ಕಲಬುರಗಿ: ಅಪ್ರಾಪ್ತ ಬಾಲಕಿಯ ರೇಪ್ & ಮರ್ಡರ್ ಕೇಸ್‌: ಕುಟುಂಬಸ್ಥರಿಗೆ ನಟ ಚೇತನ್ ಸಾಂತ್ವಾನ

By Girish GoudarFirst Published Nov 4, 2022, 1:04 PM IST
Highlights

ಮೃತ ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಲ್ಲದೇ, ಆ ಬಾಲಕಿಯ ಕುಟುಂಬಸ್ಥರಿಗೆ 25 ಸಾವಿರ ರೂ. ಚೆಕ್ ನೀಡಿ, ನಿಮ್ಮ ಕುಟುಂಬದ ಜೊತೆ ನಾವಿದ್ದೇವೆ ಎಂದು ಭರವಸೆ ನೀಡಿದ ಚೇತನ್

ಕಲಬುರಗಿ(ನ.04):  ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದ್ದು, ಮೃತ ಬಾಲಕಿಯ ಮನೆಗೆ ಚಿತ್ರನಟ ಚೇತನ್ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ‌. ಮೃತ ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಲ್ಲದೇ, ಆ ಬಾಲಕಿಯ ಕುಟುಂಬಸ್ಥರಿಗೆ 25 ಸಾವಿರ ರೂ. ಚೆಕ್ ನೀಡಿ, ನಿಮ್ಮ ಕುಟುಂಬದ ಜೊತೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ‌.‌

ಆಕೆ ರಾಜ್ಯದ ಮಗಳು

ಆ ಕುಟುಂಬದವರ ಭೇಟಿಯ ನಂತರ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ನಟ ಚೇತನ್, ಆ ಮಗು ಕೇವಲ ಆ ಹೆತ್ತವರದ್ದಲ್ಲ. ಇಡೀ ಕರ್ನಾಟಕದ ಮಗಳು ಅವಳು. ಜಾತಿ ಲೇಪನ ಮಾಡದೇ ಎಲ್ಲೆಡೆ ಜನ ಇಂತಹ ಘಟನೆಗಳನ್ನು ಖಂಡಿಸಬೇಕು. ಜಾತಿ ಮತ ಬಿಟ್ಟು ಎಲ್ಲರೂ ಇದರ ವಿರುದ್ದ ಪ್ರತಿಭಟನೆಗಿಳಿದಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದರು. 

ಅಪ್ರಾಪ್ತ ಬಾಲಕಿಯ ರೇಪ್ & ಮರ್ಡರ್: ಬೆಚ್ಚಿಬಿದ್ದ ಕಲಬುರಗಿ

ಬಯಲು ಶೌಚ ನಿಲ್ಲಲಿ

ಬಯಲು ಶೌಚವೂ ಇಂತಹ ಘಟನೆ ಹೆಚ್ಚಾಗಲು ಕಾರಣವಾಗಿದೆ. ಬರೀ ಶೌಚಾಲಯ ನಿರ್ಮಾಣದಿಂದ ಪ್ರಯೋಜನವಿಲ್ಲ. ಅದರ ಬಳಕೆಯಾಗಬೇಕು. ಶೌಚಾಲಯ ನಿರ್ಮಾಣಕ್ಕೆ ದುಡ್ಡು ಕೊಟ್ಟರೆ ಮುಗಿತು ಅಂತ ಸರಕಾರ ಅಂದುಕೊಳ್ಳಬಾರದು. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಈ ಜಾಗೃತಿ ಕೆಲಸದಲ್ಲಿ ನಾನೂ ಭಾಗಿಯಾಗುತ್ತೇನೆ ಎಂದು ನಟ ಚೇತನ್ ವಿವರಿಸಿದರು. 

ಕೇರಳ ಮಾದರಿ ಶಿಕ್ಷಣ ನೀಡಿ

ಲಿಂಗ ತಾರತಮ್ಯ ಹೋಗಲಾಡಿಸಲು ಕೇರಳ ಮಾದರಿಯಲ್ಲಿ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿ ಜಾರಿಗೆ ತರಬೇಕು ಎಂದು ನಟ ಚೇತನ ಒತ್ತಾಯಿಸಿದರು. ಕೇರಳದಲ್ಲಿ ಲಿಂಗ ಸಮಾನತೆ ಬಗ್ಗೆ ಶಾಲೆಗಳಲ್ಲಿ ಬೋಧಿಸಲಾಗುತ್ತಿದೆ. ಹಾರ್ಮೋನ್ ಬದಲಾವಣೆಯನ್ನು ಹೇಗೆ ಹ್ಯಾಂಡಲ್ ಮಾಡಬೇಕು ? ಈ ಬಗ್ಗೆ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಅರಿವು ಮೂಡಬೇಕು. ಅಂತಹ ಶಿಕ್ಷಣ ಕರ್ನಾಟಕದಲ್ಲೂ ಜಾರಿಗೆ ತರಬೇಕು ಎಂದು ನಟ ಚೇತನ್ ಸರಕಾರಕ್ಕೆ ಆಗ್ರಹಿಸಿದರು.
 

click me!