ಮುಮಂ ಆಗಿ ಯಡಿಯೂರಪ್ಪ ಪ್ರಮಾಣ ವಚನ; ಶಿವಭಕ್ತನಿಗೆ ಒಲಿದ ಗುರುವಾರ!

First Published May 17, 2018, 10:22 AM IST
Highlights

ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಥಮ ದರ್ಜೆ ಕ್ಲರ್ಕ್ ಆಗಿದ್ದ ಇವರು, ಜನ ನಾಯಕ, ರೈತ ನಾಯಕನಾಗಿ ಬೆಳೆದಿದ್ದು ಹಲವು ಹೋರಾಟಗಳ ಮೂಲಕ. ಶಿಕಾರಿಪುರ ಪುರಸಭೆ ಸದಸ್ಯನಾಗಿ ಆಯ್ಕೆಯಾಗುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ ಯಡಿಯೂರಪ್ಪ ಇಂದು ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರು. ಹಸಿರು ಶಾಲು ಹೊದ್ದು, ರೈತರು ಹಾಗೂ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರಿಗೆ, ರಾಜ್ಯಪಾಲರು ಗೌಪ್ಯತಾ ಪ್ರಮಾಣ ಬೋಧಿಸಿದರು.

ಇದು ನೂತನ ಸಿಎಂ ಪ್ರೊಫೈಲ್

- ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸಿದ್ದಲಿಂಗಪ್ಪ ಮತ್ತು ಪುಟ್ಟತಾಯಮ್ಮ ದಂಪತಿಗೆ  1943 ಫೆಬ್ರವರಿ 27ರಂದು ಜನನ.

- 1965ರಲ್ಲಿ ಸಾಮಾಜ ಕ್ಷೇಮಾಭಿವೃದ್ಧಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಯಡಿಯೂರಪ್ಪ ಆಯ್ಕೆಯಾಗಿದ್ದರು. ಆದರೆ, ಈ ಕೆಲಸ ಬಿಟ್ಟು ಶಿಕಾರಿಪುರದ ವೀರಭದ್ರ ಶಾಸ್ತ್ರಿ ರೈಸ್ ಮಿಲ್‌ನಲ್ಲಿ ಕ್ಲರ್ಕ್ ಆಗಿ 1967ರಲ್ಲಿ ಕೆಲಸಕ್ಕೆ ಸೇರಿಕೊಂಡರು. ಅದೇ ಮಿಲ್‌ ಮಾಲೀಕರ ಮಗಳಾದ ಮೈತ್ರಾದೇವಿಯನ್ನು ವರಿಸಿದರು.

- ಮದುವೆಯ ನಂತರ ಶಿವಮೊಗ್ಗದಲ್ಲಿ ಹಾರ್ಡ್‌ವೇರ್ ಶಾಪ್ ಇಟ್ಟುಕೊಂಡಿದ್ದ ಯಡಿಯೂರಪ್ಪ ಅವರಿಗೆ ಇಬ್ಬರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ.

- ಕಾಲೇಜು ದಿನಗಳಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಂಟಿದ್ದ ಯಡಿಯೂರಪ್ಪ ಅವರನ್ನು 1970ರಲ್ಲಿ ಸಂಘದ ಕಾರ್ಯವಾಹಕರನ್ನಾಗಿ ನೇಮಿಸಲಾಯಿತು. ಅಂದಿನಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ ಇವರು ಮತ್ತೆ ಹಿಂದಿರುಗಿ ನೋಡಲೇ ಇಲ್ಲ.

- ಶಿಕಾರಿಪುರದ ಪುರಸಭೆಗೆ ಆಯ್ಕೆಯಾಗುವ ಮೊಲಕ ಸಕ್ರಿಯ ರಾಜಕೀಯಕ್ಕೆ ಧುಮುಕಿದರು.

- ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಬಳ್ಳಾರಿ ಹಾಗೂ ಶಿವಮೊಗ್ಗದಲ್ಲಿ ಸೆರೆಮನೆವಾಸವನ್ನು ಅನುಭವಿಸಿದ್ದಾರೆ.

- 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ. 1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಾಲಿಂಗಪ್ಪ ವಿರುದ್ಧ ಸೋತಿದ್ದು ಹೊರತು ಪಡಿಸಿ ನಡೆದ ಮತ್ತೆಲ್ಲ ಚುನವಣೆಗಳಲ್ಲಿಯೂ ಯಡಿಯೂರಪ್ಪ ಗೆದ್ದಿದ್ದಾರೆ.

- 1999ರ ಚುನಾವಣೆಯಲ್ಲಿ ಸೋತರೂ, ವಿಧಾನ ಪರಿಷತ್ ಸದಸ್ಯರಾಗಿ ಇವರು ಆಯ್ಕೆಯಾಗಿದ್ದರು.

- ಕುಮಾರಸ್ವಾಮಿ ನೇತೃತ್ವದ ಬಿಜೆಪಿ-ಜೆಡಿಎಸ್ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. 20 ತಿಂಗಳ ಅಧಿಕಾರವನ್ನು ಅನುಭವಿಸಿದ ಕುಮಾರಸ್ವಾಮಿ, ಒಪ್ಪಂದದಂತೆ, ಬಿಜೆಪಿಯನ್ನು ಬೆಂಬಲಿಸಲು ನಿರಾಕರಿಸಿದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ, ಸದನದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರು.

- ರಾಷ್ಟ್ರಪತಿ ಆಡಳಿತವಿದ್ದ ರಾಜ್ಯದಲ್ಲಿ 2008ರಲ್ಲಿ ಚುನಾವಣೆ ನಡೆಯಿತು. ಸರಳ ಬಹುಮತ ಪಡೆದ ಬಿಜೆಪಿ, ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರ ರಚಿಸಿತು. ಆದರೆ,  ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ನೀಡದ ತನಿಖಾ ವರದಿಯಲ್ಲಿ ಯಡಿಯೂರಪ್ಪ ಅವರ ಹೆಸರಿತ್ತು. ಈ ಕಾರಣದಿಂದ 2011ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮ ನೀಡಿದ ಯಡಿಯೂರಪ್ಪ, ಸೆರೆವಾಸವನ್ನೂ ಅನುಭವಿಸಿದ್ದರು.  

- ನಂತರ ನಡೆದ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತು ಯಡಿಯೂರಪ್ಪ ಕರ್ನಾಟಕ ಜನತಾ ಪಾರ್ಟಿ ಎಂಬ ಪಕ್ಷವನ್ನು ಸ್ಥಾಪಿಸಿ, 2013ರ ಚುನಾವಣೆಯಲ್ಲಿ ಅದೇ ಪಕ್ಷದಿಂದ ಆಯ್ಕೆಯಾಗಿದ್ದರು. ಆದರೆ, ಕೆಲವೇ ತಿಂಗಳಲ್ಲಿ ಬಿಜೆಪಿಗೆ ಮರಳಿದ್ದರು.

-2018ರ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಬಿಜೆಪಿ, ಅವರ ನೇತೃತ್ವದಲ್ಲಿಯೇ ಚುನಾವಣಾ ಪ್ರಚಾರ ನಡೆಸಿತ್ತು. ಮೋದಿ ಅಲೆ ಹಾಗೂ ಆಡಳಿತ ವಿರೋಧಿ ಅಲೆಯಿಂದ ಬಿಜೆಪಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರಕಾರ ರಚನೆಗೆ ಅಗತ್ಯವಾದ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. 
 

ಜೆಡಿಎಸ್-ಕಾಂಗ್ರೆಸ್‌ ಮೈತ್ರಿಗೆ ಸಿದ್ದರಾಮಯ್ಯ ಆಪ್ತ ಗರಂ

 

click me!