15 ವರ್ಷ ನೆಲೆಸಿದ್ದವರಿಗಷ್ಟೇ ಕಾಶ್ಮೀರದಲ್ಲಿ ಕೆಲಸ, ಭೂಮಿ!

By Suvarna NewsFirst Published Jan 5, 2020, 9:05 AM IST
Highlights

15 ವರ್ಷ ನೆಲೆಸಿದ್ದವರಿಗಷ್ಟೇ ಕಾಶ್ಮೀರದಲ್ಲಿ ಕೆಲಸ, ಭೂಮಿ| ಕಾಶ್ಮೀರಿಗಳ ಹಕ್ಕು ರಕ್ಷಣೆಗೆ ವಿಶೇಷ ನಿಯಮಕ್ಕೆ ಚಿಂತನೆ

ನವದೆಹಲಿ[ಜ.05]: ಜಮ್ಮು- ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದಾಗುತ್ತಿದ್ದಂತೆ ಅಲ್ಲಿ ಇನ್ನು ಯಾರು ಬೇಕಾದರೂ ಆಸ್ತಿ ಖರೀದಿಸಬಹುದು ಹಾಗೂ ಅಲ್ಲಿ ಸರ್ಕಾರಿ ಉದ್ಯೋಗ ಪಡೆಯಬಹುದು ಎಂದು ಎಣಿಸಲಾಗಿತ್ತು. ಆದರೆ ಅಂತಹ ಅವಕಾಶ ನಿರಾಕರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಜಮ್ಮು- ಕಾಶ್ಮೀರದಲ್ಲಿ ಉದ್ಯೋಗ ಮತ್ತು ಭೂಮಿಯ ಹಕ್ಕು ಪಡೆಯಲು ಕನಿಷ್ಠ 15 ವರ್ಷಗಳ ಕಾಲ ಅಲ್ಲಿ ನೆಲೆಸಿರಬೇಕು ಎಂಬ ನಿಯಮವನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.

370ನೇ ವಿಧಿ ರದ್ದಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಲ್ಲಿನ ನಿವಾಸಿಗಳ ಸರ್ಕಾರಿ ಉದ್ಯೋಗ, ಶಿಕ್ಷಣ ಮತ್ತು ಭೂಮಿಯ ಹಕ್ಕುಗಳ ರಕ್ಷಣೆಗೆ ಮುಂದಾಗಿದೆ. ಹೀಗಾಗಿ ಜಮ್ಮು- ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಮತ್ತು ಶಾಲೆ ಮತ್ತು ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕನಿಷ್ಠ 15 ವರ್ಷಗಳ ಕಾಲ ಅಲ್ಲಿಯೇ ಕಡ್ಡಾಯವಾಗಿ ನೆಲೆಸಿರಬೇಕು ಎಂಬ ನಿಯಮವನ್ನು ಜಾರಿಗೆ ತರುವ ಆಯ್ಕೆಯೊಂದನ್ನು ಕೇಂದ್ರ ಸರ್ಕಾರ ಶೋಧಿಸುತ್ತಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಅನ್ಯ ರಾಜ್ಯದವರು ಕೃಷಿ ಭೂಮಿ ಖರೀದಿಸದಂತೆ ನಿಷೇಧ ಹೇರಲಾಗಿದೆ. ಒಂದು ವೇಳೆ ಭೂಮಿ ಖರೀದಿಸಬೇಕಾದರೆ ಕೃಷಿಯೆತರ ಭೂಮಿಯನ್ನು ಖದೀದಿಸಬಹುದು. ಬಳಿಕ ಅಲ್ಲಿ ಮನೆ ಕಟ್ಟಲು ಸರ್ಕಾರದಿಂದ ಅನುಮತಿಯನ್ನು ಪಡೆದುಕೊಳ್ಳಬೇಕು. ಅದೇ ರೀತಿಯ ನಿಯಮವನ್ನು ಜಮ್ಮು- ಕಾಶ್ಮೀರಕ್ಕೆ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತಿಸುತ್ತಿದೆ.

35ಎ ವಿಧಿಯನ್ನು ರದ್ದುಗೊಳಿಸುವುದಕ್ಕೂ ಮುನ್ನ ಜಮ್ಮು- ಕಾಶ್ಮೀರದ ಶಾಶ್ವತ ನಿವಾಸಿಗಳೆಂದು ಪರಿಗಣಿಸುವುದು ಮತ್ತು ಹೊರ ರಾಜ್ಯದವರಿಗೆ ಆಸ್ತಿ ಖರೀದಿಸುವುದಕ್ಕೆ ನಿಷೇಧ ಹೇರುವುದು ಮತ್ತು ನಿವಾಸಿಗಳಿಗೆ ಉದ್ಯೋಗ ಖಾತರಿಪಡಿಸಿಕೊಳ್ಳುವ ಬಗ್ಗೆ ವಿಧಾನಸಭೆ ನಿರ್ಣಯ ಕೈಗೊಳ್ಳುತ್ತಿತ್ತು. ಆದರೆ ಈಗ ಜಮ್ಮು- ಕಾಶ್ಮೀರ ರಾಜ್ಯದ ಸ್ಥಾನಮಾನ ಕಳೆದುಕೊಂಡು ಕೇಂದ್ರಾಡಳಿತ ಪ್ರದೇಶ ಎನಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಇರುವಂತೆ ವಿಶೇಷ ನಿಬಂಧನೆಗಳನ್ನು ಜಾರಿಗೊಳಿಸುವ ಬಗ್ಗೆ ಯೋಚಿಸಲಾಗುತ್ತಿದೆ.

ಏನಿದು ವಿಶೇಷ ನಿಬಂಧನೆ?

ರಾಜ್ಯವೊಂದು ತನ್ನ ವಿಶೇಷ ಗುರುತನ್ನು ಉಳಿಸಿಕೊಳ್ಳುವುದನ್ನು ಖಾತರಿಪಡಿಸಿಕೊಳ್ಳಲು ಭೂ ಮಾಲೀಕತ್ವ ಮತ್ತು ಭೂಮಿಯ ವರ್ಗಾವಣೆಯನ್ನು ನಿಯಂತ್ರಿಸುವ ಅಧಿಕಾರವನ್ನು ಸಂವಿಧಾನದ 371ನೇ ಪರಿಚ್ಛೇದದ ಅಡಿಯಲ್ಲಿ ಒದಗಿಸಲಾಗಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಈ ಆಯ್ಕೆಯನ್ನು ಕಲ್ಪಿಸಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತೀರಾ ಕಡಿಮೆ ಭೂಮಿ ಇರುವ ಕಾರಣ ಅಲ್ಲಿ ಭೂಮಿ ಖರಿದಿಗೆ ನಿರ್ಬಂಧ ವಿಧಿಸಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಅನ್ಯ ರಾಜ್ಯದವರು ಕೃಷಿ ಭೂಮಿ ಖರಿದಿಗೆ ನಿಷೇಧ ಹೇರಲಾಗಿದೆ. ಒಂದು ವೇಳೆ ಭೂಮಿ ಖರೀದಿಸಬೇಕಾದರೆ ಕೃಷಿಯೆತರ ಭೂಮಿಯನ್ನು ಖರಿದಿಸಬಹುದು. ಬಳಿಕ ಅಲ್ಲಿ ಮನೆ ಕಟ್ಟಲು ಸರ್ಕಾರದಿಂದ ಅನುಮತಿಯನ್ನು ಪಡೆದುಕೊಳ್ಳಬೇಕು. ಅದೇ ರೀತಿಯ ನಿಯಮವನ್ನು ಜಮ್ಮು- ಕಾಶ್ಮೀರಕ್ಕೆ ಒದಗಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತಿಸುತ್ತಿದೆ.

click me!