ಕೋವಿನ್‌ ಯಶಸ್ಸಿನ ಬಳಿಕ ಕೇಂದ್ರದಿಂದ U-WIN ಪೋರ್ಟಲ್‌, ಮಕ್ಕಳು, ಗರ್ಭಿಣಿಯರಿಗೆ ಸಹಕಾರಿ!

By Santosh NaikFirst Published Jan 24, 2023, 6:56 PM IST
Highlights

ಮಕ್ಕಳು ಮತ್ತು ಗರ್ಭಿಣಿಯರ ವ್ಯಾಕ್ಸಿನೇಷನ್ ಕಾರ್ಡ್‌ಗಳನ್ನು ಪ್ರತಿ ಬಾರಿ ಕೊಂಡೊಯ್ಯುವುದು, ಮುಂದಿನ ಲಸಿಕೆ ಯಾವಾಗ ಎನ್ನುವ ಗಮನವನ್ನು ಇರಿಸಿಕೊಳ್ಳಲು ಹೆಣಗಾಡುವುದು ಇನ್ನು ಮುಂದೆ ತಪ್ಪಲಿದೆ. ಕೋವಿಡ್‌ ಸಂದರ್ಭದಲ್ಲಿ ಕೋವಿನ್‌ ವೆಬ್‌ಸೈಟ್‌ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇದರ ಬೆನ್ನಲ್ಲಿಯೇ ಕೇಂದ್ರ ಸರ್ಕಾರ, ಮಕ್ಕಳು ಹಾಗೂ ಗರ್ಭಿಣಿಯರ ವಾಡಿಕೆಯ ಲಸಿಕೆಗಳನ್ನು ಡಿಜಿಟಲೈಸ್‌ ಮಾಡಲು ಅದೇ ರೀತಿಯ ಮತ್ತೊಂದು ವೆಬ್‌ಸೈಟ್‌ ಆರಂಭಿಸುವ ತೀರ್ಮಾನ ಮಾಡಿದೆ.
 

ನವದೆಹಲಿ (ಜ.24): ಮಕ್ಕಳು ಹಾಗೂ ಗರ್ಭಿಣಿಯರ ವಿಚಾರದಲ್ಲಿ ಲಸಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಈಗಾಗಲೇ ಜಗತ್ತಿನ ಹಲವು ವಿನಾಶಗಳಿಗೆ ಕಾರಣವಾಗುವ ರೋಗಗಳಿಗೆ ನಿರೋಧಕ ಶಕ್ತಿಯಾಗಿ ಈ ಲಸಿಕೆಗಳನ್ನು ಸರ್ಕಾರ ಉಚಿತವಾಗಿ ನೀಡುತ್ತದೆ. ಆದರೆ, ಪ್ರತಿ ಬಾರಿಯೂ ಲಸಿಕೆ ಯಾವಾಗ ಎಂದು ನೆನಪಿಟ್ಟುಕೊಳ್ಳುವುದೇ ಪಾಲಕರಿಗೆ ಕಷ್ಟವಾಗುತ್ತದೆ. ಆದರೆ, ಸರ್ಕಾರ ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮವನ್ನೂ ಕೂಡ ಡಿಜಿಟಲೈಸ್‌ ಮಾಡಲು ತೀರ್ಮಾನ ಮಾಡಿದೆ. ಕೋವಿಡ್‌ ಸಂದರ್ಭದಲ್ಲಿ ಯಾರು ಎಷ್ಟು ಲಸಿಕೆ ಹಾಕಿಸಿಕೊಂಡರು, ಎಷ್ಟನೇ ಡೋಸ್‌ ಎನ್ನುವ ಎಲ್ಲಾ ಮಾಹಿತಿಗಳನ್ನು ಕೋವಿನ್‌ ವೇದಿಕೆಯ ಮೂಲಕ ತಿಳಿಸಲಾಗುತ್ತಿತ್ತು. ಆಧಾರ್‌ ಕಾರ್ಡ್‌ ಅಥವಾ ಮೊಬೈಲ್‌ ನಂಬರ್‌ ದಾಖಲು ಮಾಡಿದರೆ, ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದಾರೋ ಇಲ್ಲವೋ, ಹಾಕಿದ್ದರೆ ಎಷ್ಟು ಡೋಸ್‌ ಹಾಕಿದ್ದಾರೆ ಎನ್ನುವ ಎಲ್ಲಾ ಮಾಹಿತಿಗಳು ಸಿಗುತ್ತಿದ್ದವು. ಕೋವಿನ್‌ ವೆಬ್‌ಸೈಟ್‌ನ ದೊಡ್ಡ ಯಶಸ್ಸಿನ ಬಳಿಕ, ಸಾರ್ವತ್ರಿಕ ರೋಗ ನಿರೋಧಕ ಕಾರ್ಯಕ್ರಮವನ್ನು ಎಲೆಕ್ಟ್ರಾನಿಕ್‌ ನೋಂದಣಿ ಮಾಡಲು ನಿರ್ಧಾರ ಮಾಡಿದೆ. ಯುಐಪಿಯ ಅಡಿಯಲ್ಲಿ ಬರುವ ನಿಗದಿತ ಲಸಿಕೆಗಳ ಮಾಹಿತಿಗಳನ್ನ ಯುವಿನ್‌ ಪೋರ್ಟಲ್‌ ಮೂಲಕ ಮಾಹಿತಿ ಲಭಿಸಲಿದೆ. ಈಗಾಗಲೇ ಪ್ರತಿ ರಾಜ್ಯದ ಎರಡು ಜಿಲ್ಲೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಯುವಿನ್‌ ಪೋರ್ಟಲ್‌ ಅನ್ನು ಜಾರಿ ಮಾಡಲಾಗಿದೆ.

ಪ್ರತಿ ಗರ್ಭಿಣಿಗೂ ಅವರು ಹಾಕಿರುವ ಲಸಿಕೆಯ ಮಾಹಿತಿ, ಮುಂದಿನ ಲಸಿಕೆ ಯಾವುದು ಹಾಗೂ ಯಾವಾಗ ಅದನ್ನು ನೀಡಲಾಗುತ್ತದೆ ಎನ್ನುವ ಮಾಹಿತಿ, ಹೆರಿಗೆಯಾದಲ್ಲಿ ಮಗುವಿನ ಮಾಹಿತಿ, ಪ್ರತಿ ನವಜಾತ ಶಿಶುವಿನ ನೋಂದಣಿ, ಹುಟ್ಟಿದ ತಕ್ಷಣ ಆ ಮಗುವಿಗೆ ನೀಡಬೇಕಾಗಿರುವ ಲಸಿಕೆಗಳು ಹಾಗೂ 5 ವರ್ಷಗಳಾಗುವವರೆಗೂ ಯಾವೆಲ್ಲಾ ಲಸಿಕೆ ನೀಡಬೇಕು ಎನ್ನುವ ಸಂಪೂರ್ಣ ಮಾಹಿತಿ ಅದರಲ್ಲಿ ಲಭ್ಯವಿರುತ್ತದೆ. ಆ ಲಸಿಕೆಗಳನ್ನು ಹಾಕಿದ್ದರೆ, ಅದರ ಮಾಹಿತಿ ಕೂಡ ಇರಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾರತದ ಕೋವಿಡ್‌-19 ಲಸಿಕೆ ಕಾರ್ಯಕ್ರಮಕ್ಕೆ "ಡಿಜಿಟಲ್ ಬೆನ್ನೆಲುಬು" ಆಗಿ ಕಾರ್ಯನಿರ್ವಹಿಸಿದ ಕೋವಿನ್‌ (Co-WIN) ರೀತಿಯದ್ದೇ ಇನ್ನೊಂದು ವೆಬ್‌ಸೈಟ್‌ಅನ್ನು ಜನವರಿ 11 ರಂದು 65 ಜಿಲ್ಲೆಗಳಲ್ಲಿ ಪ್ರಾರಂಭ ಮಾಡಲಾಗಿದೆ. ರೋಗನಿರೋಧಕ ಸೇವೆಗಳು, ವ್ಯಾಕ್ಸಿನೇಷನ್ ಸ್ಥಿತಿಯನ್ನು ನವೀಕರಿಸುವುದು, ಹೆರಿಗೆಯ ಫಲಿತಾಂಶ, ಆರ್‌ಐ ಸೆಷನ್‌ಗಳ ಯೋಜನೆ ಮತ್ತು ಪ್ರತಿಜನಕ-ವಾರು ಕವರೇಜ್‌ನಂತಹ ವರದಿಗಳಿಗೆ ಯುವಿನ್‌ (U-WIN) ಪೋರ್ಟಲ್‌ ಏಕೈಕ ಮಾಹಿತಿಯ ಮೂಲವಾಗಿರಲಿದೆ.

"ವ್ಯಾಕ್ಸಿನೇಷನ್‌ಗಾಗಿ ವೈಯಕ್ತಿಕ ಟ್ರ್ಯಾಕಿಂಗ್‌ಗಾಗಿ ಎಲ್ಲಾ ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಡಿಜಿಟಲ್ ನೋಂದಣಿಗಳು, ಮುಂಬರುವ ಡೋಸ್‌ಗಳ ಮಾಹಿತಿಗಳು ಮತ್ತು ಲಸಿಕೆ ತಪ್ಪಿ ಹೋದಲ್ಲಿ ಅದರ ವಿವರಗಳು ಕೂಡ ಇದರಲ್ಲಿ ಇರುತ್ತದೆ. ಆರೋಗ್ಯ ಕಾರ್ಯಕರ್ತರು ಮತ್ತು ಈ ಯೋಜನೆಯ ನಿರ್ವಾಹಕರ,  ಉತ್ತಮ ಯೋಜನೆ ಮತ್ತು ಲಸಿಕೆ ವಿತರಣೆಗಾಗಿ ದಿನನಿತ್ಯದ ಪ್ರತಿರಕ್ಷಣೆ ಅವಧಿಗಳು ಮತ್ತು ವ್ಯಾಕ್ಸಿನೇಷನ್ ವ್ಯಾಪ್ತಿಯ ನೈಜ-ಸಮಯದ ಡೇಟಾವನ್ನು ರಚಿಸಲು ಸಾಧ್ಯವಾಗುತ್ತದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏಮ್ಸ್‌ ಬಳಿಕ ಕೋವಿಡ್‌ ಲಸಿಕೆಯ ‘ಕೋವಿನ್‌’ ವೆಬ್‌ ಮಾಹಿತಿ ಹ್ಯಾಕ್‌..!

ಗರ್ಭಿಣಿಯರು ಮತ್ತು ಮಕ್ಕಳಿಗೆ, ABHA ID (ಆಯುಷ್ಮಾನ್ ಭಾರತ್ ಹೆಲ್ತ್‌ ಖಾತೆ) ಗೆ ಲಿಂಕ್ ಮಾಡಲಾದ ಲಸಿಕೆ ಸ್ವೀಕೃತಿ ಮತ್ತು ರೋಗನಿರೋಧಕ ಕಾರ್ಡ್ ಅನ್ನು ರಚಿಸಲಾಗುತ್ತದೆ ಮತ್ತು ಫಲಾನುಭವಿಗಳನ್ನು ಪತ್ತೆಹಚ್ಚಲು ಮತ್ತು ಲಸಿಕೆ ಹಾಕಲು ಎಲ್ಲಾ ರಾಜ್ಯಗಳು ಮತ್ತು ಜಿಲ್ಲೆಗಳು ಸಾಮಾನ್ಯ ಡೇಟಾಬೇಸ್ ಅನ್ನು ಈ ಮೂಲಕ ಪ್ರವೇಶಿಸಬಹುದಾಗಿದೆ. ಅಲ್ಲದೆ, ವೆಬ್‌ಸೈಟ್‌ ಮೂಲಕ ನಾಗರಿಕರು ಸಮೀಪದಲ್ಲಿ ನಡೆಯುತ್ತಿರುವ ಎಂದಿನ ಲಸಿಕೆಯ ಅವಧಿಗಳು ಮತ್ತು ಬುಕ್ ಅಪಾಯಿಂಟ್‌ಮೆಂಟ್‌ಗಳನ್ನು ಪರಿಶೀಲಿಸಬಹುದು ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

CoWIN 19 Data Leaked: ಸಾವಿರಾರು ಭಾರತೀಯರ ಕೋವಿಡ್‌ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆ?

65 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ U-WIN ಕಾರ್ಯನಿರ್ವಹಣೆಗಳು ಮತ್ತು ಉದ್ದೇಶಗಳ ಕುರಿತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿ ನೀಡಲಾಗಿದೆ ಮತ್ತು U-WIN ನ ಎಲ್ಲಾ ಮಾಡ್ಯೂಲ್‌ಗಳಲ್ಲಿ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ. "ಇದರೊಂದಿಗೆ ದಾಖಲೆಗಳು ಸೇರಿದಂತೆ ಸಂಪೂರ್ಣ ಲಸಿಕೆ ವ್ಯವಸ್ಥೆಯು ಡಿಜಿಟಲೀಕರಣಗೊಳ್ಳುತ್ತದೆ, ಫಲಾನುಭವಿಗಳ ಟ್ರ್ಯಾಕಿಂಗ್ ಅನ್ನು ಸುಲಭಗೊಳಿಸುತ್ತದೆ' ಎಂದು ಅಧಿಕಾರಿ ತಿಳಿಸಿದ್ದಾರೆ.

click me!