ಮಲದ ಗುಂಡಿಯಲ್ಲಿ ದುರ್ಮರಣ 2019 ರಲ್ಲಿ ಅತಿಹೆಚ್ಚು!

By Kannadaprabha NewsFirst Published Feb 18, 2020, 4:25 PM IST
Highlights

ಭಾರತದಲ್ಲಿ ಮಲಹೊರುವ ಅಥವಾ ಕೈಯಿಂದ ಮಲದ ಗುಂಡಿ ಸ್ವಚ್ಛಗೊಳಿಸುವ ಪದ್ಧತಿಗೆ ನಿಷೇಧವಿದ್ದರೂ ಇಂದಿಗೂ ಈ ಅನಿಷ್ಠ ಪದ್ಧತಿ ಜೀವಂತವಿರುವುದು ಬಹಿರಂಗ ಸತ್ಯ. ಆತಂಕಕಾರಿ ಸಂಗತಿ ಎಂದರೆ ಆಧುನಿಕತೆ, ತಾಂತ್ರಿಕತೆ ಹೆಚ್ಚಾದಂತೆ ದೂರಾಗಬೇಕಿದ್ದ ಇಂಥ ಅನಿಷ್ಠ ಪದ್ಧತಿ ವರ್ಷದಿಂದ ವರ್ಷಕ್ಕೆ ಮತ್ತಷ್ಟು ಹೆಚ್ಚುತ್ತಿದೆ. 

ಭಾರತದಲ್ಲಿ ಮಲಹೊರುವ ಅಥವಾ ಕೈಯಿಂದ ಮಲದ ಗುಂಡಿ ಸ್ವಚ್ಛಗೊಳಿಸುವ ಪದ್ಧತಿಗೆ ನಿಷೇಧವಿದ್ದರೂ ಇಂದಿಗೂ ಈ ಅನಿಷ್ಠ ಪದ್ಧತಿ ಜೀವಂತವಿರುವುದು ಬಹಿರಂಗ ಸತ್ಯ.

ಆತಂಕಕಾರಿ ಸಂಗತಿ ಎಂದರೆ ಆಧುನಿಕತೆ, ತಾಂತ್ರಿಕತೆ ಹೆಚ್ಚಾದಂತೆ ದೂರಾಗಬೇಕಿದ್ದ ಇಂಥ ಅನಿಷ್ಠ ಪದ್ಧತಿ ವರ್ಷದಿಂದ ವರ್ಷಕ್ಕೆ ಮತ್ತಷ್ಟುಹೆಚ್ಚುತ್ತಿದೆ. ಒಳಚರಂಡಿಗೆ ಇಳಿದು ಮರಣಹೊಂದುವ ಸಫಾಯಿ ಕರ್ಮಚಾರಿಗಳ ಸಂಖ್ಯೆ ಅಧಿಕವಾಗುತ್ತಿದೆ.

ಕಳೆದ ವರ್ಷ 110 ಕಾರ್ಮಿಕರ ಸಾವು

ದೇಶದ 18 ರಾಜ್ಯಗಳಲ್ಲಿ ನಡೆಸಿದ ರಾಷ್ಟ್ರೀಯ ಸಮೀಕ್ಷೆಯಲ್ಲಿ 2013 ರಿಂದ 2020 ಜನವರಿ 31ರ ಒಳಗಾಗಿ 62,904 ಮಲ ಸಾಗಿಸುವವರನ್ನು (ಮ್ಯಾನ್ಯುವಲ್‌ ಸ್ಕಾವೆಂಜರ್‌) ಗುರುತಿಸಲಾಗಿದೆ. 2019ರವರೆಗೆ ಈ ಸಂಖ್ಯೆ 54,000 ಇತ್ತು. ಕಳೆದ 5 ವರ್ಷದಲ್ಲಿ 2019ರಲ್ಲಿಯೇ ಅತಿ ಹೆಚ್ಚು ಜನ ಜಾಡಮಾಲಿಗಳು (110) ಮಲದ ಗುಂಡಿ ಸ್ವಚ್ಛಗೊಳಿಸುವಾಗ ಮೃತಪಟ್ಟಿದ್ದಾರೆ.

ಪ್ರತಿ 5 ದಿನಕ್ಕೆ ಒಬ್ಬ ಜಾಡಮಾಲಿ ಸಾವು!

ಇಲ್ಲಿರುವುದು ಸರ್ಕಾರಿ ಅಂಕಿ ಅಂಶ. ಆದರೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಸಮಿತಿ ಪ್ರಕಾರ, ಪ್ರತಿ 5 ದಿನಕ್ಕೆ ಒಬ್ಬ ಮ್ಯಾನ್ಯುವಲ್‌ ಸ್ಕಾವೆಂಜರ್‌ ಮೃತಪಡುತ್ತಾನೆ. ಇದರಲ್ಲಿ 67% ಸಾವು ಸಂಭವಿಸುವುದು ಮೆಟ್ರೋ ನಗರಗಳಲ್ಲಿ. ಗ್ರಾಮೀಣ ಪ್ರದೇಶದಲ್ಲಿ ಅಥವಾ 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಮಲದ ಗುಂಡಿಗೆ ಅಥವಾ ಒಳಚರಂಡಿಗೆ ಇಳಿದು ಸಾವನ್ನಪ್ಪುವವರು 5%ಗಿಂತಾ ಕಡಿಮೆ.

ಇನ್ನೊಂದು ಮಹತ್ವದ ಸಂಗತಿ ಎಂದರೆ 2003ರಲ್ಲಿ ಸುಮಾರು 8 ಲಕ್ಷದಷ್ಟಿದ್ದ ಶೌಚ ಸ್ವಚ್ಛತಾ ಕಾರ್ಮಿಕರ ಸಂಖ್ಯೆ ಹಲವು ಉಪಕ್ರಮಗಳ ಬಳಿಕ 13,000ಕ್ಕೆ ಇಳಿದಿತ್ತು. ಆದರೆ 2014ರಲ್ಲಿ ಸ್ವಚ್ಛ ಭಾರತ ಯೋಜನೆಯ ಅನುಷ್ಠಾನದ ಹೊರತಾಗಿಯೂ 2018ರಲ್ಲಿ ಮತ್ತೆ ಶೌಚ ಸ್ಚಚ್ಛತಾ ಕಾರ್ಮಿಕರ ಸಂಖ್ಯೆ 42,000ಕ್ಕೆ ಏರಿಕೆಯಾಗಿದೆ.

25 ವರ್ಷದಲ್ಲಿ 814 ಜನರ ಮರಣ

ಮಲಹೊರುವ ಪದ್ಧತಿ ನಿಷೇಧ ಮತ್ತು ಈ ಸಮುದಾಯದ ಪುನರ್‌ವಸತಿ ಕಾಯ್ದೆ-2013 ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನುಷ್ಯರಿಂದ ಮಲ ಸಾಗಿಸುವುದನ್ನು ನಿಷೇಧಿಸಿದೆ. ಆದಾಗ್ಯೂ 1993ರಿಂದ 2019ರ ವರೆಗೆ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 814 ಸಫಾಯಿ ಕರ್ಮಚಾರಿಗಳು ಮೃತಪಟ್ಟವರದಿಯಾಗಿದೆ.

ಸರ್ಕಾರದ ಕಾಯ್ದೆಯನ್ವಯ ಮಲಹೊರುವ ಕಾರ್ಮಿಕರು ಮ್ಯಾನ್‌ಹೋಲ್‌ನಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ 10 ಲಕ್ಷದವರೆಗೆ ಪರಿಹಾರ ನೀಡಲು ಅವಕಾಶವಿದೆ. ಆದರೆ ಕಳೆದ 25 ವರ್ಷದಲ್ಲಿ ಹೀಗೆ ಮೃತಪಟ್ಟವರ ಕುಟುಂಬಗಳ ಪೈಕಿ ಕೇವಲ 11 ರಾಜ್ಯಗಳ ಕುಟುಂಬಗಳು ಮಾತ್ರ ಪರಿಹಾರ ಪಡೆದಿವೆ.

ನಿರ್ದಿಷ್ಟವೇತನ, ಸೌಲಭ್ಯ ಯಾವುದೂ ಇವರಿಗಿಲ್ಲ

ಮಲಹೊರುವ ಪದ್ಧತಿ ನಿಷೇಧಗೊಂಡಾಗಿನಿಂದ ಇದು ಒಂದು ರೀತಿಯ ಅಸಂಘಟಿತ ಮತ್ತು ದಾಖಲೆರಹಿತ ಕ್ಷೇತ್ರವಾಗಿ ಬೆಳೆಯುತ್ತಿದೆ. ಹಾಗಾಗಿ ಇಲ್ಲಿ ದುಡಿಯುವವರಿಗೆ ನಿರ್ದಿಷ್ಟವೇತನ, ಸೌಲಭ್ಯ ಯಾವುದೂ ಇಲ್ಲ.

ಉತ್ತರ ಪ್ರದೇಶದಲ್ಲಿ ಇವರು 40-100 ರು.ಗೂ ಶೌಚಗುಂಡಿ ಸ್ವಚ್ಛ ಮಾಡುತ್ತಾರೆ. ಉತ್ತರ ಪ್ರದೇಶದಲ್ಲಿ ಮಹಿಳಾ ಜಾಡಮಾಲಿಗಳೂ ಮಲದ ಗುಂಡಿಗೆ ಇಳಿದು ಸ್ವಚ್ಛಗೊಳಿಸುತ್ತಾರೆ.

ಸಾವಿಗೆ ಕಾರಣ ಏನು?

ಮಲ ಹೊರುವ ಕಾರ್ಮಿಕರ ಅಥವಾ ಮ್ಯಾನ್ಯುವಲ್‌ ಸ್ಕಾವೆಂಜರ್‌ಗಳ ಸಾವು ಸ್ವಾಭಾವಿಕ ಅಲ್ಲ. ಇದಕ್ಕೆ ಕಾರಣ ಮನುಷ್ಯರೇ. ಪರಾರ‍ಯಯ ಉದ್ಯೋಗ ಗೊತ್ತಿಲ್ಲದ ಕಾರ್ಮಿಕರನ್ನು ಮಲದ ಗುಂಡಿ ಸ್ವಚ್ಛಗೊಳಿಸಲು ಬಲವಂತವಾಗಿ ಕರೆತರಲಾಗುತ್ತಿದೆ. ಹಣ ಉಳಿಸುವ ಸಲುವಾಗಿ ಯಾವುದೇ ಸುರಕ್ಷಿತ ಸಾಧನ ಒದಗಿಸದೆ ಅವರನ್ನು ಗುಂಡಿಯೊಳಕ್ಕೆ ಇಳಿಸಲಾಗುತ್ತದೆ.

2011ರ ಗಣತಿ ಪ್ರಕಾರ 7,40,078 ಕುಟುಂಬಗಳು ಶೌಚಾಲಯದ ಗುಂಡಿಗಳನ್ನು ಮ್ಯಾನ್ಯುವಲ್‌ ಸ್ಕಾವೆಂಜರ್‌ಗಳಿಂದ ಸ್ವಚ್ಛ ಮಾಡಿಸುತ್ತಿವೆ. ಇದರಲ್ಲಿ ಒಳಚರಂಡಿ ಮತ್ತು ಸಾರ್ವಜನಿಕ ತೊಟ್ಟಿಗಳು, ರೈಲ್ವೆ ಟ್ರ್ಯಾಕ್‌ಗಳು ಸೇರ್ಪಡೆಯಾಗಿಲ್ಲ. ಇದಲ್ಲದೆ 21 ಲಕ್ಷ ಕುಟುಂಬಗಳು ತಮ್ಮ ಮನೆಯ ತ್ಯಾಜ್ಯವನ್ನು ಚರಂಡಿಗಳಲ್ಲಿ ಬಿಸಾಡುತ್ತಿವೆ.

ನಾವು ಕಸ ಹಾಗೂ ಪ್ಲಾಸ್ಟಿಕ್ಕನ್ನು ಚರಂಡಿಗೆ ಹಾಕದಿದ್ದರೆ, ಸರಿಯಾಗಿ ಕಸ ವಿಂಗಡಿಸಿದರೆ ನಮ್ಮ ಚರಂಡಿ ವ್ಯವಸ್ಥೆ ಹದಗೆಡುವುದಿಲ್ಲ. ಆಗ ಅಮಾಯಕ ಬಡವರು ಜೀವ ತೆರಬೇಕಾದ ಪ್ರಮೇಯವೂ ಇರುವುದಿಲ್ಲ. ಹೀಗಾಗಿ ಇವರ ಸಾವಿಗೆ ನಾವೇ ಕಾರಣ.

 

click me!