Mahaparinirvan Diwas: ಅಂಬೇಡ್ಕರ್‌ ಕೇವಲ ದಲಿತರ, ಶೋಷಿತರ ನಾಯಕರಲ್ಲ

By Kannadaprabha NewsFirst Published Dec 6, 2021, 10:49 AM IST
Highlights

ಅಂಬೇಡ್ಕರ್‌ ಅವರಿಗೆ ಸತ್ಯಶೋಧನೆಯ ಒಳನೋಟ ಮತ್ತು ವಾಸ್ತವವನ್ನು ಒಪ್ಪಿಕೊಳ್ಳುವ ಆತ್ಮಸ್ಥೈರ್ಯ ಇದ್ದುದರಿಂದಲೇ ಜಾತಿ ವ್ಯವಸ್ಥೆಯ ಹೊಲಸನ್ನು ಹೊರಗೆಳೆಯುತ್ತಲೇ ಬದಲಾಗುತ್ತಿರುವ ಭಾರತದ ವರ್ಗ ಲಕ್ಷಣಗಳನ್ನು ಗುರುತಿಸಿದರು.

ಇಂದು ಅಂಬೇಡ್ಕರ್‌ ಅವರ 65ನೇ ಮಹಾಪರಿನಿರ್ವಾಣ ದಿನ. ಸಂವಿಧಾನ ರಚನೆಯಾದಾಗ ಅನೇಕರು ‘ಇದು ದಲಿತರ-ದಮನಿತರ ಹೊತ್ತಿಗೆ’ ಎಂದು ಆಕ್ಷೇಪ ಎತ್ತಿದಾಗ, ‘ನಾನು ಕೇವಲ ಒಂದೇ ಜಾತಿ ಅಥವಾ ಜನಾಂಗಕ್ಕೋಸ್ಕರ ಕೆಲಸ ಮಾಡಿಲ್ಲ.

ಭಾರತದ ಪ್ರತಿಯೊಬ್ಬ ಕಟ್ಟಕಡೆಯ ವ್ಯಕ್ತಿಯ ಸಲುವಾಗಿ ಜೀವ ಸವೆಸಿದ್ದೇನೆ. ಸಂಶಯವಿದ್ದರೆ ಸಂವಿಧಾನ ಓದಿಕೊಳ್ಳಿ’ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದವರು ಬಾಬಾಸಾಹೇಬ್‌ ಅಂಬೇಡ್ಕರ್‌. ಹಾಗಾಗಿಯೇ ದೇಶ ಅವರನ್ನು ಮಹಾನಾಯಕ ಎಂದು ಕರೆದು ಗೌರವಿಸಿದ್ದು.

ಆದರೆ ಇಂದು ಆ ಮಹಾನಾಯಕ ಕೇವಲ ಮತಬ್ಯಾಂಕಿನ ದಾಳವಾಗಿದ್ದಾರೆ. ಅವರ ಚಿಂತನೆ, ವಿಚಾರಧಾರೆಗಳು ಕೇವಲ ವೇದಿಕೆ ಮೇಲಿನ ಭಾಷಣಕ್ಕೆ ಸೀಮಿತವಾಗಿವೆ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಜಾತಿ ತಾರತಮ್ಯ, ಮೇಲು-ಕೀಳು ಎಂಬ ಭಾವನೆ ಹೋಗಿಲ್ಲ. ಅನೇಕರು ಅಂಬೇಡ್ಕರ್‌ ಹಿಂದೂ ಧರ್ಮವನ್ನು ದ್ವೇಷಿಸುತ್ತಿದ್ದರು ಎನ್ನುತ್ತಾರೆ. ನಿಜ ಹೇಳಬೇಕೆಂದರೆ ಹಿಂದೂ ಧರ್ಮದ ಬಗ್ಗೆ ಅಂಬೇಡ್ಕರ್‌ ಅವರಿಗೆ ಭಿನ್ನಾಭಿಪ್ರಾಯಗಳಿದ್ದವೇ ಹೊರತು ದ್ವೇಷವಿರಲಿಲ್ಲ. ಬೌದ್ಧ ಧರ್ಮಕ್ಕೆ ಮತಾಂತರ ಆಗುವವರೆಗೂ ಅವರು ಹಿಂದೂ ಧರ್ಮದ ಸುಧಾರಣೆಗಾಗಿಯೇ ಶ್ರಮಿಸಿದರು.

Constitution Day: 70 ವರ್ಷ ಕಳೆದರೂ ನೆರೆ ದೇಶಗಳಂತೆ ನಮ್ಮಲ್ಲಿ ಅರಾಜಕತೆ, ಸೈನಿಕ ದಂಗೆಗಳು ನಡೆದಿಲ್ಲ

ಹಿಂದೂ ಧರ್ಮದಲ್ಲಿದ್ದ ಜಾತಿಪದ್ಧತಿಯನ್ನು ಕಟುವಾಗಿ ಟೀಕಿಸಿದರು. ದಲಿತರು ದೇವಸ್ಥಾನಗಳನ್ನು ಪ್ರವೇಶಿಸಬಾರದು ಹಾಗೂ ಶಿಕ್ಷಣ ದಲಿತರಿಗಲ್ಲ ಎಂಬ ಅನಿಷ್ಟನೀತಿಗಳ ವಿರುದ್ಧ ಸಿಡಿದೆದ್ದರು. ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಬೇಕು ಎನ್ನುವುದು ಅಂಬೇಡ್ಕರ್‌ ವಾದವಾಗಿತ್ತು. ಮುಂದೆ ಅದೇ ಅವರ ಹೋರಾಟದ ಬಹುಮುಖ್ಯ ಸಂಗತಿಯಾಯಿತು. ಅದಕ್ಕಾಗಿ ಅವರು ಅನುಭವಿಸಿದ ಕಷ್ಟ-ನಷ್ಟಒಂದೆರಡಲ್ಲ.

ಅಂಬೇಡ್ಕರ್‌ಗೆ ಬಾಲ್ಯದಲ್ಲೇ ದಲಿತರನ್ನು ಈ ಸಮಾಜ ಯಾವ ರೀತಿ ಕಾಣುತ್ತಿತ್ತು ಎಂಬ ಅನುಭವವಾಗಿತ್ತು. ಜಾತಿ ವ್ಯವಸ್ಥೆಯಿಂದ ನೊಂದು, ಬೌದ್ಧ ಧರ್ಮ ಸ್ವೀಕರಿಸುವಾಗಲೂ ಬೌದ್ಧ ಧರ್ಮದಲ್ಲಿರುವ ಅದೇಷ್ಟೋ ಹುಳುಕುಗಳನ್ನು ಕಿತ್ತೊಗೆಯಬೇಕೆಂಬ ಷರತ್ತನ್ನು ಮುಂದಿಟ್ಟೇ ಅಂಬೇಡ್ಕರ್‌ ಬೌದ್ಧ ಧರ್ಮ ಸ್ವೀಕರಿಸಿದ್ದು. ದೇಶದ ಮೂಲ ಸಂಸ್ಕೃತಿಯಿಂದ ಬೇರೆ ಆಗಬಾರದು, ಆಕಸ್ಮಿಕವಾಗಿ ಮೂಲ ಸಂಸ್ಕೃತಿಯಿಂದ ಬೇರೆ ಆದರೆ ಮುಂದೆ ದೇಶದಲ್ಲಿ ಸಮಾಜದ ಮೇಲಾಗುವಂತಹ ದುಷ್ಪರಿಣಾಮಗಳ ಬಗ್ಗೆ ಆಲೋಚಿಸಿಯೇ ಅವರು ಬೌದ್ಧ ಧರ್ಮ ಸ್ವೀಕಾರ ಮಾಡುತ್ತಾರೆ.

ಹಿಂದೂ ಧರ್ಮದ ವಿರೋಧಿ ಅಲ್ಲ

ಹಿಂದೂ ಧರ್ಮವನ್ನು ಕಟುವಾಗಿ ಖಂಡಿಸಿದರೂ, ಸಂಸ್ಕೃತವನ್ನೇ ಅಧಿಕೃತ ಭಾಷೆಯನ್ನಾಗಿ ಸ್ವಿಕರಿಸುವಂತೆ 1949ರ ಸೆಪ್ಟೆಂಬರ್‌ 10ರಂದು ಸಂಸತ್ತಿನಲ್ಲಿ ವಿಧೇಯಕವನ್ನು ಮುಂದಿಟ್ಟಿದ್ದು ಅಂಬೇಡ್ಕರ್‌. ಅವರು ಕೇವಲ ದಲಿತರ-ಶೋಷಿತರ-ದಮನಿತರ ನಾಯಕರಲ್ಲ! 130 ಕೋಟಿ ಭಾರತೀಯರ ಮಹಾನಾಯಕ. ಜತೆಗೆ ಅವರೊಬ್ಬ ಅಪ್ರತಿಮ ರಾಷ್ಟ್ರಪ್ರೇಮಿ. ಅಂಬೇಡ್ಕರರ ಮನಸ್ಸು ಸದಾ ರಾಷ್ಟ್ರದ ಆಗುಹೋಗುಗಳ ಕುರಿತಂತೆ ಯೋಚಿಸುತ್ತಿತ್ತು. ಅಂದೇ ಅಂಬೇಡ್ಕರ್‌ ಭಾರತದ ಭಾಗವೇ ಆಗಿರುವ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಡುವುದನ್ನು ವಿರೋಧಿಸಿದ್ದರು.

ಪರಿವರ್ತನೆಯ ತುಡಿತ

ಅಂಬೇಡ್ಕರರ ಪ್ರತಿಯೊಂದು ಹೋರಾಟದಲ್ಲೂ ಪರಿವರ್ತನೆ ತರಬೇಕೆನ್ನುವ ತುಡಿತ ಹಾಗೂ ಸಂಕಲ್ಪ ಶಕ್ತಿ ಇತ್ತು. ಕೇವಲ ಹೋರಾಟ, ಆಂದೋಲನಗಳನ್ನು ನಡೆಸಿ, ಧಿಕ್ಕಾರ ಕೂಗಿ ಅಷ್ಟಕ್ಕೇ ಸೀಮಿತ ಆದವರಲ್ಲ ಅವರು. ನಾಸಿಕ್‌ನ ಚೌಡರಕೆರೆ ಅಭಿಯಾನ ಸಂದರ್ಭದಲ್ಲಿ ಪುರಸಭೆಯಲ್ಲಿ ಕೆರೆಯ ನೀರಿನ ಹಕ್ಕಿನ ಬಗ್ಗೆ ನಿರ್ಣಯ ಆಗುವಂತೆ ನೋಡಿಕೊಂಡರು. ಕಾಳಾರಾಂ ದೇವಾಲಯದ ಪ್ರವೇಶ ಸಂದರ್ಭ ಬಂದಾಗ ಅವರ ಸ್ನೇಹಿತನೊಬ್ಬ ಕೇಳುತ್ತಾನೆ, ಒಂದು ದೇವಸ್ಥಾನಕ್ಕಾಗಿ ಏಕಿಷ್ಟುಹೋರಾಟ ಮಾಡಬೇಕು? ನಾವು ಬೇಕಾದರೆ ಪ್ರತ್ಯೇಕ ದೇವಸ್ಥಾನ ನಿರ್ಮಾಣ ಮಾಡೋಣ ಎಂದು.

ಆಗ ಅಂಬೇಡ್ಕರ್‌ ದೇವಸ್ಥಾನದ ಒಳಗೆ ಹೋಗೋದೇ ಸಾರ್ಥಕತೆ ಅಲ್ಲ. ಆದರೆ ನಾನು ಏಕೆ ದೇವಸ್ಥಾನದ ಒಳಗೆ ಹೋಗಬೇಕೆಂದು ಬಯಸುತ್ತೇನೆಂದರೆ, ಶ್ರೀರಾಮ ಮರ್ಯಾದಾ ಪುರುಷೋತ್ತಮ. ಅವನು ಶಬರಿಯ ಎಂಜಲು ಹಣ್ಣನ್ನು ಸ್ವೀಕಾರ ಮಾಡಿದವನು. ಅವನು ಹಾಕಿಕೊಟ್ಟಆದರ್ಶದ ದಾರಿಯನ್ನು ಜನರು ಮರೆತಿದ್ದಾರೆ. ತಮ್ಮದೇ ನಂಬಿಕೆಯ ಜನರನ್ನು ಅಸ್ಪೃಶ್ಯರಂತೆ ಹೊರಗೆ ಇಟ್ಟಿದ್ದಾರೆ. ಆ ಕಾರಣಕ್ಕಾಗಿ ನಾನು ಶ್ರೀರಾಮನ ಆದರ್ಶವನ್ನು ಎತ್ತಿಹಿಡಿಯುವಂತಹ ಕೆಲಸವನ್ನು ಮಾಡುತ್ತೇನೆ ಎಂದು ಹೇಳುತ್ತಾರೆ.

Constitution Day:ಸಂವಿಧಾನದ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿಗಳು

ಭಾರತ ಮೊದಲು, ಅದೇ ಅಂತಿಮ

ಅಂಬೇಡ್ಕರ್‌ ಪ್ರಧಾನವಾಗಿ ಅಸ್ಪೃಶ್ಯರ ಹಕ್ಕುಗಳ ಹೋರಾಟಗಾರರಾದರೂ ನಮ್ಮ ಸಮಾಜ ರಚನೆಯ ಸೂಕ್ಷ್ಮಗಳನ್ನು ಚೆನ್ನಾಗಿ ಅರಿತಿದ್ದರು. ಮತ್ತು ಈ ಸಮಾಜದ ವರ್ಗ ಲಕ್ಷಣಗಳನ್ನು ಗುರುತಿಸಿ ಆ ಹಿನ್ನೆಲೆಯಲ್ಲೇ ತಮ್ಮ ವಿಚಾರಗಳನ್ನು ಮಂಡಿಸಿದರು. ಇದೊಂದು ಅನಿವಾರ್ಯವಾದ ಅಪೂರ್ವ ಬೆಳವಣಿಗೆ. ಅಂಬೇಡ್ಕರ್‌ ಅವರಿಗೆ ಸತ್ಯಶೋಧನೆಯ ಒಳನೋಟ ಮತ್ತು ವಾಸ್ತವವನ್ನು ಒಪ್ಪಿಕೊಳ್ಳುವ ಆತ್ಮಸ್ಥೈರ್ಯ ಇದ್ದುದರಿಂದಲೇ ಜಾತಿ ವ್ಯವಸ್ಥೆಯ ಹೊಲಸನ್ನು ಹೊರಗೆಳೆಯುತ್ತಲೇ ಬದಲಾಗುತ್ತಿರುವ ಭಾರತದ ವರ್ಗ ಲಕ್ಷಣಗಳನ್ನು ಗುರುತಿಸಿದರು.

ಅದೊಮ್ಮೆ ಮುಂಬೈನಲ್ಲೊಂದು ಬಹಿರಂಗ ಕಾರ್ಯಕ್ರಮ ಆಯೋಜನೆಯಾಗಿತ್ತು. ಬಿ.ಜಿ.ಖೇರ್‌ ಅಂದಿನ ಬಾಂಬೆಯ ಮುಖ್ಯಮಂತ್ರಿಯಾಗಿದ್ದರು. ಸಾರ್ವಜನಿಕ ಸಭೆಯಲ್ಲಿ ಬಿ.ಜಿ.ಖೇರ್‌ ಅವರನ್ನು ಒಳಗೊಂಡಂತೆ ಪಂಡಿತ್‌ ಜವಾಹರಲಾಲ್ ನೆಹರು, ಮೊರಾರ್ಜಿ ದೇಸಾಯಿ ಸೇರಿ ಅನೇಕ ಘಟಾನುಘಟಿ ನಾಯಕರು ಸಭೆಯಲ್ಲಿ ಹಾಜರಿದ್ದರು. ಮೊದಲು ಮಾತಿಗೆ ನಿಂತ ಬಿ.ಜಿ.ಖೇರ್‌ ಭಾಷಣ ಮಾಡುತ್ತಾ, ‘ನಾನು ಮೊದಲು ಭಾರತೀಯ, ನಂತರ ಮಹಾರಾಷ್ಟ್ರಿಗ’ ಎಂದರು. ಖೇರ್‌ರ ಈ ಮಾತನ್ನು ನೆನಪಿನಲ್ಲಿಟ್ಟುಕೊಂಡು, ಭಾಷಣದ ತಮ್ಮ ಸರದಿ ಬಂದಾಗ ಅಂಬೇಡ್ಕರ್‌ ಹೇಳಿದ್ದೇನು ಗೊತ್ತಾ? ‘ನಾನು ಮೊದಲು ಭಾರತೀಯ ಮತ್ತು ಅದೇ ಅಂತಿಮ’ ಎಂದರು. ಇಂಥ ಒಬ್ಬ ರಾಷ್ಟ್ರಪ್ರೇಮಿ ಒಂದು ಸಮುದಾಯಕ್ಕೆ ಸೀಮಿತವಾಗದೇ ಕೋಟಿ ಕೋಟಿ ಭಾರತೀಯರ ಮಹಾನಾಯಕನಾಗಿದ್ದು ನಮ್ಮೆಲ್ಲರ ಹೆಮ್ಮೆ.

- ಮಾರುತೀಶ್‌ ಅಗ್ರಾರ, ತುಮಕೂರು

click me!