ವೈರಸ್ ವಿರುದ್ಧ ಹೋರಾಟ: IT,BT ಕಂಪನಿ ನೌಕರರಿಗೆ 'ವರ್ಕ್ ಫ್ರಂ ಹೋಂ'

By Kannadaprabha NewsFirst Published Mar 21, 2020, 8:55 AM IST
Highlights

ಐಟಿ-ಬಿಟಿ ಕಂಪೆನಿಗಳ ಎಲ್ಲಾ ಉದ್ಯೋಗಿಗಳಿಗೆ ಮನೆಯಲೇ ಕೆಲಸ ಕಡ್ಡಾಯ| ‘ವರ್ಕ್ ಫ್ರಂ ಹೋಂ’ಗೆ ತೊಂದರೆ ಆಗದಂತೆ ನೆಟ್‌, ಬೆಸ್ಕಾಂ ಜತೆ ಮಾತುಕತೆ: ಡಿಸಿಎಂ ಅಶ್ವತ್ಥನಾರಾಯಣ|ಸಾಂಕ್ರಾಮಿಕ ರೋಗಗಳ ತಡೆಗೆ ಪ್ರತ್ಯೇಕ ಆಸ್ಪತ್ರೆ ನಿಗದಿಪಡಿಸಿದರೆ ಅದಕ್ಕೆ ಸಿಎಸ್‌ಆರ್‌ ನಿಧಿಯಿಂದ ಅಗತ್ಯ ನೆರವು ಒದಗಿಸಲಾಗುವುದು: ಕಿರಣ್‌ ಮಜುಂದಾರ್‌|

ಬೆಂಗಳೂರು[ಮಾ.21]: ಅಗತ್ಯ ಸೇವೆ ಹೊರತುಪಡಿಸಿ ಉಳಿದಂತೆ ಐಟಿ-ಬಿಟಿ ಕಂಪೆನಿಗಳ ಎಲ್ಲಾ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ‘ವರ್ಕ್ ಫ್ರಂ ಹೋಂ’ ಮಾಡುವವರಿಗೆ ತೊಂದರೆಯಾಗದಂತೆ ಬ್ರಾಡ್‌ ಬ್ಯಾಂಡ್‌, ಇಂಟರ್ನೆಟ್‌, ವಿದ್ಯುತ್‌ ಸಮಸ್ಯೆ ನಿವಾರಿಸಲು ಟೆಲಿಕಾಂ ಹಾಗೂ ಬೆಸ್ಕಾಂ ಜೊತೆ ಮಾತುಕತೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

ಕೊರೋನಾ ವೈರಾಣು ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ, ಸ್ಟಾರ್ಟ್‌ಅಪ್‌ ಕಂಪೆನಿಗಳ ಮುಖ್ಯಸ್ಥರೊಂದಿಗೆ ಶುಕ್ರವಾರ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.

ಭಾನುವಾರ ಪ್ಯಾಸೆಂಜರ್‌, ಮೇಲ್‌, ಎಕ್ಸ್‌ಪ್ರೆಸ್‌ ರೈಲು ಸೇವೆ ಪೂರ್ಣ ಬಂದ್‌

ರಾಜ್ಯ ಸರ್ಕಾರವು ಈಗಾಗಲೇ ಐಟಿ-ಬಿಟಿ ಕಂಪೆನಿಗಳಿಗೆ ವರ್ಕ್ ಫ್ರಂ ಹೋಂ ಆದೇಶ ನೀಡಿದೆ. ಕೆಲವು ಸಂಸ್ಥೆಗಳು ಪಾಲಿಸುತ್ತಿಲ್ಲವಾದ್ದರಿಂದ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ ನೀಡಲಾಗುತ್ತಿದೆ. ಸರ್ಕಾರಿ ಕೆಲಸ, ಆರೋಗ್ಯ ಹಾಗೂ ಬ್ಯಾಂಕಿಂಗ್‌ ಮುಂತಾದ ಅಗತ್ಯ ಸೇವೆ ಒದಗಿಸುವಂಥ ಐಟಿ ಉದ್ಯೋಗಿಗಳನ್ನು ಮಾತ್ರ ಕಚೇರಿಗೆ ಕರೆಸಬೇಕು. ಉಳಿದಂತೆ ಕೆಲ ಸೇವೆಗಳಲ್ಲಿ ಗೌಪ್ಯತೆ ಕಾಯ್ದುಕೊಳ್ಳುವ ಅನಿವಾರ್ಯತೆಯೂ ಇರುತ್ತದೆ. ಅಂತಹವರನ್ನು ಬಿಟ್ಟು ಉಳಿದೆಲ್ಲರೂ ಮನೆಯಿಂದಲೇ ಕೆಲಸ ಮಾಡಬೇಕು ಎಂದು ಹೇಳಿದರು.

ಮನೆಯಲ್ಲಿ ಕೆಲಸ ಮಾಡುವ ಸಂಧರ್ಭದಲ್ಲಿ ಬ್ರಾಡ್‌ ಬ್ಯಾಂಡ್‌, ಇಂಟರ್ನೆಟ್‌ ಸಮಸ್ಯೆ, ವಿದ್ಯುತ್‌ ಸಮಸ್ಯೆ ಎದುರಾಗುತ್ತದೆ. ಜತೆಗೆ ಬಹಳಷ್ಟುಮಂದಿ ಯುವ ಉದ್ಯೋಗಿಗಳು ಊಟದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಪಿಜಿಗಳಲ್ಲಿ ಸಮಸ್ಯೆ ಆಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಈ ಸಂಬಂಧ ಬೆಸ್ಕಾಂ ಹಾಗೂ ಟೆಲಿಕಾಂ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಅಗತ್ಯ ನೆರವು: ಕಿರಣ್‌ ಮಜುಂದಾರ್‌

ಬಯೋಕಾನ್‌ ಮುಖ್ಯಸ್ಥೆ ಹಾಗೂ ಬಿಟಿ ವಿಷನ್‌ ಗ್ರೂಪ್‌ ಸದಸ್ಯೆ ಡಾ. ಕಿರಣ್‌ ಮಜುಂದಾರ್‌ ಷಾ ಮಾತನಾಡಿ, ಇಂತಹ ಸಾಂಕ್ರಾಮಿಕ ರೋಗಗಳ ತಡೆಗೆ ಪ್ರತ್ಯೇಕ ಆಸ್ಪತ್ರೆ ನಿಗದಿಪಡಿಸಿದರೆ ಅದಕ್ಕೆ ಸಿಎಸ್‌ಆರ್‌ ನಿಧಿಯಿಂದ ಅಗತ್ಯ ನೆರವು ಒದಗಿಸಲಾಗುವುದು ಎಂದರು.

ಕೊರೋನಾ ಚುಚ್ಚುಮದ್ದು ನನ್ನ ಮೇಲೆ ಪ್ರಯೋಗಿಸಿ ಎಂದ ವಕೀಲ

ಐಟಿ-ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಐಟಿ-ಬಿಟಿ ನಿರ್ದೇಶಕ ಪ್ರಶಾಂತ್‌ ಕುಮಾರ್‌ ಮಿಶ್ರಾ, ಐಟಿ ವಿಷನ್‌ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣ ಸೇರಿ ಹಲವರು ಹಾಜರಿದ್ದರು.

ಪ್ರತ್ಯೇಕ ನಿಗಾದಲ್ಲಿಇರುವವರಿಗೆ ಆ್ಯಪ್‌

ಕೊರೋನಾ ಸೋಂಕು ಶಂಕಿತರು ಹಾಗೂ ಸ್ವಯಂ ಪ್ರೇರಣೆಯಿಂದ ಪ್ರತ್ಯೇಕ ನಿಗಾ ವ್ಯವಸ್ಥೆಯಲ್ಲಿರುವವರಿಗೆ ಉದ್ಯಮ ಲರ್ನಿಂಗ್‌ ಫೌಂಡೇಷನ್‌ ನೇತೃತ್ವದಲ್ಲಿ ಆ್ಯಪ್‌ ಅಭಿವೃದ್ಧಿ ಪಡಿಸಲಾಗುತ್ತಿದೆ.

ಆ್ಯಪ್‌ ಬಳಸುವವರ ಆರೋಗ್ಯದ ಮೇಲೆ ಆ್ಯಪ್‌ ಮೂಲಕ ನಿಗಾ ವಹಿಸಬಹುದು. ಬಳಕೆದಾರರು ತಮ್ಮ ನಿತ್ಯದ ಆರೋಗ್ಯದ ಡಾಟಾ ಅಪ್‌ಲೋಡ್‌ ಮಾಡಬಹುದು. ಇದನ್ನು ಆರೋಗ್ಯಾಧಿಕಾರಿಗಳು ಮಾನಿಟರ್‌ ಮಾಡಬಹುದು. ಅಲ್ಲದೆ, ಇ-ಕಾಮರ್ಸ್‌ ಸಂಸ್ಥೆಗಳ ಸಹಕಾರದೊಂದಿಗೆ ಅತ್ಯಗತ್ಯ ವಸ್ತುಗಳು, ಔಷಧ ಹಾಗೂ ಆಹಾರ ಪದಾರ್ಥಗಳ ಪೂರೈಕೆಗೂ ಸಹಕಾರಿಯಾಗುತ್ತದೆ ಎಂದು ಸಭೆಯಲ್ಲಿ ಚರ್ಚೆಯಾಗಿದೆ.

ಟೆಸ್ಟ್‌ ಕಿಟ್‌

ಸೋಂಕು ಪತ್ತೆಗೆ ಟೆಸ್ಟ್‌ ಕಿಟ್‌ಗಳನ್ನು ಸದ್ಯ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಅವಲಂಬನೆಯನ್ನು ಕಡಿಮೆ ಮಾಡಲು ದೇಶೀಯವಾಗಿ ಐಐಎಸ್‌ಸಿ ನೆರವಿನೊಂದಿಗೆ ಟೆಸ್ಟ್‌ ಕಿಟ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬಗ್ಗೆ ಶಂಕರ್‌ ಆಸ್ಪತ್ರೆಯ ಮುಖ್ಯಸ್ಥ ಡಾ.ಕೆ.ಎನ್‌ ಶ್ರೀಧರ್‌ ಆಹಿತಿ ನೀಡಿ, 10 ದಿನಗಳಲ್ಲಿ ಬಳಕೆಗೆ ಲಭ್ಯವಾಗಲಿದೆ. ಸದ್ಯ ಅದರ ಬೆಲೆ ದುಬಾರಿಯಾಗಿದ್ದು, ನಾವು ಅಭಿವೃದ್ಧಿಪಡಿಸಲಿರುವ ಕಿಟ್‌ನಲ್ಲಿ ಪರೀಕ್ಷಾ ವೆಚ್ಚ 800 ಆಗಬಹುದು ಎಂದರು.

click me!