* ಸೈಕ್ಲಿಂಗ್‌ ಆರೋಗ್ಯಕರ ಶ್ವಾಸಕೋಶ ರೂಪಿಸುತ್ತದೆ* ಬಡವರ ಸಾರಿಗೆ ಈಗ ಎಲ್ಲರಿಗೂ ಅಚ್ಚುಮೆಚ್ಚು* ಕೊರೋನಾ ಅವಧಿಯಲ್ಲಿ ಅಧಿಕ ಸೈಕಲ್‌ ಸೇಲ್‌ 

ಹುಬ್ಬಳ್ಳಿ(ಜೂ.02): ಕೊರೋನಾ ಮಹಾಮಾರಿ ಹಾವಳಿಯಲ್ಲಿ ಬೈಸಿಕಲ್‌ನ ಟ್ರಿಣ್‌ ಟ್ರಿಣ್‌ ಬೆಲ್‌ ಸದ್ದು ಜಗತ್ತಿನಾದ್ಯಂತ ಬಲು ಜೋರಾಗಿ ಕೇಳಿಸುತ್ತಿದೆ! ಸದೃಢ ಶ್ವಾಸಕೋಶ ಕೊರೋನಾ ವೈರಸ್‌ ಅನ್ನು ಹಿಮ್ಮೆಟ್ಟಿಸುತ್ತದೆ ಎನ್ನುವ ಸತ್ಯ ಗೊತ್ತಾಗುತ್ತಿದ್ದಂತೆ ಬಡವರು, ಶ್ರೀಮಂತರು ಎನ್ನುವ ಭೇದ ಬದಿಗಿಟ್ಟು ಜನತೆ ಬೈಸಿಕಲ್‌ ತುಳಿಯುತ್ತಿದ್ದಾರೆ.

ಸೈಕಲ್‌ ರೈಡ್ ವೈರಸ್‌ ಸೋಂಕಿಗೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಹಿಂದೆ ಮನೆಗಳಲ್ಲಿ ಎಲ್ಲಾ ವಯೋಮಾನದರು ಬಳಸುವ ಏಕೈಕ ಸಾಧನವಾಗಿದ್ದ ಸೈಕಲ್‌ ಸ್ಥಾನವನ್ನು ಬೈಕ್‌, ಸ್ಕೂಟರ್‌ ಮತ್ತು ಕಾರುಗಳು ತುಂಬಿದ್ದವು. ಆದರೆ, ಇದೀಗ ಕಳೆದ ಒಂದು ವರ್ಷದಿಂದ ಮತ್ತೊಮ್ಮೆ ಆ ದಿನಗಳು ಮರಳಿವೆ. ಎಲ್ಲರೂ ಸೈಕಲ್‌, ಬೈಸಿಕಲ್‌ ಎಂದು ಜಪ ಮಾಡುತ್ತಿದ್ದಾರೆ. ಮನೆಯಲ್ಲಿ ಕಾರು ಇದ್ದವರೂ ಸಹ ಸೈಕಲ್‌ ಏರುತ್ತಿದ್ದಾರೆ.

ಕೊರೋನಾದಿಂದ ಪಾರಾಗಲು:

ದೈಹಿಕ ಫಿಟ್ನೆಸ್‌, ಮಾನಸಿಕ ಆರೋಗ್ಯ, ಹೃದಯ ಮತ್ತು ಆರೋಗ್ಯಕರ ಶ್ವಾಸಕೋಶ ಹೊಂದಿ ಕೊರೋನಾದಿಂದ ಪಾರಾಗಲು ಸಹಾಯವಾಗುತ್ತಿದೆ ಈ ಬೈಸಿಕಲ್‌. ಮನೆಯಿಂದಲೇ ಕೆಲಸ ಮಾಡುವವರು (ವರ್ಕ್ ಫ್ರಮ್‌ ಹೋಮ್‌ ) ಸೇರಿದಂತೆ ಪ್ರತಿ ತಿಂಗಳು ಲಕ್ಷ ಲಕ್ಷ ಗಳಿಸುವ ಟೆಕ್ಕಿಗಳು ಕೂಡ, ಉತ್ತಮ ಆರೋಗ್ಯಕ್ಕಾಗಿ ಸೈಕಲ್‌ ತುಳಿಯುತ್ತಿದ್ದಾರೆ. ದಿನವಿಡೀ ಲವಲವಿಕೆಯಿಂದ ಇರಲು ಈ ಸೈಕ್ಲಿಂಗ್‌ ಅತ್ಯುತ್ತಮ ವ್ಯಾಯಾಮ ಎನ್ನುವುದು ತಜ್ಞರ ಅಭಿಪ್ರಾಯ.

ಲಾಕ್‌ಡೌನ್‌ ಎಫೆಕ್ಟ್‌: ತುತ್ತು ಅನ್ನಕ್ಕಾಗಿ ಸರದಿಯಲ್ಲಿ ನಿಂತ ಕಾರ್ಮಿಕರು

ಇದು ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಶ್ವಾಸಕೋಶವನ್ನು ಆರೋಗ್ಯವಾಗಿಡುತ್ತದೆ. ಇದರಿಂದ ಪಕ್ಕೆಲುಬು ಮತ್ತು ಡಯಾಫ್ರಾಮ್‌ ಸುತ್ತಲಿರುವ ಸ್ನಾಯುವಿನ ಶಕ್ತಿಯನ್ನು ಕಾಪಾಡಿಕೊಳ್ಳಲು ಸುಲಭ ಮಾರ್ಗ.
ದೇಹದ ಎಲ್ಲಾ ಸ್ನಾಯುಗಳಿಗೆ ಕಸುವು ನೀಡುವ ಕೆಲವು ಸರಳ ವ್ಯಾಯಾಮಗಳೆಂದರೆ ನಡಿಗೆ ಮತ್ತು ಸೈಕ್ಲಿಂಗ್‌. ಇದನ್ನು ಕಡಿಮೆ ಪ್ರಾಬಲ್ಯದ ಏರೋಬಿಕ್‌ ವ್ಯಾಯಾಮವೆಂದೂ ಕರೆಯುತ್ತಾರೆ.

ಕೊರೋನಾ ಲಾಕ್ಡೌನ್‌ ಪರಿಣಾಮ ಜನರಲ್ಲಿ ಆರೋಗ್ಯದ ಕಾಳಜಿ ಹೆಚ್ಚಾಗಿದೆ. ಲಾಕ್‌ಡೌನ್‌ ವೇಳೆ ಜಿಮ್‌, ಈಜುಕೊಳ ಬಂದ್‌ ಆಗಿದ್ದರಿಂದ ಬೆಳ್ಳಂ ಬೆಳಿಗ್ಗೆ ಎದ್ದು ಸೈಕಲ್‌ ತುಳಿಯುತ್ತಿದ್ದಾರೆ. ವರ್ಕ್ ಫ್ರಂ ಹೋಮ್‌ ಪ್ರವೃತ್ತಿಯಿಂದಾಗಿ ಬೇಸತ್ತವರು ಇದೀಗ ಸೈಕಲ್‌ ಮೊರೆ ಹೋಗಿದ್ದಾರೆ.

ಚೇತರಿಸಿದ ಸೈಕಲ್‌ ಉದ್ಯಮ:

ಕೊರೋನಾ ವಕ್ಕರಿಸಿದ ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರತದಲ್ಲಿ ಸೈಕಲ್‌ ಮಾರಾಟ ದ್ವಿಗುಣಗೊಂಡಿದೆ. ಸೈಕಲ್‌ ಮಾರಾಟದಲ್ಲಿ ಶೇ.100ರಷ್ಟುಬೆಳವಣಿಗೆ ದಾಖಲಿಸಿದೆ. ಮಾಚ್‌ರ್‍ ಅಂತ್ಯದ ವೇಳೆಗೆ ಕರ್ನಾಟಕದಲ್ಲಿ 11 ಲಕ್ಷ ಸೈಕಲ್‌ಗಳು ಮಾರಾಟವಾಗಿವೆ. ಮಾರಾಟ ಇನ್ನೂ ಏರುಗತಿಯಲ್ಲಿದೆ. ನಾನಾ ಭಾಗಗಳಲ್ಲಿ ಜನರು ತಮ್ಮ ನೆಚ್ಚಿನ ಸೈಕಲ್‌ ಖರೀದಿಗಾಗಿ ಆನ್‌ ಲೈನ್‌ ನಲ್ಲಿ ಬುಕ್‌ ಮಾಡಿ ವಾರಗಟ್ಟಲೇ ಕಾಯ್ತಿದ್ದಾರೆ ಎನ್ನುವ ಮಾಹಿತಿ ಇದೆ.

ಎರಡು ಚಕ್ರಗಳ ವಾಹನವನ್ನು ಇಂಗ್ಲಿಷಿನಲ್ಲಿ ಬೈ-ಸೈಕಲ್‌ ಎನ್ನುತ್ತಾರೆ. ಬೈಸಿಕಲ್‌ ಮಕ್ಕಳ ಮೊದಲ ವಾಹನ. 19ನೇ ಶತಮಾನದ ಕೊನೆಯಲ್ಲಿ ಬೈಸಿಕಲ್‌ ಭಾರತಕ್ಕೆ ಬಂದ ಹೊಸದರಲ್ಲಿ ಅದನ್ನು ಕನ್ನಡಿಗರು ‘ಬೀಸೆಕಲ್ಲು’ ಎಂದು ಕರೆಯುತ್ತಿದ್ದರು. ಅಂದಿಗೆ ಅದು ನವನಾಗರಿಕತೆಯ ಸಂಕೇತವಾಗಿತ್ತು. ‘ಸೈಕಲ್‌ ಬಡವರ ಸಾರಿಗೆ’ ಎಂಬ ಅಭಿಪ್ರಾಯ ಈಗಲೂ ಜನಜನಿತ.

ಸೈಕಲ್‌ ಸವಾರಿ ಮಾಡುವುದರಿಂದ ಮೆದುಳಿನಲ್ಲಿ ಸಿರೊಟೋನಿನ್‌, ಡೋಪಮೈನ್‌ ಮತ್ತು ಫೀನಲೆಥೈಲಮೈನ್‌ ಮುಂತಾದ ರಾಸಾಯನಿಕಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿ, ಖಿನ್ನತೆಯಿಂದ ದೂರವಾಗಿಸಿ ಸಂತಸದಿಂದ ಇರಿಸುತ್ತದೆ ಎಂದು ಬೆಂಗಳೂರಿನ ಕೆ ಜಿ ಹಳ್ಳಿಯ ಔಷಧ ಮತ್ತು ವ್ಯಾಯಾಮ ತಜ್ಞ ಕೆ ಆರ್‌. ರಾಕೇಶ್‌ ತಿಳಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona