
ಬೆಳಗಾವಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಬೆನ್ನ ಹಿಂದೆಯೇ ಯತ್ನಾಳ ಅವರ ಬಂಡಾಯ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಮುಂಬೈನಲ್ಲಿ ಬುಧವಾರ ಭೇಟಿಯಾಗಿ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ಕುರಿತು ಚರ್ಚೆ ನಡೆಸಿದ್ದಾರೆ.
ತಮ್ಮ ಬಣದ ನಾಯಕ, ಯತ್ನಾಳ್ ಅವರು ಪಕ್ಷದ ಹಿರಿಯ ನಾಯಕರಾಗಿದ್ದು, ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದು ದುರ್ದೈವದ ಸಂಗತಿ. ಅವರನ್ನು ಪಕ್ಷದಲ್ಲಿಯೇ ಮುಂದುವರಿಸುವ ಅನಿವಾರ್ಯತೆಯಿದೆ. ತಟಸ್ಥ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರು ನಮ್ಮ ಜತೆಗಿದ್ದಾರೆ. ಯತ್ನಾಳ್ ಅವರ ಉಚ್ಚಾಟನೆ ಆದೇಶವನ್ನು ವಾಪಸ್ ಪಡೆಯುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುವಂತೆ ಜಾರಕಿಹೊಳಿ ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರಿಗೆ ಮನವಿ ಮಾಡಿದ್ದಾರೆ ಎಂದು ಅವರ ಆಪ್ತ ವಲಯದಿಂದ ತಿಳಿದು ಬಂದಿದೆ.
ಮಾತ್ರವಲ್ಲ, ಈಗ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರನ್ನು ಆ ಹುದ್ದೆಯಿಂದ ಕೆಳಗಿಳಿಸಿ ಅನುಭವದ ಆಧಾರದ ಮೇಲೆ ಮತ್ತೊಬ್ಬರನ್ನು ನೇಮಿಸಲು ವರಿಷ್ಠರ ಮೇಲೆ ಒತ್ತಡ ಹಾಕುವಂತೆ ಕೇಳಿಕೊಂಡಿದ್ದಾರೆ. ಪಕ್ಷದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: ರಾಮುಲು ಡಿಸಿಎಂ ಕನಸಿಗೆ ಅಡ್ಡಗಾಲು ಹಾಕಿದ್ರಾ ಬೆಳಗಾವಿ ಸಾಹುಕಾರ್?
ತರಾತುರಿಯಲ್ಲೇ ದೇವೇಂದ್ರ ಫಡ್ನವೀಸ್ ಅವರ ಭೇಟಿಯಾಗಿರುವುದರಿಂದ ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಸುದೀರ್ಘವಾಗಿ ಚರ್ಚೆಗೆ ಅವಕಾಶ ಸಿಗಲಿಲ್ಲ. ಹಾಗಾಗಿ, ಶೀಘ್ರವೇ ಮತ್ತೊಮ್ಮೆ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಲು ರಮೇಶ ಜಾರಕಿಹೊಳಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮಂಗಳವಾರವೇ ರಮೇಶ ಜಾರಕಿಹೊಳಿ ಅವರು ನಾಗಪುರಕ್ಕೆ ತೆರಳಿ, ಫಡ್ನವೀಸ್ ಅವರನ್ನು ಭೇಟಿಯಾಗಲು ಮುಂದಾಗಿದ್ದರು. ಆದರೆ, ಅವರು ಸಿಗದಿರುವ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಶಾಸಕ ರಮೇಶ ಜಾರಕಿಹೊಳಿ ಅವರ ಮನವಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಯಾವ ಭರವಸೆಯನ್ನು ನೀಡಿಲ್ಲ ಎಂದೂ ಹೇಳಲಾಗುತ್ತಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿದ್ದು ನಿಜ. ಆದರೆ, ಅಲ್ಲಿ ಯಾವ ಚರ್ಚೆ ನಡೆದಿದೆ ಎಂಬುದನ್ನು ಹೇಳಲಾಗದು ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಇದನ್ನೂ ಓದಿ: ಜಾರಕಿಹೊಳಿ ಕುಟುಂಬದಿಂದ ಲಕ್ಷ್ಮಣ್ ಸವದಿ ಟಾರ್ಗೆಟ್? ಅಥಣಿಯಲ್ಲಿ ಸವದಿ ವಿರುದ್ಧ ಮತ್ತೆ ಗುಡುಗಿದ ರಮೇಶ್ ಜಾರಕಿಹೊಳಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.