ಜೂನ್ 4ರಂದು ಗೆಲುವಿನ ಸಂಭ್ರಮಕ್ಕೆ ತಯಾರಿ ಮಾಡಿಕೊಳ್ಳಿ. ದಾವಣಗೆರೆ ಬೆಣ್ಣೆ ದೋಸೆಗೆ ಈಗಲೇ ತಯಾರಿ ಮಾಡಿಕೊಳ್ಳಿ ಎಂದು ಮೋದಿ ದಾವಣೆಗೆರೆಯಲ್ಲಿನ ಮತದಾರರಿಗೆ ಸೂಚಿಸಿದ್ದಾರೆ.
ದಾವಣಗೆರೆ(ಏ.28)ಕಾಂಗ್ರೆಸ್ ಇಷ್ಟು ವರ್ಷ ಸೋಲಿಗೆ ಇವಿಎಂ ಮೇಲೆ ಆರೋಪ ಮಾಡಿ ಕಾರ್ಯಕರ್ತರನ್ನು ಸಮಾಧಾನ ಪಡಿಸುತ್ತಿತ್ತು. ಇದೀಗ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಈ ಕಾರಣ ಮುಗಿದ ಅಧ್ಯಾಯ. ಹೀಗಾಗಿ ಕಾಂಗ್ರೆಸ್ ಸೋಲಿಗೆ ಹೊಸ ಆರೋಪ ಮಾಡಲು ಕಾರಣ ಹುಡುಕುತ್ತಿದೆ ಎಂದು ಮೋದಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ಆಯೋಜಿಸಿದ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕ್ಷೇತ್ರದ ಜನರನ್ನು ಅಭಿನಂದಿಸಿ ಭಾಷಣ ಆರಂಭಿಸಿದೆ. ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ, ತಾಯಿ ಭುವನೇಶ್ವರಿ, ಈ ಕ್ಷೇತ್ರದ ಎಲ್ಲಾ ಮಠಗಳಿಗೆ ಭಕ್ತಿಪೂರ್ವಕ ನಮನ ಸಲ್ಲಿಸುತ್ತೇನೆ ಎಂದರು. ನಿಮ್ಮ ಪ್ರೀತಿಗೆ ನಾನು ಚಿರಋಣಿ ಎಂದು ಮೋದಿಹೇಳಿದ್ದಾರೆ. ಏಪ್ರಿಲ್ 26ರಂದು ಕರ್ನಾಟಕದಲ್ಲಿ ಮೊದಲ ಮತದಾನ ನಡೆದಿದೆ. ಕರ್ನಾಟಕದ ಮಹಿಳಾ ಮತದಾರರು ಸೇರಿದಂತೆ ಎಲ್ಲಾ ಮತದಾರರು ಅಭೂತಪೂರ್ವವಾಗಿ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಇದು ಕಾಂಗ್ರೆಸ್ ನಿದ್ದೆಗೆಡಿಸಿದೆ ಎಂದು ಮೋದಿ ಹೇಳಿದ್ದಾರೆ.
ಮೊದಲ ಹಂತದ ಮತದಾನದ ಬಳಿಕ ಕಾಂಗ್ರೆಸ್ ಖಾತೆ ತೆರೆಯುವುದೇ ಅನುಮಾನವಾಗಿ ಕಾಣಿಸುತ್ತಿದೆ. ದಾವಣಗೆರೆ ಮತದಾರರು ಕೂಡ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಒಳಗಿನ ಆತಂರಿಕ ಯುದ್ಧ ರಸ್ತೆಗೆ ಬರಲಿದೆ. ಈ ದಿನ ದೂರವಿಲ್ಲ. ಇಷ್ಟು ದಿನ ಸೋಲಿನ ಬಳಿಕ ಇವಿಎಂ ಮೇಲೆ ಆರೋಪ ಮಾಡುತ್ತಿದ್ದರು. ಠೇವಣಿ ಕಳೆದುಕೊಂಡರೆ ಇವಿಎಂ, ಮೋದಿ ಗೆಲುವಿಗೆ ಇವಿಎಂ ಎಂದು ಆರೋಪಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಕಾಂಗ್ರೆಸ್‌ಗೆ ಕಪಾಳ ಮೋಕ್ಷ ಮಾಡಿದೆ. ಇಷ್ಟು ದಿನ ಇವಿಎಂ ಮೇಲೆ ಆರೋಪ ಮಾಡಿ ಕಾರ್ಯಕರ್ತರಿಗೆ ಕಾಂಗ್ರೆಸ್ ಸಮಾಧಾನ ಮಾಡುತ್ತಿತ್ತು. ಇದೀಗ ಇವಿಎಂ ಕುರಿತು ಕೋರ್ಟ್ ತೀರ್ಪು ನೀಡಿದ ಬಳಿಕ ಕಾಂಗ್ರೆಸ್ ಹೊಸ ಕಾರಣ ಹುಡುಕುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಕಳೆದ 10 ವರ್ಷದಲ್ಲಿ ಈ ದೇಶದ ಜನರು ಪ್ರಧಾನಿ ಮೋದಿಯನ್ನು ಇಂಚಿಂಚು ವಿಮರ್ಷಿಸಿದ್ದಾರೆ. ಇದೀಗ ಮೋದಿ ಯಾರು, ಮೋದಿ ಆಡಳಿತ ಏನು? ಅನ್ನೋದು ಗೊತ್ತಾಗಿದೆ. ನನಗೆ 2014ರಲ್ಲಿ, 2019ರಲ್ಲಿ ನೋಡದ ಈ ಪ್ರೀತಿ, ವಿಶ್ವಾಸವನ್ನು ಈಗ ನಾನು ನಿಮ್ಮಲ್ಲಿ ನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ದಾವಣಗೆರೆಯ ಬೆಣ್ಣೆ ದೋಸೆ ಬಾಯಲ್ಲಿ ನೀರೂರಿಸುತ್ತದೆ. ಜೂನ್ 4 ರಂದು ದಾವಣೆಗೆರೆ ಬೆಣ್ಣೆ ದೋಸೆ ಸವಿಯಲು ರೆಡಿಯಾಗಿ ಎಂದು ಮೋದಿ ಹೇಳಿದ್ದಾರೆ. ಇಂಡಿಯಾ ಒಕ್ಕೂಟದಲ್ಲಿ ಸರಿಯಾದ ವಿಷನ್ ಇಲ್ಲ , ಗುರಿ ಇಲ್ಲ. ನಾಯಕರ ನಡುವೆ ಹೊಂದಾಣಿಕೆ ಇಲ್ಲ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಒಂದೊಂದು ವರ್ಷ ಒಂದೊಂದು ಪ್ರಧಾನ ಮಂತ್ರಿಗಳು ಆಡಳಿತ ನಡೆಸುತ್ತಿದ್ದಾರೆ. ನಿಮ್ಮ ಅಮೂಲ್ಯ ಮತವನ್ನು ಹಾಳುಮಾಡಬೇಡಿ ಎಂದು ಮೋದಿ ಮನವಿ ಮಾಡಿದ್ದಾರೆ.