ಕರೇಜ್‌: ಗುಹಾಂತರ ಜಲಮಾರ್ಗಕ್ಕೆ ಬಂತು ಕಾಂತಿ

Published : Jul 14, 2023, 10:02 PM IST
ಕರೇಜ್‌: ಗುಹಾಂತರ ಜಲಮಾರ್ಗಕ್ಕೆ ಬಂತು ಕಾಂತಿ

ಸಾರಾಂಶ

ಹೈದ್ರಾಬಾದ್‌ ಐಐಟಿ ತಂಡಕ್ಕೆ ಸಂಶೋಧನಾ ವರದಿ ಸಲ್ಲಿಸಲು ಕೇಂದ್ರ ಸೂಚನೆ, ಕಾಲುವೆ ಸದ್ಯದ ಸ್ಥಿತಿಗತಿಗಾಗಿ ಡ್ರೋಣ್‌, ಸ್ಯಾಟಲೈಟ್‌ ಸರ್ವೆ, ಗುಹಾಂತರ ಜಲಮಾರ್ಗ ಕರೇಜ್‌ ಪುನಶ್ಚೇತನದ ಪ್ರಯತ್ನ ಆರಂಭ. 

ಅಪ್ಪಾರಾವ್‌ ಸೌದಿ

ಬೀದರ್‌(ಜು.14): ಇತಿಹಾಸದ ಪುಟಗಳಿಗೆ ಮಾತ್ರ ಸೀಮಿತ ಎಂಬಂತಾಗಿದ್ದ ಐತಿಹಾಸಿಕ ಗುಹಾಂತರ ಜಲಮಾರ್ಗ ಕರೇಜ್‌ ಪುನಶ್ಚೇತನದ ಪ್ರಯತ್ನಗಳು ಚಿಗುರೊಡೆದಿದ್ದು ಹೈದ್ರಾಬಾದ್‌ ಐಐಟಿಯ ತಂಡಕ್ಕೆ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಕರೇಜ್‌ ಅಧ್ಯಯನ ಹಾಗೂ ಅದರ ಪುನಶ್ಚೇತನಕ್ಕೆ ಇರುವ ಅವಕಾಶಗಳ ಕುರಿತಂತೆ ಸಂಶೋಧನಾ ವರದಿ ಸಲ್ಲಿಸಲು ಸೂಚಿಸಿದೆ.

ಕರೇಜ್‌ ಉದ್ದ, ಅಗಲ, ಆಳ ಹಾಗೂ ಅದರ ಗಟ್ಟಿತನದ ಸಾಮರ್ಥ್ಯದೊಂದಿಗೆ ಸದ್ಯದ ಪರಿಸ್ಥಿತಿಯಲ್ಲಿ ಕಾಲುವೆ ಎಷ್ಟರ ಮಟ್ಟಿಗೆ ಹಾಳಾಗಿದೆ, ಅದರ ಪುನಶ್ಚೇತನಕ್ಕೆ ಇರುವ ಅವಕಾಶಗಳ ಅಧ್ಯಯನ ನಡೆಸಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಚಿವಾಲಯವು ಹೈದ್ರಾಬಾದ್‌ ಐಐಟಿಯ ತಂಡಕ್ಕೆ ಸೂಚಿಸಿದ್ದು ಅದರಂತೆ ತಂಡ ಬೀದರ್‌ ಕರೇಜ್‌ಗೆ ಭೇಟಿ ನೀಡಿ ಅಧ್ಯಯನ ಆರಂಭಿಸಿದೆ.

ಖಾಲಿ ಡಬ್ಬ ಹೆಚ್ಚು ಶಬ್ಧ ಮಾಡತ್ತೆ: ಖೂಬಾ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟು

ಕರೇಜ್‌ ಕಾಲುವೆ ಸದ್ಯದ ಸ್ಥಿತಿಗತಿಯ ಕುರಿತಂತೆ ಡ್ರೋಣ್‌, ಸ್ಯಾಟಲೈಟ್‌ ಮೂಲಕ ಸರ್ವೆ ಮಾಡಿ ಸಂಶೋಧನಾ ವರದಿಯನ್ನು ನೀಡಿದ ನಂತರ ಕರೇಜ್‌ ಪುನಶ್ಚೇತನ ಕುರಿತಂತೆಯೂ ತಂಡ ವರದಿ ನೀಡಲಿದೆ. ತದನಂತರ ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಅನುದಾನ ನಿಗದಿಯಾಗಬಹುದು.

ಕರೇಜ್‌ ಅಂದರೆ ಏನು?:

ಮಳೆಗಾಲದಲ್ಲಿ ನೀರು ಗಟ್ಟಿನೆಲದಲ್ಲಿ ಇಂಗುತ್ತದೆ. ನಂತರ ಆ ನೀರು ನೆಲದಾಳದಲ್ಲಿ ಝರಿ ರೂಪ ಪಡೆಯುತ್ತದೆ. ಅಂತಹ ತಾಣವನ್ನು ಗುರುತಿಸಿ, ನೀರಿನ ಸಹಜ ಧಾರೆಯನ್ನು ಅನುಸರಿಸುತ್ತ ವಿರುದ್ಧ ದಿಕ್ಕಿನಲ್ಲಿ ಕೊರೆಯಲಾದ ಸುರಂಗವೇ ಕರೇಜ್‌. ಇದು ಅಲ್ಲಲ್ಲಿ ಬಾವಿಗಳ ಈ ಸಂಪರ್ಕಕ್ಕೆ ತೆರೆದುಕೊಳ್ಳುತ್ತದೆ. ಇದು ವಿಶ್ವದ ಅದ್ಭುತ ಜಲ ಮಾರ್ಗವೆಂಬ ಖ್ಯಾತಿಯನ್ನೂ ಗಳಿಸಿದೆ.

ಈ ಜಲಮಾರ್ಗವನ್ನು ಕಳೆದ ಒಂದೂವರೆ ದಶಕದಿಂದ ಜಿಲ್ಲಾಡಳಿತದ ಸಹಕಾರದಲ್ಲಿ ಪುನಚ್ಛೇತನಗೊಳಿಸಿದ್ದರ ಪರಿಣಾಮ, ಗುಹಾಂತರ ಜಲ ಮಾರ್ಗಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿಕೊಂಡಿದೆ. ಸರ್ಕಾರದಿಂದ ಕೋಟ್ಯಂತರ ರುಪಾಯಿ ಅನುದಾನ ಬಂದಿದ್ದರೂ ಸೂಕ್ತ ಅನುಷ್ಠಾನದ ಕೊರತೆಯಿಂದ ಮತ್ತೆ ಪಾಳು ಬಿದ್ದಿತ್ತು.

ಕರೇಜ್‌ ಪತ್ತೆ ಮಾಡಿದವರಾರ‍ಯರು?:

ಹೈದ್ರಾಬಾದ್‌ ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಗುಲಾಂ ಯಜ್ದಾನಿ 1918ರಲ್ಲಿ ತಮ್ಮ ‘ಬೀದರ್‌ ಇಟ್ಸ್‌ ಹಿಸ್ಟರಿ ಆ್ಯಂಡ್‌ ಮಾನ್ಯುಮೆಂಟ್‌’ ಪುಸ್ತಕದಲ್ಲಿ ಈ ಕರೇಜ್‌ ವ್ಯವಸ್ಥೆ ಪ್ರಸ್ತಾಪಿಸಿದ್ದರು. ಇದು ಬಹಿರಂಗವಾಗುತ್ತಿದ್ದಂತೆ ದಶಕಗಳ ಹಿಂದೆ ಅಂದಿನ ಸರ್ಕಾರದ ಕಣ್ತೆರೆಸಿತ್ತು. ಇದೀಗ ಕೇಂದ್ರದ ಈ ನಡೆ ಫಲಪ್ರದವಾದಲ್ಲಿ ಬೀದರ್‌ ಅದ್ಭುತ ಪ್ರವಾಸಿ ತಾಣಗಳನ್ನು ಹೊಂದಿರುವ ಜಿಲ್ಲೆಯ ಪಟ್ಟಿಯಲ್ಲಿ ಸೇರಿಕೊಳ್ಳಲಿದೆ. ಅದಕ್ಕಾಗಿ ರಾಜ್ಯ ಸರ್ಕಾರವಷ್ಟೇ ಅಲ್ಲ ಸ್ಥಳೀಯರೂ ಐಐಟಿಯ ಈ ತಂಡಕ್ಕೆ ಅಗತ್ಯ ಸಹಕಾರ ಹಾಗೂ ನೆರವು ನೀಡಬೇಕಿದೆ.

ಇದು ಎಲ್ಲಿದೆ?

ಕರೇಜ್‌ ವ್ಯವಸ್ಥೆ ಇಲ್ಲಿನ ನೌಬಾದ್‌ನ ಸಿದ್ದೇಶ್ವರ ಮಂದಿರದ ಬಳಿಯಿರುವ ಐತಿಹಾಸಿಕ ಬಾವಿಯೊಂದರಿಂದ ಆರಂಭವಾಗಿ ಅಲಿಯಾಬಾದ್‌ ಗುಡ್ಡದ ತಗ್ಗು ಪ್ರದೇಶದವರೆಗೆ ಸುಮಾರು 2ಕಿ.ಮೀ. ಉದ್ದವಿದೆ. ಇದನ್ನು ಬಹಮನಿ ಅರಸರ ಕಾಲದಲ್ಲಿ ನಿರ್ಮಿಸಲಾಗಿದ್ದು ಎಂದು ಅಂದಾಜಿಸಲಾಗಿದೆ. ಈ ಗುಹಾಂತರ ಜಲ ಮಾರ್ಗದುದ್ದಕ್ಕೂ ಒಂದಕ್ಕೊಂದು ಸಂಪರ್ಕಗೊಂಡ ಬಾವಿಗಳಿವೆ. ಮಾರ್ಗದುದ್ದಕ್ಕೂ ಗಾಳಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.

ಸುಳ್ಳಿನ ಬಜಾರಲ್ಲಿ ಖಂಡ್ರೆ ದೋಖಾ ಅಂಗಡಿ ತೆಗೆದಾರ: ಕೇಂದ್ರ ಸಚಿವ ಭಗವಂತ ಖೂಬಾ

ಕರೇಜ್‌ ಕುರಿತಾಗಿ ವೈಜ್ಞಾನಿಕ ಸಂಶೋಧನಾ ಕಾರ್ಯವನ್ನು ಕೈಗೆತ್ತಿಕೊಂಡಿರುವ ಹೈದ್ರಾಬಾದ್‌ ಐಐಟಿಯ ತಂಡ ಜಿಲ್ಲೆಗೆ ಭೇಟಿ ನೀಡಿ ಕರೇಜ್‌ ಬಗ್ಗೆ ಅಧ್ಯಯನ ನಡೆಸಲಿ​ದೆ. ಅಲ್ಲದೆ, ಇತ್ತೀಚೆಗೆ ಐಐಟಿ ಈ ತಂಡ ತಮ್ಮ​ನ್ನು ಭೇಟಿ ​ಮಾಡಿದ್ದು ಅವರಿಗೆ ಅಗತ್ಯ ಮಾಹಿತಿ ಹಾಗೂ ಸಹಕಾರ ನೀಡಲು ಅಧಿ​ಕಾ​ರಿ​ಗ​ಳಿಗೆ ಸೂಚಿ​ಸ​ಲಾ​ಗಿ​ದೆ. ಸಂಶೋಧನೆಗಳ ನಂತರ ನೀಡುವ ವರದಿಯನ್ನಾಧರಿಸಿ ಕರೇಜ್‌ ಪುನಶ್ಚೇತನ ಕಾರ್ಯ ನಡೆಯುತ್ತದೆ ಅಂತ ಬೀದರ್‌ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದ್ದಾರೆ.  

ಇಂಥದ್ದೊಂದು ಅದ್ಭುತ ವ್ಯವಸ್ಥೆ ಜಿಲ್ಲೆಯನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಅಷ್ಟೇ ಅಲ್ಲ ಕರೇಜ್‌ ಜಲಮಾರ್ಗಗಳು ಅಂತರ್ಜಲ ಮಟ್ಟಹೆಚ್ಚಳಕ್ಕೂ ಸಹಕಾರಿಯಾಗಲಿದೆ. ಕರೇಜ್‌ ಪುನಶ್ಚೇತನ ಕುರಿತಂತೆ ಕಳೆದ ಒಂದೂವರೆ ದಶಕದಿಂದ ಟೀಮ್‌ ಯುವಾ ಸಕ್ರೀಯವಾಗಿ ಭಾಗಿಯಾಗಿದ್ದು, ಇದೀಗ ಕೇಂದ್ರ ಸರ್ಕಾರ ಕರೇಜ್‌ ಅಧ್ಯಯನಕ್ಕೆ ಯೋಜನೆ ರೂಪಿಸಿರುವ ಅತ್ಯಂತ ಹರ್ಷ ತಂದಿದೆ ಅಂತ ಬೀದರ್‌ ಟೀಮ್‌ ಯುವಾ ಸಂಯೋಜಕ ವಿನಯ ಮಾಳಗೆ ತಿಳಿಸಿದ್ದಾರೆ. 

PREV
Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!