ನನ್ನ ಬಾಲ್ಯದ ದಿನಗಳಲ್ಲಿ, ನನ್ನ ತಂದೆಯ ಸ್ನೇಹಿತರೊಬ್ಬರಿದ್ದರು. ಬಾಂಗ್ಲಾದೇಶಿ ಹಿಂದೂ ಆಗಿದ್ದ ಅವರು, ಬಳಿಕ ಇಸ್ಲಾಂಗೆ ಮತಾಂತರ ಹೊಂದಿದ್ದರು. 1971ರ ಬಾಂಗ್ಲಾ ವಿಮೋಚನಾ ಯುದ್ಧಕ್ಕೂ ಮುನ್ನ ಅವರು ಭಾರತಕ್ಕೆ ವಲಸೆ ಬಂದಿದ್ದರು. ಅವರನ್ನು ನಾನು ಪ್ರೀತಿಯಿಂದ 'ಅಬ್ದುಲ್ ಚಾಚಾ' ಎನ್ನುತ್ತಿದ್ದೆ. ಅವರು ಹೇಳುತ್ತಿದ್ದ ವಿಮೋಚನಾ ಯುದ್ಧದ ಕತೆಗಳು ಈಗಲೂ ನನ್ನ ಕಿವಿಯಲ್ಲಿ ಗುಂಯ್‌ಗುಡುತ್ತಿದೆ.
ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
'ನನಗೆ ಇಂದಿಗೂ 'ಬಂಗಬಂಧು' ಎಂದೇ ಹೆಸರಾಗಿದ್ದ ಶೇಖ್ ಮುಜಿಬುರ್ ರೆಹಮಾನ್ ಅವರು ತನ್ನ ಕಂಚಿನ ಕಂಠದಲ್ಲಿ, ಕಲ್ಕತ್ತಾದ ರೇಸ್ ಕೋರ್ಸ್ ಮೈದಾನದಲ್ಲಿ (ಈಗದು ಸುಹ್ರವರ್ದಿ ಉದ್ಯಾನ್) ಮಾರ್ಚ್ 7, 1971ರಂದು ಮಾಡಿದ ಭಾಷಣ ಸ್ಪಷ್ಟವಾಗಿ ನೆನಪಿದೆ. ಬಂಗಬಂಧು ಬಂಗಾಳಿಗಳನ್ನು ಪೂರ್ವ ಪಾಕಿಸ್ತಾನದ ದಮನಕಾರಿ ಆಡಳಿತದ ವಿರುದ್ಧ ಸಿಡಿದೇಳುವಂತೆ ಕರೆ ನೀಡಿ, ಅನಧಿಕೃತವಾಗಿ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ್ದರು" ಎಂದು ಅಬ್ದುಲ್ ಚಾಚಾ ನೆನಪಿಸುತ್ತಿದ್ದರು. "ನಮ್ಮ ಹೋರಾಟ ನಮ್ಮ ಸ್ವಾತಂತ್ರ್ಯಕ್ಕಾಗಿ. ಎಲ್ಲರೂ ಈ ಹೋರಾಟಕ್ಕೆ ಇಳಿದು, ನಿಮ್ಮ ಮನೆಗಳನ್ನು ಕೋಟೆಗಳನ್ನಾಗಿಸಿ. ನಮ್ಮನ್ನು ನೆಲಕಚ್ಚಿಸಲು ಯಾರಿಂದಲೂ ಸಾಧ್ಯವೇ ಇಲ್ಲ!" ಎಂದು ಶೇಖ್ ಮುಜಿಬುರ್ ರೆಹಮಾನ್ ಬಂಗಾಳಿಗಳಲ್ಲಿ ಸ್ಫೂರ್ತಿ ತುಂಬಿದ್ದರು ಎನ್ನುತ್ತಾ ಚಾಚಾ ಆ ದಿನಗಳ ಮೆಲುಕು ಹಾಕುತ್ತಿದ್ದರು.
ಧೈರ್ಯ ಸಾಹಸದ ಕತೆಯ ಆರಂಭ: ಶೇಖ್ ಮುಜಿಬುರ್ ರೆಹಮಾನ್ ಅವರ ಅಂದಿನ ಭಾಷಣವನ್ನು ಯುನೆಸ್ಕೋ ಒಂದು ಪರಂಪರೆಯ ಸಾಕ್ಷ್ಯಚಿತ್ರ ಎಂದು ಗುರುತಿಸಿ, ಅಕ್ಟೋಬರ್ 30, 2017ರಂದು ಅದನ್ನು ತನ್ನ 'ಮೆಮೊರಿ ಆಫ್ ವರ್ಲ್ಡ್ ರಿಜಿಸ್ಟರ್'ನಲ್ಲಿ ದಾಖಲಿಸಿತ್ತು. ಪೂರ್ವ ಪಾಕಿಸ್ತಾನದ ಜನತೆ ಮತ್ತು ಪಶ್ಚಿಮ ಪಾಕಿಸ್ತಾನದ ಪ್ರಭಾವಿ ರಾಜಕೀಯ ಮತ್ತು ಮಿಲಿಟರಿ ನಾಯಕರ ನಡುವೆ ಹೆಚ್ಚುತ್ತಿದ್ದ ಉದ್ವಿಗ್ನತೆಯ ಸಮಯದಲ್ಲಿ ಬಂಗಬಂಧು ಆ ಭಾಷಣ ನಡೆಸಿ, ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದರು.
ಮರದ ಉಪಗ್ರಹಗಳು: ಬಾಹ್ಯಾಕಾಶ ಅನ್ವೇಷಣೆಯ ಭವಿಷ್ಯ!
undefined
ಅವರ ಭಾಷಣದ ಬಳಿಕ ನಡೆದದ್ದು ಇಂದು ಇತಿಹಾಸದ ಭಾಗವಾಗಿದೆ!: ಪಾಕಿಸ್ತಾನ ಸೇನೆ ಬಂಗಾಳಿ ನಾಗರಿಕರು, ಚಿಂತಕರು, ವಿದ್ಯಾರ್ಥಿಗಳು, ರಾಜಕಾರಣಿಗಳು ಮತ್ತು ಯೋಧರ ವಿರುದ್ಧ 1971ರಲ್ಲಿ 'ಆಪರೇಶನ್ ಸರ್ಚ್‌ಲೈಟ್' ಕಾರ್ಯಾಚರಣೆ ಆರಂಭಿಸಿತು. ಅದಾದ 18 ದಿನಗಳ ಬಳಿಕ, ಬಾಂಗ್ಲಾ ವಿಮೋಚನಾ ಯುದ್ಧ ಮೊದಲಾಯಿತು. ಮಾರ್ಚ್ 25ರ ಮಧ್ಯರಾತ್ರಿ ಪಾಕಿಸ್ತಾನಿ ಯೋಧರು ಬಂಗಬಂಧುವನ್ನು ಗೃಹ ಬಂಧನಕ್ಕೆ ಗುರಿಯಾಗಿಸಿದರು. ಆದರೆ ಮಾರ್ಚ್ 1971ರ ವೇಳೆಗಾಗಲೇ ಮುಜಿಬ್ ಅವರ ಆವಾಮಿ ಲೀಗ್ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಿ, ಪದೇಪದೇ ಧರಣಿ, ಮುಷ್ಕರಗಳನ್ನು ನಡೆಸುತ್ತಿದ್ದರು. ಬಾಂಗ್ಲಾದೇಶದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದೇಶದ್ರೋಹಿಗಳೆಂದು ದಾಖಲಾಗಿರುವ ರಜಾಕಾರರ ನೆರವನಿಂದ, ಪಾಕಿಸ್ತಾನಿ ಸೇನೆ ಎಗ್ಗಿಲ್ಲದೆ ಪೂರ್ವ ಪಾಕಿಸ್ತಾನವನ್ನು ಹಾಳುಗೆಡವತೊಡಗಿತು. ಈ ಕುಕೃತ್ಯಗಳ ವರದಿ ಮಾಡಿದ 'ಹಮೂದುರ್ ರೆಹಮಾನ್ ಕಮಿಷನ್', ಅಂದು 26,000 ಜನರು ಪ್ರಾಣ ಕಳೆದುಕೊಂಡು, ಲಕ್ಷಾಂತರ ನಿರಾಶ್ರಿತರು ಭಾರತಕ್ಕೆ ವಲಸೆ ಹೋಗಿದ್ದರು ಎಂದಿದೆ.
ಆ ಬಳಿಕ, 1971ರಲ್ಲಿ ಬಾಂಗ್ಲಾದೇಶದ ವಿಮೋಚನೆಗಾಗಿ ಭಾರತ ರಣರಂಗಕ್ಕಿಳಿದು, ಬಾಂಗ್ಲಾದ ಮುಕ್ತಿ ವಾಹಿನಿಗೆ ಬೆಂಬಲ ನೀಡಿ, ಬಾಂಗ್ಲಾದೇಶದ ಉಗಮಕ್ಕೆ ಕಾರಣವಾಯಿತು. ಈ ಬೆಳವಣಿಗೆ ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ನಾಯಕತ್ವಕ್ಕೆ ಸಾಕ್ಷಿಯಾಗಿತ್ತು. ಇಂದಿರಾ ಗಾಂಧಿಯವರು ಭಾರತದ ಸೇನಾ ಮುಖ್ಯಸ್ಥರಾದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಅವರ ಮೇಲೆ ಸಂಪೂರ್ಣ ನಂಬಿಕೆ ಇಟ್ಟು, ಮಿಲಿಟರಿ ಕಾರ್ಯಾಚರಣೆಗೆ ಆದೇಶಿಸಿದ್ದರು. ಡಿಸೆಂಬರ್ 16, 1971ರಂದು, ಬಾಂಗ್ಲಾ ವಿಮೋಚನಾ ಯುದ್ಧ ಆರಂಭಗೊಂಡ ಕೇವಲ 13 ದಿನಗಳಲ್ಲಿ, ಪಾಕಿಸ್ತಾನಿ ಸೇನೆಯ ಪೂರ್ವ ಕಮಾಂಡಿನ ಮುಖ್ಯಸ್ಥರಾದ ಜನರಲ್ ಎಎ ಖಾನ್ ನಿಯಾಜಿ ಅವರು ಢಾಕಾದಲ್ಲಿ ಶರಣಾಗಿ, ತನ್ನ ಸೇವಾ ರಿವಾಲ್ವರ್ ಅನ್ನು ಭಾರತೀಯ ಸೇನೆಯ ಪೂರ್ವ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಜೆ ಎಸ್ ಅರೋರಾ ಅವರಿಗೆ ಹಸ್ತಾಂತರಿಸಿದರು. ಅಂದಿನಿಂದ ಡಿಸೆಂಬರ್ 16ನ್ನು ಭಾರತದಲ್ಲಿ ವಿಜಯ ದಿವಸವನ್ನಾಗಿ ಆಚರಿಸಲಾಗುತ್ತಿದೆ.
ಶೇಖ್ ಹಸೀನಾ ಮತ್ತು ಕೋಟಾ ವ್ಯವಸ್ಥೆ: 1972ರಲ್ಲಿ ಸ್ವತಂತ್ರ ಬಾಂಗ್ಲಾದೇಶದಲ್ಲಿ ಆರಂಭವಾದ ಕೋಟಾ ವ್ಯವಸ್ಥೆ, ಬಳಿಕ ಹಲವಾರು ಬಾರಿ ಸುಧಾರಣೆಗೆ ಒಳಗಾಗಿದೆ. ಅತ್ಯಂತ ಇತ್ತೀಚಿನ ಸುಧಾರಣೆಗಳ ಅನುಸಾರ, ಬಾಂಗ್ಲಾದೇಶದ ನಾಗರಿಕ ಸೇವಾ ಉದ್ಯೋಗಗಳಲ್ಲಿ 56% ಉದ್ಯೋಗಗಳು ಮೀಸಲಾಗಿ ಇಡಲಾಗಿದ್ದವು. 30% ಸರ್ಕಾರಿ ಉದ್ಯೋಗಗಳನ್ನು 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಹೋರಾಡಿದ ಯೋಧರ ಮಕ್ಕಳು, ಮೊಮ್ಮಕ್ಕಳಿಗೆ ಮೀಸಲಿಡಲಾಗಿತ್ತು. ಇದನ್ನು ಪ್ರತಿಭಟಿಸಿ 2024ರಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ, ಹೋರಾಟ ನಡೆಸಿ, 114 ಜನರು ಸಾವಿಗೀಡಾದರು. ಆ ಬಳಿಕ, ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯ ಸರ್ಕಾರಿ ಉದ್ಯೋಗದಲ್ಲಿದ್ದ ಭಾರೀ ಮೀಸಲಾತಿಯನ್ನು ರದ್ದುಪಡಿಸಿತು. ಕೆಳಹಂತದ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್, ದೇಶದ 93% ಸರ್ಕಾರಿ ಉದ್ಯೋಗಗಳು ಅರ್ಹತೆಯ ಆಧಾರದಲ್ಲಿ ಎಲ್ಲರಿಗೂ ಲಭ್ಯವಾಗುವಂತಿರಬೇಕು ಎಂದು ಆದೇಶ ನೀಡಿತು. ಸರ್ವೋಚ್ಚ ನ್ಯಾಯಾಲಯ ಉದ್ಯೋಗ ಮೀಸಲಾತಿಯನ್ನು 56%ದಿಂದ 7%ಗೆ ಇಳಿಸಿತು. ಆದರೆ ಈ ನಿರ್ಧಾರವೂ ಪ್ರತಿಭಟನಾಕಾರರಿಗೆ ಪೂರ್ಣ ಸಮಾಧಾನ ನೀಡಲಿಲ್ಲ. ಉಳಿದಿದ್ದ 7% ಮೀಸಲಾತಿಯಲ್ಲಿ, ನ್ಯಾಯಾಲಯ 1971ರ ಸ್ವಾತಂತ್ರ್ಯ ಹೋರಾಟಗಾರರ ವಂಶಜರಿಗೆ ಇದ್ದ 30% ಮೀಸಲಾತಿಯನ್ನು 5%ಗೆ ಇಳಿಸಿತು.
ಸ್ವಾತಂತ್ರ್ಯ ಹೋರಾಟಗಾರ ಕೋಟಾಗೇಕೆ ವಿರೋಧ?: ಯುವ ಪದವೀಧರರು ಸ್ವಾತಂತ್ರ್ಯ ಹೋರಾಟಗಾರರ ವಂಶಸ್ತರಿಗೆ ಇರುವ ಮೀಸಲಾತಿ ಶೇಖ್ ಹಸೀನಾರ ಆವಾಮಿ ಲೀಗ್ ಪಕ್ಷದ ಬೆಂಬಲಿಗರಿಗೆ ಪೂರಕವಾಗಿದೆ ಎಂದು ಆರೋಪಿಸಿ, ಈ ಮೀಸಲಾತಿಯನ್ನು ವಿರೋಧಿಸಿದರು. ಶೇಖ್ ಹಸೀನಾ ನ್ಯಾಯಾಲಯದ ತೀರ್ಮಾನ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿದೆ ಎಂದಿದ್ದರು. ಆದರೆ ಅವರ ಸರ್ಕಾರ ನ್ಯಾಯಾಂಗದ ಮೇಲೂ ಪ್ರಭಾವ ಬೀರಿದೆ ಎಂದು ಟೀಕಾಕಾರರು ಆರೋಪಿಸಿದ್ದರು. ಸಾಲು ಸಾಲು ಪ್ರತಿಭಟನೆ, ಹಿಂಸಾಚಾರಗಳು ಸಂಭವಿಸಿದರೂ, ಹಸೀನಾ ಸರ್ಕಾರ ಪ್ರತಿಭಟನಾಕಾರರೊಡನೆ ಸಮಾಲೋಚಿಸದಿರಲು ನಿರ್ಧರಿಸಿತು. ಅದರ ಬದಲಿಗೆ, ಪ್ರತಿಭಟನಾಕಾರರನ್ನು ಹತ್ತಿಕ್ಕಲು ದಾಳಿ ನಡೆಸಲಾಯಿತು.
ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ, ಸರ್ಕಾರ ದೇಶಾದ್ಯಂತ ಅಂತರ್ಜಾಲ ಮತ್ತು ಮೊಬೈಲ್ ನೆಟ್ವರ್ಕ್ ಸ್ಥಗಿತಗೊಳಿಸಿತು. ಕೇವಲ ಎರಡು ದಿನಗಳ ಅವಧಿಯಲ್ಲಿ 39 ಪ್ರತಿಭಟನಾಕಾರರು ಹತ್ಯೆಗೀಡಾಗಿ, ಸಾವಿರಾರು ಜನರು ಗಾಯಗೊಂಡರು. ಜುಲೈ 18ರ ಒಂದೇ ದಿನದಲ್ಲಿ 33 ಜನರು ಪ್ರಾಣ ಕಳೆದುಕೊಂಡಿದ್ದರು. ಆಗಸ್ಟ್ 5ರಂದು ಪ್ರತಿಭಟನಾಕಾರರು ಢಾಕಾದ ಶೇಖ್ ಹಸೀನಾ ನಿವಾಸವಾದ 'ಬಂಗಭಬನ್'ಗೆ ನುಗ್ಗಿದಾಗ ಹಸೀನಾ ಅಂತಿಮವಾಗಿ ರಾಜೀನಾಮೆ ನೀಡಿ, ಮಿಲಿಟರಿ ಹೆಲಿಕಾಪ್ಟರ್ ಏರಿ ದೇಶ ಬಿಟ್ಟು ತೆರಳಿದರು. ಹಸೀನಾ ನಿರ್ಗಮಿಸಿದ ಬಳಿಕ, ಅಪಾರ ಸಂಖ್ಯೆಯ ಜನರು ಧ್ವಜವನ್ನು ಬೀಸಿ, ಕುಣಿದು ಕುಪ್ಪಳಿಸಿ, ಕೆಲವರು ಅಸಭ್ಯ ಸನ್ನೆಗಳನ್ನು ಮಾಡಿ ಸಂಭ್ರಮಿಸಿದ್ದರು. ಇನ್ನೊಂದಷ್ಟು ಪ್ರತಿಭಟನಾಕಾರರು ಹಸೀನಾರ ತಂದೆ, ಬಾಂಗ್ಲಾದೇಶದ ಸ್ವಾತಂತ್ರ್ಯದ ರೂವಾರಿ 'ಬಂಗಬಂಧು' ಮುಜಿಬ್‌ರ ಪ್ರತಿಮೆಯನ್ನೂ ಧ್ವಂಸಗೊಳಿಸಿದರು.
ಗಡಿಯಾದ್ಯಂತ ಉದ್ವಿಗ್ನತೆ: ನವೆಂಬರ್ ತಿಂಗಳ ಕೊನೆಯಲ್ಲಿ, ಢಾಕಾ ವಿಶ್ವವಿದ್ಯಾನಿಲಯ ಸೇರಿದಂತೆ, ವಿವಿಧ ವಿದ್ಯಾಲಯಗಳ ವಿದ್ಯಾರ್ಥಿಗಳು ಭಾರತದ ಧ್ವಜವನ್ನು ತುಳಿದು ಸಾಗುತ್ತಿರುವ ದೃಶ್ಯಗಳು ಹರಿದಾಡಿದವು. ಇದರಿಂದ ಕುಪಿತರಾದ ಪಶ್ಚಿಮ ಬಂಗಾಳದ ಬಿಜೆಪಿ ನಾಯಕರು ಬಾಂಗ್ಲಾದೇಶಕ್ಕೆ ಅನಿರ್ದಿಷ್ಟಾವಧಿಗೆ ರಫ್ತು ನಿಷೇಧಿಸುವ ಬೆದರಿಕೆ ಒಡ್ಡಿದ್ದಾರೆ. ಒಂದು ವೇಳೆ ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ದೇವಾಲಯಗಳ ಮೇಲಿನ ದಾಳಿ ನಿಲ್ಲದಿದ್ದರೆ, ಐದು ದಿನಗಳ ವ್ಯಾಪಾರ ನಿರ್ಬಂಧ ಹೇರಲಾಗುವುದು ಎಂದು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಬಾಂಗ್ಲಾದೇಶ ಹಿಂದೂಗಳ ಮೇಲೆ, ದೇವಾಲಯಗಳ ಮೇಲಿನ ದಾಳಿಯಿಂದ ಕುಪಿತರಾದ ಭಾರತೀಯ ಟ್ರಕ್ ಚಾಲಕರು ಮತ್ತು ವ್ಯಾಪಾರಿಗಳು ಬಾಂಗ್ಲಾದೇಶದ ಜೊತೆ ವ್ಯಾಪಾರ ನಿಲ್ಲಿಸಿದ್ದಾರೆ. ಕೆಲವು ಭಾರತೀಯ ಆಸ್ಪತ್ರೆಗಳು ಬಾಂಗ್ಲಾದ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿವೆ. ಗಡಿ ಮುಚ್ಚುವ ಸಾಧ್ಯತೆಗಳ ಕುರಿತು ಸುದ್ದಿ ಹಬ್ಬಿದ್ದು, ಭಾರತದಲ್ಲಿರುವ ಬಹಳಷ್ಟು ಬಾಂಗ್ಲಾದೇಶೀಯರು ತರಾತುರಿಯಲ್ಲಿ ಸ್ವದೇಶಕ್ಕೆ ಮರಳತೊಡಗಿದ್ದಾರೆ.
ಉದ್ವಿಗ್ನತೆಗೆ ಮೂಲ ಕಾರಣ: ತೀವ್ರವಾದಿ ಗುಂಪುಗಳೊಡನೆ ಸಂಪರ್ಕ ಹೊಂದಿರುವ ಬಾಂಗ್ಲಾದೇಶದ ಒಂದಷ್ಟು ಹಾಲಿ ಮತ್ತು ಮಾಜಿ ಸೈನಿಕರು 'ನಾಲ್ಕು ದಿನಗಳಲ್ಲಿ ಕಲ್ಕತ್ತಾವನ್ನು ವಶಪಡಿಸಿಕೊಳ್ಳುತ್ತೇವೆ' ಎಂದು ಬೆದರಿಕೆ ಒಡ್ಡಿದ್ದರಿಂದ ಭಾರತ-ಬಾಂಗ್ಲಾಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಇದು ಗಡಿ ಪ್ರದೇಶದ ಸುರಕ್ಷತೆಯ ಕುರಿತೂ ಕಳವಳ ಮೂಡಿಸಿದೆ. ಕಲ್ಕತ್ತಾವನ್ನು ವಶಪಡಿಸಿಕೊಳ್ಳುವ ಹೇಳಿಕೆ ಹಾಸ್ಯಾಸ್ಪದವಾಗಿದ್ದರೂ, ಇದು ಬಾಂಗ್ಲಾದೇಶಿ ಸಮಾಜದಲ್ಲಿ ಹೆಚ್ಚುತ್ತಿರುವ ಭಾರತದ ಕುರಿತ ದ್ವೇಷವನ್ನು ತೋರಿಸಿದೆ. ಒಂದಷ್ಟು ಬಾಂಗ್ಲಾದೇಶಿ ಗುಂಪುಗಳು ಭಾರತದ ಭೂಭಾಗಗಳನ್ನು ಸೇರಿಸಿಕೊಂಡು, 'ಗ್ರೇಟರ್ ಬಾಂಗ್ಲಾದೇಶ' ನಿರ್ಮಿಸುವ ಮಾತನಾಡುತ್ತಿವೆ. ಅವುಗಳು ಭಾರತದ ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಜಾರ್ಖಂಡ್, ಸಿಕ್ಕಿಂ, ಅರುಣಾಚಲ ಪ್ರದೇಶ, ತ್ರಿಪುರಾ, ಅಸ್ಸಾಂ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರಗಳನ್ನು ಬಾಂಗ್ಲಾದೇಶಕ್ಕೆ ಸೇರಿಸಿ, ಆ ಮೂಲಕ ಬೃಹತ್ ಬಾಂಗ್ಲಾದೇಶ ನಿರ್ಮಿಸುವ ಕನಸು ಕಾಣುತ್ತಿವೆ.
ಏರ್ ಇಂಡಿಯಾದಿಂದ 5,000 ಕೋಟಿಯ ಖರೀದಿ: ರತನ್ ಟಾಟಾ ವೈಮಾನಿಕ ಕನಸಿನತ್ತ ಹೆಜ್ಜೆಯೇ?
ಇಂತಹ ಹೇಳಿಕೆಗಳು, ಹೆಚ್ಚಿನ ಜನ ಸಂಚಾರ ಇರುವ ಭಾರತ-ಬಾಂಗ್ಲಾ ಗಡಿಯ ಭದ್ರತೆ ಹೆಚ್ಚಿಸಲು ಕಾರಣವಾಗಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಾಂಗ್ಲಾದೇಶಿ ತೀವ್ರವಾದಿಗಳಿಗೆ ಎಚ್ಚರಿಕೆ ನೀಡಿದ್ದು, ನೀವು ಭಾರತದ ರಾಜ್ಯಗಳನ್ನು ಕಬಳಿಸಲು ಯೋಚಿಸುವಾಗ ನಾವು ಲಾಲಿಪಾಪ್ ತಿನ್ನುತ್ತಾ ಕೂತಿರುವುದಿಲ್ಲ ಎಂದಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಢಾಕಾಗೆ ತೆರಳಿ, ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರದೊಡನೆ ಸಮಾಲೋಚನೆ ನಡೆಸುವ ಸಮಯದಲ್ಲಿ ಮಮತಾ ಬ್ಯಾನರ್ಜಿಯವರು ಬಾಂಗ್ಲಾದೇಶಿ ಮುಖಂಡರನ್ನು ಟೀಕಿಸಿದ್ದಾರೆ. ಅಬ್ದುಲ್ ಚಾಚಾ ಹೇಳಿದ್ದ ಕತೆಯಲ್ಲಿ, ಬಾಂಗ್ಲಾದೇಶದ ವಿಮೋಚನೆಯಲ್ಲಿ ಬಂಗಬಂಧು ಮುಜಿಬುರ್ ರೆಹಮಾನ್ ಮತ್ತು ಅವರಿಗೆ ನೆರವಾದ ಭಾರತ ಹೀರೋಗಳಾಗಿದ್ದರು. ಆದರೆ ಇಂದು ಅದೇ ಬಾಂಗ್ಲಾದೇಶಿ ಸಮಾಜ ಭಾರತವನ್ನು ಶತ್ರುವಂತೆ ಕಾಣುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ!