ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮೈತ್ರಿಕೂಟದ ಸರ್ಕಾರದಲ್ಲಿ 39 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಪಂಕಜಾ ಮುಂಡೆ, ಚಂದ್ರಶೇಖರ ಬಾವಾನ್ಕುಳೆ, ಆಶಿಶ್ ಶೇಲಾರ್ ಮತ್ತು ಧನಂಜಯ ಮುಂಡೆ ಸೇರಿದಂತೆ ಹಲವು ಪ್ರಮುಖರು ಸಚಿವ ಸ್ಥಾನ ಪಡೆದಿದ್ದಾರೆ.
ನಾಗ್ಪುರ: ಇತ್ತೀಚೆಗೆ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿರುವ ಮಹಾಯುತಿ ಕೂಟದ (ಬಿಜೆಪಿ, ಶಿಂಧೆ ಅವರ ಶಿವಸೇನೆ, ಅಜಿತ್‌ರ ಎನ್‌ಸಿಪಿ) ಮಂತ್ರಿಮಂಡಲ10 ದಿನ ಬಳಿಕ ವಿಸ್ತರಣೆ ಆಗಿದೆ ಹಾಗೂ 39 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ಹಿಂದೊಮ್ಮೆ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ಬಿಜೆಪಿಯ ಪಂಕಜಾ ಮುಂಡೆ, ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವಾನ್ಕುಳೆ, ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೇಲಾರ್, ಎನ್‌ಸಿಪಿ ನಾಯಕ ಧನಂಜಯ ಮುಂಡೆ- ಸಚಿವರಾದವರಲ್ಲಿ ಪ್ರಮುಖರು. ನಾಗ್ಪುರದ ರಾಜಭವನದಲ್ಲಿ ಭಾನುವಾರ ನಡೆದ ಶಪಥ ಕಾರ್ಯಕ್ರಮದಲ್ಲಿ ಇವರು ಪ್ರಮಾಣ ಸ್ವೀಕರಿಸಿದರು. ಇವರಿಗೆ ಗವರ್ನರ್ ಪಿ.ಸಿ. ರಾಧಾಕೃಷ್ಣನ್ ಪ್ರಮಾಣ ವಚನ ಬೋಧಿಸಿದರು.
ಶಪಥ ಸ್ವೀಕರಿಸಿದವರ ಪೈಕಿ 33 ಮಂದಿ ಸಚಿವ ಸಂಪುಟ ದರ್ಜೆ ಸಚಿವರಾದರೆ, 6 ಜನ ರಾಜ್ಯ ಸಚಿವರಾಗಿದ್ದಾರೆ. ಇದರೊಂದಿಗೆ ಸಂಪುಟ ಸದಸ್ಯರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಇದರಲ್ಲಿ ಬಿಜೆಪಿಗೆ 19 ಸ್ಥಾನ, ಶಿವಸೇನೆಗೆ (ಶಿಂಧೆ ಬಣ) 11 ಹಾಗೂ ಎನ್‌ಸಿಪಿ (ಅಜಿತ್ ಬಣ)ಗೆ 9 ಸ್ಥಾನ ನೀಡಲಾಗಿದೆ. ಡಿ.5ರಂದು ದೇವೆಂದ್ರ ಫಡ್ನವೀಸ್ ಸಿಎಂ ಆಗಿ, ಅಜಿತ್ ಪವಾರ್ ಹಾಗೂ ಏಕನಾಥ ಶಿಂಧೆ ಅವರು ಡಿಸಿಎಂ ಆಗಿ ಶಪಥ ಸ್ವೀಕರಿಸಿದ್ದರು. ಅದಾದ 10 ದಿನಗಳ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಿದೆ.