ರಾಜ್ಯಗಳಿಗೆ ಒಳಮೀಸಲು ಅಧಿಕಾರ: ಸುಪ್ರೀಂ ಕೋರ್ಟ್ ಒಲವು

By Kannadaprabha NewsFirst Published Aug 28, 2020, 2:08 PM IST
Highlights

2004ರಲ್ಲಿ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠವು, ‘ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲು ನೀಡುವ ಸಂದರ್ಭದಲ್ಲಿ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡಗಳಲ್ಲಿ ಉಪ-ವರ್ಗೀಕರಣ ಮಾಡುವ (ಒಳ ಮೀಸಲು ನೀಡುವ) ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ’ ಎಂದು ತೀರ್ಪು ನೀಡಿತ್ತು. ಇದೀಗ ಆ ತೀರ್ಪನ್ನು ಪುನರ್ ಪರಿಶೀಲಿಸುವ ಮಾತುಗಳನ್ನಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಆ.28): ಒಳಮೀಸಲಿಗೆ ಸಂಬಂಧಿಸಿದ 2004ರ ತನ್ನದೇ ಆದೇಶವನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್‌ ತೀರ್ಮಾನಿಸಿದೆ. ಇದರಿಂದಾಗಿ ಒಳಮೀಸಲು ಕುರಿತಾದ ಚರ್ಚೆ ಮತ್ತೆ ಮರುಜೀವ ಪಡೆದಿದೆ.

2004ರಲ್ಲಿ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠವು, ‘ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲು ನೀಡುವ ಸಂದರ್ಭದಲ್ಲಿ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡಗಳಲ್ಲಿ ಉಪ-ವರ್ಗೀಕರಣ ಮಾಡುವ (ಒಳ ಮೀಸಲು ನೀಡುವ) ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ’ ಎಂದು ತೀರ್ಪು ನೀಡಿತ್ತು.

ಗುರುವಾರ ಈ ಕುರಿತು ಪಂಜಾಬ್‌ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ ಇಂದಿರಾ ಬ್ಯಾನರ್ಜಿ, ನ್ಯಾ ವಿನೀತ್‌ ಸರಣ್‌, ನ್ಯಾ ಎಂ.ಆರ್‌. ಶಾ, ನ್ಯಾ ಅನಿರುದ್ಧ ಬೋಸ್‌ ಅವರ ಪಂಚದಸಸ್ಯ ಪೀಠ, ‘ಈ ಕುರಿತು ಮರುವಿಚಾರಣೆ ಅಗತ್ಯವಿದೆ. ಈ ಸಂಬಂಧ ವಿಸ್ತೃತ ಪೀಠ ರಚಿಸುವ ಸೂಕ್ತ ನಿರ್ದೇಶನವನ್ನು ಮುಖ್ಯ ನ್ಯಾಯಮೂರ್ತಿಗಳು ನೀಡಲಿದ್ದಾರೆ’ ಎಂದು ಹೇಳಿ, ಪ್ರಕರಣವನ್ನು ಅವರಿಗೆ ಹಸ್ತಾಂತರಿಸಿತು.

‘ಮೀಸಲಾತಿ’ ಮೂಲಭೂತ ಹಕ್ಕಲ್ಲ'; ಸುಪ್ರೀಂ ಕೋರ್ಟ್‌ ಮಹತ್ವದ ಅಭಿಪ್ರಾಯ

‘2004ರಲ್ಲಿ ನ್ಯಾಯಾಲಯ ಸೂಕ್ತ ನಿರ್ಧಾರ ಕೈಗೊಂಡಿಲ್ಲ. ಎಸ್‌ಸಿ-ಎಸ್‌ಟಿಯಲ್ಲೇ ಉಪವರ್ಗೀಕರಣ ಮಾಡಿ ನಿರ್ದಿಷ್ಟಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ಕಾನೂನು ರೂಪಿಸಲು ರಾಜ್ಯ ಸರ್ಕಾರಗಳಿಗೆ ಅನುವು ಮಾಡಿಕೊಡಬೇಕು’ ಎಂದು ಪೀಠ ಅಭಿಪ್ರಾಯಪಟ್ಟಿತು.

ಪಂಜಾಬ್‌ ಸರ್ಕಾರವು ಎಸ್‌ಸಿ-ಎಸ್‌ಟಿಗಳಲ್ಲೇ ಒಳಮೀಸಲು ನೀಡುವ ಅಧಿಕಾರವನ್ನು ಪಡೆಯಲು ಶಾಸನವೊಂದನ್ನು ರಚಿಸಿತ್ತು. ಆದರೆ 2004ರಲ್ಲಿ ಸುಪ್ರೀಂ ಕೋರ್ಟು, ರಾಜ್ಯ ಸರ್ಕಾರಗಳಿಗೆ ಒಳಮೀಸಲು ನೀಡುವ ಅಧಿಕಾರ ಇಲ್ಲ ಎಂದು ಹೇಳಿದ್ದ ತೀರ್ಪನ್ನು ಉಲ್ಲೇಖಿಸಿದ್ದ ಪಂಜಾಬ್‌ ಹೈಕೋರ್ಟ್‌, ಸರ್ಕಾರ ರಚಿಸಿದ್ದ ಶಾಸನ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಈಗ ಪಂಜಾಬ್‌ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.
 

click me!