ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರ ಚಿತ್ರದುರ್ಗದ ಮನೆ ಖರೀದಿಸಿ ಸಂರಕ್ಷಿಸಲು ಮತ್ತು ಅಭಿವೃದ್ಧಿ ಪಡಿಸಲು 5 ಕೋಟಿ ರು. ಹಣ ಮೀಸಲಿಡಲಾಗಿದೆ. ಆ ಪೈಕಿ 4.18 ಕೋಟಿ ಮನೆ ಖರೀದಿಗೆ ಹಾಗೂ 81.50 ಲಕ್ಷ ರು. ಗಳನ್ನು ಮನೆ ಅಭಿವೃದ್ಧಿಗೆ ಬಳಸಲಾಗುವುದು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ
ಬೆಂಗಳೂರು(ನ.15): ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರ ಚಿತ್ರದುರ್ಗದ ಮನೆಯನ್ನು ಸ್ಮಾರಕವನ್ನಾಗಿ ಮಾಡಲು ಸರ್ಕಾರ ಮುಂದಾಗಿದ್ದು, ಅದಕ್ಕಾಗಿ 1 ತಿಂಗಳೊಳಗೆ ಮನೆ ಖರೀದಿಸಿ, ನೋಂದಣಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಈ ಕುರಿತು ವಿಕಾಸಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಇಲಾಖೆ ಅಧಿಕಾರಿಗಳು ಮತ್ತು ಚಿತ್ರದುರ್ಗ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ನಿಜಲಿಂಗಪ್ಪ ಚಿತ್ರದುರ್ಗದಲ್ಲಿ ವಾಸವಿದ್ದ ಮನೆಯನ್ನು ಸ್ಮಾರಕವನ್ನಾಗಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಅವರ ಕುಟುಂಬದವರಿಂದ ಮನೆಯನ್ನು ಖರೀದಿಸಿ, 1 ತಿಂಗಳಲ್ಲಿ ಅದನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಸರ್ಕಾರ 5 ಕೋಟಿ ರು. ಅ ನುದಾನ ಮೀಸಲಿಟ್ಟಿದೆ. ಈ ಹಿಂದೆ ತಾಂತ್ರಿಕ ಕಾರಣಗಳಿಂದಾಗಿ ಮನೆ ಖರೀದಿ ಸಾಧ್ಯವಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಮಾರಟಕ್ಕಿದೆ ಮಾಜಿ ಸಿಎಂ ನಿಜಲಿಂಗಪ್ಪ ನಿವಾಸ, ಖಾಸಗಿ ವ್ಯಕ್ತಿಗಳ ಪಾಲಾಗುತ್ತಾ ಸ್ಮಾರಕವಾಗಿಬೇಕಿದ್ದ ಮನೆ?
ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ, ಇನ್ನು 1 ತಿಂಗಳೊಳಗಾಗಿ ಎಲ್ಲ ಚರ್ಚೆಗಳು ಮುಗಿದು, ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಕಾನೂನಾತ್ಮಕವಾಗಿ ಎಲ್ಲ ರೀತಿ ವ್ಯವಹಾರವನ್ನು ಮುಗಿಸಿ, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ, ನಿಜಲಿಂಗಪ್ಪ ಅವರ ಮನೆ ಖರೀದಿಗೆ ಸಂಬಂಧಿಸಿದಂತೆ ಈಗಾಗಲೇ ಕಾನೂನು ಇಲಾಖೆಯಿಂದ ಅಭಿಪ್ರಾಯ ಪಡೆಯಲಾಗಿದೆ. ನಿಜಲಿಂಗಪ್ಪ ವಾಸವಿದ್ದ ಮನೆ ಈ ಹಿಂದೆ ಅವರ 3ನೇ ಪುತ್ರ ಎಸ್. ಎನ್. ಕಿರಣ್ ಶಂಕರ್ ಹೆಸರಿನಲ್ಲಿತ್ತು. ಆದರೆ, ನಿಜಲಿಂಗಪ್ಪ ಅವರ ವಿಲ್‌ನಂತೆ ಮನೆಯು ಸದ್ಯ ಅವರ ಮೊಮ್ಮಗನ ಹೆಸರಿನಲ್ಲಿದೆ. ಹೀಗಾಗಿ ಅವರಿಬ್ಬರ ಜತೆಗೆ ಅಧಿಕಾರಿಗಳು ಚರ್ಚೆ ನಡೆಸಿದ್ದು, ತಿಂಗಳಲ್ಲಿ ಮನೆ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.
ಮನೆ ಖರೀದಿಸಿ ಸಂರಕ್ಷಿಸಲು ಮತ್ತು ಅಭಿವೃದ್ಧಿ ಪಡಿಸಲು 5 ಕೋಟಿ ರು. ಹಣ ಮೀಸಲಿಡಲಾಗಿದೆ. ಆ ಪೈಕಿ 4.18 ಕೋಟಿ ಮನೆ ಖರೀದಿಗೆ ಹಾಗೂ 81.50 ಲಕ್ಷ ರು. ಗಳನ್ನು ಮನೆ ಅಭಿವೃದ್ಧಿಗೆ ಬಳಸಲಾಗುವುದು ಎಂದು ಮಾಹಿತಿ ನೀಡಿದರು.