* ಆಘಾತಕಾರಿ-ನಿರ್ಬಂಧಿತ ವಲಯದಲ್ಲೇ ನಿರಂತರ ಭದ್ರತಾ ವೈಫಲ್ಯಗಳು
* ಭದ್ರತೆಯಿದ್ದರೂ ಕೆಆರ್‌ಎಸ್ ಸುರಕ್ಷಿತವಾಗಿಲ್ಲ
* ಕೆಆರ್‌ಎಸ್‌ಗೆ ಅನಾಹುತ ಭೀತಿ
ಮಂಡ್ಯ ಮಂಜುನಾಥ
ಮಂಡ್ಯ(ಜು.15): ಒಂದೆಡೆ ಗಣಿ ಸ್ಫೋಟದಿಂದ ಕೆಆರ್‌ಎಸ್ ಅಸ್ತಿತ್ವಕ್ಕೆ ಅಪಾಯ ಎದುರಾಗಿದ್ದರೆ ಮತ್ತೊಂದು ಕಡೆ ಅಣೆಕಟ್ಟು ವ್ಯಾಪ್ತಿಯ ನಿರ್ಬಂಧಿತ ವಲಯದಲ್ಲಿ ನಿರಂತರವಾಗಿ ಭದ್ರತಾ ವೈಫಲ್ಯಗಳು ಮರುಕಳಿಸುತ್ತಿರುವುದು ಅಣೆಕಟ್ಟೆ ಎಷ್ಟು ಸುರಕ್ಷಿತ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳು ಮೂಡುವಂತೆ ಮಾಡಿವೆ.
undefined
ಕೆಆರ್‌ಎಸ್ ಅಣೆಕಟ್ಟೆಯ ಮೇಲೆ ಉಗ್ರರ ಕಣ್ಣಿರುವ ಕಾರಣದಿಂದ ಭದ್ರತೆಯ ಜವಾಬ್ದಾರಿಯನ್ನು ಕೈಗಾರಿಕಾ ಭದ್ರತಾ ಪಡೆಗೆ ನೀಡಲಾಗಿದ್ದರೂ ನಿರ್ಬಂಧಿತ ವಲಯದಲ್ಲೇ ಪದೇ ಪದೇ ಭದ್ರತಾ ಲೋಪಗಳು ಸಂಭವಿಸುತ್ತಿರುವುದು ಮತ್ತೊಂದು ರೀತಿಯ ಆತಂಕಕ್ಕೆ ಕಾರಣವಾಗಿದೆ.
ಕೈಗಾರಿಕಾ ಭದ್ರತಾ ಪಡೆಯ ಕಣ್ಗಾವಲಿನ ನಡುವೆಯೂ ಕೆಆರ್‌ಎಸ್ ಅಣೆಕಟ್ಟೆ ಮೇಲ್ಭಾಗದಲ್ಲಿ ನವ ವಧು-ವರರ ಫೋಟೋಶೂಟ್, ಹಿನ್ನೀರಿನೊಳಗೆ ಬೇಕಾಬಿಟ್ಟಿಯಾಗಿ ಕಾರು ಚಾಲನೆ, ಕೆಆರ್‌ಎಸ್ ಅಣೆಕಟ್ಟೆಯ ಮೇಲೆ ಯುವಕನೊಬ್ಬ ಪೊಲೀಸ್ ಅಧಿಕಾರಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಸರ್ಕಾರಿ ಪೊಲೀಸ್ ಜೀಪ್‌ನಲ್ಲಿ ಮೋಜಿನ ಸವಾರಿ, ಅಣೆಕಟ್ಟೆಯ ಮೇಲೆ ಡ್ರೋನ್ ಕ್ಯಾಮರಾ ಹಾರಿಸಿ ವಿಡಿಯೋ ಚಿತ್ರೀಕರಣ ಸೇರಿದಂತೆ ಇವೆಲ್ಲವೂ ಕೆಆರ್‌ಎಸ್ ಭದ್ರತಾ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ.
ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಸುಮಲತಾ ಭೇಟಿ; ಖಡಕ್ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬು!
ಕೆಆರ್‌ಎಸ್ ಹಾದಿಯಲ್ಲೇ ಸ್ಫೋಟಕಗಳ ಸಾಗಣೆ:
ಕೆಲವು ದಿನಗಳ ಹಿಂದೆ ಕೆಆರ್‌ಎಸ್ ಸಮೀಪದಲ್ಲೇ ಡಿಟೋನೇಟರ್ ಸೇರಿದಂತೆ ವಸ್ತುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಹಿಂದಿನಿಂದಲೂ ಹೊರ ರಾಜ್ಯಗಳಿಂದ ಗಣಿ ಪ್ರದೇಶಗಳಿಗೆ ಸ್ಫೋಟಕಗಳನ್ನು ಲಾರಿ ಮತ್ತಿತರ ವಾಹನಗಳಲ್ಲಿ ಸಾಗಿಸಲಾಗುತ್ತಿತ್ತು. ಅಪಾರ ಪ್ರಮಾಣದಲ್ಲಿ ಸ್ಫೋಟಕ ವಸ್ತುಗಳನ್ನು ಲಾರಿಗಳಲ್ಲಿ ಸಾಗಿಸಲಾಗುತ್ತಿದ್ದುದರ ಬಗ್ಗೆ 2018ರಲ್ಲಿ ಶ್ರೀರಂಗಪಟ್ಟಣ ಡಿವೈಎಸ್ಪಿಯಾಗಿದ್ದ ವಿಶ್ವನಾಥ್, ಜಿಲ್ಲಾ ಆರಕ್ಷಕ ಅಧೀಕ್ಷಕರಿಗೆ ಸಲ್ಲಿಸಿರುವ ಆರು ಪುಟಗಳ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದರು. ಇವು ಅಪಾಯಕಾರಿ ಬೆಳವಣಿಗೆಗಳಾಗಿವೆ.
ಜಿಲ್ಲೆಯಲ್ಲಿ ಗಣಿ ಗುತ್ತಿಗೆ ಪಡೆದಿರುವವ ಪೈಕಿ ಬಹುತೇಕರು ಸ್ಫೋಟಕ ಸಿಡಿಸುವುದಕ್ಕೆ ಅನುಮತಿಯನ್ನು ಪಡೆದುಕೊಂಡಿದ್ದಾರೆ. ಅವರೆಲ್ಲರೂ ಹೊರರಾಜ್ಯಗಳಿಂದ ಸ್ಫೋಟಕಗಳನ್ನು ವಾಹನಗಳಲ್ಲಿ ತರುತ್ತಿದ್ದಾರೆ. ಅವುಗಳನ್ನು ತಡೆಗಟ್ಟುವಲ್ಲಿ ಪೊಲೀಸರೂ ವಿಫಲರಾಗಿದ್ದಾರೆ. ಗಣಿ ಪ್ರದೇಶಗಳಲ್ಲಿ ನಿಷೇಧಿತ ಸ್ಫೋಟಕಗಳು ಬಳಕೆಯಾಗುತ್ತಿದ್ದರೂ ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯಿಂದ ಯಾವುದೇ ಕ್ರಮಗಳಾಗುತ್ತಿಲ್ಲ. ಇದು ದುರ್ದೈವದ ಸಂಗತಿಯಾಗಿದೆ.
ನಾಮ್ ಕೇ ವಾಸ್ತೆ ಚೆಕ್‌ಪೋಸ್ಟ್‌ಗಳು
ಅಕ್ರಮವಾಗಿ ಗಣಿ ಪ್ರದೇಶಗಳಿಂದ ಕಟ್ಟಡ ಸಾಮಗ್ರಿಗಳನ್ನು ಕೊಂಡೊಯ್ಯುವುದನ್ನು ತಡೆಯುವುದಕ್ಕೆ ತೆರೆಯಲಾಗಿರುವ ಚೆಕ್‌ಪೋಸ್ಟ್‌ಗಳು ನಾಮಕವಾಸ್ತೆಯಂತಿವೆ. ಇದುವರೆಗೂ ಕೇವಲ ಎರಡೇ ಎರಡು ಚೆಕ್‌ಪೋಸ್ಟ್‌ಗಳನ್ನಿಟ್ಟುಕೊಂಡು ವಿರುದ್ಧ ಹೋರಾಟ ನಡೆಸಲಾಗುತ್ತಿತ್ತು. ಬೇಬಿ ಬೆಟ್ಟದಲ್ಲಿ ಪೊಲೀಸ್ ತುಕಡಿ ಇದ್ದರೂ ಅಕ್ರಮವಾಗಿ ಗಣಿ ಸಾಮಗ್ರಿಗಳನ್ನು ಸಾಗಿಸುವುದನ್ನು ತಡೆಯಲಾಗಲೇ ಇಲ್ಲ. ಸ್ಫೋಟಕ ವಸ್ತುಗಳು ನಿರ್ಭಯವಾಗಿ ಅಣೆಕಟ್ಟೆಬಳಿಯೇ ಹಾದುಹೋದರೂ ತಡೆಯುವುದಕ್ಕೆ ಸಾಧ್ಯವಾಗದಿರುವುದು ಸುರಕ್ಷತೆ ವಿಚಾರದಲ್ಲಿ ಕೆಆರ್‌ಎಸ್ ಅಣೆಕಟ್ಟೆಗೆ ಒದಗಿರುವ ದುರ್ಗತಿಗೆ ಸಾಕ್ಷಿಯಾಗಿದೆ.
'ಹಳೆಯ ಸೇಡನ್ನು ಕುಮಾರಸ್ವಾಮಿ ಈಗ ತೀರಿಸಿಕೊಳ್ತಿದ್ದಾರೆ'
ಹೀಗೆ ಸ್ಫೋಟಕಗಳನ್ನು ಸಾಗಿಸುವ ಸಮಯದಲ್ಲಿ ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ಜಿಲಿಟಿನ್ ಕಡ್ಡಿಗಳು ಹಾಗೂ ಸ್ಫೋಟಕಗಳನ್ನು ತುಂಬಿದ್ದ ಲಾರಿಗಳ ಸ್ಫೋಟ ಪ್ರಕರಣಗಳು ಕಣ್ಮುಂದಿವೆ. ಇದರ ನಡುವೆ ಸ್ಫೋಟಕ ತುಂಬಿದ ವಾಹನಗಳು ಕೆಆರ್‌ಎಸ್ ದಾರಿಯಲ್ಲೇ ಸಂಚರಿಸುತ್ತಿರುವುದು ಮತ್ತೊಂದು ಅಪಾಯದ ಭೀತಿಯನ್ನು ತಂದೊಡ್ಡಿದಂತಾಗಿದೆ.
ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ
ಕಲ್ಲು ಗಣಿಗಾರಿಕೆಯಿಂದ ಜಿಲ್ಲೆಯ ಆರ್ಥಿಕ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟೆಗೆ ಗಂಡಾಂತರ ಎದುರಾಗುವುದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ, ಅರಣ್ಯ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಕಾರ್ಯವೈಖರಿಯೂ ಪ್ರಮುಖ ಕಾರಣವಾಗಿದೆ.
ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಿಯಮಬಾಹಿರವಾಗಿ ಅನುಮತಿ ನೀಡಿದ್ದಾರೆ. ಗಣಿಗಾರಿಕೆಗೆ ಗುತ್ತಿಗೆ ನೀಡಿರುವ ಸ್ಥಳದಲ್ಲಿ ಯಾವ ರೀತಿ ಗಣಿಗಾರಿಕೆ ನಡೆಯುತ್ತಿದೆ, ಸ್ಫೋಟಕಗಳ ಬಳಕೆ ಯಾವ ಪ್ರಮಾಣದಲ್ಲಿದೆ, ತೀವ್ರತೆ ಎಷ್ಟಿದೆ, ಅದರಿಂದ ಸಮೀಪದಲ್ಲೇ ಇರುವ ಅಣೆಕಟ್ಟು ಮೇಲೆ ಉಂಟಾಗಬಹುದಾದ ಪರಿಣಾಮಗಳೇನು ಎಂದು ಅರಿಯುವ ಸಣ್ಣದೊಂದು ಪ್ರಯತ್ನವನ್ನೂ ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳು ಎನಿಸಿಕೊಂಡವರು ನಡೆಸದೇ ಇರುವುದು ದೊಡ್ಡ ದುರಂತ.