ಪಬ್‌ಜಿ ವಿಷಯಕ್ಕೆ ತಾಯಿ ಕೊಂದ ಮಗನಿಗಿಲ್ಲ ವಿಷಾದ, ಗಲ್ಲಿಗೂ ಸಿದ್ಧ!

By Suvarna NewsFirst Published Jun 17, 2022, 10:16 AM IST
Highlights

* ಬಾಲಾಪರಾಧಿ ನಿವಾಸದಲ್ಲಿ ರುಚಿಯಾದ ಆಹಾರಕ್ಕೆ ಬೇಡಿಕೆ

* ತಾಯಿ ಹತ್ಯೆ ಬಳಿಕ ಪಾರ್ಟಿ ಮಾಡಿದ್ದೆ ಎಂದ ಬಾಲಕ

* ಪಬ್‌ಜಿ ವಿಷಯಕ್ಕೆ ತಾಯಿ ಕೊಂದ  ಮಗನಿಗಿಲ್ಲ ವಿಷಾದ, ಗಲ್ಲಿಗೂ ಸಿದ್ಧ

ಲಖನೌ(ಜೂ.17): ಪಬ್‌ಜಿ ಆಡಲು ಬಿಡುತ್ತಿಲ್ಲ ಎಂದು ತಾಯಿಯನ್ನೇ ಗುಂಡಿಕ್ಕಿ ಹತ್ಯೆ ಮಾಡಿದ ಲಖನೌನ 16 ವರ್ಷದ ಬಾಲಕ, ತನ್ನ ಕೃತ್ಯಕ್ಕಾಗಿ ಯಾವುದೇ ವಿಷಾದ ವ್ಯಕ್ತಪಡಿಸುವ ಬದಲು ಗಲ್ಲಿ ಶಿಕ್ಷೆಗೂ ಸಿದ್ಧನಾಗಿರುವುದಾಗಿ ಹೇಳಿದ್ದಾನೆ ಎಂಬ ಆತಂಕದ ಸಂಗತಿ ಬೆಳಕಿಗೆ ಬಂದಿದೆ.

ಬಾಲಕನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ‘ನಾನು ತಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ, ಬಳಿಕ ರಾತ್ರಿಯಿಡೀ ಗೆಳೆಯರೊಂದಿಗೆ ಪಾರ್ಟಿ ಮಾಡಿದ್ದೇನೆ’ ಎಂದಿದ್ದಾನೆ.

ವಿಚಾರಣೆ ವೇಳೆ ನ್ಯಾಯಾಧೀಶರು ‘ತಾಯಿಯನ್ನೇಕೆ ಹತ್ಯೆ ಮಾಡಿದೆ? ನಿನಗೆ ಭಯವಾಗಲಿಲ್ಲವೇ’ ಪ್ರಶ್ನಿಸಿದ್ದಾರೆ. ಆಗಲೂ ಬಾಲಕ ‘ನಾನು ಹೆದರುವುದಿಲ್ಲ. ಅತ್ಯಂತ ಕಠಿಣ ಶಿಕ್ಷೆಯಾಗಿ ನನಗೆ ಗಲ್ಲು ಶಿಕ್ಷೆ ವಿಧಿಸಬಹುದು. ನಾನು ಅದಕ್ಕೂ ಸಿದ್ಧನಾಗಿದ್ದೇನೆ’ ಎಂದಿದ್ದಾನೆ.

ಬಾಲಕನ ಈ ಉತ್ತರದಿಂದ ಸಿಟ್ಟಿಗೆದ್ದ ನ್ಯಾಯಾಧೀಶರು ಆತನನ್ನು ಬಾಲಾಪರಾಧಿಗಳ ನಿವಾಸಕ್ಕೆ ಕಳುಹಿಸಿದ್ದಾರೆ. ಅಲ್ಲಿಯೂ ಆತ ತನ್ನ ಕಥೆಯನ್ನು ಜೊತೆಗೆ ವಾಸವಾಗಿರುವ ಇನ್ನಿತರ ಬಾಲಕರಿಗೆ ಹೇಳಿದ್ದು, ಯಾವುದೇ ದುಃಖ, ವಿಷಾದ ವ್ಯಕ್ತಪಡಿಸಿಲ್ಲ. ಬಾಲಾಪರಾಧಿ ನಿವಾಸದಲ್ಲೂ ರುಚಿಕರವಾದ ಆಹಾರ ಪದಾರ್ಥಗಳಿಗೆ ಬಾಲಕ ಬೇಡಿಕೆ ಇಡುತ್ತಾನೆ. ಪೊಲೀಸರ ತಪ್ಪಿನಿಂದಾಗಿ ನಾನಿಲ್ಲಿ ಬಂದಿದ್ದೇನೆ ಎಂದು ವಾದಿಸುತ್ತಾನೆ’ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಅಮ್ಮನನ್ನು ಬದುಕಿಸಬಹುದಿತ್ತು ಆದರೆ ಅಣ್ಣ ಕನಿಕರ ತೋರಲಿಲ್ಲ: ತಂಗಿಯ ಹೇಳಿಕೆ

ಉತ್ತರ ಪ್ರದೇಶದ ಲಖನೌ ತಾಯಿಯ ಕೊಲೆ ಪ್ರಕರಣ ಸಂಬಂಧ ಬೆಚ್ಚಿ ಬೀಳಿಸುವ ಇನ್ನೊಂದು ಸತ್ಯ ಬೆಳಕಿಗೆ ಬಂದಿದೆ. ಹದಿನಾರು ವರ್ಷದ ಮಗ ತಾಯಿ ಪಬ್‌ಜಿ ಗೇಮ್‌ ಆಡಲು ಬಿಡಲಿಲ್ಲವೆಂಬ ಕಾರಣಕ್ಕೆ ಗುಂಡಿಕ್ಕಿ ಕೊಲೆ ಮಾಡಿದ್ದ. ತಂಗಿಯನ್ನು ಯಾರಿಗಾದರು ಹೇಳಿದರೆ ಸಾಯಿಸುವ ಬೆದರಿಕೆ ಹಾಕಿದ್ದ. ಇದೀಗ ಹತ್ತು ವರ್ಷದ ತಂಗಿ ಶಾಕಿಂಗ್‌ ಸತ್ಯವನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಗುಂಡು ಹೊಡೆದ ಬಳಿಕವೂ ತಾಯಿ ಬದುಕಿದ್ದರು, ಆದರೆ ಅಣ್ಣ ಆಸ್ಪತ್ರೆಗೆ ಕರೆ ಮಾಡಲಿಲ್ಲ, ಬದಲು ತಾಯಿಯನ್ನು ರೂಮಿನಲ್ಲಿ ಕೂಡಿ ಹಾಕಿದ್ದಾನೆ ಎಂದು ಮಗಳು ಹೇಳಿದ್ದಾಳೆ. ಜತೆಗೆ ಅಮ್ಮ ಸಾವಿನಿಂದ ನರಳುತ್ತಿದ್ದಾಗ ಸ್ನೇಹಿತರನ್ನು ಮನೆಗೆ ಕರೆಸಿ ಟಿವಿ ನೋಡುತ್ತಿದ್ದ ಎಂದು ತಂಗಿ ಹೇಳಿದ್ದಾಳೆ. 

ತಂತ್ರಜ್ಞಾನದ ಈ ಯುಗದಲ್ಲಿ ಮೊಬೈಲ್‌ ಅಡಿಕ್ಷನ್‌ ಮತ್ತು ಗೇಮಿಂಗ್‌ ಹುಚ್ಚು ಮಕ್ಕಳ ಮನಸ್ಸನ್ನು ಎಷ್ಟು ಹಾಳು ಮಾಡಿದೆ ಎನ್ನುವುದಕ್ಕೆ ಜ್ವಲಂತ ನಿದರ್ಶನವಾಗಿ ಲಖನೌ ಪ್ರಕರಣ ನಿಂತಿದೆ. ತಾಯಿ ಪಬ್‌ಜಿ ಆಡಲು ಬಿಡಲಿಲ್ಲ ಎಂಬ ಒಂದೇ ಕಾರಣಕ್ಕೆ ತಂದೆಯ ಸರ್ವಿಸ್‌ ರಿವಾಲ್ವರ್‌ನಿಂದ ಗುಂಡು ಹಾರಿಸಿ ಕೊಲೆ ಮಾಡುವುದು ಬಾಲಕನ ಮನಸ್ಥಿತಿಯ ಮೇಲೆ ಗೇಮಿಂಗ್‌ ಎಷ್ಟು ಪ್ರಭಾವ ಬೀರಿದೆ ಎಂಬುದನ್ನು ತೋರಿಸುತ್ತದೆ. ಬಾಲಕ ತಾಯಿ ಮತ್ತು ತಂಗಿ ಜತೆ ವಾಸವಾಗಿದ್ದ. ತಂದೆ ಭಾರತ ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ಪಶ್ಚಿಮ ಬಂಗಾಳದಲ್ಲಿರುತ್ತಾರೆ. ಕಳೆದ ಬಾರಿ ಬಂದಾಗ ರಿವಾಲ್ವರ್‌ ಮರೆತು ಹೋಗಿದ್ದರು. ಅದನ್ನು ಬಳಸಿ ಮಗ ಅಮ್ಮನನ್ನು ಸಾಯಿಸಿದ್ದಾನೆ. 

ಇದನ್ನೂ ಓದಿ: ಚಿಕ್ಕಮಗಳೂರು: ಮಗನ ಪಬ್‌ಜಿ ಹುಚ್ಚಿಗೆ ಅಮ್ಮ ಬಲಿ

ತಾಯಿಯನ್ನು ಬದುಕಿಸಬಹುದಿತ್ತು

ಪೊಲೀಸರ ಮಾಹಿತಿ ಪ್ರಕಾರ, ಘಟನೆ ನಡೆದ ನಂತರವಾದರೂ ಯಾರಿಗಾದರೂ ಹೇಳಿದ್ದರೆ ತಾಯಿಯನ್ನು ಬದುಕಿಸಬಹುದಿತ್ತು. ಆದರೆ ಮಗ ಸಾವು ಬದುಕಿನ ನಡುವೆ ಅಮ್ಮ ನರಳುತ್ತಿದ್ದರೂ ಕನಿಕರ ತೋರದೆ ಕೋಣೆಯಲ್ಲಿ ಕೂಡಿ ಹಾಕಿದ್ದ. ತಂಗಿಯನ್ನು ಇನ್ನೊಂದು ಕೋಣೆಯಲ್ಲಿ ಕೂಡಿಹಾಕಿದ್ದ. ಸ್ನೇಹಿತರಿಗೆ ಅಮ್ಮ ಮಾವನ ಮನೆಗೆ ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದ. ಕನಿಷ್ಟ ಮನೆಗೆ ಬಂದ ಸ್ನೇಹಿತರಿಗೆ ಹೇಳಿದ್ದರೂ ಆಕೆ ಬದುಕುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ತಾನು ಮಾಡಿದ ಕೆಲಸವನ್ನು ಹುಡುಗ ಒಪ್ಪಿಕೊಂಡಿದ್ದಾನೆ. ಗೇಮ್‌ ಆಡಲು ಬಿಡಲಿಲ್ಲ ಎಂದಾಗ ಸಿಟ್ಟು ಬಂತು, ಅಪ್ಪನ ರಿವಾಲ್ವರ್‌ ಬಳಸಿ ಶೂಟ್‌ ಮಾಡಿದೆ ಎಂದು ವಿಚಾರಣೆ ವೇಳೆ ಹೇಳಿದ್ದಾನೆ.

click me!