27ಕ್ಕೆ ಚುನಾವಣೆ : ಬಿಜೆಪಿಯಲ್ಲಿ ಬಿರುಸುಗೊಂಡಿದೆ ರಾಜಕೀಯ ಚಟುವಟಿಕೆ

By Kannadaprabha NewsFirst Published Sep 14, 2019, 9:13 AM IST
Highlights

ಬೆಂಗಳೂರು ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ.ಇದೇ 27ರಂದು ಚುನಾವಣೆ ನಡೆಯಲಿದ್ದು, ಯಾರಿಗೆ ಅಧಿಕಾರ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರು [ಸೆ.14]:  ಬಿಬಿಎಂಪಿಯ ನೂತನ ಮೇಯರ್‌ ಮತ್ತು ಉಪಮೇಯರ್‌ ಚುನಾವಣೆಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ಸೆ.27ಕ್ಕೆ ಚುನಾವಣೆ ನಡೆಯಲಿದೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದರಿಂದ ಬಿಬಿಎಂಪಿಯಲ್ಲೂ ಸರ್ಕಾರದ ಆಡಳಿತ ಪಕ್ಷವೇ ಅಧಿಕಾರ ಹಿಡಿಯುವುದು ಖಚಿತ. ಹಾಗಾಗಿ ಚುನಾವಣಾ ಅಧಿಸೂಚನೆ ಪ್ರಕಟಗೊಂಡ ಬೆನ್ನಲ್ಲೇ ಬಿಜೆಪಿಯಲ್ಲಿ ಮೇಯರ್‌ ಹುದ್ದೆಯ ಆಕಾಂಕ್ಷಿಗಳಿಂದ ಭಾರೀ ಪೈಪೋಟಿ ಆರಂಭಗೊಂಡಿದೆ.

ಬಿಬಿಎಂಪಿಯ ಹಾಲಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಮತ್ತು ಉಪಮೇಯರ್‌ ಬಿ.ಭದ್ರೇಗೌಡ ಅವರ ಅಧಿಕಾರಾವಧಿ ಸೆ.28ಕ್ಕೆ ಪೂರ್ಣಗೊಳ್ಳಲಿದೆ. ಸೆ.27ರ ಬೆಳಗ್ಗೆ 11.30ಕ್ಕೆ ಹೊಸ ಮೇಯರ್‌, ಉಪಮೇಯರ್‌ ಚುನಾವಣೆ ನಡೆಸುವುದಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಶುಕ್ರವಾರ ಅಧಿಸೂಚನೆ ಹೊರಡಿಸಿದ್ದಾರೆ.

ಬಿಜೆಪಿಯಲ್ಲಿ ಬಿರುಸುಗೊಂಡ ರಾಜಕೀಯ:

ಈ ಬಾರಿ ಮೇಯರ್‌ ಹುದ್ದೆ ಸಮಾನ್ಯ ವರ್ಗಕ್ಕೆ, ಉಪಮೇಯರ್‌ ಹುದ್ದೆ ಸಾಮಾನ್ಯ (ಮಹಿಳೆ) ವರ್ಗಕ್ಕೆ ಮೀಸಲಾಗಿದೆ. ಹಾಗಾಗಿ ಸಾಮಾನ್ಯ ವರ್ಗದಡಿ ಬರುವ ಬಿಬಿಎಂಪಿ ಹಾಲಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಗೋವಿಂದರಾಜ ನಗರ ವಾರ್ಡ್‌ ಸದಸ್ಯ ಉಮೇಶ್‌ ಶೆಟ್ಟಿ, ಕಾಡು-ಮಲ್ಲೇಶ್ವರ ವಾರ್ಡ್‌ ಸದಸ್ಯ ಮಂಜುನಾಥ್‌ ರಾಜು ಮತ್ತು ಕುಮಾರಸ್ವಾಮಿ ಲೇಔಟ್‌ ವಾರ್ಡ್‌ ಸದಸ್ಯ ಎಲ್‌.ಶ್ರೀನಿವಾಸ್‌ ಅವರು ಮೇಯರ್‌ ಖುರ್ಚಿ ಮೇಲೆ ಕಣ್ಣಿಟ್ಟಿದ್ದು, ಪಕ್ಷದ ತಮ್ಮ ನಾಯಕರ ಮೂಲಕ ಲಾಬಿ ಆರಂಭಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಪೈಕಿ ಪದ್ಮನಾಭರೆಡ್ಡಿ ಕಳೆದ ನಾಲ್ಕು ವರ್ಷಗಳಿಂದ ಪಾಲಿಕೆ ಪ್ರತಿಪಕ್ಷ ನಾಯಕರಾಗಿ ಕಾರ್ಯ ನಿರ್ವಹಿಸಿರುವುದರಿಂದ ಪಕ್ಷ ಅವರನ್ನು ಈ ಬಾರಿ ಮೇಯರ್‌ ಹುದ್ದೆಗೆ ಪರಿಗಣಿಸಬಹುದು ಎಂಬ ಲೆಕ್ಕಾಚಾರದ ಮಾತುಗಳು ಬಿಬಿಎಂಪಿ ವಲಯದಲ್ಲಿ ಕೇಳಿಬರುತ್ತಿದೆ. ಆದರೆ, ಪದ್ಮನಾಭರೆಡ್ಡಿ ಮೂಲ ಬಿಜೆಪಿಗರಲ್ಲ ಎಂಬ ಕಾರಣಕ್ಕೆ ಅವರಿಗೆ ಮೇಯರ್‌ ಸ್ಥಾನ ತಪ್ಪಿಸಲು ಕೆಲ ಮಾಜಿ ಮೇಯರ್‌ಗಳೂ ಸೇರಿದಂತೆ ಕೆಲವರು ಪಕ್ಷದ ಮುಂದೆ ಮೇಯರ್‌ ಹುದ್ದೆಯನ್ನು ಮೂಲ ಬಿಜೆಪಿಯವರಿಗೆ ನೀಡುವಂತೆ ಈಗಾಗಲೇ ಅಭಿಪ್ರಾಯ ಮಂಡಿಸುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

ಇದನ್ನು, ಉಮೇಶ್‌ ಶೆಟ್ಟಿಮತ್ತು ಮಂಜುನಾಥ ರಾಜು ಅವರು ಮೂಲ ಬಿಜೆಪಿಗರಾಗಿದ್ದು, ಜತೆಗೆ ಪಕ್ಷದಲ್ಲಿ ಅವರ ಬೆಂಬಲಕ್ಕೆ ಕ್ರಮವಾಗಿ ಸಚಿವ ವಿ.ಸೋಮಣ್ಣ ಮತ್ತು ಉಪಮುಖ್ಯಮಂತ್ರಿ ಅಶ್ವತ್‌ ನಾರಾಯಣ ಅವರಿದ್ದಾರೆ. ಪಾಲಿಕೆಯಲ್ಲಿ ವಿಭಿನ್ನ ಹೋರಾಟ ಮಾಡಿಕೊಂಡು ಗಮನ ಸೆಳೆಯುವ ಉಮೇಶ್‌ ಶೆಟ್ಟಿಅವರ ಪರ ಸೋಮಣ್ಣ ಅವರು ಗಟ್ಟಿಯಾಗಿ ನಿಲ್ಲಬಹುದು. ಆದರೆ, 2015ರ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನ ಗಳಿಸಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದರೂ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿಯಿಂದ ಪಾಲಿಕೆ ಅಧಿಕಾರ ಕೈತಪ್ಪಿತು. ಈ ವೇಳೆ ಬಿಜೆಪಿ ಮಂಜುನಾಥ್‌ ರಾಜು ಅವರನ್ನು ಮೇಯರ್‌ ಹುದ್ದೆಗೆ ಕಣಕ್ಕಿಳಿಸಿತ್ತು. ಇದು ಮಂಜುನಾಥ ರಾಜು ಅವರಿಗೆ ಪ್ಲಸ್‌ ಪಾಯಿಂಟ್‌ ಆಗಬಹುದು. ಜತೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಆಪರೇಷನ್‌ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್‌ ಅವರಿಗೆ ಬೆಂಗಳೂರು ಉಸ್ತುವಾರಿಯನ್ನು ನೀಡುವ ಬಗ್ಗೆ ಮುಖ್ಯಮಂತ್ರಿಗಳು ಪರೋಕ್ಷವಾಗಿ ಮುನ್ಸೂಚನೆ ನೀಡಿರುವುದರಿಂದ ಅವರ ಮಾತಿಗೆ ಮೇಯರ್‌ ಚುನಾವಣೆಯಲ್ಲಿ ಮಣೆ ಹಾಕಿದರೆ ಮಂಜುನಾಥ್‌ ರಾಜು ಅವರಿಗೆ ಹಿಂದೆ ತಪ್ಪಿದ್ದ ಮೇಯರ್‌ ಪಟ್ಟಈಗ ಒಲಿದರೆ ಆಶ್ಚರ್ಯವಿಲ್ಲ.

ಇವರ ಜತೆಗೆ ಕಂದಾಯ ಸಚಿವ ಆರ್‌.ಅಶೋಕ್‌ ಬೆಂಬಲಿಗ ಎಲ್‌.ಶ್ರೀನಿವಾಸ್‌ ಕೂಡ ಮೇಯರ್‌ ಆಕಾಂಕ್ಷಿಯಾಗಿದ್ದಾರೆ. ಆದರೆ, ಅವರು ಈಗಾಗಲೇ 2012ರಲ್ಲಿ ಉಪಮೇಯರ್‌ ಹುದ್ದೆ ಅನುಭವಿಸಿರುವುದರಿಂದ ಪಕ್ಷ ಅವರನ್ನು ಪರಿಗಣಿಸುವುದಾ? ಎಂಬ ಅನುಮಾನವಿದೆ. ಕಳೆದ ಬಾರಿ ಹೇಗಾದರೂ ಮಾಡಿ ಬಿಬಿಎಂಪಿ ಗದ್ದುಗೆ ಹಿಡಿಯುವ ಹುಮ್ಮಸ್ಸಿನಲ್ಲಿ ತಂತ್ರಗಾರಿಕೆ ನಡೆಸಿ ಕೊನೆಯಲ್ಲಿ ವಿಫಲವಾದ ಅಶೋಕ್‌ ಅವರ ಮಾತು ಪಕ್ಷದಲ್ಲಿ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎಂಬುದು ನಿರ್ಧರಿಸುತ್ತದೆ.

ಉಪ- ಮೇಯರ್‌ ಆಕಾಂಕ್ಷಿಗಳ್ಯಾರು?

ಇನ್ನು ಉಪಮೇಯರ್‌ ಸ್ಥಾನ ಈಬಾರಿ ಸಾಮಾನ್ಯ (ಮಹಿಳೆ) ವರ್ಗಕ್ಕೆ ಮೀಸಲಿರುವುದರಿಂದ ಬಿಟಿಎಂ ಲೇಔಟ್‌ ಕಾರ್ಪೊರೇಟರ್‌ ಸರಸ್ವತಮ್ಮ, ಉತ್ತರಹಳ್ಳಿ ವಾರ್ಡ್‌ ಕಾರ್ಪೊರೇಟರ್‌ ಶಶಿರೇಖಾ ಜಯರಾಮ್‌ ಮತ್ತು ಜೆ.ಪಿ.ಪಾರ್ಕ್ ಕಾರ್ಪೊರೇಟರ್‌ ಮಮತಾ ವಾಸುದೇವ್‌ ಅವರ ಹೆಸರುಗಳು ಕೇಳಿಬರುತ್ತಿವೆ. ಈ ಮಧ್ಯೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾದ ಅನರ್ಹಗೊಂಡಿರುವ ಶಾಸಕರ ಪೈಕಿ ಜೆಡಿಎಸ್‌ನ ಕೆ. ಗೋಪಾಲಯ್ಯ ಅವರ ಪತ್ನಿ ಹೇಮಲತಾ ಗೋಪಾಲಯ್ಯ ಕೂಡ ಮತ್ತೆ ಉಪ ಮೇಯರ್‌ ಹುದ್ದೆಗೆ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೂ ಭೇಟಿ ಮಾಡಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷೇತರರೇ ನಿರ್ಣಾಯಕ!

ಕಳೆದ ನಾಲ್ಕು ವರ್ಷಗಳಂತೆ ಈ ಬಾರಿಯ ಚುನಾವಣೆಯಲ್ಲೂ ಪಕ್ಷೇತರರೇ ನಿರ್ಣಾಯಕ. ಮೇಯರ್‌ ಹಾಗೂ ಉಪ-ಮೇಯರ್‌ ಯಾರಾಗಬೇಕೆಂದು ನಿರ್ಧರಿಸುವವರೇ ಪಕ್ಷೇತರರು. ಆದರೆ, ಮತ್ತೊಂದು ಮೂಲಗಳ ಪ್ರಕಾರ, ಮೈತ್ರಿ ಸರ್ಕಾರ ಪತನದಿಂದ ಪಾಲಿಕೆಯಲ್ಲೂ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಮೊಟಕಾದರೆ ಜೆಡಿಎಸ್‌ ಸದಸ್ಯರ ಮತಗಳೂ ಬಿಜೆಪಿಗೆ ಬೀಳುವ ಸಾಧ್ಯತೆ ಇದೆ.

ಚುನಾವಣೆಗೆ ಬಿಬಿಎಂಪಿ ಸಿದ್ದಪಡಿಸಿರುವ ಮತದಾರ ಪಟ್ಟಿಪ್ರಕಾರ, ಈ ಬಾರಿ ಚುನಾವಣೆಗೆ ಒಟ್ಟು 257 ಮತದಾರರಿದ್ದು, ಯಾವುದೇ ಪಕ್ಷ ಗೆಲ್ಲಲು 129 ಮತಗಳ ಮ್ಯಾಜಿಕ್‌ ನಂಬರ್‌ ಬೇಕಾಗಿದೆ. ಬಿಜೆಪಿ 125, ಕಾಂಗ್ರೆಸ್‌ 104 ಮತ್ತು ಜೆಡಿಎಸ್‌ 21 ಸಂಖ್ಯಾಬಲ ಹೊಂದಿದೆ. ಮತ್ತೆ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಮುಂದುವರೆದರು ಮೈತ್ರಿ ಬಲ ಕೂಡ 125 ಆಗಲಿದೆ. ಆಗ ಉಳಿದ ಏಳು ಜನ ಪಕ್ಷೇತರರೇ ನಿರ್ಣಾಯಕರಾಗುತ್ತಾರೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಬಹುತೇಕ ಪಕ್ಷೇತರರು ಬಿಜೆಪಿಯನ್ನೇ ಬೆಂಬಲಿಸುವುದು ಮೊದಲಿಂದಲೂ ರೂಢಿಯಲ್ಲಿದೆ.

click me!