ಒಂದು ಸಾವಿರ ‘ಆಶಾ’ಗಳಿಗೆ ಸೋಂಕು, ಐವರ ಸಾವು: ಸಂಕಷ್ಟದಲ್ಲಿ ಕೊರೋನಾ ವಾರಿಯರ್ಸ್‌

By Kannadaprabha News  |  First Published May 13, 2021, 7:41 AM IST

* ನಿತ್ಯ ಸೋಂಕಿತರ ಸಂಪರ್ಕದಲ್ಲಿರುವ ಆಶಾಗಳು
* ಆಕ್ಸಿಮೀಟರ್‌ ಕೊಟ್ಟು, ಸ್ಯಾನಿಟೈಸರ್‌ ಮರೆತ ಸರ್ಕಾರ
* ಕಳೆದ ಬಾರಿ ಸತ್ತ 11 ಆಶಾಗಳಿಗೆ ಬಂದಿಲ್ಲ ಪರಿಹಾರ
 


ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ(ಮೇ.13): ಈ ಕೊರೋನಾ ಸಂಕಷ್ಟದಲ್ಲಿ ಗ್ರಾಮೀಣ ಭಾಗದ ಸೋಂಕಿತರ ಬದುಕಿನ ‘ಆಶಾಕಿರಣ‘ ಆಗಿರುವ ‘ಆಶಾ ಕಾರ್ಯಕರ್ತೆಯರು’ ಆರೋಗ್ಯ ಸುರಕ್ಷತಾ ಸೌಲಭ್ಯಗಳ ಕೊರತೆಯಿಂದಾಗಿ ಸಾಲುಸಾಲಾಗಿ ಸೋಂಕಿಗೆ ಬಲಿಯಾಗುತ್ತಿದ್ದಾರೆ!

Latest Videos

undefined

ಕಳೆದ ಹದಿನೈದು ದಿನಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಆಶಾಗಳಿಗೆ ಸೋಂಕು ತಗುಲಿದೆ. ಕೊಡಗು ಜಿಲ್ಲೆಯೊಂದರಲ್ಲೇ 24 ಆಶಾಗಳಿಗೆ ಪಾಜಿಟಿವ್‌. ಪ್ರತಿ ಜಿಲ್ಲೆಯಲ್ಲಿ 40 ರಿಂದ 50 ಕಾರ್ಯಕರ್ತೆಯರಿಗೆ ಸೋಂಕು ತಗುಲಿದೆ. ಚಿಕಿತ್ಸೆ ಫಲಿಸದೇ ಐವರು ಮೃತಪಟ್ಟಿದ್ದು, ಉಳಿದವರಲ್ಲಿ ಭಾರೀ ಆತಂಕ ಮೂಡಿಸಿದೆ.

"

ಸದ್ಯ ರಾಜ್ಯದಲ್ಲಿ 42 ಸಾವಿರ ಆಶಾ ಕಾರ್ಯಕರ್ತೆಯರಿದ್ದು, ಅವರೆಲ್ಲ ‘ಫ್ರಂಟ್‌ಲೈನ್‌ ಕೊರೋನಾ ವಾರಿಯರ್ಸ್‌’. ಗ್ರಾಮೀಣ ಭಾಗದ ಸೋಂಕಿತರ ಆರೈಕೆ, ವ್ಯಾಕ್ಸಿನ್‌ ಹಾಕಿಸುವುದು ಮತ್ತು ಸೋಂಕಿನ ಬಗ್ಗೆ ವರದಿ ನೀಡುವ ಹೊಣೆ ಇವರದು. ಕೊರೋನಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಇವರ ಕೈಗೆ ಆಕ್ಸಿಮೀಟರ್‌ ಕೊಟ್ಟಿರುವ ಸರ್ಕಾರ, ಕನಿಷ್ಠ ಸ್ಯಾನಿಟೈಸರ್‌ ಕೂಡ ನೀಡದಿರುವುದು ಈ ಆಶಾಗಳು ಸೋಂಕಿನಿಂದ ನರಳುವಂತಾಗಿದೆ.

ಮೊದಲ ಅಲೆಯಲ್ಲಿ 12 ಜನ ಆಶಾಗಳು ಕೊರೋನಾಕ್ಕೆ ಬಲಿಯಾಗಿದ್ದಾರೆ. ಅವರಲ್ಲಿ ಈ ವರೆಗೆ ಒಬ್ಬರಿಗೆ ಮಾತ್ರ ಪರಿಹಾರ ಲಭಿಸಿದ್ದು, ಉಳಿದ 11 ಆಶಾಗಳ ಕುಟುಂಬಗಳು ಪರಿಹಾರಕ್ಕಾಗಿ ಕಚೇರಿಗಳನ್ನು ಅಲೆಯುತ್ತಿವೆ. ಈ ಮಧ್ಯೆ ಎರಡನೇ ಅಲೆಯ ಅಲ್ಪ ಅವಧಿಯಲ್ಲೇ 5 ಜನ ಆಶಾಗಳು ಮೃತಪಟ್ಟಿದ್ದಾರೆ ಮತ್ತು ಎರಡು ಡೋಸ್‌ ವ್ಯಾಕ್ಸಿನ್‌ ಪಡೆದಾಗ್ಯೂ ದೊಡ್ಡ ಸಂಖ್ಯೆಯಲ್ಲಿ ಸೋಂಕಿತರು ಆಗುತ್ತಿದ್ದಾರೆ.

ನನ್ನ 3 ತಿಂಗಳ ಸಂಬಳ ಆಶಾ ಕಾರ್ಯಕರ್ತೆಯರಿಗೆ: ಶಾಸಕ ಗಣೇಶ್ ಹುಕ್ಕೇರಿ

ಸಾವಿನೊಂದಿಗೆ ಸರಸ:

ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ರಚಿಸಲಾಗಿರುವ ‘ಗ್ರಾಮೀಣ ಕಾರ್ಯಪಡೆ’ಯಲ್ಲಿ ಆಶಾಗಳು ಮುಂಚೂಣಿ ವಾರಿಯರ್ಸ್‌. ಒಂದು ಸಾವಿರ ಜನಸಂಖ್ಯೆಗೆ ಒಬ್ಬರು ಆಶಾ ಇರುತ್ತಾರೆ. ನಿತ್ಯ ಆಯಾ ಗ್ರಾಮಕ್ಕೆ ಬರುವವರ ಮಾಹಿತಿ, ಅವರ ಸ್ವಾ್ಯಬ್‌ ಟೆಸ್ಟ್‌, ವ್ಯಾಕ್ಸಿನ್‌ ಹಾಕಿಸುವುದು, ಸೋಂಕಿತರಿಗೆ ಚಿಕಿತ್ಸೆ ಕೊಡಿಸುವುದು, ಹೋಮ್‌ ಐಸೋಲೇಷನ್‌ ಇದ್ದವರಿಗೆ ಔಷಧಿ ಪೂರೈಕೆ ಮಾಡುವ ಜತೆಗೆ ರಾಜ್ಯ ಸರ್ಕಾರಕ್ಕೆ ಆರೋಗ್ಯ ಮಾಹಿತಿ, ಮನೆಗಳ ಸರ್ವೇ ವರದಿ ಒಪ್ಪಿಸುವುದು ಇವರ ನಿತ್ಯದ ಕಾಯಕ.

ಒಂದು ಅಂದಾಜಿನ ಪ್ರಕಾರ ನಿತ್ಯ ಒಬ್ಬ ಆಶಾ ಕನಿಷ್ಠ ಆರೇಳು ಸೋಂಕಿತರನ್ನು ಭೇಟಿಯಾಗಬೇಕು. ಆಕ್ಸಿಮೀಟರ್‌ನಿಂದ ಅವರ ಆಕ್ಸಿಜನ್‌ ಪ್ರಮಾಣ ದಾಖಲಿಸಬೇಕು. ಇವರ ಕೈಗೆ ಆಕ್ಸಿಮೀಟರ್‌ ಕೊಟ್ಟಿರುವ ಸರ್ಕಾರ, ಕನಿಷ್ಠ ಸ್ಯಾನಿಟೈಸರ್‌ ಕೂಡ ಕೊಟ್ಟಿಲ್ಲ. ಸೋಂಕಿತರನ್ನು ಸ್ಪರ್ಶಿಸಿದಾಗ ಇವರಿಗೂ ಸೋಂಕು ತಗಲುವ ಅಪಾಯಗಳಿವೆ. ಕೈಗವಸು, ಸ್ಯಾನಿಟೈಸರ್‌, ಮಾಸ್ಕ್‌, ಪಿಪಿಐ ಕಿಟ್‌ ಇಲ್ಲದೇ ಸೋಂಕಿತರ ಆರೈಕೆ ಮಾಡುವುದು ನಿಜಕ್ಕೂ ಸಾವಿನೊಂದಿಗೆ ಸರಸವಾಡಿದಂತೆ. ಈ ಸತ್ಯ ಗೊತ್ತಿದ್ದೂ ಸರ್ಕಾರ ಈ ಆಶಾಗಳಿಗೆ ಯಾವುದೇ ಆರೋಗ್ಯ ರಕ್ಷಣೆಯ ಪರಿಕರಗಳನ್ನು ಕೊಡದೇ ಸೋಂಕಿತರ ಆರೈಕೆಗೆ ಹಚ್ಚಿದೆ.

ಅಸ್ಪೃಶ್ಯತಾ ಭಾವ:

ಏನೆಲ್ಲ ಸಮಸ್ಯೆ, ಸವಾಲುಗಳ ಮಧ್ಯೆ ತಮ್ಮ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಆಶಾಗಳಿಗೀಗ ಅಸ್ಪೃಶ್ಯತಾ ಭಾವ ಕಾಡುತ್ತಿದೆ! ‘ಸೋಂಕಿತರನ್ನು ಮುಟ್ಟಿನಮ್ಮನೆಗೆ ಬಂದ್ರೆ, ನಮ್ಗೂ ಕೊರೋನಾ ಬರುತ್ತೆ. ನಮ್‌ ಮನೆಹತ್ರ ಬರಬೇಡಿ ನೀವು’ ಎಂದು ಎಷ್ಟೋ ಜನ ಇವರಿಗೆ ಸಿಟ್ಟಿನಿಂದಲೇ ತಾಕೀತು ಮಾಡುತ್ತಿದ್ದಾರೆ. ಈ ಬಿರು ಬಿಸಿಲಲ್ಲಿ ಮನೆ ಮನೆ ಸುತ್ತುವಾಗ ಕುಡಿಯಲು ನೀರು ಕೇಳಿದರೆ ಕೊಡುವುದಿಲ್ಲ. ಅಷ್ಟೇ ಏಕೆ ತುಸು ಹೊತ್ತು ದಣಿವಾರಿಸಿಕೊಳ್ಳಲು ಗಿಡ, ಮನೆ ಗೋಡೆಯ ನೆರಳಲ್ಲೂ ಕೂಡ್ರಲು ಬಿಡುತ್ತಿಲ್ಲವಂತೆ. ಅಕ್ಷರಶಃ ಅಸ್ಪೃಶ್ಯರಾಗಿದ್ದಾರೆ ಈ ಆಶಾಗಳು.

ಮನೆಯಲ್ಲಿ ಮತ್ತೊಂದು ರೀತಿಯ ಸಮಸ್ಯೆ. ಬಹುತೇಕ ಆಶಾಗಳು ಬಡತನದ ಮನೆಯವರು. ಸೋಂಕಿತರ ಆರೈಕೆ ಮಾಡಿ ಮನೆಗೆ ಹೋದರೆ ಪ್ರತ್ಯೇಕ ವಾಸಿಸಲು ಸ್ಥಳ ಇರುವುದಿಲ್ಲ. ಚಿಕ್ಕ ಮಕ್ಕಳು, ವೃದ್ಧರ ಮಧ್ಯೆಯೇ ವಾಸಿಸಬೇಕು. ಸ್ವಯಂ ಸುರಕ್ಷತೆ ಬಹು ದೊಡ್ಡ ಸವಾಲಾಗಿದೆ ಇವರಿಗೆ. ಇದನ್ನು ಕಂಡ ಎಷ್ಟೋ ಗಂಡಂದಿರು ಆಶಾ ಕೆಲಸ ಬಿಡುವಂತೆ ಒತ್ತಾಯಿಸುತ್ತಿದ್ದಾರಂತೆ. ‘ಮತ್ತೊಬ್ಬರ ಬದುಕಿಸಲು ಹೋಗಿ, ನಮ್ಮನ್ನು ಸಾಯಿಸಬೇಡ’ ಎಂದು ಗಡುಸಾಗಿಯೇ ಹೇಳುತ್ತಿದ್ದಾರಂತೆ.

ಪೋತ್ಸಾಹಧನಕ್ಕೆ ಹಿಂದೇಟು:

ಮೊದಲ ಅಲೆಯಲ್ಲಿ ತಲಾ 3000 ವಿಶೇಷ ಪೋ›ತ್ಸಾಹಧನ ನೀಡಿದ್ದ ರಾಜ್ಯ ಸರ್ಕಾರ ಈ ಎರಡನೇ ಅಲೆಯಲ್ಲಿ ಹಿಂದೇಟು ಹಾಕುತ್ತಿದೆ. ಕೇಂದ್ರ ಸರ್ಕಾರ ಪ್ರತಿ ತಿಂಗಳು ಒಂದು ಸಾವಿರ ನೀಡಿದ್ದರೆ, ರಾಜ್ಯ ಸರ್ಕಾರ ಇಡೀ ವರ್ಷಕ್ಕೆ ಮೂರು ಸಾವಿರ ಕೊಟ್ಟಿತ್ತು. ಈಗ ಅದಕ್ಕೂ ಹಿಂದೇಟು. ನಾಲ್ಕು ಸಾವಿರ ಕನಿಷ್ಠ ಗೌರವಧನ ನೀಡಿ ಹೊತ್ತುಗೊತ್ತು ಇಲ್ಲದಂತೆ ನಿಷ್ಕರುಣೆಯಿಂದ ದುಡಿಸಿಕೊಳ್ಳುತ್ತಿದೆ.

ಗ್ರಾಮೀಣ ಸೇವೆಯಲ್ಲಿರುವ ವೈದ್ಯರ ಸಂಬಳವನ್ನು . 70 ಸಾವಿರಕ್ಕೆ ಏರಿಸಿರುವ ರಾಜ್ಯ ಸರ್ಕಾರ, ಈ ಆಶಾಗಳ . 12 ಸಾವಿರ ಗೌರವಧನ, ಆಶಾ ಕ್ಷೇಮಾಭಿವೃದ್ಧಿ ನಿಧಿ, ಉಚಿತ ವೈದ್ಯಕೀಯ ಚಿಕಿತ್ಸೆಯ ಬೇಡಿಕೆಗಳನ್ನು ಕಣ್ಣೆತ್ತಿಯೂ ನೋಡಿಲ್ಲ ಎನ್ನುವುದು ನಿಜಕ್ಕೂ ವಿಪರ್ಯಾಸ ಎಂದು ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!