ಮೋದಿಗೆ ಶೀಘ್ರ ‘ಏರ್‌ಫೋರ್ಸ್‌ 1’ ರೀತಿ ವಿಮಾನ!

By Kannadaprabha NewsFirst Published Jun 9, 2020, 8:17 AM IST
Highlights

ಮೋದಿಗೆ ಶೀಘ್ರ ‘ಏರ್‌ಫೋರ್ಸ್‌ 1’ ರೀತಿ ವಿಮಾನ| ಕ್ಷಿಪಣಿ ದಾಳಿಗೂ ಜಗ್ಗದ ಮರುವಿನ್ಯಾಸಗೊಂಡ ವಿಮಾನ ಸೆಪ್ಟೆಂಬರಲ್ಲಿ ದೇಶಕ್ಕೆ ಹಸ್ತಾಂತರ| ವಾಯುಪಡೆ ಪೈಲಟ್‌ಗಳಿಂದ ಚಾಲನೆ| ಅಮೆರಿಕ ಅಧ್ಯಕ್ಷರಷ್ಟೇ ಇನ್ನು ಪ್ರಧಾನಿ ಸುರಕ್ಷಿತ

ನವದೆಹಲಿ(ಜೂ.09): ಅಮೆರಿಕ ಅಧ್ಯಕ್ಷರ ಅಧಿಕೃತ ವಿಮಾನ ‘ಏರ್‌ಫೋರ್ಸ್‌ 1’ಗೆ ಸರಿಸಮನಾದ ಸುರಕ್ಷತಾ ಅಂಶಗಳನ್ನು ಹೊಂದಿರುವ ಎರಡು ವಿಮಾನಗಳು ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಓಡಾಟಕ್ಕೆ ಲಭ್ಯವಾಗಲಿವೆ. ಕ್ಷಿಪಣಿ ದಾಳಿ ನಡೆದರೂ ಅದನ್ನು ಹಿಮ್ಮೆಟ್ಟಿಸಿ ಒಳಗಿರುವ ಗಣ್ಯರಿಗೆ ಏನೂ ಆಗದಂತೆ ನೋಡಿಕೊಳ್ಳುವ ರಕ್ಷಣಾ ವ್ಯವಸ್ಥೆ ಈ ವಿಮಾನಗಳಲ್ಲಿದೆ.

ಏರ್‌ ಇಂಡಿಯಾದ ಎರಡು ವಿಮಾನಗಳನ್ನು ಕೆಲವು ತಿಂಗಳ ಹಿಂದೆ ಅಮೆರಿಕದ ಬೋಯಿಂಗ್‌ ಕಂಪನಿಗೆ ಮರುವಿನ್ಯಾಸಕ್ಕೆ ಕಳುಹಿಸಲಾಗಿದೆ. ಜುಲೈಗೆ ಈ ವಿಮಾನಗಳು ಹಸ್ತಾಂತರವಾಗಬೇಕಿತ್ತು. ಆದರೆ ಕೊರೋನಾ ಮತ್ತಿತರ ಕಾರಣಗಳಿಂದ ವಿಳಂಬವಾಗಿದ್ದು, ಸೆಪ್ಟೆಂಬರ್‌ಗೆ ವಿಮಾನಗಳು ಭಾರತಕ್ಕೆ ಸಿಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಮಾನದಲ್ಲಿ ‘ಲಾಜ್‌ರ್‍ ಏರ್‌ಕ್ರಾಫ್ಟ್‌ ಇನ್‌ಫ್ರಾರೆಡ್‌ ಕೌಂಟರ್‌ಮೆಸ​ರ್‍ಸ್’ ಹಾಗೂ ‘ಸೆಲ್ಪ್‌ ಪ್ರೊಟೆಕ್ಷನ್‌ ಸೂಟ್ಸ್‌’ ಎಂಬ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆಗಳು ಇವೆ. ಇವನ್ನು 1400 ಕೋಟಿ ರು. ವೆಚ್ಚದಲ್ಲಿ ಭಾರತಕ್ಕೆ ಅಮೆರಿಕ ನೀಡಿದೆ.

ಸದ್ಯ ಪ್ರಧಾನಿ ಹಾಗೂ ಇನ್ನಿತರೆ ಗಣ್ಯ ವ್ಯಕ್ತಿಗಳು ಏರ್‌ ಇಂಡಿಯಾ ವಿಮಾನದಲ್ಲಿ ಓಡಾಡುತ್ತಾರೆ. ಗಣ್ಯ ವ್ಯಕ್ತಿಗಳ ಸಂಚಾರ ಇಲ್ಲದೇ ಇರುವಾಗ ಇದೇ ವಿಮಾನಗಳನ್ನು ಪ್ರಯಾಣಿಕರ ಸೇವೆಗೆ ಬಳಸಿಕೊಳ್ಳಲಾಗುತ್ತದೆ. ಏರ್‌ ಇಂಡಿಯಾ ಪೈಲಟ್‌ಗಳೇ ಈ ವಿಮಾನ ಚಾಲನೆ ಮಾಡುತ್ತಾರೆ.

ಆದರೆ ಹೊಸ ವಿಮಾನಗಳು ಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಮಾತ್ರ ಮೀಸಲಾಗಿರಲಿದ್ದು, ಅವನ್ನು ವಾಯುಪಡೆ ಪೈಲಟ್‌ಗಳು ಓಡಿಸಲಿದ್ದಾರೆ. ಏರ್‌ ಇಂಡಿಯಾದ ಎಂಜಿನಿಯರಿಂಗ್‌ ವಿಭಾಗ ವಿಮಾನಗಳನ್ನು ನಿರ್ವಹಿಸಲಿದೆ.

ಕ್ಷಿಪಣಿ ದಾಳಿ ಹೇಗೆ ತಡೆಯುತ್ತೆ?

ವಿಮಾನವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಉಡಾವಣೆಯಾದ ಕೂಡಲೇ ‘ಲಾಜ್‌ರ್‍ ಏರ್‌ಕ್ರಾಫ್ಟ್‌ ಇನ್‌ಫ್ರಾರೆಡ್‌ ಕೌಂಟರ್‌ಮೆಸ​ರ್‍ಸ್’ (ಎಲ್‌ಎಐಆರ್‌ಸಿಎಂ) ಅದನ್ನು ಪತ್ತೆ ಹಚ್ಚುತ್ತದೆ. ಅದರ ತೀವ್ರತೆ ಗುರುತಿಸುತ್ತದೆ. ಕೂಡಲೇ ಅತ್ಯಂತ ತೀಕ್ಷ$್ಣವಾದ ಲೇಸರ್‌ ಶಕ್ತಿಯನ್ನು ದಾಳಿಗೆ ಬರುತ್ತಿರುವ ಕ್ಷಿಪಣಿಯತ್ತ ಬಿಡುತ್ತದೆ. ಇದರಿಂದಾಗಿ ಕ್ಷಿಪಣಿಗೆ ಗುರಿಯೇ ಮರೆತುಹೋಗುತ್ತದೆ. ತನ್ಮೂಲಕ ವಿಮಾನದಲ್ಲಿದ್ದವರು ಅಪಾಯದಿಂದ ಪಾರಾಗುತ್ತಾರೆ. ಇನ್ನು ದಾಳಿಗೆ ಕ್ಷಿಪಣಿ ಬರುತ್ತಿರುವ ಮಾಹಿತಿ, ಅದರ ತೀವ್ರತೆ, ಅಪಾಯ ಮತ್ತಿತರ ಮಾಹಿತಿಯನ್ನು ‘ಸೆಲ್ಪ್‌ ಪ್ರೊಟೆಕ್ಷನ್‌ ಸೂಟ್‌’ (ಎಸ್‌ಪಿಎಸ್‌) ಪೈಲಟ್‌ಗೆ ಒದಗಿಸುತ್ತದೆ.

click me!