ಬೆಳಗಾವಿ: ಗಡಿಯಲ್ಲಿ ಕೊರೋನಾ ಮತ್ತೆ ಮಹಾಕಂಟಕ?

By Kannadaprabha NewsFirst Published Sep 11, 2020, 1:40 PM IST
Highlights

ಸುಮಾರು 30 ಸಾವಿರ ಕೂಲಿಕಾರರು ರಾಜ್ಯಕ್ಕೆ ಬರುವ ನಿರೀಕ್ಷೆ| ಮತ್ತಷ್ಟು ಸೋಂಕು ಉಲ್ಬಣ ಸಾಧ್ಯತೆ| ಶೀಘ್ರ ಈ ಕುರಿತು ಸರ್ಕಾರ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು| ಮಹಾರಾಷ್ಟ್ರ ಕೂಲಿ ಕಾರ್ಮಿಕರಿಂದ ರಾಜ್ಯದಲ್ಲಿ ಮತ್ತಷ್ಟು ಕೊರೋನಾ ಉಲ್ಬಣಿಸುವ ಸಾಧ್ಯತೆ| 

ಸಿ.ಎ.ಇಟ್ನಾಳಮಠ 

ಅಥಣಿ(ಸೆ.11): ಗಡಿಭಾಗದ ಅಥಣಿ ತಾಲೂಕು ಮೊದಲೇ ಕೋವಿಡ್‌ಗೆ ತತ್ತರಿಸಿದೆ. ಇದರ ಬೆನ್ನಲ್ಲೇ ಇದೀಗ ಅಕ್ಟೋಬರ್‌ನಲ್ಲಿ ಕಬ್ಬಿನ ಹಂಗಾಮು ಶುರುವಾಗಲಿದ್ದು, ಮಹಾರಾಷ್ಟ್ರದಿಂದ ಸುಮಾರು 30 ಸಾವಿರ ಕಬ್ಬು ಕಟಾವು ಕೂಲಿ ಕಾರ್ಮಿಕರು ಮತ್ತೆ ರಾಜ್ಯಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಸದ್ಯ ಅಥಣಿಯಲ್ಲಿ ಮತ್ತೆ ಕೊರೋನಾ ಆತಂಕ ಶುರುವಾಗಿದೆ.

ಈಗಾಗಲೇ ಅಥಣಿ ತಾಲೂಕಿನಲ್ಲಿ ಸುಮಾರು 1600ಕ್ಕೂ ಹೆಚ್ಚು ಕೇಸ್‌ ದಾಖಲಾಗಿದ್ದು, ಸುಮಾರು 70ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ವರದಿಯಾಗಿದೆ. ಇಡೀ ದೇಶದಲ್ಲೇ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಪ್ರಕರಣಗಳು ಇರುವುದರಿಂದ ಇದೀಗ ಕಬ್ಬು ಕಡಿಯುವ ಗ್ಯಾಂಗ್‌ಮನ್‌ಗಳಿಂದ ಮತ್ತೆ ಅಥಣಿಗೆ ಕೊರೋನಾಭೀತಿ ಎದುರಾಗಿದೆ.

ಕಬ್ಬು ಕಟಾವು ಹೇಗೆ ಮಾಡಿಸಬೇಕು? ಕಾರ್ಖಾನೆಗಳು ಯಾವ ರೀತಿ ಕ್ರಮ ಕೈಗೊಳ್ಳಬೇಕು? ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಕುರಿತು ಸರ್ಕಾರದಿಂದ ಕಾರ್ಖಾನೆ ಮಾಲೀಕರಿಗೆ, ಆಡಳಿತ ಮಂಡಳಿಗಳಿಗೆ ಸ್ಪಷ್ಟವಾದ ಗೈಡ್‌ಲೈನ್ಸ್‌ ಜಾರಿಯಾಗದೇ ಇರುವುದರಿಂದ ಈ ಬಗ್ಗೆ ಕಾರ್ಖಾನೆ ಆಡಳಿತ ಮಂಡಳಿಗಳೂ ಗೊಂದಲದಲ್ಲಿವೆ ಎಂದು ಹೇಳಲಾಗುತ್ತಿದೆ.

ಡ್ರಗ್ಸ್‌ ಮಾಫಿಯಾ ಬೆಳೆಯಲು ಇಂದಿನ, ಹಿಂದಿನ ಸರ್ಕಾರಗಳು ಕಾರಣ: ಜಾರಕಿಹೊಳಿ

ಕಳೆದ ಬಾರಿ ಮಹಾಪೂರ ಉಕ್ಕಿ ಶೇ.80ರಷ್ಟುಬೆಳೆಗಳು ಕೈಗೆ ಸಿಗದೆ ರೈತರು ಕಂಗಾಲಾಗಿದ್ದರು. ತಾಲೂಕಿನ ಸುಮಾರು 5 ಸಕ್ಕರೆ ಕಾರ್ಖಾನೆಗಳು ಕೇವಲ 2 ತಿಂಗಳಲ್ಲೇ ಬಾಗಿಲು ಮುಚ್ಚಿವೆ. ಹೀಗಾಗಿ ಸಕ್ಕರೆ ಕಾರ್ಖಾನೆಗಳು ನಷ್ಟಅನುಭವಿಸಿದ್ದವು. ಆದರೆ ಈ ಬಾರಿ ಉತ್ತಮ ಮಳೆ ಆಗಿದ್ದರಿಂದ ಇನ್ನೇನು ಅಕ್ಟೋಬರ್‌ 2ನೇ ವಾರದಿಂದ ಕಬ್ಬು ನುರಿಸಲು ಆರಂಭಿಸುವ ಬಗ್ಗೆ ಚಿಂತನೆ ನಡೆಸಿದ್ದು, ಈ ಗೊಂದಲ ಮಾತ್ರ ಹಾಗೆಯೇ ಇದೆ.

ಅಥಣಿ ತಾಲೂಕಲ್ಲಿ ಸುಮಾರು ಐದು ಸಕ್ಕರೆ ಕಾರ್ಖಾನೆಗಳಿವೆ. ಮಂಡ್ಯ ಜಿಲ್ಲೆಯಲ್ಲಿ ಬೆಳೆದಷ್ಟುಕಬ್ಬನ್ನು ಕೇವಲ ಅಥಣಿ ತಾಲೂಕಿನಲ್ಲಿ ಬೆಳೆಯಲಾಗುತ್ತಿದ್ದು, ಸುಮಾರು 50 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಪ್ರತಿ ವರ್ಷ ಸುಮಾರು 80 ಲಕ್ಷ ಟನ್‌ ಕಬ್ಬು ಉತ್ಪಾದನೆ ಮಾಡಲಾಗುತ್ತಿದೆ. ಅಲ್ಲದೆ, ನೆರೆ ಮಹಾರಾಷ್ಟ್ರದ ಸುಮಾರು 4 ಕಾರ್ಖಾನೆ ಸೇರಿದಂತೆ ಚಿಕ್ಕೋಡಿ ತಾಲೂಕಿನ ಕಾರ್ಖಾನೆ, ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕೆಲವು ಕಾರ್ಖಾನೆಗಳಿಗೆ ಅಥಣಿ ತಾಲೂಕಿನ ರೈತರು ಕಬ್ಬು ಪೂರೈಕೆ ಮಾಡುತ್ತಾರೆ. ಹೀಗಿರುವಾಗ ಈ ಬಾರಿ ಬೆಳೆದು ನಿಂತ ಕಬ್ಬು ಕಟಾವು ಮಾಡುವುದೇ ಒಂದು ದೊಡ್ಡ ಸವಾಲಾಗಿದೆ.

ಇದುವರೆಗೆ ಕಬ್ಬು ಬೆಳೆ ಕಟಾವಿಗೆ ಮಹಾರಾಷ್ಟ್ರದ ಕೂಲಿ ಕಾರ್ಮಿಕರೇ ಬರುತ್ತಿದ್ದರು. ಈಗಲೂ ಕೂಡ ನೆರೆ ಮಹಾರಾಷ್ಟ್ರದಿಂದ ಬರಬೇಕಿದೆ. ಅಲ್ಲಿ ಇನ್ನೂ ಕೋವಿಡ್‌-19 ಅಬ್ಬರ ಇಳಿದಿಲ್ಲ. ಸದ್ಯಕ್ಕೆ ಇಳಿಯುವ ಲಕ್ಷಣಗಳೂ ಕಾಣುತಿಲ್ಲ. ಈಗಾಗಲೇ ಅಥಣಿ ತಾಲೂಕಿಗೆ ಕೊರೋನಾ ಹೆಚ್ಚಳಕ್ಕೆ ನೆರೆ ಮಹಾರಾಷ್ಟ್ರ ಕಾರಣವಾಗಿದ್ದು, ಇನ್ಮುಂದೆ ಅಲ್ಲಿಂದ ಕಾರ್ಮಿಕರೇನಾದರೂ ಬಂದರೆ ಇದರ ಅಬ್ಬರ ಇನ್ನೂ ತೀವ್ರವಾಗುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಲಾಗುತ್ತಿದೆ.

ಕೃಷ್ಣಾ ತೀರದಲ್ಲೇ ಅಬ್ಬರ:

ಕೃಷ್ಣಾ ತೀರದ ಕಾಗವಾಡ, ಜೂಗುಳ, ಮಂಗಾವತಿ, ಐನಾಪುರ ನದಿ ಇಕ್ಕೆಲಗಳಲ್ಲಿ ಈ ಬಾರಿ ಯಥೇಚ್ಛವಾಗಿ ಕಬ್ಬು ಬೆಳೆಯಲಾಗಿದೆ. ಅಷ್ಟೇ ಅಲ್ಲ ಆ ಪ್ರದೇಶ ಈಗಾಗಲೇ ಕೊರೋನಾ ಹೊಡೆತಕ್ಕೆ ಸಿಲುಕಿ ಹೋಗಿವೆ. ಈಗಲೂ ಐನಾಪುರ ಪಟ್ಟಣವನ್ನು ಸುಮಾರು ಒಂದು ವಾರ ಕಾಲ ಸ್ವಯಂಘೋಷಿತ ಲಾಕ್‌ಡೌನ್‌ ಮಾಡಲಾಗಿದೆ. ಹೀಗಿರುವಾಗ ಮಹಾರಾಷ್ಟ್ರದಿಂದ ಕಬ್ಬು ಕಟಾವು ಕೂಲಿ ಕಾರ್ಮಿಕರು ಆಗಮಿಸಿದರೆ ಮತ್ತೇ ಈ ಭಾಗದ ಜನರು ಆತಂಕಕ್ಕೆ ಒಳಗಾಗಲಿದ್ದಾರೆ.
ಈ ಮೂಲಕ ಮಹಾರಾಷ್ಟ್ರ ಕೂಲಿ ಕಾರ್ಮಿಕರಿಂದ ರಾಜ್ಯದಲ್ಲಿ ಮತ್ತಷ್ಟು ಕೊರೋನಾ ಉಲ್ಬಣಿಸುವ ಸಾಧ್ಯತೆ ಇದ್ದು, ಸರ್ಕಾರ ಕೂಡಲೇ ಮತ್ತೊಮ್ಮೆ ಕಾರ್ಖಾನೆ ಮಾಲೀಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸ್ಪಷ್ಟಮಾರ್ಗಸೂಚಿ ನೀಡಬೇಕು. ಈ ಭಾಗದ ಜನರ ಗೊಂದಲ ನಿವಾರಿಸಬೇಕು ಎಂದು ಜನತೆ ಆಗ್ರಹಿಸಿದ್ದಾರೆ.

ಕಾರ್ಖಾನೆಗಳು ಆರಂಭವಾಗಿ ಮಹಾರಾಷ್ಟ್ರ ಕಾರ್ಮಿಕರು ರಾಜ್ಯಕ್ಕೆ ಬಂದರೆ ಕೊರೋನಾ ಮತ್ತಷ್ಟುಹೆಚ್ಚಳವಾಗಿ ಪರಿಸ್ಥಿತಿ ಬಿಗಡಾಯಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕಾರ್ಖಾನೆಗಳಿಗೆ ಕಬ್ಬು ಅರೆಯುವ ಸಂಬಂಧ ಯಾವುದೇ ಮಾರ್ಗಸೂಚಿ ಇನ್ನೂ ಸರ್ಕಾರದಿಂದ ಬಂದಿಲ್ಲ ಎಂದು ಅಥಣಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಎಂ.ಎಸ್‌. ಕೊಪ್ಪದ ಅವರು ತಿಳಿಸಿದ್ದಾರೆ.

ಕಾರ್ಮಿಕರ ಬದಲಾಗಿ ಹೆಚ್ಚು ಕಬ್ಬು ಕಡಿಯುವ ಯಂತ್ರಗಳನ್ನು ಕಾರ್ಖಾನೆಯವರು ಬಳಸಲು ಮುಂದಾಗಬೇಕು. ಹೀಗಾದಾಗ ಕೊರೋನಾ ನಿಯಂತ್ರಣ ಸಾಧ್ಯವಾಗಲಿದೆ ಎಂದು ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ ಅವರು ಹೇಳಿದ್ದಾರೆ. 

ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕಿತರು ಹೊಂದಿದ ತಾಲೂಕು ಅಥಣಿ ಆಗಿದೆ. ಮುಂದೆ ಹೀಗಾಗಬಾರದು. ಶೀಘ್ರ ಈ ಕುರಿತು ಸರ್ಕಾರ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಚಿದಾನಂದ ಶೇಗುಣಸಿ ಅವರು ಹೇಳಿದ್ದಾರೆ. 

click me!