ಅಪಾರ ನೀರು ಪೋಲಾದರೂ ಕಾಳಜಿ ತೋರದ ಸರ್ಕಾರ| ನೀರಾವರಿ ನಿಗಮದ ಅಲ್ಪ ಅನುದಾನದಲ್ಲಿ ವಿದ್ಯುತ್ ಬಿಲ್, ಕಾಲುವೆ ಗೇಟ್ ದುರಸ್ತಿಗೆ ಬಳಕೆ| ಬಳ್ಳಾರಿ ಜಿಲ್ಲೆಯ ಬಲದಂಡೆ ಭಾಗದಲ್ಲಿ 35791 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಈ ಯೋಜನೆಯ ಕಾಲುವೆಗಳು ಮಾತ್ರ ದುರಸ್ತಿ ಭಾಗ್ಯ ಕಂಡಿಲ್ಲ|
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ(ಡಿ.28): ಸಿಂಗಟಾಲೂರು ಏತ ನೀರಾವರಿ ಯೋಜನೆ ರೈತರ ಜಮೀನುಗಳಲ್ಲಿರುವ ಕಾಲುವೆಗಳು ಸಾಕಷ್ಟು ಕಡೆಗಳಲ್ಲಿ ಕಿತ್ತು ಹೋಗಿ ಅಪಾರ ಪ್ರಮಾಣದಲ್ಲಿ ಜೀವಜಲ ಪೋಲಾಗುತ್ತಿದ್ದರೂ, ಸರ್ಕಾರ ಮಾತ್ರ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ.
ಹೌದು, ಬಳ್ಳಾರಿ, ಕೊಪ್ಪಳ, ಗದಗ ಮೂರು ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಬಳ್ಳಾರಿ ಜಿಲ್ಲೆಯ ಬಲದಂಡೆ ಭಾಗದಲ್ಲಿ 35791 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಈ ಯೋಜನೆಯ ಕಾಲುವೆಗಳು ಮಾತ್ರ ದುರಸ್ತಿ ಭಾಗ್ಯ ಕಂಡಿಲ್ಲ. ತಗ್ಗು ಪ್ರದೇಶದಲ್ಲಿ ಕಾಲುವೆ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನುಗಳಿಗೆ ನೀರುಣಿಸುವ ಉದ್ದೇಶದಿಂದ ಕೆಲವಡೆಗಳಲ್ಲಿ ಕಾಲುವೆ ಕಿತ್ತು ಹಾಕಿದ್ದಾರೆ. ಉಳಿದಂತೆ ಮುಖ್ಯ ಕಾಲುವೆಗಳಿಗೆ ದೊಡ್ಡ ಪ್ರಮಾಣದ ಪೈಪ್‌ಗಳನ್ನು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಹೋಗುತ್ತಿಲ್ಲ. ಈ ಕುರಿತು ಹತ್ತಾರು ಬಾರಿ ಹಿರೇಹಡಗಲಿ, ಮಾಗಳ ಸೇರಿದಂತೆ ಇತರೆ ಗ್ರಾಮಗಳ ರೈತರು ಸಿಂಗಟಾಲೂರು ಏತ ನೀರಾವರಿ ಯೋಜನೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದರೂ ಯಾವ ಪ್ರಯೋಜನವಾಗಿಲ್ಲ.
ಯೋಜನೆಯಲ್ಲಿ ಮಾಗಳ ಶಾಖಾ ಮುಖ್ಯ ಕಾಲುವೆ 5 ಕಿ.ಮೀ, ಕೆ.ಅಯ್ಯನಹಳ್ಳಿ ಶಾಖಾ ಮುಖ್ಯ ಕಾಲುವೆ 5.7 ಕಿ.ಮೀ, ಹೂವಿನಹಡಗಲಿ ಶಾಖಾ ಮುಖ್ಯ ಕಾಲುವೆ 25.43 ಕಿ.ಮೀ, ರಾಜವಾಳ ಶಾಖಾ ಮುಖ್ಯ ಕಾಲುವೆ 4 ಕಿ.ಮೀ ಸೇರಿ ಒಟ್ಟು 40.13 ಕಿ.ಮೀ ಉದ್ದ ಇವೆ. ಜತೆಗೆ ರೈತರ ಜಮೀನುಗಳಿಗೆ ನೀರುಣಿಸಲು ಉಪ ಕಾಲುವೆಗಳನ್ನು ನಿರ್ಮಾಣ ಮಾಡಲಾಗಿದ್ದು, ಮಾಗಳ-20 ಕಿ.ಮೀ, ಕೆ.ಅಯ್ಯನಹಳ್ಳಿ- 21.11 ಕಿ.ಮೀ, ಹೂವಿನಹಡಗಲಿ-97 ಕಿ.ಮೀ ಸೇರಿ ಒಟ್ಟು 138.11 ಕಿ.ಮೀ ಉದ್ದ ಕಾಲುವೆಗಳಿವೆ. ಆರಂಭದಲ್ಲೇ ನಿರ್ಮಾಣ ಮಾಡಿದ್ದ ಕಾಲುವೆಗಳಾಗಿದ್ದು, ಈವರೆಗೂ ಸರ್ಕಾರ ಕಾಲುವೆ ದುರಸ್ತಿ ನಯಾ ಪೈಸೆ ಬಿಡುಗಡೆ ಮಾಡಿಲ್ಲ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರೈತರ ಜಮೀನುಗಳಿಗೆ 2013 ರಿಂದ ಉಚಿತವಾಗಿ ನೀರು ಪೂರೈಕೆಯಾಗುತ್ತಿದೆ, ಆದರೆ ಈ ವರೆಗೂ ರೈತರಿಂದ ತೆರಿಗೆ ಹಣ ವಸೂಲಿಯಾಗಿಲ್ಲ. ಇದಕ್ಕೆ ಸರ್ಕಾರ ಗೆಜೆಟ್ ಪ್ರಕಟ ಮಾಡಿದ ನಂತರದಲ್ಲಿ ತೆರಿಗೆ ವಸೂಲಿ ಮಾಡುವ ಅವಕಾಶವಿದೆ. ಆದ್ದರಿಂದ ತೆರಿಗೆ ಹಣದಲ್ಲೇ ದುರಸ್ತಿ ಮಾಡಿಸಿ, ಇದಕ್ಕಾಗಿಯೇ ಪ್ರತ್ಯೇಕ ಅನುದಾನ ನೀಡುತ್ತಿಲ್ಲ.
ಕಾಲುವೆಗಳ ಗೇಟ್‌ಗಳು ಹಾಗೂ ಕಾಲುವೆಗಳನ್ನು ಹತ್ತಾರು ಕಡೆಗಳಲ್ಲಿ ಒಡೆದು ಹಾಕಿದ್ದಾರೆ, ತಮ್ಮ ಜಮೀನುಗಳಿಗೆ ನೀರು ಸಾಕಾದ ನಂತರದಲ್ಲಿ ಗೇಟ್ ಮುಚ್ಚಲ್ಲ, ಒಡೆದ ಕಾಲುವೆ ಸರಿಪಡಿಸದ ಹಿನ್ನೆಲೆಯಲ್ಲಿ ಯೋಜನೆಯ ನೀರು ಹಳ್ಳದ ಪಾಲಾಗುತ್ತಿದೆ.
ನೀರಾವರಿ ನಿಗಮದಿಂದ ಬರುವಂತಹ ಅಲ್ಪಸ್ವಲ್ಪ ಅನುದಾನದಲ್ಲಿ ಕರೆಂಟ್ ಬಿಲ್, ನೀರು ಗಂಟಿಗಳ ವೇತನ, ಡ್ಯಾಂ ಗೇಟ್ ದುರಸ್ತಿಗೆ ಮಾತ್ರ ಬಳಕೆಯಾಗುತ್ತಿದೆ. ಆದರೆ ಕಾಲುವೆಗಳ ದುರಸ್ತಿಗೆ ಅನುದಾನ ಬರುತ್ತಿಲ್ಲ. 6 ತಿಂಗಳಿಗೆ ಸರಿ ಸುಮಾರು 2 ಕೋಟಿಗೂ ಅಧಿಕ ಹಣವನ್ನು ಕರೆಂಟ್ ಬಿಲ್ ಪಾವತಿ ಮಾಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಯೋಜನೆಯನ್ನು ಈವರೆಗೂ ಸರ್ಕಾರ ಗೆಜೆಟ್ ಪ್ರಕಟಿಸಿ ಅಧಿಕೃತ ನೀರಾವರಿ ಪ್ರದೇಶವೆಂದು ಘೋಷಣೆ ಮಾಡಿಲ್ಲ. ಈ ಹಿಂದೆ 2 ಬಾರಿ ಗೆಜೆಟ್ ಪ್ರಕಟಿಸಬೇಕೆಂದು ಸಿಂಗಟಾಲೂರು ಏತ ನೀರಾವರಿ ಇಲಾಖೆಯಿಂದ ಅಗತ್ಯ ಮಾಹಿತಿ ನೀಡಲಾಗಿತ್ತು. ಇದಕ್ಕೆ ಹತ್ತಾರು ತಾಂತ್ರಿಕ ಕಾರಣಗಳಿರುವ ಹಿನ್ನೆಲೆಯಲ್ಲಿ ಗೆಜೆಟ್ ಪ್ರಕಟಣೆ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಯೋಜನೆಯ ಎಇಇ ನಟರಾಜ ಅವರು, ಡಿ. 26ರಿಂದ ಯಾವುದೇ ತೆರನಾದ ಗೆಜೆಟ್‌ಗಳನ್ನು ಪ್ರಕಟ ಮಾಡದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇನ್ಮುಂದೆ ಇ-ಗೆಜೆಟ್ ಜಾರಿಯಾಗಿದೆ. ಜತೆಗೆ ತುಂಗಭದ್ರ ಅಚ್ಚುಕಟ್ಟು ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಬಂದು ಭೇಟಿ ನೀಡಿ ಪರಿಶೀಲನೆ ಮಾಡಬೇಕಿದ್ದು, ಮುಂದಿನ ಜನವರಿ-2020ರ ವೇಳೆಗೆ ಇ-ಗೆಜೆಟ್ ಪ್ರಕಟಣೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ರೈತರ ಜಮೀನುಗಳಿಗೆ ಸಮರ್ಪಕ ರೀತಿಯಲ್ಲಿ ಕಾಲುವೆ ನಿರ್ಮಾಣ ಮಾಡಿ ನೀರು ಪೂರೈಕೆ ಮಾಡಿದರೇ ಸರ್ಕಾರಕ್ಕೆ ತೆರಿಗೆ ಕಟ್ಟಬಹುದು. ಆದರೆ ಅರೆಬರೆ ಕಾಲುವೆಗಳನ್ನು ಮಾಡಿ ಕಾಲುವೆಗಳಿಗೂ ನೀರು, ಇತ್ತ ಭೂಮಿ ಕಳೆದುಕೊಂಡವರಿಗೆ ಪರಿಹಾರದ ಹಣವೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರ ಜಮೀನುಗಳಿಗೆ ತೆರಿಗೆ ವಿಧಿಸಿದರೇ ಹೇಗೆ? ಮೊದಲು ವ್ಯವಸ್ಥೆಯನ್ನು ಸರಿಪಡಿಸಬೇಕಿದೆ ಎಂದು ಮಾಗಳದ ರೈತ ಕವಸರ ಯಲ್ಲಪ್ಪ ಅವರು ಹೇಳಿದ್ದಾರೆ.