ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ಇದೀಗ ಮೀನುಗಾರಿಕಾ ಬಂದರು ನಿರ್ಮಾಣ ಸಂಬಂಧಿಸಿ ಮೀನುಗಾರರಿಂದಲೇ ಪರ- ವಿರೋಧ ಕಾಣಿಸಿಕೊಂಡಿದೆ. ಮೊನ್ನೆಯಷ್ಟೇ ಮಾಜಾಳಿಯ ಒಂದು ಭಾಗದ ಕೆಲವು ಮೀನುಗಾರರು ಯಾವುದೇ ಕಾರಣಕ್ಕೂ ಬಂದರು ಬೇಡ ಎಂದು ಹೇಳಿದ್ರೆ, ಇಂದು ನೂರಾರು ಮೀನುಗಾರರು ಜತೆಗೂಡಿ ಬಂದರು ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ.
ವರದಿ: ಭರತ್‌ರಾಜ್ ಕಲ್ಲಡ್ಕ
ಕಾರವಾರ (ಸೆ.14) : ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ಇದೀಗ ಮೀನುಗಾರಿಕಾ ಬಂದರು ನಿರ್ಮಾಣ ಸಂಬಂಧಿಸಿ ಮೀನುಗಾರರಿಂದಲೇ ಪರ- ವಿರೋಧ ಕಾಣಿಸಿಕೊಂಡಿದೆ. ಮೊನ್ನೆಯಷ್ಟೇ ಮಾಜಾಳಿಯ ಒಂದು ಭಾಗದ ಕೆಲವು ಮೀನುಗಾರರು ಯಾವುದೇ ಕಾರಣಕ್ಕೂ ಬಂದರು ಬೇಡ ಎಂದು ಹೇಳಿದ್ರೆ, ಇಂದು ನೂರಾರು ಮೀನುಗಾರರು ಜತೆಗೂಡಿ ನಮ್ಮಲ್ಲಿ ಮೀನುಗಾರಿಕಾ ಬಂದರು ನಿರ್ಮಾಣವಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಯಾರೆಷ್ಟೇ ವಿರೋಧ ವ್ಯಕ್ತಪಡಿಸಿದ್ರೂ, ನಮ್ಮಲ್ಲಿ ಬಂದರು ಬೇಕೇ ಬೇಕು ಎಂದು ಒಕ್ಕೊರಲಿನ ಬೇಡಿಕೆಯಿರಿಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ...
undefined
Uttara Kannada: ಮಾಜಾಳಿ ಮೀನುಗಾರಿಕಾ ಬಂದರಿಗೆ ಕೇಂದ್ರ ಅಸ್ತು
ಪರ- ವಿರೋಧ ನಿಲುವು: ಕೆಲವು ಮೀನುಗಾರರು ಬಂದರು ಬೇಡವೆಂದ್ರೆ, ನೂರಾರು ಮೀನುಗಾರರಿಂದ ಬಂದರಿಗಾಗಿ ಬೇಡಿಕೆ. ರಾಜಕೀಯ ಪ್ರಭಾವಗಳೇ ಬಂದರು ನಿರ್ಮಾಣಕ್ಕೆ ಅಡ್ಡಿ ಮಾಡ್ತಿವೆ ಎಂದ ಮೀನುಗಾರರು ಉತ್ತರಕನ್ನಡ(Uttara Kannada) ಜಿಲ್ಲೆಯ ಕಾರವಾರ(Karwar) ತಾಲೂಕಿನ ಮಾಜಾಳಿ(Majali)ಯಲ್ಲಿ 250ಕೋಟಿ ರೂ. ವೆಚ್ಚದಲ್ಲಿ ಮೀನುಗಾರಿಕಾ ಬಂದರು(fishing port) ನಿರ್ಮಾಣಕ್ಕೆ ಅನುಮೋದನೆ ದೊರಕಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ " ಸಾಗರಮಾಲಾ"(Sagaramala)ದ ಅಡಿಯಲ್ಲೇ ಈ ಬಂದರು ನಿರ್ಮಾಣವಾಗುತ್ತಿದೆ. ಕರ್ನಾಟಕ ಮೆರಿಟೈಮ್ ಬೋರ್ಡ್(Karnataka Maritime Board) ಮತ್ತು ಮೀನುಗಾರಿಕಾ ಇಲಾಖೆ(Department of Fisheries)ಯು ಈ ಯೋಜನೆಯನ್ನು ಜಂಟಿಯಾಗಿ ಜಾರಿಗೊಳಿಸುತ್ತಿವೆ.
ಈ ಸಂಬಂಧ ಮೀನುಗಾರಿಕಾ ಸಚಿವರು ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ, ಮಾಜಾಳಿಯ ಒಂದು ಭಾಗದ ಕೆಲವು ಮೀನುಗಾರರಂತೂ ಯಾವುದೇ ಕಾರಣಕ್ಕೂ ಯೋಜನೆ ಅನುಷ್ಠಾನಗೊಳಿಸಲು ಬಿಡುವುದಿಲ್ಲ. ಮೀನುಗಾರರ ಜತೆ ಚರ್ಚಿಸದೆ ಯೋಜನೆ ಅನುಷ್ಠಾನಕ್ಕೆ ಮುಂದಾದಲ್ಲಿ ತೀವ್ರ ಪ್ರತಿಭಟನೆ(Protest) ನಡೆಸುವುದಾಗಿ ಎಚ್ಚರಿಸಿದ್ದರು. ಇದೀಗ ಮಾಜಾಳಿಯ ಮತ್ತೊಂದು ಭಾಗದಲ್ಲಿ ನೂರಾರು ಪುರುಷರು ಹಾಗೂ ಮಹಿಳೆಯರು ಸೇರಿ ನಮಗೆ ಬಂದರು ಬೇಕೇ ಬೇಕೆಂದು ಒತ್ತಾಯಿಸಿದ್ದಾರೆ.
ಯಾರೇನೇ ಹೇಳಿದ್ರೂ ಬಂದರು ನಿರ್ಮಾಣವಾಗೋವರೆಗೆ ನಮ್ಮ ಹೋರಾಟ ನಿಲ್ಲಲ್ಲ ಎಂದು ಘೋಷಣೆಗಳನ್ನು ಹಾಕಿದ್ದಾರೆ. ಜಿಲ್ಲೆಯಲ್ಲಿ ಸಾಕಷ್ಟು ಯೋಜನೆಗಳು ಬಂದರೂ ಮೀನುಗಾರರಿಗೆ ಏನೂ ಪ್ರಯೋಜನವಾಗಿಲ್ಲ. ಸ್ಥಳೀಯ ಬಂದರಿಗೆ ತೆರಳಿದರೂ ನಮಗೆ ದುಡಿಯಲು ಅವಕಾಶ ದೊರೆಯಲ್ಲ. ನಮ್ಮ ಪ್ರದೇಶದಲ್ಲಿ ಬಂದರು ನಿರ್ಮಾಣವಾದಲ್ಲಿ ಮೀನುಗಾರ ಪುರುಷರು ಮಾತ್ರವಲ್ಲ, ಮಹಿಳೆಯರಿಗೂ ಅವಕಾಶ ದೊರೆಯುತ್ತದೆ. ನಮ್ಮಲ್ಲೂ ಪದವಿ ಪಡೆದಿರುವ ಮಕ್ಕಳಿದ್ದಾರೆ. ಅವರಿಗೆ ಭವಿಷ್ಯದಲ್ಲಿ ಉತ್ತಮ ಉದ್ಯೋಗ ದೊರಕುತ್ತದೆ ಅಂತಾರೆ ಮೀನುಗಾರ ಮಹಿಳೆಯರು.
ಅಂದಹಾಗೆ, ಬಂದರು ನಿರ್ಮಾಣದಿಂದ ಮಾಜಾಳಿ, ಮಧ್ಯ ದಾಂಡೇಭಾಗ್, ದೇವಭಾಗ್, ಬಾವಳ, ಹಿಪ್ಪಳ್ಳಿ, ಚಿತ್ತಾಕುಲಾ, ಗಾಭಿತವಾಡ ಮುಂತಾದ ಭಾಗದ ಮೀನುಗಾರರಿಗೆ ಅನುಕೂಲವಾಗಲೆಂದು ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಅಲ್ಲದೇ, ಇದರಿಂದ 4,716 ಮೀನುಗಾರರಿಗೆ ಸಹಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಕೆಲವು ಮೀನುಗಾರರ ವಿರೋಧದಿಂದ ಎಚ್ಚೆತ್ತಿರುವ ಅದೇ ಭಾಗದ ನೂರಾರು ಮೀನುಗಾರರು, ರಾಜಕೀಯ ಹಿತಾಸಕ್ತಿಗಳ ಕೈವಾಡದಿಂದಾಗಿ ಒಂದು ಗುಂಪಿನ ಮೀನುಗಾರರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸರಕಾರ ಬಂದರು ನಿರ್ಮಾಣಕ್ಕೆ ತಯಾರಾಗಿದ್ರೂ, ಕೆಲವರ ವಿರೋಧದಿಂದ ಇದಕ್ಕೆ ಅಡ್ಡಿಯಾಗಿದೆ. ಮೀನುಗಾರರ ಅಭಿವೃದ್ಧಿಗೆ ಸರಕಾರ ಅನುಷ್ಠಾನಗೊಳಿಸುತ್ತಿರುವ ಯೋಜನೆ ಸ್ವಾಗತಾರ್ಹ. ಈ ವಿಚಾರದಲ್ಲಿ ರಾಜಕೀಯ ನಡೆಸದೇ ಮೀನುಗಾರರ ಅಭಿವೃದ್ಧಿಗಾಗಿ ಒಗ್ಗೂಡಬೇಕು. ನಮ್ಮ ಮಕ್ಕಳ ಭವಿಷ್ಯದ ದೃಷ್ಠಿಯಿಂದಾದ್ರೂ ಈ ಯೋಜನೆ ಬೇಕೇ ಬೇಕು. ಸೀಬರ್ಡ್ ಯೋಜನೆ, ಬೈತ್‌ಕೋಲ ಬಂದರು ನಿರ್ಮಾಣ ಮುಂತಾದ ಯೋಜನೆ ಜಾರಿಗೊಳಿಸಿದಾಗ ಮೀನುಗಾರರಿಗೆ ಸಿಕ್ಕಿದ್ದೇನಿಲ್ಲ. ಆದರೆ, ಈ ಯೋಜನೆಯಿಂದ ಮೀನುಗಾರರ ಜೀವನ ಉತ್ತಮವಾಗುತ್ತದೆ. ನಮ್ಮ ಬೋಟುಗಳನ್ನು ಬೇರೆಡೆ ಇರಿಸಬೇಕೆಂದೇನಿಲ್ಲ. ನಮ್ಮಲ್ಲಿ ಬಂದರು ನಿರ್ಮಾಣವಾದಲ್ಲಿ ಬಂದರಿನಲ್ಲೇ ಇರಿಸಿ ಇಲ್ಲಿಂದಲೇ ನಮ್ಮ ಕೆಲಸಕ್ಕೆ ತೆರಳಲು ಸಾಧ್ಯ. ಇನ್ನು ಸಮುದ್ರ ಕೊರೆತದಂತಹ ಸಮಸ್ಯೆಗಳಿಂದಲೂ ನಮಗೆ ಮುಕ್ತಿ ದೊರಕುತ್ತದೆ ಅಂತಾರೆ ಮೀನುಗಾರರು.
ಉತ್ತರಕನ್ನಡ: ಮಾಜಾಳಿ ಬಂದರು ನಿರ್ಮಾಣಕ್ಕೆ ಮೀನುಗಾರರ ವಿರೋಧ
ಒಟ್ಟಿನಲ್ಲಿ ರಾಜ್ಯದಲ್ಲಿ ಸರ್ವಋತು ಕಡಲತೀರ ಎಂದು ಖ್ಯಾತಿ ಪಡೆದಿರುವ ಮಾಜಾಳಿ ಕಡಲತೀರದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣವಾಗುತ್ತಿದೆ. ನಿರ್ಮಾಣವಾದರೆ ಉದ್ಯೋಗಾವಕಾಶಗಳು ಸಿಗುತ್ತವೆ. ಆದರೆ ರಾಜಕೀಯ ಹಿತಾಸಕ್ತಿಯಿಂದ ಕೆಲವರು ವಿರೋಧಿಸುತ್ತಿದ್ದಾರೆ. ಮೀನುಗಾರರ ಬೇಕು- ಬೇಡಗಳ ನಡುವೆ ಸರಕಾರ ಮಧ್ಯ ಪ್ರವೇಶಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆಯಿರಿಸಬೇಕಿದೆ.