ಜೈನ ಸಮುದಾಯದ ತೀವ್ರ ವಿರೋಧ: ಪ್ರಾಚೀನ ಜೈನ ಪ್ರತಿಮೆಗಳ ಹರಾಜಿನಿಂದ ಹಿಂದೆ ಸರಿದ ಫಾರುಕ್ ಟೊಡ್ಡಿವಾಲಾ

By Anusha KbFirst Published Apr 5, 2024, 10:29 AM IST
Highlights

ಪ್ರಾಚೀನ ಜೈನ ವಿಗ್ರಹಗಳ ಹರಾಜಿಗೆ ಜೈನ ಸಮುದಾಯದಿಂದ ರಾಷ್ಟ್ರವ್ಯಾಪಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಹರಾಜು ಪ್ರಕ್ರಿಯೆಯಿಂದ ಮುಂಬೈ ಹರಾಜುದಾರ ಫಾರುಕ್‌ ಟೊಡ್ಡಿವಾಲಾ ಹಿಂದೆ ಸರಿದಿದ್ದಾರೆ. 

ಮುಂಬೈ: ಪ್ರಾಚೀನ ಜೈನ ವಿಗ್ರಹಗಳ ಹರಾಜಿಗೆ ಜೈನ ಸಮುದಾಯದಿಂದ ರಾಷ್ಟ್ರವ್ಯಾಪಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಹರಾಜು ಪ್ರಕ್ರಿಯೆಯಿಂದ ಮುಂಬೈ ಹರಾಜುದಾರ ಫಾರುಕ್‌ ಟೊಡ್ಡಿವಾಲಾ ಹಿಂದೆ ಸರಿದಿದ್ದಾರೆ.  ಪ್ರಾಚೀನ ಜೈನ ವಿಗ್ರಹಗಳ ಹರಾಜಿನ ಬಗ್ಗೆ ದಿನಗಳ ಹಿಂದಷ್ಟೇ ಮಾಧ್ಯಮವೊಂದು ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಜೈನ ಸಮುದಾಯ  ತಮ್ಮ ಪೂಜ್ಯ ತೀರ್ಥಂಕರರ ವಿಗ್ರಹಗಳನ್ನು ಹರಾಜು ಹಾಕದೇ ಅದನ್ನು ದೇವಾಲಯಗಳಲ್ಲಿ ಪೂಜೆಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಹರಾಜುದಾರ  ಫಾರುಕ್ ಟೊಡ್ಡಿವಾಲಾ ಅವರು, ಈ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದಾರೆ. 

ದೆಹಲಿ ಮೂಲದ ವಿಶ್ವ ಜೈನ್ ಸಂಘಟನೆಯು ಹರಾಜುದಾರ ಟೊಡ್ಡಿವಾಲಾ ವಿರುದ್ಧ ಸೈಬರ್ ಕ್ರೈಮ್‌ನಲ್ಲಿ ದೂರು ದಾಖಲಿಸಿದೆ. ಟೊಡ್ಡಿವಾಲಾ ಅವರು ಏಪ್ರಿಲ್ 16 ರಂದು ದಿ ತಾಜ್, ಕೊಲಾಬಾದಲ್ಲಿ ಹರಾಜಾಗಲಿರುವ ವಸ್ತುಗಳ ಬಗ್ಗೆ 180 ಲೇಖನಗಳ ಕ್ಯಾಟಲಾಗ್‌ನ್ನು ಹಂಚಿಕೊಂಡಿದ್ದರು. ಇದಾದ ನಂತರ ವಿಶ್ವ ಜೈನ್ ಸಂಘಟನೆ ಪ್ರಕರಣ ದಾಖಲಿಸಿದೆ. ಈ ಕ್ಯಾಟಲಾಗ್‌ನಲ್ಲಿ 17 ಪುರಾತನ ದೇವಾಲಯಗಳು, ಮರಳು ಗಲ್ಲುಗಳು ಮತ್ತು ಜೈನ ತೀರ್ಥಂಕರರ ಬಲಿಪೀಠಗಳು ಮತ್ತು ಯಕ್ಷಿಣಿಗಳು ಸೇರಿವೆ. ಅವುಗಳಲ್ಲಿ ಕೆಲವು ಒಂಬತ್ತನೇ ಶತಮಾನಕ್ಕಿಂತಲೂ ಹಿಂದಿನದ್ದಾಗಿವೆ.

ಹೇಮಾವತಿ ನದಿ ತೀರದಲ್ಲಿ ಪತ್ತೆಯಾದ ಪ್ರಾಚೀನ ವಿಗ್ರಹ

ಜೈನ ವಿಗ್ರಹಗಳ ಹರಾಜು ಪ್ರಕ್ರಿಯೆಗೆ ಜೈನರಿಂದ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಏಪ್ರಿಲ್ 3 ರಂದು ಕಲಬಾದೇವಿಯ ಗುಳಲವಾಡಿ ಜೈನ ದಿಗಂಬರ ಮಂದಿರದಲ್ಲಿ ಜೈನ ಸಮುದಾಯದವರು ಹಾಗೂ ಹರಾಜುದಾರರ ನಡುವೆ ಸಭೆ ಆಯೋಜಿಸಲಾಗಿತ್ತು. ಟೊಡ್ಡಿವಾಲಾ ಅವರ ಇಬ್ಬರು ಪುತ್ರರು ಜೈನ ಸನ್ಯಾಸಿ ಆಚಾರ್ಯ ಪುಷ್ಪದಂತ್ ಸಾಗರ್ಜಿ ಅವರನ್ನು ದೇವಸ್ಥಾನದಲ್ಲಿ ಭೇಟಿಯಾಗಿ, ಜೈನ ವಿಗ್ರಹಗಳನ್ನು ಹರಾಜು ಮಾಡದೇ ಇರಲು ಒಪ್ಪಿಕೊಂಡಿದ್ದಾರೆ ಎಂದು ವರದಿ ಆಗಿದೆ. 

ಸಭೆಯಲ್ಲಿ ಉಪಸ್ಥಿತರಿದ್ದ ದಿಗಂಬರ ಜೈನ ಜಾಗತಿಕ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಜಮನಾಲಾಲ್ ಹಪಾವತ್ ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿ, ನಮ್ಮ ದೇವರ ವಿಗ್ರಹಗಳನ್ನು ಯಾರಾದರೂ ಹರಾಜು ಹಾಕಿದರೆ ನಾವು ಮೂಕ ಪ್ರೇಕ್ಷಕರಾಗಲು ಸಾಧ್ಯವಿಲ್ಲ. ಅವು ನಮ್ಮ ನಂಬಿಕೆಯ ಪ್ರತೀಕ. ಇಡೀ ಸಮುದಾಯದಲ್ಲಿ ಇದಕ್ಕೆ ವಿರೋಧವಿದೆ ಹೀಗಾಗಿ, ನಾವು ಹರಾಜುದಾರರನ್ನು ಭೇಟಿ ಮಾಡಿ ಉದ್ದೇಶಿತ ಹರಾಜಿನ ಬಗ್ಗೆ ಸಮುದಾಯದ ಭಾವನೆಗಳನ್ನು ತಿಳಿಸಿದ್ದೇವೆ. ಅವರು ನಮ್ಮ ಆಚಾರ್ಯರನ್ನು ಭೇಟಿಯಾಗಿ ಹರಾಜನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ. ವಿಗ್ರಹಗಳ ಭವಿಷ್ಯದ ಯೋಜನೆಗಳನ್ನು ಚರ್ಚಿಸಲು ಅವರು ಮತ್ತೊಮ್ಮೆ ನಮ್ಮನ್ನು ಭೇಟಿ ಮಾಡುತ್ತಾರೆ ಎಂದು ಹೇಳಿದರು.  

Sallekhana: ನಿರಾಹಾರಿಗಳಾಗಿ ಸಾವು ಬರಮಾಡಿಕೊಳ್ಳುವ ಜೈನ ಸಂತರು… ಏನಿದು ಸಂಪ್ರದಾಯ?

ಈ ವಿಚಾರಕ್ಕೆ ಸಂಬಂಧಿಸಿದಂತೆ ಟೊಡ್ಡಿವಾಲಾ ಹರಾಜು ಸಂಸ್ಥೆಯ ಮಾಲ್ಕಮ್ ಟೋಡಿವಾಲಾ ಮಾತನಾಡಿದ್ದು,   ಜೈನ ವಿಗ್ರಹಗಳನ್ನು ಹರಾಜಿನಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಜೈನ ಸಮುದಾಯವು ಭಾರತದ ಪ್ರಾಚೀನ ಪರಂಪರೆಯನ್ನು ದೇಶಕ್ಕೆ ಮರಳಿ ತರುವ ನಮ್ಮ ಕೆಲಸವನ್ನು ಶ್ಲಾಘಿಸಿದೆ ಮತ್ತು ಅವರ ದೇವರುಗಳ ವಿಗ್ರಹಗಳನ್ನು ಹರಾಜಿನಿಂದ ಹಿಂತೆಗೆದುಕೊಳ್ಳುವಂತೆ ವಿನಂತಿಸಿದೆ. ಅವರ ಧಾರ್ಮಿಕ ಭಾವನೆಗಳನ್ನು ಗೌರವಿಸಿ ನಾವು 17 ಜೈನ ವಿಗ್ರಹಗಳನ್ನು ಹರಾಜಿನಿಂದ ಹಿಂಪಡೆದಿದ್ದೇವೆ ಎಂದು ತೋಡಿವಾಲಾ ಹೇಳಿದ್ದಾರೆ.

ಆದರೆ, ಈ ವಿಗ್ರಹಗಳನ್ನು ದೇವಸ್ಥಾನಗಳಲ್ಲಿ ಇಟ್ಟು ಪೂಜಿಸಲು ಜೈನಸಮುದಾಯದವರಿಗೆ ಹಸ್ತಾಂತರಿಸಬೇಕು ಎಂದು ಜೈನ ಸಮುದಾಯವೂ ಒತ್ತಾಯಿಸಿದ್ದು, ನಮ್ಮ ದೇವಾಲಯಗಳ ಹೊರಗೆ ಎಲ್ಲಿಯೂ ಈ ವಿಗ್ರಹಗಳನ್ನು ಇರಿಸಿರುವುದನ್ನು ನಾವು ಸಹಿಸುವುದಿಲ್ಲ. ಈ ವಿಗ್ರಹಗಳನ್ನು ಹೇಗೆ ಪಡೆಯಬಹುದು ಎಂಬ ಬಗ್ಗೆ ಚರ್ಚಿಸಲು ನಾವು ಹರಾಜುದಾರರೊಂದಿಗೆ ಮತ್ತೊಮ್ಮೆ ಸಭೆ ನಡೆಸುತ್ತೇವೆ ಎಂದು ದಿಗಂಬರ ಜೈನ್ ಜಾಗತಿಕ ಮಹಾಸಭಾದ ರಾಷ್ಟ್ರೀಯ ಯುವ ಅಧ್ಯಕ್ಷ ಪಾರಸ್ ಲೋಹಡೆ ಹೇಳಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಕಮಿಷನರ್, ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್, ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಸಂಸ್ಕೃತಿ ಸಚಿವಾಲಯಕ್ಕೆ ಪತ್ರ ಬರೆದಿರುವ ವಿಶ್ವ ಜೈನ ಸಂಘಟನೆ, ಈ ಪುರಾತನ ವಿಗ್ರಹಗಳನ್ನು ವಿದೇಶಕ್ಕೆ ಹೇಗೆ ರವಾನಿಸಲಾಗಿದೆ ಎಂಬುದನ್ನು ಕಂಡುಹಿಡಿಯಲು ಗಂಭೀರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

click me!