲಿಸಿದೆ.
ವ್ಯಾಪಾರಿಗಳಿಗೆ, ಪೊಲೀಸರಿಗೆ ಸೋಂಕು:
ಸಧ್ಯ ಜಿಲ್ಲೆಯಲ್ಲಿ 400ರ ಸನಿಹಕ್ಕೆ ಸೋಂಕಿತರ ಸಂಖ್ಯೆ ಬಂದು ನಿಂತಿದೆ. ಆತಂಕಕಾರಿ ವಿಷಯವೆಂದರೆ ಬೀದಿಬದಿ ವ್ಯಾಪಾರಿಗಳಿಗೆ, ವೈದ್ಯರಿಗೆ ಹಾಗೂ ಪೊಲೀಸ್ ಸಿಬ್ಬಂದಿಗೂ ಸೋಂಕು ಬಿಟ್ಟಿಲ್ಲ. ಇದರಲ್ಲಿ ಕೆಲವರಿಗೆ ಸೋಂಕಿನ ಮೂಲವೇ ಪತ್ತೆಯೇ ಆಗಿಲ್ಲ. ಇದೆಲ್ಲ ನೋಡುತ್ತಿದ್ದರ ಇನ್ನೂ ಕೆಲವು ದಿನಗಳಲ್ಲಿ ಜಿಲ್ಲೆಯೂ ಬೇರೆ ಬೇರೆ ಜಿಲ್ಲೆಗಳಂತೆ ಸೋಂಕಿನ ತವರು ಮನೆಯಾದರೂ ಆಶ್ಚರ್ಯ ಪಡುವಂತಿಲ್ಲ.
ವೈದ್ಯಕೀಯ ಸಿಬ್ಬಂದಿ ಕೊರತೆ:
ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಡ್‌ಗಳು ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆ ಇಲ್ಲ. ಆದರೆ, ಸೋಂಕು ವ್ಯಾಪಕವಾಗಿ ಹರಡಿದರೆ ಸಮಸ್ಯೆ ಗಂಭೀರವಾಗುತ್ತದೆ. ಜಿಲ್ಲೆಯಲ್ಲಿ 1 ಸಾವಿರಕ್ಕೂ ಅಧಿಕ ಬೆಡ್‌ಗಳ ವ್ಯವಸ್ಥೆ ಇದೆ. ಆದರೆ ವೈದ್ಯರು, ದಾದಿಯರು ಸೇರಿದಂತೆ ಬೇಕಾದ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ. ಇದಲ್ಲದೇ ಸದ್ಯ 8 ಜನರು ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ವೇಳೆ ಹೆಚ್ಚಿನ ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಬಂದರೆ ಸಮಸ್ಯೆ ಮತ್ತಷ್ಟುಗಂಭೀರವಾಗಲಿದೆ.
ಇನ್ನೆರಡು ದಿನದಲ್ಲಿ ಲಾಕ್‌ಡೌನ್:
ಜಿಲ್ಲಾಡಳಿತ ಇನ್ನೆರಡು ದಿನಗಳಲ್ಲಿ ಶುಕ್ರವಾರದಿಂದ ಲಾಕ್‌ಡೌನ್ ಮಾಡುವ ಸಿದ್ಧತೆಯಲ್ಲಿದೆ, ಈ ಕುರಿತು ಈಗಾಗಲೇ ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ತಜ್ಞ ವೈದ್ಯರು, ಖಾಸಗಿ ಆಸ್ಪತ್ರೆಯ ವೈದ್ಯರು, ಜಿಮ್ಸ್‌ನ ವೈದ್ಯರು ಸಾಮಾಜಿಕ ಹೋರಾಟಗಾರರೊಂದಿಗೆ ಚರ್ಚಿಸಲಾಗಿದ್ದು, ಎಲ್ಲರಿಂದಲೂ ಒಂದು ವಾರ ಅಥವಾ 10 ದಿನದ ಲಾಕ್‌ಡೌನ್ ಮಾಡುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದು, ಇದಕ್ಕಾಗಿ ಜಿಲ್ಲಾಡಳಿತ ಅಂತಿಮ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎನ್ನುವುದನ್ನು ಮೂಲಗಳು ಖಚಿತ ಪಡಿಸಿವೆ.