ವಿಪಕ್ಷಗಳು ರೈತರ ದಿಲ್ಲಿ ಪ್ರತಿಭಟನೆಯಿಂದ ರಾಜಕೀಯ ಲಾಭ ತೆಗೆದುಕೊಳ್ಳುತ್ತವೆಯೇ?

By Kannadaprabha NewsFirst Published Jan 2, 2021, 10:21 AM IST
Highlights

10 ವರ್ಷಗಳ ಯುಪಿಎ ಸರ್ಕಾರಕ್ಕೆ ವ್ಯತಿರಿಕ್ತವಾಗಿ ಮೋದಿ ಇಮೇಜ್‌ ಇರುವುದು ಒಮ್ಮೆ ನಿರ್ಧಾರ ತೆಗೆದುಕೊಂಡರೆ ಹಿಂದೆ ಹೋಗದ ನಾಯಕ ಎಂದು. ಮೋದಿ ಅಭಿಮಾನಿಗಳು ಅವರನ್ನು ಇಷ್ಟಪಡುವುದೂ ಆ ಗಟ್ಟಿತನದ ಕಾರಣಕ್ಕೋಸ್ಕರವೇ. 

ದಿಲ್ಲಿ ಅಕ್ಕಪಕ್ಕದ ರಾಜ್ಯಗಳಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಪೂರ್ಣ ವಿರಾಮ ಹಾಕಲು ಸರ್ಕಾರ ನಡೆಸುತ್ತಿರುವ ಎಲ್ಲಾ ಕಸರತ್ತುಗಳು ವಿಫಲವಾಗುತ್ತಿವೆ. ರೈತ ನಾಯಕರೊಂದಿಗೆ ಸ್ವಯಂ ಪ್ರಧಾನಿ ಮೋದಿ ಅವರೇ ಮಾತನಾಡುವುದು ಉಳಿದಿರುವ ಕೊನೆಯ ಮಾರ್ಗ. ಈ ಸಾಧ್ಯತೆ ಬಗ್ಗೆ ರೈತ ನಾಯಕರು ಬೊಟ್ಟು ಮಾಡುತ್ತಿದ್ದಾರೆ. ಆದರೆ ಬಿಜೆಪಿ ಮೂಲಗಳು ಇದನ್ನು ಪುಷ್ಟೀಕರಿಸುತ್ತಿಲ್ಲ.

ಸರ್ಕಾರದಿಂದ ರೈತ ನಾಯಕರಿಗೆ ಕೊಡಬಹುದಾಗಿದ್ದ ರಿಯಾಯಿತಿಗಳೆಲ್ಲವನ್ನೂ ಈಗಾಗಲೇ ಕೊಡಲಾಗಿದೆ. ಹೀಗಾಗಿ ಪ್ರಧಾನಿಯವರು ಕರೆದು ಮಾತನಾಡಿಸಿದರೂ ಉಪಯೋಗವಾಗುವುದಿಲ್ಲ ಎಂಬ ಚರ್ಚೆ ಹಿರಿಯ ಕೇಂದ್ರ ಮಂತ್ರಿಗಳ ನಡುವೆ ನಡೆದಿದೆ. ರೈತ ನಾಯಕರೊಂದಿಗೆ ಪ್ರಧಾನಿ ಮೋದಿ ಮಾತುಕತೆಗೆ ಕುಳಿತು ಆಮೇಲೆ ರೈತರು ಸುಮ್ಮನೆ ಎದ್ದು ಹೋದರೆ ಸಮಸ್ಯೆಯಾಗುತ್ತದೆ ಎಂಬ ಚಿಂತೆ ಸರ್ಕಾರದಲ್ಲಿದೆ. ಅದಕ್ಕಿಂತ ನೇರವಾಗಿ ರೈತರ ಜೊತೆಗೆ ಸಂವಾದ ನಡೆಸಿದರೆ ಲಾಭ ಆಗಬಹುದು ಎಂಬ ಚಿಂತನೆಯ ಧಾಟಿ ಬಿಜೆಪಿ ದೆಹಲಿ ನಾಯಕರಲ್ಲಿ ಕಾಣುತ್ತಿದೆ.

ಗಟ್ಟಿ ವ್ಯಕ್ತಿತ್ವದ ಇಮೇಜ್‌

10 ವರ್ಷಗಳ ಯುಪಿಎ ಸರ್ಕಾರಕ್ಕೆ ವ್ಯತಿರಿಕ್ತವಾಗಿ ಮೋದಿ ಇಮೇಜ್‌ ಇರುವುದು ಒಮ್ಮೆ ನಿರ್ಧಾರ ತೆಗೆದುಕೊಂಡರೆ ಹಿಂದೆ ಹೋಗದ ನಾಯಕ ಎಂದು. ಮೋದಿ ಅಭಿಮಾನಿಗಳು ಅವರನ್ನು ಇಷ್ಟಪಡುವುದೂ ಆ ಗಟ್ಟಿತನದ ಕಾರಣಕ್ಕೋಸ್ಕರವೇ. ಆದರೆ ರೈತರು ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರಬಹುದಾದ ಮೂರು ಕಾನೂನುಗಳನ್ನು ರದ್ದು ಮಾಡಿ ಎಂದು ಕುಳಿತಿರುವುದು ಕೇಂದ್ರ ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ. ರೈತರ ಒತ್ತಡಕ್ಕೆ ಮಣಿದು ಹಿಂದೆ ಹೋದರೆ ಮಧ್ಯಮ ವರ್ಗ ಮತ್ತು ಯುವಕರ ವರ್ಗ ಬಿಜೆಪಿ ಮೇಲೆ ಸಿಟ್ಟಾಗಬಹುದು. ಇನ್ನು ಪಂಜಾಬ್‌, ಹರಾರ‍ಯಣ ಮತ್ತು ಪಶ್ಚಿಮ ಉತ್ತರ ಪ್ರದೇಶ ಬಿಟ್ಟು ಉಳಿದ ರೈತರಲ್ಲಿ ಕೃಷಿ ಕಾನೂನಿನ ಬಗ್ಗೆ ಆಕ್ರೋಶ ಕಾಣುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಒಂದೋ ಪ್ರಧಾನಿ ಮತ್ತು ರೈತ ನಾಯಕರ ಮಧ್ಯೆ ಮಾತುಕತೆ ನಡೆಸಿ ರಸ್ತೆ ಖಾಲಿ ಮಾಡಿಸಬೇಕು, ಇಲ್ಲ ಅಂದರೆ ಪೊಲೀಸರನ್ನು ಬಳಸಿ ಬಲವಂತದಿಂದ ರಸ್ತೆ ತೆರವುಗೊಳಿಸಬೇಕು. ಈಗಿನ ಮಾತುಕತೆಯ ಗತಿ ನೋಡಿದರೆ ಪೊಲೀಸರ ಬಳಕೆಯಾದರೂ ಅಚ್ಚರಿಯಿಲ್ಲ.

ಸರ್ಕಾರದ ಚಿಂತೆ ಏನು?

ದಲ್ಲಾಳಿಗಳು ಆವರಿಸಿಕೊಂಡು ರೈತರನ್ನು ಶೋಷಿಸುತ್ತಿರುವ ಕೃಷಿ ಮಾರುಕಟ್ಟೆಗಳನ್ನು ಮುಕ್ತಗೊಳಿಸಿ ಖಾಸಗಿ ವೃತ್ತಿಪರರನ್ನು ತರುವುದು ಅನಿವಾರ್ಯವೆಂಬುದು ಸರ್ಕಾರದ ಚಿಂತನೆ. ಕೃಷಿ ಮಾರುಕಟ್ಟೆಗಳ ಮೇಲೆ ಸದಾಕಾಲ ಸರ್ಕಾರದ ನಿಯಂತ್ರಣ ಸಾಧ್ಯವಿಲ್ಲ ಎಂದು ರೈತರಿಗೂ ಗೊತ್ತಿದೆ. ಆದರೆ ಗೋಧಿ, ಭತ್ತ ಬೆಳೆಯುವ ರೈತರ ಚಿಂತೆ ಕನಿಷ್ಠ ಬೆಂಬಲ ಬೆಲೆಯದು. ಹೃದಯದ ಮತ್ತು ಕಾಲಿನ ಸ್ಟೆಂಟ್‌ ವಿಷಯದಲ್ಲಿ ಒಂದು ಬೆಲೆಯನ್ನು ನಿಗದಿಪಡಿಸಿ, ಆ ದರಕ್ಕಿಂತ ಹೆಚ್ಚು ಹಣವನ್ನು ಆಸ್ಪತ್ರೆಗಳು ಅಥವಾ ಸ್ಟೆಂಟ್‌ ತಯಾರಕರು ತೆಗೆದುಕೊಳ್ಳಬಾರದು ಎಂದು ಸರ್ಕಾರ ಮಿತಿ ವಿಧಿಸಿರುವಂತೆ ಕೃಷಿ ಬೆಳೆಗಳಿಗೂ ಸರ್ಕಾರವೇ ಪ್ರತಿ ವರ್ಷ ಒಂದು ಬೆಲೆ ನಿರ್ಧರಿಸಿ ಇದಕ್ಕೂ ಕಡಿಮೆಗೆ ಬೆಳೆ ಖರೀದಿಸುವಂತಿಲ್ಲ ಎಂದು ಕಾನೂನು ಮಾಡಬಹುದು.

ಆದರೆ ಸರ್ಕಾರಕ್ಕಿರುವ ಚಿಂತೆ ಹಾಗೆ ಮಾಡಿದರೆ ಖಾಸಗಿ ಕಂಪನಿಗಳು ಕೃಷಿ ಕ್ಷೇತ್ರದಲ್ಲಿ ಕಾಲೂ ಇಡದಿರಬಹುದು ಎಂಬುದು. ಕೊನೆಯದಾಗಿ ಎಪಿಎಂಸಿಯ ಸಣ್ಣ ದಲ್ಲಾಳಿ ಇರಲಿ, ದೊಡ್ಡ ದೊಡ್ಡ ಕಂಪನಿಗಳಿರಲಿ, ಅವರು ಬರುವುದು ಪುಷ್ಕಳ ಲಾಭಕ್ಕೋಸ್ಕರವೇ. ಸರ್ಕಾರ ಮಾರುಕಟ್ಟೆನಿಯಂತ್ರಿಸುವುದು ಬೇಡ ಸರಿ; ಆದರೆ ಲಾಭದ ಪ್ರಮಾಣ ನಿಯಂತ್ರಿಸುವುದು ತಪ್ಪಲ್ಲ. ಹಾಗೆ ಮಾಡದೇ ಹೋದರೆ ಬೆಳೆ ಬೆಳೆಯುವ ರೈತನಿಗೂ, ಕೊಳ್ಳುವ ಗ್ರಾಹಕನೂ ಹಳ್ಳಕ್ಕೆ ಬಿದ್ದಂತೆಯೇ!

ಖಾಸಗಿ ಆಸ್ಪತ್ರೆಗಳ ಉದಾಹರಣೆ

ಜಾಗತೀಕರಣದ ಹೆಸರಲ್ಲಿ ಸರ್ಕಾರದ ಯಾವುದೇ ನಿಯಂತ್ರಣ ಇಲ್ಲದೆ ದೊಡ್ಡ ದೊಡ್ಡ ಖಾಸಗಿ ಕಂಪನಿಗಳು ನಡೆಸುತ್ತಿರುವ ಆಸ್ಪತ್ರೆಗಳು ನಡೆಸುತ್ತಿರುವ ಲೂಟಿ ಜನರ ಕಣ್ಣ ಮುಂದಿದೆ. ಭಾರತದಲ್ಲಿ ವಿಮೆ ಸಾರ್ವತ್ರಿಕವಾದ ನಂತರ ಚಿಕಿತ್ಸೆ ಕೂಡ ನಾಲ್ಕು ಪಟ್ಟು ದುಬಾರಿ ಆಗಿದೆ. ಯುರೋಪ್‌ನಲ್ಲಿ ಅಲ್ಲಿನ ಸರ್ಕಾರಗಳು ಪ್ರತಿ ರೋಗದ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೂ ತಾವೇ ಬೆಲೆ ನಿಗದಿಪಡಿಸುತ್ತವೆ. ಬಿಲ…, ರೋಗಿ ಆಸ್ಪತ್ರೆಯಲ್ಲಿದ್ದ ದಿನಗಳ ಮೇಲೆ ಅಲ್ಲ ರೋಗದ ಮೇಲೆ ಅವಲಂಬಿತ. ಆದರೆ ಭಾರತದಲ್ಲಿ ಸರ್ಕಾರಗಳು ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡುವುದೇ ಇಲ್ಲ. ಸರ್ಕಾರದ ನಿಯಂತ್ರಣ ಕಡಿಮೆ ಆಗಬೇಕು ನಿಜ. ಆದರೆ ಕೃಷಿ, ಆರೋಗ್ಯ ಮತ್ತು ಶಿಕ್ಷಣದಂಥ ಕ್ಷೇತ್ರಗಳಲ್ಲಿ ಖಾಸಗಿಯವರಿಗೆ ಲಗಾಮು ಇರದೇ ಇರುವುದು ಕೂಡ ಒಳ್ಳೆಯದಲ್ಲ.

ವಿಪಕ್ಷಗಳಿಗೆ ಮುಷ್ಕರದ ಲಾಭ?

6 ವರ್ಷಗಳಲ್ಲಿ ಬಿಜೆಪಿ ವಿರುದ್ಧ ರಾಹುಲ… ಗಾಂಧಿ ಮತ್ತು ವಿಪಕ್ಷಗಳು ಎತ್ತಿರುವ ರಫೇಲ…, ದಲಿತ ಮೀಸಲಾತಿ, ನಾಗರಿಕ ಕಾಯ್ದೆ ಸೇರಿದಂತೆ ಬಹುತೇಕ ವಿಷಯಗಳು ಜನರ ಮನಸ್ಸಿಗೆ ನಾಟಿಯೇ ಇಲ್ಲ. ನಾಗರಿಕ ಕಾಯ್ದೆಯಂಥ ವಿಷಯಗಳಲ್ಲಿ ಮುಸ್ಲಿಮರಲ್ಲಿ ಸಿಟ್ಟು ಇತ್ತಾದರೂ ಹಿಂದೂಗಳ ಧ್ರುವೀಕರಣದಿಂದ ಬಿಜೆಪಿಗೆ ಲಾಭ ಆಯಿತು. ಹೀಗಾಗಿ ಪಂಜಾಬ್‌, ಹರಾರ‍ಯಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ರೈತರ ಹೆಗಲ ಮೇಲೆ ಬಂದೂಕು ಇಟ್ಟು ಗುರಿ ಇಡುವ ಪ್ರಯತ್ನವನ್ನು ರಾಹುಲ… ಗಾಂಧಿ ಮತ್ತು ಮಿತ್ರರು ಮಾಡುತ್ತಿದ್ದಾರೆ. ರಾಹುಲ್‌ ಅವರ ಮೂಲ ಸಮಸ್ಯೆ ಎಂದರೆ ಪ್ರತಿಭಟನೆಗಳಲ್ಲಿ ಸ್ಥಿರತೆ ಮತ್ತು ನಿರಂತರತೆ ಇರುವುದಿಲ್ಲ. ಹಾಥ್ರಸ್‌ ಘಟನೆ ನಂತರ ಒಮ್ಮೆಲೇ ಶಾಂತರಾಗಿ ಟ್ವೀಟರ್‌ಗೆ ಸೀಮಿತರಾದ ರಾಹುಲ…, ಈಗ ಕೃಷಿ ತಜ್ಞರಂತೆ ಮಾತನಾಡುತ್ತಿದ್ದಾರೆ. ವಿಪಕ್ಷಗಳು ರೈತರ ಪ್ರತಿಭಟನೆಯಿಂದ ರಾಜಕೀಯ ಲಾಭ ತೆಗೆದುಕೊಳ್ಳುತ್ತವೆಯೇ ಎಂದು ಈಗಲೇ ಹೇಳುವುದು ಕಷ್ಟ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!