ಸಂಸತ್ತಿನಲ್ಲೂ ಇದ್ದಾರೆ ಸ್ತ್ರೀ ಪೀಡಕ ಆರೋಪಿಗಳು!

By Web DeskFirst Published Dec 11, 2019, 8:47 AM IST
Highlights

ಸಂಸತ್ತಿನಲ್ಲೂ ಇದ್ದಾರೆ ಸ್ತ್ರೀ ಪೀಡಕ ಆರೋಪಿಗಳು!| 19 ಲೋಕಸಭಾ ಸದಸ್ಯರ ವಿರುದ್ಧ ಮಹಿಳಾ ದೌರ್ಜನ್ಯ ಕೇಸ್‌| 3 ಸಂಸದರ ವಿರುದ್ಧ ಅತ್ಯಾಚಾರ ಪ್ರಕರಣ: ಎಡಿಆರ್‌ ವರದಿ

ನವದೆಹಲಿ[ಡಿ.11]: ಅತ್ಯಾಚಾರಿಗಳನ್ನು ಬಡಿದು ಕೊಲ್ಲಬೇಕು ಎಂದು ಕಳೆದ ವಾರ ಒಕ್ಕೊರಲಿನಿಂದ ಆಗ್ರಹ ಮಂಡಿಸಿದ್ದ ಸಂಸತ್ತಿನಲ್ಲೇ ಅತ್ಯಾಚಾರ ಆರೋಪಿಗಳು ಇದ್ದಾರೆ ಎಂಬ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. ಲೋಕಸಭೆಯ ಹಾಲಿ 19 ಸದಸ್ಯರು ಮಹಿಳಾ ದೌರ್ಜನ್ಯ ಸಂಬಂಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಚುನಾವಣಾ ಕಣ್ಗಾವಲು ಸಂಸ್ಥೆ ‘ಅಸೋಸಿಯೇಷನ್‌ ಫಾರ್‌ ಡೆಮೊಕ್ರಟಿಕ್‌ ರಿಫಾಮ್ಸ್‌ರ್‍’ (ಎಡಿಆರ್‌) ಸಿದ್ಧಪಡಿಸಿರುವ ವರದಿ ಹೇಳಿದೆ.

ಮಹಿಳೆಯರ ಮೇಲೆ ಅಪರಾಧ ಎಸಗಿದ ಆರೋಪ ಎದುರಿಸುತ್ತಿದ್ದ ಲೋಕಸಭಾ ಸದಸ್ಯರ ಸಂಖ್ಯೆ 2009ರಲ್ಲಿ ಕೇವಲ ಎರಡರಷ್ಟಿತ್ತು. ಆದರೆ 2019ರಲ್ಲಿ ಅದು 19ಕ್ಕೆ ಏರಿಕೆಯಾಗಿದೆ. ಮೂವರು ಹಾಲಿ ಸಂಸದರು, ಆರು ಜನ ಶಾಸಕರು ತಮ್ಮ ವಿರುದ್ಧ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಚುನಾವಣೆ ವೇಳೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಮಹಿಳೆಯರನ್ನು ರಕ್ಷಣೆ ಮಾಡುವುದಾಗಿ ಭರವಸೆ ನೀಡುವ ರಾಜಕೀಯ ಪಕ್ಷಗಳೇ, ಮಹಿಳೆಯರ ಮೇಲೆ ಅಪರಾಧ ಎಸಗಿದವರಿಗೆ ಟಿಕೆಟ್‌ ನೀಡುವುದು ಮುಂದುವರಿದುಕೊಂಡು ಬಂದಿದೆ. ಕಳೆದ 5 ವರ್ಷಗಳಲ್ಲಿ ಬಿಜೆಪಿ ಇಂತಹ 66 ಅಭ್ಯರ್ಥಿಗಳನ್ನು ಲೋಕಸಭೆ, ರಾಜ್ಯಸಭೆ, ವಿಧಾನಸಭೆಗಳಿಗೆ ಕಣಕ್ಕಿಳಿಸಿದೆ. ಕಾಂಗ್ರೆಸ್‌ 46 ಹಾಗೂ ಬಿಎಸ್ಪಿ 40 ಮಂದಿಗೆ ಟಿಕೆಟ್‌ ಕೊಟ್ಟಿವೆ.

ಬಿಜೆಪಿಗೆ ನಂ.1, ಕಾಂಗ್ರೆಸ್‌ 2:

ಮಹಿಳೆಯರ ಮೇಲೆ ಶೋಷಣೆ ನಡೆಸಿದ ಆರೋಪ ಎದುರಿಸುತ್ತಿರುವ ಜನಪ್ರತಿನಿಧಿಗಳ ಸಂಖ್ಯೆಯಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ. ಆ ಪಕ್ಷದಲ್ಲಿ 21 ಜನಪ್ರತಿನಿಧಿಗಳ ವಿರುದ್ಧ ಈ ರೀತಿಯ ಆರೋಪಗಳಿವೆ. ಇಂತಹ 16 ಜನಪ್ರತಿನಿಧಿಗಳನ್ನು ಹೊಂದಿರುವ ಕಾಂಗ್ರೆಸ್‌ ಎರಡನೇ ಸ್ಥಾನದಲ್ಲಿದ್ದರೆ, 7 ಜನಪ್ರತಿನಿಧಿಗಳೊಂದಿಗೆ ವೈಎಸ್ಸಾರ್‌ ಕಾಂಗ್ರೆಸ್‌ ಮೂರನೇ ಸ್ಥಾನದಲ್ಲಿದೆ.

ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ವಿರುದ್ಧದ ಮಹಿಳಾ ದೌರ್ಜನ್ಯ ಪ್ರಕರಣಗಳ ಸಂಖ್ಯೆ 2009ರಲ್ಲಿ 38 ಇತ್ತು. ಅದು ಈಗ 126ಕ್ಕೇರಿಕೆಯಾಗಿದೆ. ಒಟ್ಟಾರೆ ಶೇ.231ರಷ್ಟುಏರಿಕೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಮಹಿಳೆಯರ ವಿರುದ್ಧ ದೌರ್ಜನ್ಯ ನಡೆಸಿದ ಪ್ರಕರಣ ಎದುರಿಸುತ್ತಿರುವ ಸಂಸದ/ಶಾಸಕರು ಅತಿ ಹೆಚ್ಚು (16) ಇರುವುದು ಪಶ್ಚಿಮ ಬಂಗಾಳದಲ್ಲಿ. ನಂತರ ಒಡಿಶಾ ಹಾಗೂ ಮಹಾರಾಷ್ಟ್ರ (ತಲಾ 12) ಇವೆ ಎಂದು ವರದಿಯಲ್ಲಿ ಹೇಳಲಾಗಿದೆ.

click me!