KRS Water Level : ಕೆಆರ್‌ಎಸ್‌ನಲ್ಲಿ ದಾಖಲೆ ನೀರು ಸಂಗ್ರಹ

By Kannadaprabha News  |  First Published Dec 26, 2021, 8:56 AM IST
  • ವಿಶ್ವ ವಿಖ್ಯಾತ ಕೃಷ್ಣರಾಜಸಾಗರ ಜಲಾಶಯದಲ್ಲಿ ಸತತ 53 ದಿನಗಳ ಕಾಲ ಗರಿಷ್ಠ ಮಟ್ಟದ ನೀರು ಸಂಗ್ರಹ
  • ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್‌ 

 ಶ್ರೀರಂಗಪಟ್ಟಣ (ಡಿ.26):  ವಿಶ್ವ ವಿಖ್ಯಾತ ಕೃಷ್ಣ ರಾಜಸಾಗರ ಜಲಾಶಯದಲ್ಲಿ (KRS) ಸತತ 53 ದಿನಗಳ ಕಾಲ ಗರಿಷ್ಠ ಮಟ್ಟದ ನೀರು ಸಂಗ್ರಹವಾಗುವ ಮೂಲಕ ಇತಿಹಾಸ (History) ಸೃಷ್ಟಿಸಿದೆ.  ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್‌ (KRS) ಇತಿಹಾಸದಲ್ಲೇ ಮೊದಲ ಬಾರಿಗೆ ಮಳೆಗಾಲ ಕಳೆದು ಚಳಿಗಾಲ ಆರಂಭವಾಗಿ ಡಿಸೆಂಬರ್‌ ತಿಂಗಳಲ್ಲೂ ಮುಗಿಯುತ್ತಾ ಬಂದರೂ ಸಹ ಅಣೆ ಕಟ್ಟೆಯಲ್ಲಿ (Dam) ಗರಿಷ್ಠ ಪ್ರಮಾಣದ ನೀರು ಸಂಗ್ರಹವಾಗುವ ಮೂಲಕ ದಾಖಲೆ ಬರೆದಿರುವುದು ಅಪರೂಪದ ಸಂಗತಿಯಾಗಿದೆ.

ಕಳೆದ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಿನಲ್ಲಿ ಕಾವೇರಿ (Cauvery) ಕಣಿವೆ ಭಾಗಗಳಲ್ಲಿ ಅತಿ ಹೆಚ್ಚು ಮಳೆಯಿಂದಾಗಿ ಅಣೆಕಟ್ಟೆ ಭರ್ತಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅ.29ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಜಲಾಶಯಕ್ಕೆ ಭೇಟಿ ನೀಡಿ ಬಾಗಿನ ಅರ್ಪಿಸಿದ್ದರು. ಕಳೆದ ಅ.29ರಿಂದ ಡಿ.19ರವರೆಗಿನ 51 ದಿನಗಳಲ್ಲಿ ಕೇವಲ 4 ದಿನ ಹೊರತು ಪಡಿಸಿ ಉಳಿದ ದಿನಗಳಲ್ಲಿ ಅಣೆಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ ಗರಿಷ್ಠ 124.80 ಅಡಿ ಪ್ರಮಾಣದ ನೀರು ಸಂಗ್ರಹ ಕಾಯ್ದುಕೊಂಡಿರುವುದು ಬಹಳ ವಿಶೇಷ.

Latest Videos

undefined

ಡಿ.1ರಿಂದ ಡಿ.4ರವರೆಗೆ ಮಾತ್ರ ಕೇವಲ ಕಾಲು ಅಡಿ ನೀರು ಕಡಿಮೆಯಾಗಿದೆ. ಇದನ್ನು ಬಿಟ್ಟರೆ ನಂತರ ಮತ್ತೆ ಮಳೆಯಾದ (Rain) ಪರಿಣಾಮ ಡಿ.5ರಿಂದ 20ರವರೆಗೆ ಗರಿಷ್ಠ ನೀರಿನ ಪ್ರಮಾಣ 124.80 ಅಡಿ ಕಾಯ್ದುಕೊಂಡಿತ್ತು. ಆದರೆ, ಡಿ.21ರಂದು 124.76, ಡಿ.22ರಂದು 124.60, ಡಿ.23ರಂದು 124.52, ಡಿ.24ರಂದು 124.34 ಹಾಗೂ ಡಿ.25ರ ಬೆಳಗ್ಗೆ 124.22 ಅಡಿ ಸಂಗ್ರಹವಾಗಿದೆ. ದಿನದಿಂದ ದಿನಕ್ಕೆ ಸ್ವಲ್ಪ ಪ್ರಮಾಣದಲ್ಲಿ ಇಳಿಮುಖ ಕಾಣುತ್ತಿದೆ.

ಇನ್ನು ತಮಿಳುನಾಡಿಗೆ ಪ್ರತಿ ತಿಂಗಳು ನಿಗದಿಪಡಿಸಿದ ಕೋಟಾದಡಿಯಷ್ಟೇ ನೀರು ಮಾತ್ರ ಹರಿಸಬೇಕಾಗಿದೆ. ಅಣೆ ಕಟ್ಟೆಯಲ್ಲಿನ ಸಂಗ್ರಹದ ನೀರಿನ ಪ್ರಮಾಣ ನೋಡಿದರೆ ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಅದಿಕಾರಿಗಳು.

ಗಣಿಗಾರಿಕೆ ನಿಷೇಧ :  

ವಿಶ್ವವಿಖ್ಯಾತ ಕೃಷ್ಣರಾಜ ಸಾಗರ(KRS) ಅಣೆಕಟ್ಟೆಯ 25 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಗಣಿ ಚಟುವಟಿಕೆಗಳನ್ನು(Mining Activity) ನಿಷೇಧಿಸುವಂತೆ ಅಣೆಕಟ್ಟು ಸುರಕ್ಷತಾ ಪುನರ್‌ಪರಿಶೀಲನಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ.  ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ರಾಕ್‌ ಮೆಕ್ಯಾನಿಕ್ಸ್‌(NIRM), ಪುಣೆಯ ಸೆಂಟ್ರಲ್‌ ವಾಟರ್‌ ಮತ್ತು ಪವರ್‌ ರೀಸರ್ಚ್‌ ಸ್ಟೇಷನ್‌ (CWRPS) ನವರು ನಿಯಮಾನುಸಾರ ಪರಿಶೀಲನೆ ನಡೆಸಿ ವರದಿ(Report) ನೀಡುವವರೆಗೆ ಎಲ್ಲ ಗಣಿ ಚಟುವಟಿಕೆಗಳನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.

ಗಣಿ ಸ್ಫೋಟದ ಬಗ್ಗೆ ಎನ್‌ಐಆರ್‌ಎಂ ತಜ್ಞರು ತಾಂತ್ರಿಕ ಪರಿಣಿತಿ ಸಾಧಿಸಿದ್ದು, ಇವರು ನೀಡುವ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಇವರ ವರದಿ ಅತಿ ಮುಖ್ಯವಾಗಿದೆ. ಸಿಡಬ್ಲ್ಯುಪಿಆರ್‌ಎಸ್‌ ಮತ್ತು ಎನ್‌ಐಆರ್‌ಎಂ ನೀಡುವ ವರದಿ ಆಧಾರದ ಮೇಲೆ ಅಣೆಕಟ್ಟೆ(Dam) ಸುತ್ತ ನಡೆಯುವ ಗಣಿಗಾರಿಕೆಯಲ್ಲಿ(Mining)  ಸ್ಫೋಟಕಗಳನ್ನು(Explosive) ಯಾವ ರೀತಿ ಬಳಸಬೇಕು, ಸ್ಫೋಟದ ತೀವ್ರತೆ ಎಷ್ಟಿರಬೇಕು ಎಂಬ ಬಗ್ಗೆ ನಿಯಮಗಳನ್ನು ರೂಪಿಸಲಾಗುವುದು ಎಂದು ಅಣೆಕಟ್ಟು ಪುನರ್‌ ಪರಿಶೀಲನಾ ಸಮಿತಿ ವರದಿಯಲ್ಲಿ ತಿಳಿಸಿದೆ.

ಕೆಆರ್‌ಎಸ್‌ ಸುತ್ತ ಗಣಿಗಾರಿಕೆಗೆ ಹೈಕೋರ್ಟ್‌ ಹಸಿರು ನಿಶಾನೆ

ಕಾವೇರಿ ನೀರಾವರಿ ನಿಗಮದ ತಾಂತ್ರಿಕ ಉಪ ಸಮಿತಿಯ 111ನೇ ಸಭೆಯಲ್ಲಿ ಸಿಎಸ್‌ಐಆರ್‌-ಸಿಐಎಫ್‌ಆರ್‌ರವರಿಂದ ಪ್ರಾಯೋಗಿಕ ಬ್ಲಾಸ್ಟ್‌ ಅಧ್ಯಯನ ಕೈಗೊಳ್ಳಲು ಸೂಚಿಸಲಾಗಿದ್ದು, 22 ಜುಲೈ 2021ರಂದು ನಡೆದ ನಿಗಮದ ಮಂಡಳಿಯ 73ನೇ ಸಭೆಯಲ್ಲಿ ಕೃಷ್ಣರಾಜಸಾಗರ ಅಣೆಕಟ್ಟೆ(KRS Dam) ವ್ಯಾಪ್ತಿಯಲ್ಲಿ ಪ್ರಾಯೋಗಿಕ ಬ್ಲಾಸ್ಟಿಂಗ್‌ ಪ್ರಸ್ತಾವನೆಯನ್ನು ಮುಂದೂಡಿಸಿದ್ದು, ಅಣೆಕಟ್ಟೆಯ ವಿನ್ಯಾಸ ರಚನೆಯ ಗುಣಮಟ್ಟಮತ್ತು ಭೌಗೋಳಿಕ ಅಧ್ಯಯನವನ್ನು ಮಾತ್ರ ಕೈಗೊಳ್ಳುವಂತೆ ಅನುಮೋದನೆ ನೀಡಿದೆ. ಈ ಅಧ್ಯಯನವನ್ನು ತುರ್ತು ಕಾಮಗಾರಿ ಎಂದು ಘೋಷಿಸಿದ್ದು, ಮೆ.ಪಾರ್ಸನ್‌ ಓವರ್‌ಸೀಸ್‌ ಪ್ರೈವೇಟ್‌ ಲಿಮಿಟೆಡ್‌ ಅವರಿಗೆ ವಹಿಸಲಾಗಿದ್ದು, 30 ಅಕ್ಟೋಬರ್‌ 2021 ರಂದು ಅಧ್ಯಯನವು ಪೂರ್ಣಗೊಂಡಿದೆ.

ಸಮಿತಿಯವರು ಸಿಡಬ್ಲ್ಯುಪಿಆರ್‌ಎಸ್‌ನವರನ್ನು ಸಂಪರ್ಕಿಸಿದಾಗ ಅಣೆಕಟ್ಟು ರಚನಾ ಸಾಮರ್ಥ್ಯ ಎಷ್ಟು ಪ್ರಮಾಣ ಗಣಿ ಸ್ಫೋಟದ ತೀವ್ರತೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ ಎಂಬ ಬಗ್ಗೆ 2-ಡಿ ಮತ್ತು 3-ಡಿ ಫಿನಿಟ್‌ ಎಲಿಮೆಂಟ್‌ ಮೆಥೆಡ್‌ ಮೂಲಕ ತಿಳಿದುಕೊಳ್ಳುವರು. ಅಣೆಕಟ್ಟು ಗೋಡೆಯ ನಿರ್ಮಾಣ ಹೇಗಿದೆ, ಏನೆಲ್ಲಾ ವಸ್ತುಗಳನ್ನು ಬಳಕೆ ಮಾಡಿದ್ದಾರೆ, ಅಣೆಕಟ್ಟೆಯ ತಳಪಾಯ ಹೇಗಿದೆ. ಈ ಅಣೆಕಟ್ಟೆಎಷ್ಟುಪ್ರಮಾಣದ ಭೂಕಂಪದ ತೀವ್ರತೆಯನ್ನು ತಡೆದುಕೊಳ್ಳಲಿದೆ ಹಾಗೂ ಗಣಿ ಸ್ಫೋಟದ ತೀವ್ರತೆ ಎಷ್ಟು ಪ್ರಮಾಣದಲ್ಲಿರಬೇಕು ಎಂಬ ಬಗ್ಗೆ ವಿಸ್ತೃತವಾಗಿ ಅಧ್ಯಯನ ನಡೆಸಲಿದೆ. ಅಣೆಕಟ್ಟೆಯ ವಿನ್ಯಾಸ ಹಾಗೂ ಅದರ ಕಾಮಗಾರಿಯ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವರು ಎಂದು ತಿಳಿಸಿದ್ದಾರೆ.

ಕೆಆರ್‌ಎಸ್‌ ಡ್ಯಾಂ ಬಳಿ ಗೋಡೆ ಕುಸಿತ : ಎಚ್ಚರಿಕೆ ಗಂಟೆ

ಸದ್ಯಕ್ಕೆ ಅಣೆಕಟ್ಟೆಯ ನಾರ್ತ್‌ ಬ್ಯಾಂಕ್‌ನಿಂದ ಕೇವಲ 5 ಕಿ.ಮೀ. ವ್ಯಾಪ್ತಿಯಲ್ಲಿ ಮಂಜೂರು ಮಾಡಲಾಗಿದ್ದ 8 ಗಣಿ ಗುತ್ತಿಗೆಗಳನ್ನು ರದ್ದುಪಡಿಸಿ ಸ್ಥಗಿತಗೊಳಿಸಲಾಗಿದೆಯೇ ವಿನಃ ಅಣೆಕಟ್ಟೆಯ ಸುರಕ್ಷತೆ ಸಂಬಂಧ ಎಷ್ಟುವಿಸ್ತೀರ್ಣದಲ್ಲಿ ಕ್ರಷರ್‌ ಅಥವಾ ಗಣಿಗಾರಿಕೆ ನಡೆಸಬಾರದು ಎಂಬ ಬಗ್ಗೆ ನಿಯಮ ರೂಪಿಸುವ ಯಾವುದೇ ತಜ್ಞರ ಸಮಿತಿಯನ್ನು ರಚಿಸಲಾಗಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಹಾಲಪ್ಪ ಆಚಾರ್‌(Halappa Achar) ಬಸಪ್ಪ ಅವರು ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಕೆಆರ್‌ಎಸ್‌ ಸುತ್ತ ಗಣಿಗಾರಿಕೆಗೆ ಹೈಕೋರ್ಟ್‌ ಹಸಿರು ನಿಶಾನೆ

ಕೆಆರ್‌ಎಸ್‌ ಸುತ್ತಮುತ್ತಲಿನ 28 ಕಲ್ಲುಗಣಿಗಾರಿಕೆ ಘಟಕಗಳ ಪರವಾನಗಿ ರದ್ದುಗೊಳಿಸಿ ಮಂಡ್ಯ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿತ್ತು.

 

click me!