ಧಾರವಾಡ ಜಿಲ್ಲೆಯಲ್ಲಿ ನಿತ್ಯ 2.5 ಟನ್‌ ಕೋವಿಡ್‌ ತ್ಯಾಜ್ಯ ಉತ್ಪಾದನೆ

By Kannadaprabha NewsFirst Published Jun 2, 2021, 1:32 PM IST
Highlights

* ಆಸ್ಪತ್ರೆ, ಸಿಸಿಸಿ, ಹೋಂ ಐಸೋಲೇಷನ್‌ನಲ್ಲಿನ ತ್ಯಾಜ್ಯ
* ರಿಯೋ ಗ್ರೀನ್‌ ಸಂಸ್ಥೆಯಿಂದ ವಿಲೇವಾರಿ
* ಸಂಪೂರ್ಣ ಸುಟ್ಟು ಬೂದಿ ಮಾಡಲಾಗುತ್ತೆ ತ್ಯಾಜ್ಯ
 

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜೂ.02): ಕೊರೋನಾ ಸೋಂಕು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಸೋಂಕು ನಿಯಂತ್ರಣದ ಜೊತೆಗೆ ಅದು ಹರಡದಂತೆ ತಡೆಯುವಲ್ಲಿ ತ್ಯಾಜ್ಯ ವಿಲೇವಾರಿಯೂ ಅಷ್ಟೇ ಮಹತ್ವ ಪಡೆದಿದೆ. ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ.

ಕೋವಿಡ್‌ ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬುತ್ತದೆ. ಸೋಂಕಿತರನ್ನು ಗುಣಮುಖರನ್ನಾಗಿಸುವುದರ ಜೊತೆಗೆ ಪ್ರತಿನಿತ್ಯ ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರ್‌ಗಳಿಂದ ಉತ್ಪಾದನೆಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ದೊಡ್ಡ ಸವಾಲಿನ ಕೆಲಸವೇ ಆಗಿದೆ.

ಜಿಲ್ಲೆಯಲ್ಲಿ ಬರೋಬ್ಬರಿ 2.5 ಟನ್‌ಗೂ ಅಧಿಕ ತ್ಯಾಜ್ಯ ಪ್ರತಿದಿನ ಸಂಗ್ರಹವಾಗುತ್ತದೆ. ಇದರಲ್ಲಿ ಹೆಚ್ಚಿನ ಪಾಲು ಕಿಮ್ಸ್‌ನದ್ದೇ. ಇಲ್ಲಿ ಸುಮಾರು 500 ಕೆಜಿಯಿಂದ 700 ಕೆಜಿಯವರೆಗೂ ತ್ಯಾಜ್ಯ ಸಂಗ್ರಹವಾಗುತ್ತದೆ. ಸೋಂಕಿತನ ಚಿಕಿತ್ಸೆಗೆ ಬಳಸಿದ ಪಿಪಿಇ ಕಿಟ್‌, ಸಿರೀಂಜ್‌, ಟೆಸ್ಟ್‌ ಕಿಟ್‌, ವಯಲ್ಸ್‌, ವ್ಯಾಕ್ಸಿನೇಷನ್‌ ಮಾಡಿದ ವಯಲ್ಸ್‌ ಸೇರಿದಂತೆ ವಿವಿಧ ಬಯೋ ಮೆಡಿಕಲ್‌ ವೆಸ್ಟ್‌.

ಹುಬ್ಬಳ್ಳಿ: ಕೊರೋನಾ ಸೋಂಕಿತರಿಗೆ ಊಟ ಮಾಡಿಸಿದ ಕಾಂಗ್ರೆಸ್‌ ನಾಯಕ

ಮೊದಲು ಅಂದರೆ ಮಾರ್ಚ್‌, ಏಪ್ರಿಲ್‌ನಲ್ಲಿ ತುಸು ಕಡಿಮೆ ತ್ಯಾಜ್ಯ ಸಂಗ್ರಹವಾಗುತ್ತಿತ್ತು. ಅಂದರೆ 1.5 ಟನ್‌ವರೆಗೂ ತ್ಯಾಜ್ಯ ಸಂಗ್ರಹವಾಗುತ್ತಿತ್ತು. ಆದರೆ ಇದೀಗ ಒಂದು ತಿಂಗಳಿಂದ 2.5 ಟನ್‌ಗೂ ಅಧಿಕ ತ್ಯಾಜ್ಯ ಸಂಗ್ರಹವಾಗುತ್ತಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸುತ್ತವೆ.

ಸಂಗ್ರಹ, ವಿಲೇವಾರಿ

ಧಾರವಾಡ ಜಿಲ್ಲೆಯಲ್ಲಿ ‘ಬಯೋ ಮೆಡಿಕಲ್‌ ವೆಸ್ಟ್‌ ಮ್ಯಾನೇಜ್‌’ ಮಾಡಲು ‘ರಿಯೋ ಗ್ರೀನ್‌ ಎನ್ವೈರ್‌’ ಎಂಬ ಸಂಸ್ಥೆಗೆ ಗುತ್ತಿಗೆ ನೀಡಿದೆ. ಈ ಸಂಸ್ಥೆಯ ಸಿಬ್ಬಂದಿಯೇ ಆಸ್ಪತ್ರೆಗಳು, ಕೋವಿಡ್‌ ಕೇರ್‌ ಸೆಂಟರ್‌, ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರ ಮನೆಗಳಿಗೆ ತೆರಳಿ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಬಳಿಕ ಅದನ್ನು ತಾರಿಹಾಳದಲ್ಲಿರುವ ಸಂಸ್ಥೆಯ ಫ್ಯಾಕ್ಟರಿಗೆ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡಲಾಗುತ್ತಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮದಂತೆ ಕೋವಿಡ್‌ನ ತ್ಯಾಜ್ಯವನ್ನೆಲ್ಲ ಸುಟ್ಟು ಬೂದಿ ಮಾಡಲಾಗುತ್ತಿದೆ. ಇದಕ್ಕಾಗಿ 800 ಡಿಗ್ರಿ ಸೆಲ್ಸಿಯಸ್‌ನಿಂದ 1200 ಡಿಗ್ರಿ ಸೆಲ್ಸಿಯಸ್‌ನಲ್ಲಿ ಈ ತ್ಯಾಜ್ಯವನ್ನೆಲ್ಲ ಸುಡಲಾಗುತ್ತದೆ. ಬಳಿಕ ಅದರ ಬೂದಿಯನ್ನು ಬೆಂಗಳೂರಿನ ಹಜಾಡ್ಸ್‌ ವೆಸ್ಟ್‌ ಟ್ರಿಟ್‌ಮೆಂಟ್‌ಗಾಗಿ ಕಳುಹಿಸಲಾಗುತ್ತಿದೆ. ವಿಲೇವಾರಿಗೆ ಸುಮಾರು 15 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದರೆ, ಸಂಗ್ರಹಕ್ಕೆ 15-20 ಜನ ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿದ್ದಾರೆ. ತ್ಯಾಜ್ಯ ಸಂಗ್ರಹಿಸಲು, ಅದನ್ನು ವಿಲೇವಾರಿ ಮಾಡುವ ಸಿಬ್ಬಂದಿಯೂ ಪಿಪಿಇ ಕಿಟ್‌ ಧರಿಸಿ ಸಂಗ್ರಹಿಸಬೇಕು.

ಇಂದು ವಿಶ್ವ ಬೈಸಿಕಲ್‌ ದಿನ: ಕೊರೋನಾ ಸೋಂಕಿನಿಂದ ಪಾರಾಗಲು ಸೈಕಲ್‌ಗೆ ಮೊರೆ!

ನಮಗೂ ಭಯ ಇರುತ್ತೆ:

ನಾವು ಪಿಪಿಇ ಕಿಟ್‌ ಹಾಕಿಕೊಂಡೇ ಕೆಲಸ ನಿರ್ವಹಿಸುತ್ತೇವೆ. ಆದರೂ ಎಲ್ಲಿ ಸೋಂಕು ತಗುಲುತ್ತೋ ಎಂಬ ಆತಂಕ, ಭಯ ಇರುತ್ತದೆ. ಇದಕ್ಕಾಗಿ ನಾವು ಎಚ್ಚರಿಕೆಯಿಂದಲೇ ಕೆಲಸ ನಿರ್ವಹಿಸುತ್ತೇವೆ. ಸಾಕಷ್ಟುಮುಂಜಾಗ್ರತೆ ಕೈಗೊಂಡಿರುತ್ತವೆ ಎಂದು ರಿಯೋ ಗ್ರೀನ್‌ ಎನ್ವೈರ್‌ ಸಂಸ್ಥೆಯ ಸಿಬ್ಬಂದಿ ತಿಳಿಸುತ್ತಾರೆ.

ಕೋವಿಡ್‌ ಚಿಕಿತ್ಸೆಯಿಂದ ಕಳೆದ ಒಂದು ತಿಂಗಳಿಂದ 2.5 ಟನ್‌ಗೂ ಅಧಿಕ ತ್ಯಾಜ್ಯ ಉತ್ಪಾದನೆ​ಯಾಗು​ತ್ತಿದೆ. ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಹೋಂ ಐಸೋಲೇಷನ್‌ನಲ್ಲಿ​ ಇರು​ವ​ವ​ರಿಂದ ನಮ್ಮ ಸಿಬ್ಬಂದಿಯೇ ಸಂಗ್ರಹಿಸಿ ನಂತರ ಸರ್ಕಾರದ ನಿಯಮದಂತೆ ಅದನ್ನು ವಿಲೇವಾರಿ ಮಾಡುತ್ತೇವೆ ಎಂದು ರಿಯೋ ಗ್ರೀನ್‌ ಎನ್ವೈರ್‌ ಸಂಸ್ಥೆ ಮಾಲೀಕ ಅನಿರುದ್ಧ ಬೆಂಗೇರಿ ತಿಳಿಸಿದ್ದಾರೆ. 

ರಿಯೋ ಗ್ರೀನ್‌ ಎನ್ವೈರ್‌ ಎಂಬ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ. ಆ ಸಂಸ್ಥೆಯೇ ತ್ಯಾಜ್ಯವನ್ನೆಲ್ಲ ವಿಲೇವಾರಿ ಮಾಡುತ್ತದೆ. ಅತ್ಯಂತ ವೈಜ್ಞಾನಿಕ ರೀತಿಯಲ್ಲೇ ವಿಲೇವಾರಿ ಮಾಡಲಾಗುತ್ತಿದೆ ಎಂದು ಪಾಲಿಕೆ ಸಹಾಯಕ ಆಯುಕ್ತ ಸಮೀರ ಮುಲ್ಲಾ ಹೇಳಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!