ದೇವೇಗೌಡರ ಸೋಲಿಸಿದ್ದಕ್ಕೆ ‘ಕಾಶಿ‘ಯಾತ್ರೆ ಗಿಫ್ಟ್‌!

By Web DeskFirst Published Jun 16, 2019, 10:45 AM IST
Highlights

ದೇವೇಗೌಡರ ಸೋಲಿಸಿದ್ದಕ್ಕೆ ‘ಕಾಶಿ‘ಯಾತ್ರೆ ಗಿಫ್ಟ್‌!| ವರಿಷ್ಠರು ಕೊಟ್ಟಮಾತಿನಂತೆ ತುಮಕೂರು ಪಾಲಿಕೆ ಸದಸ್ಯರಿಗೆ ವಿಶ್ವನಾಥನ ದರ್ಶನ ಭಾಗ್ಯ| ಜನಪ್ರತಿನಿಧಿಗಳ ಜತೆ ನಮ್ಮನ್ನು ಕರೆದುಕೊಂಡು ಹೋಗುವಂತೆ ಕಾರ್ಯಕರ್ತರ ದುಂಬಾಲು

ಉಗಮ ಶ್ರೀನಿವಾಸ್‌, ಕನ್ನಡಪ್ರಭ

ತುಮಕೂರು[ಜೂ.16]: ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು ಸೋಲಿಸಿದ್ದಕ್ಕೆ ಪ್ರತಿಯಾಗಿ ಸ್ಥಳೀಯ ಬಿಜೆಪಿ ಪಾಲಿಕೆ ಸದಸ್ಯರನ್ನು ‘ಕಾಶಿ‘ಯಾತ್ರೆಗೆ ಕಳುಹಿಸಲು ಸದ್ದಿಲ್ಲದೆ ತಯಾರಿ ನಡೆದಿದ್ದು, ಇತ್ತ ಮುಖಂಡರು ಪಾಲಿಕೆ ಸದಸ್ಯರ ಜತೆ ನಮ್ಮನ್ನು ವಿಶ್ವನಾಥನ ದರ್ಶನಕ್ಕೆ ಕಳುಹಿಸಿಕೊಡಿ ಎಂದು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ವರಿಷ್ಠರ ದುಂಬಾಲು ಬಿದ್ದಿದ್ದಾರೆ.

ಲೋಕಸಭಾ ಚುನಾವಣಾ ವೇಳೆ ತುಮಕೂರಿನ ಶಿರಾ ರಸ್ತೆಯಲ್ಲಿ ನೂತನವಾಗಿ ಆರಂಭವಾಗಿದ್ದ ಬಿಜೆಪಿ ಕಾರ್ಯಾಲಯದಲ್ಲಿ ನಡೆದಿದ್ದ ಬಿಜೆಪಿ ನಗರ ಘಟಕ ಸಭೆಯಲ್ಲಿ ತುಮಕೂರು ಕ್ಷೇತ್ರ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ವಿ. ಸೋಮಣ್ಣ, ಬಸವರಾಜು ಅವರನ್ನು ಗೆಲ್ಲಿಸಿದರೆ ಬಿಜೆಪಿಯ ಪಾಲಿಕೆ ಸದಸ್ಯರನ್ನು ಕಾಶಿಗೆ ಕಳುಹಿಸುವುದಾಗಿ ಹೇಳಿ ಹುರಿದುಂಬಿಸಿದ್ದರು. ಆಗ ಸಭೆಯಲ್ಲಿದ್ದ ಕೆಲ ಮಹಿಳಾ ಮುಖಂಡರು ನಾವು ಬಿಜೆಪಿ ಗೆಲುವಿಗೆ ದುಡಿಯುತ್ತಿದ್ದೇವೆ. ಬರೀ ಪಾಲಿಕೆ ಸದಸ್ಯರನ್ನಷ್ಟೆಏಕೆ ನಮ್ಮನ್ನು ಕಳುಹಿಸಿ ಎಂದಿದ್ದರು. ಅದಕ್ಕೆ ಪ್ರತಿಯಾಗಿ ಸೋಮಣ್ಣ ಆಗಲಿ ನಿಮ್ಮನ್ನು ಕಳುಹಿಸುತ್ತೇನೆಂದು ಭರವಸೆ ನೀಡಿದ್ದರು.

ಇದೀಗ ಲೋಕಸಭಾ ಚುನಾವಣೆ ಮುಗಿದಿದ್ದು, ದೇವೇಗೌಡರ ಮಣಿಸಿ ಬಸವರಾಜು ಸಂಸದರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವರಿಷ್ಠರು ತಾವು ಕೊಟ್ಟಮಾತಿನಂತೆ, ಪಾಲಿಕೆ ಸದಸ್ಯರ ಕಾಶಿಯಾತ್ರೆಗೆ ಸಿದ್ಧತೆಗಳು ನಡೆದಿವೆ ಎಂದು ತಿಳಿದುಬಂದಿದೆ.

ಪಾಲಿಕೆ ಬಜೆಟ್‌ ಬಳಿಕ ಯಾತ್ರೆ:

ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವಾರ ನಡೆಯಲಿರುವ ತುಮಕೂರು ಮಹಾನಗರ ಪಾಲಿಕೆ ಬಜೆಟ್‌ ಆದ ಬಳಿಕ, 9 ಮಂದಿ ಬಿಜೆಪಿ ಸದಸ್ಯರು ವಿಶ್ವನಾಥನ ದರ್ಶನಕ್ಕೆ ಕಾಶಿಗೆ ತೆರಳಲಿದ್ದಾರೆ. ಜೊತೆಗೆ ಗಂಗಾನದಿ, ಘಾಟ್‌ಗಳ ದರ್ಶನ ಮಾಡಿಕೊಂಡು ಬರಲಿದ್ದಾರೆ.

ಕಗ್ಗಂಟಾದ ಯಾತ್ರೆ:

ಒಂದೆಡೆ ಕಾಶಿ ಯಾತ್ರೆಗೆ ಬಿಜೆಪಿ ಪುರಪಿತೃರು ತೆರಳಲು ವೇದಿಕೆ ಸಿದ್ಧವಾಗುತ್ತಿರುವ ಬೆನ್ನಲ್ಲೇ ಪಕ್ಷದ ಸ್ಥಳೀಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಕೂಡ ಬಸವರಾಜು ಗೆಲುವಿಗಾಗಿ ಸಾಕಷ್ಟುಶ್ರಮ ಪಟ್ಟಿದ್ದೇವೆ. ಅಂದಿನ ಸಭೆಯಲ್ಲಿ ನಮ್ಮನ್ನು ಕಾಶಿಗೆ ಕರೆದುಕೊಂಡು ಹೋಗುವುದಾಗಿ ವಿ.ಸೋಮಣ್ಣ ಹೇಳಿದ್ದರು. ನಮಗೆ ವಿಮಾನದಲ್ಲಿ ಬೇಡ, ರೈಲಿನಲ್ಲಾದರೂ ಸರಿಯೇ ಕಾಶಿಗೆ ಕಳುಹಿಸಲಿ ಸಾಕು ಪೆಚ್ಚು ಮುಖ ಹಾಕಿಕೊಂಡು ಕುಳಿತ್ತಿದ್ದಾರೆ.

ತಲೆನೋವಾದ ಕಾಶಿಯಾತ್ರೆ:

ಕಾರ್ಯಕರ್ತರ ಅಳಲು ನಿಜಕ್ಕೂ ತಲೆನೋವಾಗಿ ಪರಿಣಮಿಸಿದೆ. ಅಂದು ಗೌಡರನ್ನು ಸೋಲಿಸಲು ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳಿಗೆ ಹುರಿದುಂಬಿಸಲು ಹೋಗಿ ವರಿಷ್ಠರು ಪೇಚಿಗೆ ಸಿಲುಕಿದಂತಾಗಿದೆ. ಪುರಪಿತೃರನ್ನು ಬಿಟ್ಟು ಕೆಲ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಳುಹಿಸುವುದಾದರೆ ಎಷ್ಟುಜನರನ್ನು ಕಳುಹಿಸುವುದು ಎಂಬ ಗೋಜಲು ಉಂಟಾಗಿದೆ. ಹೀಗಾಗಿ ಕಾಶಿಯಾತ್ರೆ ಕಗ್ಗಂಟಾಗಿ ಪರಿಣಮಿಸಿದೆ.

click me!