ಮಹಾರಾಷ್ಟ್ರದ ಯುವ ರೈತ ಅಭಿಜಿತ್ ಪಾಟೀಲ್ ಅವರು 4 ಎಕರೆ ಭೂಮಿಯಲ್ಲಿ ಚಂದ್ರ ಬಾಳೆ ಕೃಷಿ ಮಾಡಿ 35 ಲಕ್ಷ ರೂಪಾಯಿ ಸಂಪಾದಿಸಿದ್ದಾರೆ. ರಿಲಯನ್ಸ್ ಮತ್ತು ಟಾಟಾ ಮಾಲ್‌ಗಳಂತಹ ಪ್ರಮುಖ ಮಳಿಗೆಗಳಿಗೆ ನೇರವಾಗಿ ಮಾರಾಟ ಮಾಡುವ ಮೂಲಕ ಅವರು ಈ ಯಶಸ್ಸನ್ನು ಸಾಧಿಸಿದ್ದಾರೆ. ಅವರ ಇನ್ಸ್‌ಫೈರಿಂಗ್ ಸ್ಟೋರಿ ಇಲ್ಲಿದೆ.
ಕೃಷಿ ಬಗ್ಗೆ, ಬೇಸಾಯ ನೀ ಸಾಯ ಮನೆ ಮಂದಿಯೆಲ್ಲಾ ಸಾಯ ಎಂಬ ಜನಪ್ರಿಯ ಗಾದೆ ಮಾತಿದೆ. ಇದಕ್ಕೆ ಕಾರಣ ಕೃಷಿ ನಂಬಿ ಬದುಕುವ ರೈತರ ಬವಣೆಗಳು ಬೆಳೆ ಬೆಳೆದಾಗ ಆದಾಯವಿಲ್ಲ, ಆದಾಯವಿದ್ದಾಗ ಮಳೆ ಇಲ್ಲದೇ ಬೆಳೆ ಇಲ್ಲ, ಹೀಗೆ ದುಡಿಮೆಗೆ ತಕ್ಕ ಆದಾಯವಿಲ್ಲದೇ ರೈತರು ಸದಾ ಸಂಕಷ್ಟಪಡುತ್ತಾರೆ. ಇದರಿಂದ ಯುವ ಸಮುದಾಯಗಳು ಕೃಷಿಯತ್ತ ಮುಖ ಮಾಡದೇ ಪಟ್ಟಣದಲ್ಲಿ ಉದ್ಯೋಗ ಅರಸುತ್ತಾ ಹೊರಟು ಹೋಗುತ್ತಾರೆ. ಆದರೆ ಅಲ್ಲೋ ಇಲ್ಲೋ ಕೆಲವು ಯುವ ಸಮುದಾಯಗಳು ಕೃಷಿಯಲ್ಲಿ ಹೊಸ ಪ್ರಯೋಗ ಮಾಡಿ ಭಾರಿ ಯಶಸ್ಸು ಕಂಡಿದ್ದಾರೆ. ಅಂತಹ ಯುವ ರೈತರಲ್ಲಿ ಮಹಾರಾಷ್ಟ್ರದ ಯುವ ರೈತ ಅಭಿಜಿತ್ ಪಾಟೀಲ್ ಕೂಡ ಒಬ್ಬರು.
ಮಹಾರಾಷ್ಟ್ರದ ವಶಿಂಬೆ ಗ್ರಾಮದವರಾದ ಅಭಿಜಿತ್ ಪಾಟೀಲ್ ಅವರು ಸಿವಿಲ್ ಇಂಜಿನಿಯರಿಂಗ್ ಓದಿದ್ದು, ಪಟ್ಟಣದ ಉದ್ಯೋಗದತ್ತ ಮುಖ ಮಾಡದೇ ಕೃಷಿಯಲ್ಲಿ ಹೊಸ ಪ್ರಯೋಗ ಮಾಡಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. ಅವರ ಈ ಅಧುನಿಕ ಪ್ರಯೋಗ ಅವರಿಗೆ ಒಳ್ಳೆಯ ಆರ್ಥಿಕ ಯಶಸ್ಸು ನೀಡಿದೆ. ಹಾಗಿದ್ರೆ ಅವರು ಮಾಡಿದ್ದೇನು? ಪುಣೆಯ ಡಿವೈ ಪಾಟೀಲ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿದ ಅಭಿಜಿತ್ ಅವರು ಓದಿಗೆ ತಕ್ಕಂತೆ ಉದ್ಯೋಗ ಹುಡುಕದೇ 2015ರಲ್ಲಿ ಕೃಷಿಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಳಿದರು.
ಅದರಂತೆ 2020ರ ಡಿಸೆಂಬರ್‌ನಲ್ಲಿ ಅವರು ತಮ್ಮ ತಂದೆಗೆ ಸೇರಿದ ಜಾಮೀನಿನಲ್ಲಿ ಕೆಂಪು ಬಾಳೆ ಅಥವಾ ಚಂದ್ರ ಬಾಳೆಯ ಕೃಷಿ ಮಾಡಿದ್ದು, ಒಂದು ವರ್ಷದ ಕಠಿಣ ಪರಿಶ್ರಮದ ಬಳಿಕ 2022ರ ಜನವರಿಯಲ್ಲಿ ಅವರಿಗೆ ಬಾಳೆ ಫಸಲು ಕೊಯ್ಲು ಕೈಗೆ ಬಂದಿದ್ದು, ಅವರ ಸ್ಮಾರ್ಟ್ ಆಗಿರುವ ಮಾರ್ಕೇಟಿಂಗ್ ತಂತ್ರಕ್ಕೆ ಧನ್ಯವಾದ ಹೇಳಲೇಬೇಕು. ಅವರು ದೇಶದ ಪ್ರಮುಖ ರಿಟೈಲರ್‌ಗಳಾದ ಪುಣೆ, ಮುಂಬೈ, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಮಳಿಗೆಗಳನ್ನು ಹೊಂದಿರುವ ರಿಲಯನ್ಸ್ ಮಾಲ್, ಟಾಟಾ ಮಾಲ್‌ಗಳಿಗೆ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಯಶಸ್ವಿಯಾದರು. ಇದು ಅವರಿಗೆ ಅತ್ಯುತ್ತಮವಾದ ಆದಾಯವನ್ನು ನೀಡಿತ್ತು.
ಈ ಕೆಂಪು ಬಾಳೆಹಣ್ಣಿಗೆ ಮಾರುಕಟ್ಟೆಯಲ್ಲಿ ಕೇಜಿಗೆ 55ರಿಂದ 60 ರೂಪಾಯಿ ದರವಿದ್ದು, ಇವರು ತಮ್ಮ 4 ಎಕರೆಯ ಕೃಷಿ ಭೂಮಿಯಲ್ಲಿ 60 ಟನ್ ಬಾಳೆಹಣ್ಣುಗಳನ್ನು ಬೆಳೆದಿದ್ದು, ಅವರಿಗೆ ಎಲ್ಲಾ ವೆಚ್ಚಗಳನ್ನು ಕಳೆದು 35 ಲಕ್ಷ ಆದಾಯ ಬಂದಿದೆಯಂತೆ ತಮ್ಮ ಈ ಪ್ರಯೋಗದಲ್ಲಿ ಯಶಸ್ಸು ಕಂಡ ಅಭಿಜಿತ್ ಅವರು ಈಗ ತಮ್ಮ ಈ ಕೃಷಿಯನ್ನು ಇನ್ನೊಂದು ಹೆಕ್ಟೇರ್ ಭೂಮಿಗೆ ವಿಸ್ತರಿಸಿದ್ದಾರೆ. ಯುವ ರೈತ ಅಭಿಜಿತ್ ಅವರ ಯಶೋಗಾಥೆ ಕೃಷಿಯಲ್ಲಿ ಭವಿಷ್ಯ ಕಂಡುಕೊಳ್ಳಬೇಕು ಎಂದು ಬಯಸುವ ಅನೇಕ ರೈತರಿಗೆ ಮಾದರಿಯಾಗಿದೆ.
ಸರಿಯಾದ ಜ್ಞಾನ, ಸಂಶೋಧನೆ, ಶ್ರದ್ಧೆಯಿಂದ ಕೂಡದ ಕೃಷಿ ಒಳ್ಳೆಯ ಆದಾಯ ನೀಡಬಹುದು ಎಂಬುದಕ್ಕೆ ಈ ರೈತ ಸಾಕ್ಷಿಯಾಗಿದ್ದಾರೆ. ಕೃಷಿಯು ಆರ್ಥಿಕ ಬೆಳವಣಿಗೆಗೆ ಉತ್ತಮ ಅವಕಾಶಗಳನ್ನು ನೀಡುತ್ತದೆ ಮತ್ತು ಗ್ರಾಮೀಣ ಪ್ರದೇಶಗಳ ಏಳಿಗೆಗೆ ಕೊಡುಗೆ ನೀಡುತ್ತದೆ ಎಂಬುದನ್ನು ಅವರ ಯಶಸ್ಸು ತೋರಿಸುತ್ತಿದೆ.