ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಕಡಿಮೆ ಮಾಡಲು 16.5 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ನಿರ್ಮಾಣವಾಗುವ ಈ ಮಾರ್ಗವು ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುವ ನಿರೀಕ್ಷೆಯಿದೆ.
ಬೆಂಗಳೂರು (ಮಾ.31): ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಟ್ರಾಫಿಕ್ ಜಾಮ್ ಹೊಂದಿದ ನಗರ ಎಂಬ ಅಪಖ್ಯಾತಿಗೆ ಒಳಗಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 16.5 ಕಿ.ಮೀ ಸುರಂಗ ಮಾರ್ಗವನ್ನು ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೆಬ್ಬಾಳದ ಬಳಿಯ ಎಸ್ಟೀಮ್ ಮಾಲ್‌ನಿಂದ ಹೊಸೂರು ರಸ್ತೆ ಸಿಲ್ಕ್ ಬೋರ್ಡ್‌ವರೆಗೆ 125 ಅಡಿ ಆಳದಿಂದ 180 ಅಡಿ ಆಳದಲ್ಲಿ ಅವಳಿ ಸುರಂಗ ಮಾರ್ಗ ನಿರ್ಮಿಸಲು 5 ವರ್ಷಗಳ ಟೆಂಡರ್ ಕರೆಯಲಾಗುತ್ತಿದ್ದು, 30 ವರ್ಷಗಳ ಕಾಲ ಟೋಲ್ ಸಂಗ್ರಹಕ್ಕೂ ಲೆಕ್ಕಾಚಾರ ಹಾಕಲಾಗಿದೆ.
ರಾಜ್ಯ ಸರ್ಕಾರದ ಸಲಹೆಯಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಮುಂಬೈ ನಗರದ ಸರಂಗ ಮಾರ್ಗದ ಮಾದರಿಯಲ್ಲಿ ಬೆಂಗಳೂರಿನಲ್ಲಿ ಟ್ವಿನ್ ಟ್ಯೂಬ್ ಟನೆಲ್ (ಅವಳಿ ಸುರಂಗ ಮಾರ್ಗ) ನಿರ್ಮಾಣ ಮಾಡಲು ಬಿಬಿಎಂಪಿ ವತಿಯಿಂದ ಟೆಂಡರ್ ಆಹ್ವಾನಿಸಲಾಗುತ್ತಿದೆ. ಈಗಾಗಲೇ ಸುರಂಗ ಮಾರ್ಗದ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಿ ಕೊಡಲು ರೋಡಿಕ್ ಕನ್ಸಲ್‌ಟೆಂಟ್ ಪ್ರೈವೆಟ್ ಲಿಮಿಟೆಡ್‌ಗೆ 9.45 ಕೋಟಿ ರೂ. ಪಾವತಿಸಲಾಗಿದೆ. ಜೊತೆಗೆ, ಬ್ರ್ಯಾಂಡ್ ಬೆಂಗಳೂರು ಸುಗಮ ಸಂಚಾರದ ಕಾರ್ಯಸಾಧ್ಯತಾ ವರದಿ ನೀಡಲು ಅಲ್ಟಿನಾಕ್ ಕನ್ಸಲ್ಟಿಂಗ್ ಎಂಜಿನಿಯರಿಂಗ್ ಸಂಸ್ಥೆಗೆ 5.54 ಕೋಟಿ ರೂ. ಹಣವನ್ನು ಕೂಡ ಪಾವತಿ ಮಾಡಲಾಗಿದೆ.
ಸುರಂಗ ಮಾರ್ಗದ ವೆಚ್ಚ ಹಾಗೂ ಟೋಲ್ ದರ ಎಷ್ಟು?
ಬೆಂಗಳೂರಿನ ಈ ಸುರಂಗ ಮಾರ್ಗ ನಿರ್ಮಾಣಕ್ಕೆ 17,780.13 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಇದು ಹೆಬ್ಬಾಳದ ಬಳಿಯಿಂದ ಮೇಖ್ರಿ ವೃತ್ತ, ಚಾಲುಕ್ಯ ವೃತ್ತ, ಲಾಲ್‌ಬಾಗ್‌ನ ಅಶೋಕ ಪಿಲ್ಲರ್ ಬಳಿ ಪ್ರವೇಶ ಹಾಗೂ ನಿರ್ಗಮನ ದ್ವಾರಕ್ಕೆ 3 ಸಾವಿರ ಕೋಟಿ ರೂ. ವೆಚ್ಚದಲ್ಲಿ 45 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಸುರಂಗ ಮಾರ್ಗ ನಿರ್ಮಾಣಕ್ಕೆ ಶೇ 60:40ರ ಅನುಪಾತದಲ್ಲಿ ಗುತ್ತಿಗೆ ಕಂಪನಿ ಮತ್ತು ಪಾಲಿಕೆಯು ವೆಚ್ಚ ಭರಿಸಲಿವೆ. ರಾಜ್ಯ ಸರಕಾರವು 19 ಸಾವಿರ ಕೋಟಿ ರೂ.ಗಳಿಗೆ ಗ್ಯಾರಂಟಿ ನೀಡಿದೆ. ಬಿಬಿಎಂಪಿಯು ಮೊದಲ ಹಂತದಲ್ಲಿ ಉತ್ತರ-ದಕ್ಷಿಣ ಕಾರಿಡಾರ್ ಸುರಂಗ ನಿರ್ಮಾಣ ಯೋಜನೆಗೆ ಹುಡ್ಕೋದಿಂದ ಶೇ.9ರ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಿದೆ. ಸುರಂಗ ಮಾರ್ಗವನ್ನು 30 ವರ್ಷಗಳ ಕಾಲ ಗುತ್ತಿಗೆ ಪಡೆದ ಸಂಸ್ಥೆಯೇ ಈ ಮಾರ್ಗ ನಿರ್ವಹಣೆ ಮಾಡಲಿದೆ. ಪ್ರತಿ ಕಿ.ಮೀ. ಸಂಚಾರಕ್ಕೆ 17 ರೂ. ಟೋಲ್ ಶುಲ್ಕ ನಿಗದಿಪಡಿಸುವ ಸಾಧ್ಯತೆ ಇದೆ. ಟೋಲ್‌ನಿಂದ ಸಂಗ್ರಹವಾಗುವ ಶುಲ್ಕವನ್ನು ಪಾಲಿಕೆಯು 30 ವರ್ಷಗಳ ಕಾಲ ಗುತ್ತಿಗೆ ಸಂಸ್ಥೆಗೆ ಬಡ್ಡಿ ಸಹಿತ ಮರುಪಾವತಿಸಲಿದೆ.
ಇದನ್ನೂ ಓದಿ: ಟ್ರಾಫಿಕ್ ಪೊಲೀಸ್ರೆ ಸ್ವಲ್ಪ ಧೈರ್ಯ ತೋರಿಸಿ..ಕಣ್ಣೆದುರೇ ಹೆಲ್ಮೆಟ್ ಇಲ್ಲದೆ ತಿರುಗಾಡಿದ್ರೂ ಗರುಡಗಂಬದ ಹಾಗೆ ನಿಲ್ಲೋದಲ್ಲ!
180 ಆಳದಲ್ಲಿ ಸುರಂಗ ಮಾರ್ಗ:
ಬೆಂಗಳೂರಿನಲ್ಲಿ ಹಾಲಿ ಇರುವ ರಸ್ತೆಗಳು, ಜನವಸತಿ ಪ್ರದೇಶ ಹಾಗೂ ಮೆಟ್ರೋ ನಿರ್ಮಾಣದಿಂದಾಗಿ ಮುಂಬರುವ ದಿನಗಳಲ್ಲಿ ರಸ್ತೆ ಅಗಲೀಕರಣ ಮಾಡಿ ಟ್ರಾಫಿಕ್ ನಿಯಂತ್ರಣ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ಸ್ಪಷ್ಟವಾಗಿದೆ. ಇದಕ್ಕೆ ಕಾರಣ ರಸ್ತೆ ಅಗಲ ಮಾಡಲು ಭೂಮಿ ಲಭ್ಯತೆಯಿಲ್ಲ. ಜೊತೆಗೆ ಭೂಸ್ವಾಧೀನ ಪ್ರಕ್ರಿಯೆ ಮಾಡಲು ಜನರು ಯೋಜನೆಗೆ ಒಪ್ಪಿಗೆ ಕೊಡದೇ ಭೂಮಿ ನಿರಾಕರಿಸುತ್ತಾರೆ. ಈಗಾಗಲೇ ಶಿವಾನಂದ ವೃತ್ತದ ಸ್ಟೀಲ್ ಬ್ರಿಡ್ಜ್ ಸೇರಿದಂತೆ ಹಲವು ರಸ್ತೆ ನಿರ್ಮಾಣದ ಯೋಜನೆಗಳಿಗೆ ಭೂ ಸ್ವಾಧೀನ ಸಮಸ್ಯೆಯಿಂದ ಒಂದು ವರ್ಷದ ಕಾಮಗಾರಿ 10 ವರ್ಷಗಳ ಕಾಲ ನಡೆದಿವೆ. ಹೀಗಾಗಿ, ಸುರಂಗ ಮಾರ್ಗದ ಮೂಲಕ ಸಂಚಾರ ಸಮಸ್ಯೆಗೆ ಇತಿಶ್ರೀ ಹಾಡಲು ಮುಂದಾಗಿದೆ. ಆದ್ದರಿಂದ ಹೆಬ್ಬಾಳ ಬಳಿಯ ಎಸ್ಟೀಮ್ ಮಾಲ್, ಮೇಖ್ರಿ ವೃತ್ತ, ಚಾಲುಕ್ಯ ವೃತ್ತ, ಲಾಲ್‌ಬಾಗ್, ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ನಿರ್ಮಾಣ ಮಾಡುವ ಸುರಂಗ ಮಾರ್ಗವು ಹಾಲಿ ನೆಲಮಟ್ಟದಿಂದ 125 ಅಡಿ ಆಳದಲ್ಲಿರುತ್ತದೆ. ಆದ್ದರಿಂದ ಇಲ್ಲಿ ಭೂಸ್ವಾಧೀನದ ಅಗತ್ಯವಿಲ್ಲ. ಇನ್ನು ಮೆಟ್ರೊ ಸುರಂಗ ಮಾರ್ಗ ಹಾದು ಹೋಗಿರು ಸ್ಥಳದಲ್ಲಿ ರಸ್ತೆ ಸುರಂಗ ಮಾರ್ಗವನ್ನು 180 ಅಡಿ ಆಳದಲ್ಲಿ ನಿರ್ಮಿಸಲಾಗುತ್ತದೆ.
ಇದನ್ನೂ ಓದಿ: ತಮಿಳುನಾಡು ಬಾವಿಯಲ್ಲಿ ಕನ್ನಡಿಗರ 17 ಕೆಜಿ ಬಂಗಾರ ಪತ್ತೆ! ಚಿನ್ನಾಭರಣ ನೋಡಿ ಬೆಚ್ಚಿಬಿದ್ದ ಪೊಲೀಸರು!
ರಾಜ್ಯ ಸರ್ಕಾರದ ಉದ್ದೇಶಿತ ಸುರಂಗ ನಿರ್ಮಾಣ 5 ವರ್ಷದೊಳಗೆ ಪೂರ್ಣಗೊಳಿಸಲು ಟಿಬಿಎಂ (ಟನಲ್ ಬೋರಿಂಗ್ ಮಿಷನ್) ಯಂತ್ರಗಳ ಪೂರೈಕೆದಾರರೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ. ದಿನಕ್ಕೆ 180 ಮೀಟರ್‌ನಿಂದ 200 ಮೀಟರ್ ಸುರಂಗ ಕೊರೆದು ವೇಗವಾಗಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಸರ್ಕಾರದಿಂದ ಇದೀಗ ಅನುಮತಿ ದೊರೆಯಲಿದ್ದು, ಏಪ್ರಿಲ್‌ನಲ್ಲಿ ಟೆಂಡರ್ ಆಹ್ವಾನಿಸಲಾಗುವುದು ಎಂದು ಬಿಬಿಎಂಪಿ ಪ್ರಧಾನ ಇಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.