ಸೀಲ್‌ಡೌನ್ ಲೆಕ್ಕ ಇದೆ, ಆದ್ರೆ ಕೊಡೋಕೆ ರೊಕ್ಕ ಎಲ್ಲಿದೆ?

By Kannadaprabha NewsFirst Published Jul 29, 2020, 2:02 PM IST
Highlights

ಕೋವಿಡ್‌ ಸೋಂಕು ತಗುಲಿದ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡುವುದಕ್ಕೆ ಸಂಬಂಧಿಸಿದಂತೆ ಬ್ಯಾರಿಕೇಡ್‌ ನಿರ್ಮಿಸಲು ತಗಲುವ ವೆಚ್ಚ ಯಾರು ನೀಡುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.

- ಚಿಕ್ಕಪ್ಪನಹಳ್ಳಿ ಷಣ್ಮುಖ, ಕನ್ನಡಪ್ರಭ

ಚಿತ್ರದುರ್ಗ(ಜು.29): ಕೋವಿಡ್‌ ಸೋಂಕು ಚಿತ್ರದುರ್ಗ ಜಿಲ್ಲೆಯಲ್ಲಿ ತರಾವರಿ ಬಾಧೆಗಳ ತಂದೊಡ್ಡಿದ್ದು, ನಗರ ಸ್ಥಳೀಯ ಸಂಸ್ಥೆಗಳು ಹೈರಾಣವಾಗಿ ಹೋಗಿವೆ. ಮಾಸ್ಕ್‌ ಖರೀದಿ, ಪಿಪಿಇ ಕಿಟ್‌ಗಳ ಪೂರೈಕೆ ಮುಂತಾದ ಪ್ರಕ್ರಿಯೆಗಳು ಜಿಲ್ಲಾಡಳಿತದ ಸುಪರ್ಧಿಯಲ್ಲಿ ಆರೋಗ್ಯ ಇಲಾಖೆ ನಿರ್ವಹಿಸುತ್ತಿದ್ದು, ಕೋವಿಡ್‌ ಸೋಂಕು ತಗುಲಿದ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡುವುದಕ್ಕೆ ಸಂಬಂಧಿಸಿದಂತೆ ಬ್ಯಾರಿಕೇಡ್‌ ನಿರ್ಮಿಸಲು ತಗಲುವ ವೆಚ್ಚ ಯಾರು ನೀಡುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ.

ಕೋವಿಡ್‌ 19 ಸೋಂಕಿತರ ಬುಲೆಟಿನ್‌ ಜಿಲ್ಲಾ ಮಟ್ಟದಲ್ಲಿ ನಿತ್ಯ ಬಿಡುಗಡೆಯಾಗುತ್ತಿದೆ. ಇದರ ಪಟ್ಟಿಯೊಂದು ನಗರ ಸಭೆಗೆ ರವಾನೆಯಾಗುತ್ತಿದ್ದು, ಸೋಂಕಿತರು ಇರುವ ಮನೆ ಹಾಗೂ ರಸ್ತೆಗಳ ತಕ್ಷಣವೇ ಸೀಲ್‌ಡೌನ್‌ ಮಾಡಬೇಕಿದೆ. ಈ ವೇಳೆ ಬಂಬುಗಳ ಹೊತ್ತು ಬರುವ ನಗರಸಭೆ ವಾಹನ ಬ್ಯಾರಿಕೇಡ್‌ಗಳ ನಿರ್ಮಿಸಿ ವಾಪಸ್ಸಾಗುತ್ತಿದೆ. ಚಿತ್ರದುರ್ಗದಲ್ಲಿ ಸದ್ಯ ಇಂತಹ 25ಕ್ಕೂ ಹೆಚ್ಚು ಸೀಲ್‌ಡೌನ್‌ ಪ್ರದೇಶಗಳಿವೆ.

'ಸರ್ಕಾರದ ವೈಫಲ್ಯದಿಂದ ಕರ್ನಾಟಕ ಕೊರೋನಾ ಹಾಟ್‌ಸ್ಪಾಟ್‌ ಆಗುತ್ತಿದೆ'

ಸೋಂಕಿತನು ವಾಸಿಸುವ ನೂರು ಮೀಟರ್‌ ಪ್ರದೇಶದಲ್ಲಿ ಸೀಲ್‌ಡೌನ್‌ ಮಾಡಲಾಗುತ್ತಿದೆ. ಇದಕ್ಕಾಗಿ ಕನಿಷ್ಠವೆಂದರೂ 50ಕ್ಕೂ ಹೆಚ್ಚು ಬಂಬುಗಳು ಬೇಕು. ಇವ್ಯಾವೂ ನಗರಸಭೆಯಲ್ಲಿ ಸ್ಟಾಕ್‌ ಇರುವುದಿಲ್ಲ. ಗುತ್ತಿದಾರನೊಬ್ಬನ ಹುಡುಕಿ ಅದರ ಜವಾಬ್ದಾರಿಯನ್ನು ನಿರ್ವಹಿಸಲು ನೀಡಬೇಕಾಗುತ್ತದೆ. ಕಳೆದ ಒಂದೂವರೆ ತಿಂಗಳಿನಿಂದ ಸೀಲ್‌ಡೌನ್‌ ಪ್ರಕ್ರಿಯೆ ನಡೆದಿದ್ದು, ಹಣ ಪಾವತಿ ಮಾಡುವ ಉಸಾಬರಿಗೆ ನಗರಸಭೆ ಹೋಗಿಲ್ಲ. ಯಾವ ಬಾಬತ್ತಿನಿಂದ ಕೊಡಬೇಕು, ಅನುದಾನ ಎಲ್ಲಿಂದ ಒದಗಿಸಬೇಕು ಎಂಬ ಚಿಂತೆಯಲ್ಲಿ ಮುಳುಗಿವೆ. ಚಿತ್ರದುರ್ಗ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಈ ಸಮಸ್ಯೆ ಎದುರಿಸುತ್ತಿವೆ.

ಸ್ಯಾನಿಟೈಜರ್‌ ಕೂಡಾ ದುಬಾರಿ:

ಕೋವಿಡ್‌ ಸೋಂಕಿತರ ಪ್ರದೇಶವನ್ನು ಸ್ಯಾನಿಟೈಸ್‌ ಮಾಡಲು ನಗರಸಭೆಗಳು ಮುಂದಾಗುತ್ತಿವೆ. ಇದಕ್ಕಾಗಿ ಅಪಾರ ಪ್ರಮಾಣದ ಹಣ ವ್ಯಯವಾಗುತ್ತಿವೆ. ಜಿಲ್ಲಾಡಳಿತದ ಸೂಚನೆಗಳ ಮಾತ್ರ ಪಾಲನೆ ಮಾಡುತ್ತಿರುವ ನಗರಸ್ಥಳೀಯ ಸಂಸ್ಥೆಗಳು ಒಂದಿಷ್ಟಾದರೂ ಹಣ ಕೊಡಿ ಎಂದು ಜಿಲ್ಲಾಡಳಿತದ ಮುಂದೆ ತಲೆಕೆರೆದು ನಿಂತುಕೊಳ್ಳಲು ಸಾಧ್ಯವಾಗದಷ್ಟರ ಮಟ್ಟಿಗೆ ನಿತ್ರಾಣಕ್ಕೆ ಒಳಗಾಗಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳ ಗೋಳು ಇಷ್ಟಕ್ಕೆ ನಿಲ್ಲುವುದಿಲ್ಲ. ಕೋವಿಡ್‌ ಸೋಂಕಿತರು ಏನಾದರೂ ಸತ್ತಲ್ಲಿ ಅಂತ್ಯ ಸಂಸ್ಕಾರ ಮಾಡಲು ಜೆಸಿಬಿ ಯಂತ್ರಗಳ ಕಳಿಸಬೇಕು. ಗುಂಡಿ ತೆಗೆದು ಸಂಸ್ಕಾರ ಮುಗಿವ ತನಕ ಸಿಬ್ಬಂದಿ ಅಲ್ಲಿಯೇ ಇದ್ದು ಬರಬೇಕು. ನಗರದ ಕಸ ಹೊಡೆದು ಸ್ವಚ್ಛತೆ ಕೆಲಸ ಮಾತ್ರ ಮಾಡುತ್ತಿದ್ದ ಪೌರ ಕಾರ್ಮಿಕರು ಇದೀಗ ಅಂತ್ಯ ಸಂಸ್ಕಾರದಂತಹ ಕ್ರಿಯೆ ನೆರವೇರಿಸುವ ಪರಿಸ್ಥಿತಿ ಬಂದಿದ್ದಕ್ಕೆ ಪರಿತಪಿಸುತ್ತಿದ್ದಾರೆ.

ಒಂದು ಬಾರಿ ಸೀಲ್‌ಡೌನ್‌ ಮಾಡಲು ನಗರಸಭೆಗೆ ಹತ್ತಾರು ಸಾವಿರ ರುಪಾಯಿ ಖರ್ಚು ಬರುತ್ತಿದೆ. ನಿರ್ವಹಿಸಲು ಹಣ ವ್ಯಯ ಮಾಡುವುದರ ಬಗ್ಗೆ ಇಲಾಖೆಯ ಮೇಲಧಿಕಾರಿಗಳಿಂದ ಸ್ಪಷ್ಟಸೂಚನೆಗಳಿಲ್ಲ. ಜಿಲ್ಲಾಡಳಿತದಿಂದ ಅಗತ್ಯ ನೆರವಿನ ಭರವಸೆ ಬಂದಿಲ್ಲ. ಕೋವಿಡ್‌ನಿಂದಾಗಿ ಸಂಪನ್ಮೂಲ ಕ್ರೋಢೀಕರಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಹಿನ್ನಡೆ ಅನುಭವಿಸುತ್ತಿದ್ದು ಸೀಲ್‌ಡೌನ್‌ ಪ್ರಕ್ರಿಯೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸಿದೆ. -ಹೆಸರು ಹೇಳಲು ಇಚ್ಚಿಸದ ನಗರ ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿ


 

click me!