ಅತಿಥಿ ಉಪನ್ಯಾಸಕರ ಸೇವೆ ಕಾಯಂ ಅಸಾಧ್ಯ: ಸಚಿವ ಸುಧಾಕರ್‌

By Kannadaprabha NewsFirst Published Jan 3, 2024, 4:15 AM IST
Highlights

ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆಯಿಂದ ನೆಲಮಂಗಲದವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಬೆಂಗಳೂರು(ಜ.03):  ಅತಿಥಿ ಉಪನ್ಯಾಸಕರ ಸೇವೆ ಕಾಯಮಾತಿಗೆ ಕಾನೂನಿನ ಸಾಕಷ್ಟು ತೊಡಕು ಇರುವುದರಿಂದ ಸೇವೆ ಕಾಯಂ ಮಾಡಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ಸ್ಪಷ್ಟವಾಗಿ ಹೇಳಿದ್ದಾರೆ.

ಈ ನಡುವೆ, ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆಯಿಂದ ನೆಲಮಂಗಲದವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಏತನ್ಮಧ್ಯೆ, ಕೊಪ್ಪಳದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅತಿಥಿ ಉಪನ್ಯಾಸಕರನ್ನು ಕಾಯಮಾತಿ ಮಾಡಿಕೊಳ್ಳಲು ಆಗುವುದಿಲ್ಲ. ಅದಕ್ಕೆ ಕಾನೂನಿನ ತೊಡಕಿದೆ ಎಂದು ಈಗಾಗಲೇ ಅವರಿಗೆ ಹೇಳಿದ್ದೇವೆ. ಆದರೂ ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಏನು ಮಾಡೊಕಾಗುತ್ತೆ? ಎಂದಿದ್ದಾರೆ.

ಸರ್ಕಾರದ ಪರ್ಯಾಯ ವ್ಯವಸ್ಥೆಯ ಬೆದರಿಕೆ ಅಸ್ತ್ರಕ್ಕೆ ಜಗ್ಗದ ಅತಿಥಿ ಉಪನ್ಯಾಸಕರು; ಇಂದು ತುಮಕೂರಿನಿಂದ ಪಾದಯಾತ್ರೆ!

ಉಮಾದೇವಿ ತೀರ್ಪು ತೊಡಕು:

ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸುಧಾಕರ್‌ ಅವರು, ಉಮಾದೇವಿ ಪ್ರಕರಣದ ತೀರ್ಪು ಬಂದ ನಂತರ ಅತಿಥಿ ಉಪನ್ಯಾಸಕರ ಸೇವೆ ಕಾಯಂ ಮಾಡಲು ತೊಡಕು ಉಂಟಾಗಿದೆ. ಈವರೆಗೆ ಯಾವುದೇ ರಾಜ್ಯದಲ್ಲಿ ಸೇವೆ ಕಾಯಂ ಮಾಡಿಲ್ಲ. ಕಾನೂನಿನ ತೊಡಕಿದ್ದರೂ ಕೆಲವರು ಕಾಯಂ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಒಂದು ವೇಳೆ ಕಾಯಂ ಮಾಡಿದರೆ ಸರ್ಕಾರಕ್ಕೆ ನ್ಯಾಯಾಲಯದಲ್ಲಿ ಸಮಸ್ಯೆಯಾಗುತ್ತದೆ. ಅತಿಥಿ ಉಪನ್ಯಾಸಕರು ಬೇರೆ ಬೇರೆ ರಾಜ್ಯಗಳಲ್ಲಿ ಸೇವೆ ಕಾಯಂ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆಯೇ ಹೊರತು ಯಾವುದೇ ದಾಖಲೆ ನೀಡುತ್ತಿಲ್ಲ ಎಂದರು.

3500 ಉಪನ್ಯಾಸಕರು ಹಾಜರು:

ಸುಮಾರು 10 ಸಾವಿರ ಅತಿಥಿ ಉಪನ್ಯಾಸಕರಿದ್ದು, ಈ ಪೈಕಿ 3500 ಉಪನ್ಯಾಸಕರು ಸೇವೆಗೆ ಹಾಜರಾಗಿದ್ದಾರೆ. ಉಳಿದವರು ಗೈರು ಆಗಿದ್ದಾರೆ. ಒಂದರೆಡು ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದರು.

ಕಠಿಣ ಕ್ರಮ ಇಲ್ಲ:

ಸೇವೆಗೆ ಬಾರದ ಅತಿಥಿ ಉಪನ್ಯಾಸಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಕಷ್ಟವೇನೂ ಆಗುವುದಿಲ್ಲ. ಆದರೆ ಅವರಿಗೂ ಕುಟುಂಬಗಳು ಇವೆ. ಏನಾದರೂ ಕ್ರಮ ಕೈಗೊಂಡರೆ ಕುಟುಂಬಗಳಿಗೆ ತೊಂದರೆಯಾಗುತ್ತದೆ, ಹಾಗಾಗಿ ಕಾದು ನೋಡುತ್ತಿದ್ದೇವೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅತಿಥಿ ಉಪನ್ಯಾಸಕರು ಸೇವೆಗೆ ಬಾರದೇ ಇರುವುದರಿಂದ ಪಠ್ಯಕ್ರಮ ಪೂರ್ಣಗೊಳಿಸಲು ಹೆಚ್ಚಿನ ತೊಂದರೆಯಾಗಿಲ್ಲ. ಒಂದು ವೇಳೆ ತೊಂದರೆಯಾಗಿದ್ದರೆ ಮುಂದಿನ ದಿನಗಳಲ್ಲಿ ಅದನ್ನು ಸರಿದೂಗಿಸಲಾಗುವುದು ಎಂದರು.

15 ದಿನದಲ್ಲಿ ನೇಮಕಾತಿ ಆದೇಶ:

1242 ಉಪನ್ಯಾಸಕ ನೇಮಕಾತಿ ಪ್ರಕ್ರಿಯೆ ಮುಂದುವರೆದಿದ್ದು, 15 ದಿನದಲ್ಲಿ ಆಯ್ಕೆಯಾದ ಎಲ್ಲರಿಗೂ ನೇಮಕಾತಿ ಆದೇಶ ನೀಡಲಾಗುವುದು ಎಂದು ಸಚಿವ ಡಾ. ಎಂ.ಸಿ. ಸುಧಾಕರ್‌ ತಿಳಿಸಿದರು.

ಅತಿಥಿ ಉಪನ್ಯಾಸಕರು ನಾಳೆ ಗೈರಾದರೆ ಪರ್ಯಾಯ ಕ್ರಮ

ಏನಿದು ಉಮಾದೇವಿ ಪ್ರಕರಣದ ತೀರ್ಪು?

ಉಮಾದೇವಿ ಹಾಗೂ ಇತರರು ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸುಮಾರು 10 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ತಮ್ಮ ಸೇವೆ ಕಾಯಂ ಕೋರಿ ಕೆಎಟಿಗೆ ಸಲ್ಲಿಸಿದ ಅರ್ಜಿ ನಂತರದ ದಿನಗಳಲ್ಲಿ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮೆಟ್ಟಿಲು ಮುಟ್ಟುತ್ತದೆ. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ದಿನಗೂಲಿ, ಗುತ್ತಿಗೆ, ಸಾಂದರ್ಭಿಕವಾಗಿ ಅಥವಾ ತುರ್ತು ಸಂದರ್ಭದಲ್ಲಿ ನೇಮಕಗೊಂಡವರ ಸೇವೆಯನ್ನು ಕಾಯಂ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ವೇಳೆ 10 ವರ್ಷಕ್ಕಿಂತ ಹೆಚ್ಚು ಕಾಲ ಯಾವುದೇ ಆದೇಶದಿಂದ ಅಡ್ಡಿಯಾಗದೇ ನಿರಂತರವಾಗಿ ಸೇವೆ ಸಲ್ಲಿಸಿದ್ದರೆ ಅಂತವರನ್ನು ಒಂದು ಬಾರಿಗೆ ಅನ್ವಯವಾಗುವಂತೆ ಸೇವೆ ಕಾಯಂ ಮಾಡಬಹುದು ಎಂದು ಆದೇಶಿಸಿತ್ತು.

ಪ್ರಸ್ತುತ ಅತಿಥಿ ಉಪನ್ಯಾಸಕರ ಸೇವೆಯನ್ನು ನಿಗದಿತ ಅವಧಿಗೆ ಮಾತ್ರ ತೆಗೆದುಕೊಳ್ಳಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರನ್ನು 10 ತಿಂಗಳ ಅವಧಿಗೆ ಮಾತ್ರ ಸೇವೆ ಪಡೆದುಕೊಳ್ಳಲಾಗುತ್ತಿದೆ. ಪ್ರತಿ ವರ್ಷ ಹೊಸದಾಗಿ ಅರ್ಜಿ ಕರೆದು 10 ತಿಂಗಳ ಅವಧಿಗೆ ಅತಿಥಿ ಉಪ ನ್ಯಾಸಕರೆಂದು ನೇಮಕ ಮಾಡಿಕೊಳ್ಳಲಾಗುತ್ತಿದೆ.

click me!