ಪ್ರತಿ ವರ್ಷ 20 ಲಕ್ಷ ಟನ್‌ ಖಾದ್ಯ ತೈಲ ಆಮದಿಗೆ ಆಮದು ಸುಂಕ ಇಲ್ಲ: ಸರ್ಕಾರ

By Precilla Olivia DiasFirst Published May 25, 2022, 9:00 AM IST
Highlights

* ಆಮದಿಗೆ ಆಮದು ಸುಂಕ ಇಲ್ಲ: ಸರ್ಕಾರ

* ಇದರಿಂದ ಗಗನಕ್ಕೇರಿರುವ ಖಾದ್ಯತೈಲ ಬೆಲೆ ಇಳಿಕೆ ನೀರೀಕ್ಷೆ

* ಪ್ರತಿ ವರ್ಷ 20 ಲಕ್ಷ ಟನ್‌ ಖಾದ್ಯ ತೈಲ

ನವದೆಹಲಿ(ಮೇ.25): ಹಣದುಬ್ಬರ ಹಾಗೂ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ಇನ್ನೊಂದು ಮಹತ್ವದ ಕ್ರಮ ಕೈಗೊಂಡಿದೆ. ವಾರ್ಷಿಕ 20 ಲಕ್ಷ ಟನ್‌ ಸೋಯಾಬೀನ್‌ ಹಾಗೂ ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕ ಹಾಗೂ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್‌ ಅನ್ನು ಸಂಪೂರ್ಣ ತೆಗೆದು ಹಾಕುವುದಾಗಿ ಮಂಗಳವಾರ ರಾತ್ರಿ ಘೋಷಿಸಿದೆ

ಈ ನಿರ್ಣಯದಿಂದಾಗಿ ಈಗಾಗಲೇ ಕೇಜಿಗೆ 200 ರು. ಮೀರಿ ಗ್ರಾಹಕರ ತಲೆಬಿಸಿಗೆ ಕಾರಣವಾಗಿರುವ ಖಾದ್ಯ ತೈಲ ಬೆಲೆ ಇಳಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ನಿರ್ಣಯ ಮುಂದಿನ 2 ಹಣಕಾಸು ವರ್ಷಗಳಾದ 2022-23 ಮತ್ತು 2023-24ಕ್ಕೆ ಅನ್ವಯವಾಗಲಿದೆ. ಇದರಿಂದಾಗಿ ಒಟ್ಟಾರೆ 2024ರ ಮಾಚ್‌ರ್‍ 31ರವರೆಗೆ 80 ಲಕ್ಷ ಟನ್‌ ಖಾದ್ಯ ತೈಲ ಆಮದು ಸುಂಕ ರಹಿತವಾಗಿ ಭಾರತ ಪ್ರವೇಶಿಸಲಿದೆ ಎಂದು ಹೇಳಬಹುದಾಗಿದೆ.

ಉದ್ಯಮದ ಸ್ವಾಗತ:

ಇದು ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಕೊಂಚ ಮಟ್ಟದ ನೆಮ್ಮದಿ ನೀಡಲಿದೆ. ಸೋಯಾ ಬೀನ್‌ ಎಣ್ಣೆಯ ಬೆಲೆ ಲೀಟರ್‌ಗೆ ಸುಮಾರು 3 ರು. ಕಡಿಮೆಯಾಗಲಿದೆ ಎಂದು ಸಾಲ್ವೆಂಟ್‌ ಎಕ್ಸ್‌ಟ್ರಾಕ್ಟರ್‌ ಆಫ್‌ ಇಂಡಿಯಾದ ನಿರ್ದೇಶಕ ಬಿ.ವಿ.ಮೆಹ್ತಾ ಹೇಳಿದ್ದಾರೆ.

ಇಂಡೋನೇಷ್ಯಾ ಭಾರತಕ್ಕೆ ಎಣ್ಣೆ ಪೂರೈಕೆ ನಿಲ್ಲಿಸಿದ್ದರಿಂದ ಹಾಗೂ ಉಕ್ರೇನ್‌-ರಷ್ಯಾ ಯುದ್ಧದ ಕಾರಣ ಇತ್ತೀಚೆಗೆ ಬೆಲೆ ಕೇಜಿಗೆ 200 ರು. ದಾಟಿತ್ತು. ವರ್ಷದ ಹಿಂದೆ ಕೇವಲ 80ರಿಂದ 100 ರು.ಗೆ ಖಾದ್ಯ ತೈಲ ಸಿಗುತ್ತಿತ್ತು. ಆದರೆ ಇತ್ತೀಚೆಗೆ ಇಂಡೋನೇಷ್ಯಾ ಮತ್ತೆ ಭಾರತಕ್ಕೆ ಖಾದ್ಯತೈಲ ರಫ್ತು ಮಾಡುವುದಾಗಿ ಹೇಳಿತ್ತು.

ಅಭಿವೃದ್ಧಿಗೆ ಯುಪಿಎಗಿಂತ ಮೋದಿ ದುಪ್ಪಟ್ಟು ವೆಚ್ಚ

 

ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು 8 ರು. ಹಾಗೂ ಡೀಸೆಲ್‌ ಮೇಲಿನ ಸುಂಕವನ್ನು 6 ರು. ಕಡಿತ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು, ‘ಇದು ಯಾತಕ್ಕೂ ಸಾಲದು’ ಎಂದು ಟೀಕಿಸುತ್ತಿರುವ ಕಾಂಗ್ರೆಸ್‌ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಭಾನುವಾರ ತಿರುಗೇಟು ನೀಡಿದ್ದಾರೆ. 2004ರಿಂದ 2014ರವರೆಗೆ ಅಭಿವೃದ್ಧಿ ಹಾಗೂ ಸಬ್ಸಿಡಿಗೆ ಯುಪಿಎ ಮಾಡಿದ ಖರ್ಚಿಗಿಂತ 2014ರಿಂದ 2022ರವರೆಗೆ ನರೇಂದ್ರ ಮೋದಿ ಸರ್ಕಾರ ಮಾಡಿದ ವೆಚ್ಚ ಹೆಚ್ಚೂ ಕಡಿಮೆ 2 ಪಟ್ಟು ಹೆಚ್ಚಿದೆ ಎಂದು ಅಂಕಿ-ಅಂಶ ಸಮೇತ ತಿರುಗೇಟು ನೀಡಿದ್ದಾರೆ.

2020ರ ಮೇ 1ರಿಂದ 2022ರವರೆಗಿನ ಪೆಟ್ರೋಲ್‌ ಬೆಲೆಯನ್ನು ಭಾನುವಾರ ಪ್ರಸ್ತಾಪಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಹೆಸರಿನಲ್ಲಿ ಬಿಜೆಪಿ ಜನರನ್ನು ವಂಚಿಸುತ್ತಿದೆ. ಇದೊಂದು ಜನರನ್ನು ಮರಳು ಮಾಡುವ ತಂತ್ರವಾಗಿದೆ. ಹಣದುಬ್ಬರ ದಾಖಲೆ ಮಟ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಜನರಿಗೆ ನೈಜ ಪರಿಹಾರ ದೊರೆಯಬೇಕಿದೆ. ಸರ್ಕಾರ ಜನರನ್ನು ಮೂರ್ಖರನ್ನಾಗಿಸುವುದನ್ನು ನಿಲ್ಲಿಸಬೇಕು’ ಎಂದಿದ್ದರು. ಅಲ್ಲದೆ, ‘ಇನ್ನು ಪೆಟ್ರೋಲ್‌ ಬೆಲೆ ನಿತ್ಯ 80 ಪೈಸೆ, 30 ಪೈಸೆಯಂತೆ ವಿಕಾಸವಾಗಲಿದೆ’ ಎಂದು ಲೇವಡಿ ಮಾಡಿದ್ದರು.

ಈ ಬಗ್ಗೆ ನಿರ್ಮಲಾ ಅವರು ಸರಣಿ ಟ್ವೀಟ್‌ಗಳನ್ನು ಮಾಡಿ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ್ದಾರೆ. ‘2014ರಿಂದ 2022ರವರೆಗೆ ಮೋದಿ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ 90.09 ಲಕ್ಷ ಕೋಟಿ ರು. ಖರ್ಚು ಮಾಡಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ 2004ರಿಂದ 2014ವರೆಗೆ ಅಧಿಕಾರದಲ್ಲಿದ್ದ ಮನಮೋಹನ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಕೇವಲ 49.2 ಲಕ್ಷ ಕೋಟಿ ರು. ವೆಚ್ಚ ಮಾಡಿತ್ತು ಎಂದು ನಿರ್ಮಲಾ ಟ್ವೀಟ್‌ ಮಾಡಿದ್ದಾರೆ. ಇದರಿಂದ 10 ವರ್ಷದಲ್ಲಿ ಯುಪಿಎ ಮಾಡಿದ ಅಭಿವೃದ್ಧಿ ವೆಚ್ಚಕ್ಕಿಂತ ಎನ್‌ಡಿಎ ಸರ್ಕಾರದ ವೆಚ್ಚ 8 ವರ್ಷದಲ್ಲಿ ಹೆಚ್ಚೂ ಕಮ್ಮಿ ದುಪ್ಪಟ್ಟಾಗಿದೆ’ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.

‘ಇನ್ನು ಆಹಾರ, ಇಂಧನ ಹಾಗೂ ರಸಗೊಬ್ಬರಕ್ಕಾಗಿ 24.85 ಲಕ್ಷ ಕೋಟಿ ರು.ಗಳನ್ನು 8 ವರ್ಷದಲ್ಲಿ ಮೋದಿ ಸರ್ಕಾರ ಸಬ್ಸಿಡಿಗಾಗಿ ವೆಚ್ಚ ಮಾಡಿದೆ. ಬಂಡವಾಳ ಸೃಷ್ಟಿಗಾಗಿ 26.3 ಲಕ್ಷ ಕೋಟಿ ರು. ಖರ್ಚು ಮಾಡಿದೆ. ಆದರೆ 10 ವರ್ಷದಲ್ಲಿ ಯುಪಿಎ ಸರ್ಕಾರ ಕೇವಲ 13.9 ಲಕ್ಷ ಕೋಟಿ ರು.ಗಳನ್ನು ಸಬ್ಸಿಡಿಗೆ ವೆಚ್ಚ ಮಾಡಿತ್ತು’ ಎಂದು ತಿರುಗೇಟು ನೀಡಿದ್ದಾರೆ.

ಅಲ್ಲದೆ, ‘ಶನಿವಾರ ತೈಲ ಅಬಕಾರಿ ಸುಂಕ ಕಡಿತ ಮಾಡಿದ್ದರಿಂದ ಸರ್ಕಾರಕ್ಕೆ 1 ಲಕ್ಷ ಕೋಟಿ ರು. ಹೊರೆಯಾಗಿದೆ. ಕಳೆದ ನವೆಂಬರ್‌ನಲ್ಲಿ ಮಾಡಿದ ಸುಂಕ ಕಡಿತದಿಂದ 1.20 ಲಕ್ಷ ಕೋಟಿ ರು. ಹೊರೆ ಆಗಿತ್ತು. ಹೀಗಾಗಿ ಎರಡೂ ಸುಂಕ ಕಡಿತದಿಂದ ಸರ್ಕಾರಕ್ಕೆ 2.20 ಲಕ್ಷ ಕೋಟಿ ರು. ಹೊರೆಯಾಗಿದೆ’ ಎಂದು ಸಚಿವೆ ವಿವರಿಸಿದ್ದಾರೆ.

click me!