ಮಹಾ ಮಂಗಳವಾರ: ಕರ್ನಾಟಕದಲ್ಲೂ ವಿಸ್ತರಣೆಯಾಗುತ್ತಾ ಕೇಸರಿ ಸಾಮ್ರಾಜ್ಯ?

First Published May 15, 2018, 6:15 AM IST
Highlights

ಕರ್ನಾಟಕ ವಿಧಾನಸಭಾ ಚುನಾವಣೆಗೆ 1952ರ ನಂತರ ದಾಖಲೆಯುತ ಮತದಾನವಾಗಿದ್ದು, ಮಹಾ ಫಲಿತಾಂಶ ಇನ್ನು ಕೆಲವು ಗಂಟೆಗಳಲ್ಲಿ ಹೊರಬೀಳಲಿದೆ. ಸುವರ್ಣ ನ್ಯೂಸ್ ವೆಬ್‌ಸೈಟ್ ಕ್ಷಣ ಕ್ಷಣದ ಮಾಹಿತಿ ನೀಡಲು ಸನ್ನದ್ಧವಾಗಿದ್ದು, ಅಪ್‌ಡೇಟ್‌ಗಳಾಗಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ.

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ 1952ರ ನಂತರ ದಾಖಲೆಯುತ ಮತದಾನವಾಗಿದ್ದು, ಮಹಾ ಫಲಿತಾಂಶ ಇನ್ನು ಕೆಲವು ಗಂಟೆಗಳಲ್ಲಿ ಹೊರಬೀಳಲಿದೆ. 

224ರಲ್ಲಿ 222 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 36 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ 15 ಕ್ಷೇತ್ರಗಳು ಪರಿಶಿಷ್ಟ ವರ್ಗಕ್ಕೆ ಮೀಸಲಾಗಿದ್ದವು. 

ಚುನಾವಣೆ ವಿಶೇಷಗಳು

- ಈ ಚುನಾವಣೆಯಲ್ಲಿ ಬಹುತೇಕ ತ್ರಿಕೋನ ಸ್ಪರ್ಧೆಯಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ಇತ್ತು. ಜೆಡಿಎಸ್ ಎಐಎಂಐಎಂ ಹಾಗೂ ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ದಲಿತರು ಹಾಗೂ ಮುಸ್ಲಿಮರ ಮತ ಸೆಳೆಯಲು ಯತ್ನಿಸಿತ್ತು. 

ಸಿಎಂ ಆಗೋರು ಯಾರು?

ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದೆ. ಆದರೆ, ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿಯನ್ನು ಇದುವರೆಗೂ ಘೋಷಿಸಿಲ್ಲ. ಚುನಾವಣೆಯನ್ನು ಎದುರಿಸಿದ್ದು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ. ಹಾಗಾಗಿ ಅಕಸ್ಮಾತ್ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬಂದರೆ, ಅವರು ಅಧಿಕಾರ ಹಿಡಿಯುವುದು ಗ್ಯಾರಂಟಿ. ಅಕಸ್ಮಾತ್ ಜೆಡಿಎಸ್ ಜತೆ ಕೈ ಜೋಡಿಸಬೇಕಾದ ಸ್ಥಿತಿ ಬಂದರೆ, ಕಾಂಗ್ರೆಸ್ ಮುಖ್ಯಮಂತ್ರಿ ಯಾರೆಂಬುವುದು ಊಹಿಸುವುದು ಕಷ್ಟ. 

ವಿಷಯಾಧಾರಿತ ಚುನಾವಣೆಯಲ್ಲ

ಆಡಳಿತ ವಿರೋಧಿ ಅಲೆ ಎಂದು ಹೇಳಲು, ಸಿದ್ದರಾಮಯ್ಯ ಅವರ ಸರಕಾರದಲ್ಲಿ ಹೇಳುವಂಥ ಲೋಪದೋಷಗಳು ಪ್ರತಿಪಕ್ಷಗಳಿಗೆ ಟೀಕಿಸಲು ಕಾಣಿಸಲೇ ಇಲ್ಲ.  ಸಿದ್ದರಾಮಯ್ಯ ಜಾರಿಗೆ ತಂದ ಅನ್ನ ಭಾಗ್ಯ, ಇಂದಿರಾ ಕ್ಯಾಂಟೀನ್, ಅನಿಲ ಭಾಗ್ಯ, ಮಾತೃಪೂರ್ಣ ಯೋಜನೆ...ಹೀಗೆ ವಿವಿಧ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಭಿಕ್ಷೆ ಬೇಡಿದೆ. ಮೋದಿ ವಿರುದ್ಧವೇ ವಾಗ್ದಾಳಿ ನಡೆಸಿ, ಮತಯಾಚಿಸಿದೆ. ಬಿಜೆಪಿ ಹಿಂದುತ್ವ ಮಂತ್ರವನ್ನೇ ಪಠಿಸಿತ್ತು.

ಪ್ರತ್ಯೇಕ ಧರ್ಮ, ಮಹದಾಯಿ ವಿವಾದದಂಥ ವಿಷಯಗಳನ್ನು ಬಿಜೆಪಿ ಎತ್ತಿದರೂ, ಪರಿಣಾಮಕಾರಿಯಾಗಿ ಮತಯಾಚಿಸುವಲ್ಲಿ ವಿಫಲವಾಗಿದೆ. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ಹೆಚ್ಚು ಮತದಾನವಾಗಿದ್ದು, ಸರಕಾರದ ಹಲವು ಯೋಜನೆಗಳನ್ನು ಗ್ರಾಮೀಣ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತಂದಿದ್ದರಿಂದ, ಇದು ಸಿದ್ದರಾಮಯ್ಯ ಅವರಿಗೆ ಅನುಕೂಲ ಮಾಡಿಕೊಡಬಹುದು. ಅಲ್ಲದೇ ಈ ಬಾರಿ ಯುವಕರು, ಮಹಿಳೆಯರ ಮತದಾನವೂ ಹೆಚ್ಚಾಗಿದ್ದು, ಮೋದಿ ಅಲೆ ಪರಿಣಾಮ ಬಿಜೆಪಿಯ ಕಾಂಗ್ರೆಸ್ ಮುಕ್ತ ಕನಸನ್ನು ನನಸು ಮಾಡಬಹುದು ಎನ್ನಬಹುದು.

- ಮೊದ ಮೊದಲು ಹವಾ ಕೇವಲ ಸಿದ್ದರಾಮಯ್ಯ ಅವರ ಪರವೇ ಇದ್ದಂತೆ ಎನಿಸಿದರೂ, ಮೋದಿ ಬಂದು ಪ್ರಚಾರ ನಡೆಸಿದ ನಂತರ ಬಿಜೆಪಿ ಅಲೆ ಎದ್ದಂತೆ ಕಾಣಿಸಿದೆ. ಪ್ರಾದೇಶಿಕ ವಿಷಯಗಳನ್ನೇ ಉಲ್ಲೇಖಿಸಿ, ಪ್ರಚಾರ ಮಾಡಿದ್ದು, ಬಿಜೆಪಿ ಪರ ಅಲೆ ಏಳುವಂತೆ ಮಾಡುವಲ್ಲಿ ಯಶಸ್ವಿಯಾದರು.

ಮೊದ ಮೊದಲು ಕಾಣಿಸಿಕೊಂಡ ಕಾಂಗ್ರೆಸ್ ಪರ ಒಲವು ನಂತರ ಬದಲಾದಂತೆ ಕಂಡಿದ್ದು, ಸಮೀಕ್ಷೆಗಳೂ ಅತಂತ್ರವಾಗುವಂತೆ ಮಾಡಿವೆ.

- ರಾಜ್ಯದಲ್ಲಿ ಆರು ಪ್ರಾದೇಶಿಕ ಪ್ರಾಂತ್ಯಗಳಿವೆ
ಮುಂಬಯಿ ಕರ್ನಾಟಕ (50): ಬಿಜೆಪಿಗೆ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಲಿಂಗಾಯತ ಪ್ರಾಬಲ್ಯವುಳ್ಳ ಇಲ್ಲಿ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನ ನೀಡಿದ್ದನ್ನು ವಿರೋಧಿಸಿ, ಬಿಜೆಪಿ ಪ್ರಚಾರ ನಡೆಸಿದೆ.

- ಕರಾವಳಿ ಕರ್ನಾಟಕ (19 ಕ್ಷೇತ್ರಗಳು): ಇದು ಬಿಜೆಪಿ ಬಾಹುಳ್ಯ ಕ್ಷೇತ್ರವಾಗಿದ್ದು, ಕೋಮು ಗಲಭೆಗಳೇ ಮುಖ್ಯ ವಿಚಾರವಾಗಿ ಪ್ರಚಾರದಲ್ಲಿ ಬಳಸಿಕೊಳ್ಳಲಾಗಿದೆ.

ಹಳೇ ಮೈಸೂರು (61)ಛ ಒಕ್ಕಲಿಗರು ಹೆಚ್ಚಾಗಿರುವ ಈ ಭಾಗದಲ್ಲಿ ಜೆಡಿಎಸ್ ಹೆಚ್ಚು ಸೀಟುಗಳನ್ನು ಗೆಲ್ಲಬಹುದು.

ಬೆಂಗಳೂರು (32 ಸೀಟ್): ಸಾಂಪ್ರಾದಾಯಿಕವಾಗಿ ಬಿಜೆಪಿ ಪ್ರಭಾವವಿದ್ದರೂ, ಕ್ಷೇತ್ರಗಳು ಎಲ್ಲ ಪಕ್ಷಗಳೊಂದಿಗೆ ಹಂಚಿಕೆಯಾಗುವ ಸಾಧ್ಯತೆ ಇದೆ.

ಹೈದರಾಬಾದ್ ಕರ್ನಾಟಕ (40): ಸಾಮಾನ್ಯವಾಗಿ ಕಾಂಗ್ರೆಸ್ ಹೆಚ್ಚು ಕ್ಷೇತ್ರಗಳನ್ನು ಪಡೆಯುವ ಪ್ರಾಂತ್ಯ.

ಮಧ್ಯ ಕರ್ನಾಟಕ (26): ಯಡಿಯೂರಪ್ಪ ಅವರ ಪ್ರಭಾವ ಇರುವ ಪ್ರಾಂತ್ಯ.

ಒಟ್ಟಿನಲ್ಲಿ ಈ ಎಲ್ಲ ಊಹಾಪೋಹಗಳಿಗೂ ಶೀಘ್ರದಲ್ಲಿಯೇ ತೆರೆ ಬೀಳಲಿದ್ದು, ಪ್ರತಿಕ್ಷಣದ ಮಾಹಿತಿಗೆ ಸುವರ್ಣ ನ್ಯೂಸ್ ಟಿವಿ, ಸುವರ್ಣನ್ಯೂಸ್ ವೆಬ್‌ಸೈಟ್‌ಗೆ ಲಾಗಿ ಇನ್ ಆಗಿರಿ.
 

click me!